ಭಾನುವಾರ, ಮೇ 29, 2022
22 °C

ಲಿಂಗಪ್ಪ, ಪ್ರಮೋದ್‌ ಶಿಗ್ಗಾಂವ್‌ಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ಕರ್ನಾಟಕ ಸಂಘದ ವತಿಯಿಂದ ಕೊಡಮಾಡುವ 9ನೇ ವರ್ಷದ ಡಾ.ಹಾಮಾನ ಹಿರಿಯ ಪ್ರಶಸ್ತಿಗೆ ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿಯ ಮಾಜಿ ಶಾಸಕ ಕೋಣಂದೂರು ಲಿಂಗಪ್ಪ, ಡಾ.ಹಾಮಾನ ಕಿರಿಯ ಪ್ರಶಸ್ತಿಗೆ ರಂಗ ನಿರ್ದೇಶಕ ಪ್ರಮೋದ್ ಶಿಗ್ಗಾಂವ್ ಆಯ್ಕೆಯಾಗಿದ್ದಾರೆ.

ಹಿರಿಯ ಪ್ರಶಸ್ತಿ ₹50 ಸಾವಿರ ನಗದು, ಪ್ರಶಸ್ತಿ ಫಲಕ, ಕಿರಿಯ ಪ್ರಶಸ್ತಿ ₹25 ಸಾವಿರ ನಗದು ಮತ್ತು ಪ್ರಶಸ್ತಿ ಫಲಕವನ್ನೊಳಗೊಂಡಿದೆ. ಫೆ.13 ರಂದು ಬೆಳಿಗ್ಗೆ 11 ಗಂಟೆಗೆ ಸಂಘದ ಆವರಣದಲ್ಲಿ ನಡೆಯುವ ಕಾರ್ಯಕ್ರಮ ದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಸಂಘದ ಎಂ.ಕೆ.ಹರೀಶ್‍ಕುಮಾರ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಾಸಕ ಎಂ.ಶ್ರೀನಿವಾಸ್‌ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಶಾಸಕರಾದ ಎ.ಬಿ.ರಮೇಶ್‌ಬಾಬು ಬಂಡಿಸಿದ್ದೇಗೌಡ, ಬಿ.ರಾಮಕೃಷ್ಣ, ಉದ್ಯಮಿ ವಿವೇಕ್‌ ಹೆಗ್ಗಡೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಕೋಣಂದೂರು ಲಿಂಗಪ್ಪ: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರಿನ ಲಿಂಗಪ್ಪ ಅವರು ಸಮಾಜವಾದಿ ಚಿಂತಕರಾಗಿದ್ದು, ವಿದ್ಯಾರ್ಥಿ ದೆಸೆಯಿಂದಲೇ ಕನ್ನಡ ಯುವಜನ ಸಭಾ ಸ್ಥಾಪಿಸಿ ಕನ್ನಡ ನಾಮಫಲಕ ಹಾಗೂ ಕನ್ನಡಪರ ಚಳವಳಿಗಳಲ್ಲಿ ನಿರಂತರವಾಗಿ ಭಾಗಿಯಾಗಿ ಕನ್ನಡ ನಾಡು ನುಡಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ.

ಶಾಂತವೇರಿ ಗೋಪಾಲಗೌಡರಿಂದ ಪ್ರಭಾವಿತರಾಗಿ ಕಾಗೋಡು ಚಳವಳಿ, ಗೋಕಾಕ್‌ ಚಳವಳಿಯಲ್ಲಿ ಭಾಗಿಯಾಗಿದ್ದರು. 1972ರಲ್ಲಿ ಡಾ.ರಾಮಮನೋಹರ ಲೋಹಿಯಾ ಅವರ ಪ್ರಭಾವದಿಂದ ಸೋಷಿಯಲಿಸ್ಟ್‌ ಪಕ್ಷದಿಂದ ತೀರ್ಥಹಳ್ಳಿ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದರು. ಸದನದಲ್ಲಿ ಕನ್ನಡ ಕಟ್ಟುವಿಕೆಗಾಗಿ ದನಿ ಎತ್ತಿ ಹೋರಾಟ ಮಾಡಿದ್ದಾರೆ.

ಪ್ರಮೋದ್‌ ಶಿಗ್ಗಾಂವ್‌: ನಾಟಕ ನಿರ್ದೇಶಕ, ರಂಗಸಜ್ಜಿಕೆ ಮತ್ತು ವಸ್ತ್ರ ವಿನ್ಯಾಸಗಾರರಾದ ಪ್ರಮೋಶ್‌ ಶಿಗ್ಗಾಂವ್‌ ಅವರು ಹೆಗ್ಗೋಡು ನೀನಾಸಂ ರಂಗ ಸಂಸ್ಥೆಯಿಂದ ನಾಟಕ ಡಿಪ್ಲೊಮಾ ಪಡೆದಿದ್ದಾರೆ. ವಸ್ತ್ರ ವಿನ್ಯಾಸ, ರಂಗಸಜ್ಜಿಕೆ ಮತ್ತು ಮುಖವಾಡ ತಯಾರಿಕೆ ತಾಂತ್ರಿಕ ಕಾರ್ಯಾಗಾರವನ್ನು ಪಾಂಡಿಚೇರಿ, ತಿರುವನಂತಪುರ, ಧಾರವಾಡ, ನಾಗಪುರದಲ್ಲಿ ಮಾಡಿದ್ದಾರೆ.

ಸೂರ್ಯಶಿಕಾರಿ, ಸುಲ್ತಾನ್‌ ಟಿಪ್ಪು, ಜಲಗಾರ, ಶಾಂಭಶಿವಪ್ರಹಸನ, ಸಿರಿಸಂಪುಗೆ ಸೇರಿದಂತೆ 40ಕ್ಕೂ ಹೆಚ್ಚು ಕನ್ನಡ ನಾಟಕಗಳನ್ನು ನಿರ್ದೇಶಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು