ಭಾನುವಾರ, ಜೂನ್ 20, 2021
29 °C
ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಿಷೇಧ, ಬಡವರಿಗೆ ದಾನ ಮಾಡಿದ ಹಬ್ಬದ ಶುಭಾಶಯ

ಕೋವಿಡ್‌ ನಡುವೆ ಸರಳ, ಶ್ರದ್ಧೆಯ ಈದ್‌–ಉಲ್‌–ಆಝ್ಹಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ತ್ಯಾಗ, ಬಲಿದಾನ, ಮಾನವೀಯ ಮೌಲ್ಯ, ಸಹೋದತ್ವದ ಪ್ರತೀಕವಾದ ಈದ್‌–ಉಲ್‌–ಆಝ್ಹಾ (ಬಕ್ರೀದ್) ಆಚರಣೆ ಕೊರೊನಾ ಸೋಂಕಿನ ನಡುವೆ ಶನಿವಾರ ಅತ್ಯಂತ ಸರಳವಾಗಿ ನಡೆಯಿತು.

ಕೋವಿಡ್‌–19 ಎಲ್ಲೆಡೆ ಹರಡುತ್ತಿರುವ ಕಾರಣ ಮುಸ್ಲಿಮರು ತಮ್ಮ ಮನೆಯಲ್ಲೇ ಪ್ರಾರ್ಥನೆ ಸಲ್ಲಿಸಿದರು. ಪ್ರತಿ ವರ್ಷ ಈದ್ಗಾ ಮೈದಾನಗಳಲ್ಲಿ ಇರುತ್ತಿದ್ದ ಸಂಭ್ರಮ, ಸಾಮೂಹಿಕ ಪ್ರಾರ್ಥನೆ ಈ ಬಾರಿ ಇರಲಿಲ್ಲ. ನಗರದ ಶಂಕರಮಠ ಬಳಿಯ ಈದ್ಗಾ ಮೈದಾನ ಸೇರಿದಂತೆ ಹಲವು ಮೈದಾನಗಳಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ಇರಲಿಲ್ಲ. ಹಬ್ಬದ ದಿನ ಬಿಕೊ ಎನ್ನುತ್ತಿದ್ದ ಈದ್ಗಾ ಮೈದಾನವನ್ನು ಕಂಡು ಮುಸ್ಲಿಮರು ಮರುಗಿದರು.

ಕೆಲವರು ತಮ್ಮ ಮನೆಯ ಸಮೀಪದಲ್ಲಿರುವ ಮಸೀದಿಗಳಿಗೆ ತೆರಳಿ, ಅಂತರ ಕಾಯ್ದುಕೊಂಡು ಪ್ರಾರ್ಥನೆ ಸಲ್ಲಿಸುತ್ತಿದ್ದ ದೃಶ್ಯಗಳು ಸಾಮಾನ್ಯಾವಾಗಿದ್ದವು. ಬೆಳಿಗ್ಗೆ ಬೇಗ ಎದ್ದು ನಸುಕಿನಲ್ಲೇ ಪ್ರಾರ್ಥನೆ ಸಲ್ಲಿಸಿದರು. ಹೊಸಬಟ್ಟೆ ತೊಟ್ಟು, ಹಬ್ಬದ ಅಡುಗೆ ಸೇವಿಸಿದರು. ಸಾಮೂಹಿಕ ಪ್ರಾರ್ಥನೆ ಇಲ್ಲದಿದ್ದರೂ ಬಡವರಿಗೆ ದಾನ ನೀಡುವ ಪ್ರಕ್ರಿಯೆಗೆ ಯಾವುದೇ ತೊಂದರೆ ಆಗಲಿಲ್ಲ.

‘ಬಕ್ರೀದ್‌ ಸಂದರ್ಭದಲ್ಲಿ ಹಬ್ಬದ ಊಟದಿಂದ ಯಾರೂ ವಂಚಿತರಾಗಬಾರದು ಎಂಬ ಉದ್ದೇಶಕ್ಕೆ ಶ್ರೀಮಂತರು ಬಡವರಿಗೆ ಮಾಂಸವನ್ನು ದಾನವಾಗಿ ನೀಡುತ್ತಾರೆ. ಕೋವಿಡ್‌ನಿಂದಾಗಿ ಬಡವರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಈ ಬಾರಿ ಹೆಚ್ಚಿನ ದಾನ ನೀಡಲಾಗಿದೆ. ಹಂಚಿ ತಿಂದರೆ ರುಚಿ ಜಾಸ್ತಿ ಎಂಬ ಮಾತಿನಂತೆ ಸಹೋದರತ್ವ ಮೆರೆದಿದ್ದೇವೆ. ಕೊರೊನಾ ಇದ್ದರೂ ದಾನ ಧರ್ಮದಲ್ಲಿ ಕಡಿಮೆಯಾಗಿಲ್ಲ’ ಎಂದು ಮುಸ್ಲಿಂ ಮುಖಂಡ ಅಬ್ದುಲ್‌ ರೆಹಮಾನ್‌ ಹೇಳಿದರು.

ಇಲ್ಲದ ಹಸ್ತಾಲಾಘವ, ಅಪ್ಪುಗೆ: ಸಾಮಾನ್ಯವಾಗಿ ಮುಸ್ಲಿಮರ ಹಬ್ಬಗಳಲ್ಲಿ ಹಸ್ತಾಲಾಘವ ಮಾಡಿ, ಅಪ್ಪುಗೆ ಮೂಲಕ ಪರಸ್ಪರ ಶುಭಾಶಯ ವಿನಿಮಯ ಮಾಡುವುದು ವಾಡಿಕೆ. ಪ್ರಾರ್ಥನೆ ಸಲ್ಲಿಸಿ ಮಕ್ಕಳು ಕೂಡ ಪ್ರೀತಿಯಿಂದ ಅಪ್ಪಿಕೊಂಡು ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದರು. ಆದರೆ ಈ ಬಾರಿ ಕೊರೊನಾ ಸೋಂಕಿನ ಕಾರಣಕ್ಕೆ ಅಪ್ಪಿಕೊಳ್ಳುವ, ಹಸ್ತಲಾಘವ ಮಾಡುವ ಸಂಪ್ರದಾಯಕ್ಕೆ ವಿರಾಮ ಬಿದ್ದಿತ್ತು.

ನಗರದ ಕೆಲವು ಮಸೀದಿಗಳಲ್ಲಿ ಪ್ರಾರ್ಥನೆಗೆ ಬಂದವರು ಸರತಿ ಸಾಲಿನಲ್ಲಿ ನಿಂತು, ಸ್ಯಾನಿಟೈಸರ್‌ ನಿಂದ ಕೈ ಸ್ವಚ್ಛಗೊಳಿಸಿಕೊಂಡು, ಥರ್ಮಲ್‌ ಸ್ಕ್ರೀನಿಂಗ್‌ ಒಳಗಾಗಿ ನಂತರ ಪ್ರಾರ್ಥನಾ ಪ್ರಾಂಗಣಕ್ಕೆ ತೆರಳುತ್ತಿದ್ದರು. ಮಾಸ್ಕ್‌ ಧರಿಸಿದವರಿಗಷ್ಟೇ ಮಸೀದಿ ಒಳಗೆ ಪ್ರವೇಶ ಕಲ್ಪಿಸಲಾಗಿತ್ತು. 12ವರ್ಷದೊಳಗಿನ ಮಕ್ಕಳು 60ವರ್ಷ ಮೇಲ್ಪಟ್ಟವರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು.

ನಗರದ ಗುತ್ತಲು ಬಡಾವಣೆಯ ಸಬ್ದರೀಯಾ ಮಸೀದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಪರಶುರಾಮ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸರ್ಕಾರ ನೀಡಿರುವ ಕಾರ್ಯಸೂಚಿಯನ್ನು ತಪ್ಪದೇ ಪಾಲಿಸಬೇಕು. ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಎಲ್ಲರೂ ಸಹಕಾರ ನೀಡಬೇಕು ಎಂದು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು