ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ಬಾಗಿಲಲ್ಲೂ ಬ್ಯಾಂಕ್‌ ಸೇವೆ ನಿರಂತರ- ಕೆನರಾ ಬ್ಯಾಂಕ್ ಪ್ರತಿನಿಧಿಯಿಂದ ಸೇವೆ

Last Updated 12 ಜೂನ್ 2021, 2:14 IST
ಅಕ್ಷರ ಗಾತ್ರ

ಮಳವಳ್ಳಿ: ಕೊರೊನಾ ಸಂಬಂಧಿ ಲಾಕ್‌ಡೌನ್‌ ಜನಜೀವನವನ್ನು ಬಾಧಿಸುತ್ತಿದೆ. ಜನರ ಆರ್ಥಿಕ ಸ್ಥಿತಿಯ ಜೀವನಾಡಿ ಬ್ಯಾಂಕ್‌ಗಳಲ್ಲೂ ನಿರಂತರವಾಗಿ ಸೇವೆ ಸಿಗುತ್ತಿಲ್ಲ. ಆದರೂ ಗ್ರಾಮೀಣ ಭಾಗದ ಬ್ಯಾಂಕ್‌ಗಳ ಪ್ರತಿನಿಧಿಗಳು ಹಳ್ಳಿಗಳಲ್ಲಿ ಮನೆ ಮನೆಗೆ ತೆರಳಿ ಬ್ಯಾಂಕ್ ಸೇವೆ ನೀಡುತ್ತಿದ್ದಾರೆ.

ತಾಲ್ಲೂಕಿನ ತಳಗವಾದಿ ಗ್ರಾಮದ ಕೆನರಾ ಬ್ಯಾಂಕ್ ಶಾಖೆಯಲ್ಲಿ ಮಾದಹಳ್ಳಿ, ಕೊರೇಗಾಲ, ಹುಲ್ಲೇಗಾಲ, ನೆಲಮಾಕನಹಳ್ಳಿ, ಟಿ.ಕಾಗೇಪುರ ಸೇರಿದಂತೆ ಹಲವು ಗ್ರಾಮಗಳಲ್ಲಿ ಜನ ಖಾತೆ ಹೊಂದಿದ್ದಾರೆ. ಜಿಲ್ಲೆಯಲ್ಲಿ ವಾರದಲ್ಲಿ ಐದು ದಿನ ಸಂಪೂರ್ಣ ಲಾಕ್‌ಡೌನ್ ಇದ್ದು, ಈ ಅವಧಿಯಲ್ಲಿ ಬ್ಯಾಂಕ್ ತೆರೆಯುವುದಿಲ್ಲ. ಎರಡು ದಿನಗಳಲ್ಲಿ ಬೆಳಿಗ್ಗೆ 9ರಿಂದ 11ರವರೆಗೆ ಮಾತ್ರ ಬ್ಯಾಂಕ್ ಕಾರ್ಯನಿರ್ವಹಿಸುತ್ತಿದ್ದು, ಈ ಸಂದರ್ಭದಲ್ಲಿ ಹಾಲು ಉತ್ಪಾದಕರು, ನರೇಗಾ ಕಾರ್ಮಿಕರು, ವೃದ್ಧಾಪ್ಯ ವೇತನ, ಅಂಗವಿಕರ ವೇತನ ಸೇರಿದಂತೆ ವಿವಿಧ ಹಣ ಪಡೆಯಲು ನೂರಾರು ಮಂದಿ ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಕೆನರಾ ಬ್ಯಾಂಕ್‌ಗೆ ಅಕ್ಕಪಕ್ಕದ ಹಳ್ಳಿಗಳಿಂದ, ಐದಾರು ಕಿಲೊ ಮೀಟರ್ ದೂರದಿಂದ ಪ್ರತಿದಿನ ಬೆಳಿಗ್ಗೆ 6ಗಂಟೆಗೆ ನೂರಾರು ಮಂದಿ ಬ್ಯಾಂಕ್ ಮುಂದೆ ನಿಲ್ಲುತ್ತಿದ್ದರು. ಕೊರೊನಾ ಸೋಂಕು ಹರಡುವುದನ್ನು ತಪ್ಪಿಸಲು ಪ್ರತಿನಿಧಿ ಸಿ.ಶಿವಲಿಂಗಯ್ಯ ಅವರು ಪ್ರತಿದಿನ ಗ್ರಾಮಗಳಿಗೆ ತೆರಳಿ ಜನರ ಖಾತೆ ಪರಿಶೀಲನೆ ನಡೆಸಿ ಬ್ಯಾಂಕ್ ಬ್ಯಾಲೆನ್ಸ್ ತಿಳಿಸಿ, ಖಾತೆದಾರರ ಹೆಬ್ಬೆಟ್ಟು ಪಡೆದು ಅಗತ್ಯಕ್ಕೆ ಅನುಗುಣವಾಗಿ ಹಣ ನೀಡುತ್ತಿದ್ದಾರೆ.

ನರೇಗಾ ಕೂಲಿಕಾರ್ಮಿಕರಿಗೆ ಅವರು ಕೆಲಸ ಮಾಡುವ ಸ್ಥಳಕ್ಕೆ ತೆರಳಿ ಅವರಿಗೆ ಹಣ ನೀಡುವ ಮೂಲಕ ಗಮನ ಸೆಳೆದಿದ್ದಾರೆ. ಬ್ಯಾಂಕ್‌ ಗ್ರಾಹಕರು ತಮ್ಮ ಖಾತೆ ಬ್ಯಾಲೆನ್ಸ್ ತಿಳಿಯಲು ಮತ್ತು ಹಣ ಡ್ರಾ ಮಾಡಲು ಕಿಲೋಮೀಟರ್‌ಗಟ್ಟಳೆ ತೆರಳಬೇಕಿತ್ತು. ಆದರೆ ಈಗ ಜನರ ಬಳಿಯೇ ಬಂದು ಬ್ಯಾಂಕ್ ವ್ಯವಹಾರ ಒದುಗಿಸುತ್ತಿರುವ ಕೆನರಾ ಬ್ಯಾಂಕ್ ಸೇವೆ ಶ್ಲಾಘನೀಯ ಎಂದು ಪ್ರಾಂತ ಕೃಷಿ ಕೂಲಿಕಾರ ಸಂಘದ ಎನ್.ಶಿವಕುಮಾರ್ ತಿಳಿಸಿದರು.

ವಾರದ ಎರಡು ದಿನಗಳ ಕೆಲವೇ ಅವಧಿಯಲ್ಲಿ ಬ್ಯಾಂಕ್‌ಗೆ ಬರುವ ನೂರಾರು ಗ್ರಾಹಕರು ಅಂತರ ಕಾಯ್ದುಕೊಳ್ಳುವುದು ಕಷ್ಟ. ಹೀಗಾಗಿ ಬ್ಯಾಂಕ್ ನಿಯಮದಂತೆ ಹಳ್ಳಿಗಳಿಗೆ ತೆರಳಿ ಸೇವೆ ನೀಡಲಾಗುತ್ತಿದೆ ಎಂದು ಕೆನರಾ ಬ್ಯಾಂಕ್ ಪ್ರತಿನಿಧಿ ಸಿ.ಶಿವಲಿಂಗಯ್ಯ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT