ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದನಕೆರೆಗೆ ಪ್ರತ್ಯೇಕ ಬಾಗಿನ ಅರ್ಪಣೆ

ಶಾಸಕ ಅನ್ನದಾನಿ ಬೆಂಬಲಿಗರು, ರೈತ ಸಂಘದವರ ನಡುವೆ ಮಾತಿನ ಚಕಮಕಿ
Last Updated 16 ಅಕ್ಟೋಬರ್ 2019, 9:10 IST
ಅಕ್ಷರ ಗಾತ್ರ

ಮಳವಳ್ಳಿ: ತಾಲ್ಲೂಕಿನ ಕಂಚುಗಳ್ಳಿ, ನಾರಾಯಣಪುರ ಗ್ರಾಮದ ಬದನಕೆರೆಗೆ ಬಾಗಿನ ಅರ್ಪಿಸುವ ವಿಚಾರವಾಗಿ ಶಾಸಕ ಡಾ.ಕೆ.ಅನ್ನದಾನಿ ಅವರ ಬೆಂಬಲಿಗರು ಹಾಗೂ ಪ್ರಾಂತ ರೈತ ಸಂಘ, ಬಿ.ಜಿ.ಪುರ ನಾಲಾ ಹಿತರಕ್ಷಣಾ ಸಮಿತಿಯ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ.

ಪ್ರಾಂತ ರೈತ ಸಂಘ ಹಾಗೂ ಬಿ.ಜಿ.ಪುರ ನಾಲಾ ಹಿತರಕ್ಷಣಾ ಸಮಿತಿಯ ಸದಸ್ಯರು ಬದನಕೆರೆಗೆ ಬಾಗಿನ ಅರ್ಪಿಸಲು ಮುಂದಾಗಿದ್ದರು. ಸ್ಥಳ ದಲ್ಲಿಯೇ ಇದ್ದ ಜೆಡಿಎಸ್ ಮುಖಂಡರು, ‘ಶಾಸಕರು ಬಾಗಿನ ಅರ್ಪಿಸಲು ಈಗಾಗಲೇ ಸಮಯ ನಿಗದಿಪಡಿಸಿದ್ದಾರೆ. ಅವರು ಬಾಗಿನ ಅರ್ಪಿಸಿದ ನಂತರ ನೀವೂ ಪೂಜೆ ಮಾಡಿ ಬಾಗಿನ ಅರ್ಪಿಸಿರಿ’ ಎಂದು ಸೂಚಿಸಿದ್ದರು.

ಈ ವಿಚಾರವಾಗಿ ಸಮಿತಿ ಸದಸ್ಯರು ಹಾಗೂ ಜೆಡಿಎಸ್ ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು. ಮಧ್ಯೆ ಪ್ರವೇಶಿಸಿದ ಪೊಲೀಸರು, ಶಾಸಕರ ಜೊತೆಯಲ್ಲಿಯೇ ಬಾಗಿನ ಅರ್ಪಿಸುವಂತೆ ತಿಳಿಸಿದರು.

ಶಾಸಕರು ಕೆರೆಗೆ ಪೂಜೆ ಸಲ್ಲಿಸಲು ಮುಂದಾಗುತ್ತಿದ್ದಂತೆ ಮತ್ತೊಂದೆಡೆ ಪ್ರಾಂತ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಭರತ್ ರಾಜ್, ಕಾರ್ಯದರ್ಶಿ ಲಿಂಗರಾಜಮೂರ್ತಿ ಹಾಗೂ ಬಿ.ಜಿ.ಪುರ ನಾಲಾ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ನಟರಾಜು ಬಾಗಿನ ಅರ್ಪಿಸಲು ಮುಂದಾದರು.

ಶಾಸಕ ಡಾ. ಕೆ.ಅನ್ನದಾನಿ ಅವರು, ‘ನಾವು ಪೂಜೆ ಮಾಡುವ ತನಕ ಬೇರೆ ಯಾರೂ ಬಾಗಿನ ಅರ್ಪಿಸಲು ಬಿಡಬಾರದು’ ಎಂದು ಸಬ್ಇನ್‌ಸ್ಪೆಕ್ಟರ್ ಉಮಾವತಿ ಅವರಿಗೆ ಸೂಚಿಸಿದರು. ಇದರಿಂದ, ಬಾಗಿನ ಅರ್ಪಿಸಲು ಉಮಾವತಿ ಅಡ್ಡಿಪಡಿದರು. ಈ ವೇಳೆ, ಸಂಘಟಕರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಇದರ ನಡುವೆ ಪ್ರಾಂತ್ಯ ರೈತ ಸಂಘದವರು ಬಾಗಿನ ಅರ್ಪಿಸಿದರು. ನಂತರ, ಶಾಸಕ ಡಾ. ಕೆ.ಅನ್ನದಾನಿ ಗಂಗಾಮಾತೆಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.

ಡಾ. ಕೆ.ಅನ್ನದಾನಿ ಮಾತನಾಡಿ, ‘ಕಾವೇರಿ ನೀರಾವರಿ ಇಲಾಖೆ ವತಿಯಿಂದ ತಾಲ್ಲೂಕಿನ ಎಲ್ಲಾ ಕೆರೆಗಳಿಗೆ ಯಶಸ್ವಿಯಾಗಿ ನೀರು ತುಂಬಿಸಲಾಗಿದ್ದು, ಬಾಗಿನ ಅರ್ಪಿಸಲಾಯಿತು. ಕೆರೆಗೆ ಯಾರು ಬೇಕಾದರೂ ಪೂಜೆ ಮಾಡಬಹುದು. ಆದರೆ, ಅದಕ್ಕೆ ಒಂದು ಶಿಷ್ಟಾಚಾರ ಇರುತ್ತದೆ. ತಾಲ್ಲೂಕು ಆಡಳಿತದ ವತಿಯಿಂದ ಅಧಿಕೃತ ಕಾರ್ಯಕ್ರಮದಡಿ ಪೂಜೆ ಮಾಡಲಾಗುತ್ತಿದೆ. ನಾನು ಪೂಜೆ ಸಲ್ಲಿಸಿದ ನಂತರ ಯಾರು ಬೇಕಾದರೂ ಪೂಜೆ ಸಲ್ಲಿಸಬಹುದು’ ಎಂದರು.

ಮುಖಂಡರಾದ ಬಸವರಾಜು, ಮಲ್ಲೇಗೌಡ, ಕುಮಾರ ಇದ್ದರು.

‘ಶಾಸಕರ ಬಗ್ಗೆ ದ್ವೇಷವಿಲ್ಲ’

‘ಬಿ.ಜಿ. ಪುರ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗಾಗಿ ಪಂಪ್‌ಸೆಟ್ ಆಶ್ರಯಿಸಿದ್ದು, ಕಾವೇರಿ ನೀರು ಹೋಬಳಿಗೆ ಸಿಗುವಂತೆ ಬಿ.ಜಿ.ಪುರ ನಾಲಾ ಹಿತರಕ್ಷಣಾ ಸಮಿತಿಯೂ ನಿರಂತರವಾಗಿ ಹೋರಾಟ ಮಾಡುತ್ತಿದೆ. ಶಾಸಕರು ಬಾಗಿನ ಅರ್ಪಿಸುವ ವಿಷಯ ಬೆಳಿಗ್ಗೆ 10ಕ್ಕೆ ತಿಳಿಯಿತು. ನಾವು ಮೊದಲೇ ಕಾರ್ಯಕ್ರಮ ನಿಗದಿಪಡಿಸಿದ್ದರಿಂದ ಬಾಗಿನ ಅರ್ಪಿಸಿದ್ದೇವೆ. ಶಾಸಕರ ಬಗ್ಗೆ ದ್ವೇಷವಿಲ್ಲ’ ಎಂದು ನಾಲಾ ಹಿತರಕ್ಷಣಾ ಸಮಿತಿ ಅಧ್ಯಕ್ಷ ನಟರಾಜು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT