ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಕಾರ ರಂಗದ ಪ್ರಗತಿಯಲ್ಲಿ ಹಿಂದೆದ್ದೇವೆ: ಗೃಹ ಸಚಿವ ಬಸವರಾಜ ಬೊಮ್ಮಾಯಿ ಕಳವಳ

ತೋಟದ ಬೆಳೆಗಾರರ ಸಂಘದ ಉದ್ಘಾಟನೆ
Last Updated 5 ಅಕ್ಟೋಬರ್ 2019, 13:15 IST
ಅಕ್ಷರ ಗಾತ್ರ

ಮಂಡ್ಯ: ‘ಸಹಕಾರ ಇಲಾಖೆ ಬಹಳ ಮಹತ್ವದ ಇಲಾಖೆಯಾಗಿದ್ದು ರೈತರ ಆರ್ಥಿಕತೆಯ ಬೆನ್ನೆಲುಬಾಗಿದೆ. ಆದರೆ, ಸಹಕಾರ ರಂಗದ ಬೆಳವಣಿಗೆಯಲ್ಲಿ ನಾವು ಬಹಳ ಹಿಂದುಳಿದಿದ್ದೇವೆ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಕಳವಳವ್ಯಕ್ತಪಡಿಸಿದರು.

ತಾಲ್ಲೂಕಿನ ತೂಬಿನಕೆರೆ ಗ್ರಾಮದಲ್ಲಿ ಶನಿವಾರ ಜಯಪ್ರಕಾಶ್‌ ನಾರಾಯಣ್‌ ತೋಟದ ಬೆಳೆಗಾರರ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.

‘ಗ್ರಾಮೀಣ ಪ್ರದೇಶದ ಜನರ ಬದುಕು ಸಹಕಾರ ಸಂಸ್ಥೆಗಳಿಂದ ಅವಲಂಬಿತವಾಗಿದ್ದು, ಇತ್ತೀಚಿನ ದಿನಗಳಲ್ಲಿ ರೈತರ ನೆರವಿಗೆ ಸಹಕಾರ ಕ್ಷೇತ್ರ ನಿಲ್ಲುವಂತೆ ಶಕ್ತಿ ತುಂಬುವ ಅಗತ್ಯವಿದೆ. ಸಹಕಾರ ಕ್ಷೇತ್ರದ ಕಾನೂನುಗಳಲ್ಲಿ ಬದಲಾವಣೆ ತಂದು ಆರ್ಥಿಕ ಭದ್ರತೆ ಒದಗಿಸುವ ಮೂಲಕ ಸಹಕಾರ ರಂಗವನ್ನು ಬಲಪಡಿಸಬೇಕು’ ಎಂದು ಅಭಿಪ್ರಾಯಪಟ್ಟರು.

‘ಜಯಪ್ರಕಾಶ್‌ ನಾರಾಯಣ್‌ ಅವರ ಹೆಸರಿನಲ್ಲಿ ಬೆಳೆಗಾರರ ಸಹಕಾರ ಸಂಘ ಸ್ಥಾಪಿಸಿರುವುದು ಶ್ಲಾಘನೀಯ. ತೂಬಿನಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮಂಜೂರು ಮಾಡಿಕೊಡಲು ಮನವಿ ಬಂದಿದ್ದು, ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ. ಆದಷ್ಟು ಬೇಗ ಸಂಘ ಪ್ರಾರಂಭಿಸಿ ರೈತರಿಗೆ ಅನುಕೂಲ ಕಲ್ಪಿಸಿಕೊಡಬೇಕು. ಈ ಭಾಗದಲ್ಲಿ ಎಲೆಚಾಕನಹಳ್ಳಿ ಏತ ನೀರಾವರಿ ಯೋಜನೆ ಪೂರ್ಣಗೊಳ್ಳುವುದು ವಿಳಂಬವಾಗಿದ್ದು, ಇದಕ್ಕೆ ಹಿಂದಿನ ಸರ್ಕಾರಗಳ ನಿರಾಸಕ್ತಿಯೇ ಕಾರಣ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಶೀಘ್ರದಲ್ಲಿ ಯೋಜನೆ ಪೂರ್ಣಗೊಳಿಸಲು ಕ್ರಮವಹಿಸಲಾಗುವುದು. ಇದರಿಂದ ತೂಬಿನಕೆರೆ, ಯಲಿಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಕುಡಿಯುವ ನೀರಿನ ಪೂರೈಕೆಗೂ ಸಹಕಾರಿಯಾಗಲಿದೆ. ಮಂಡ್ಯದ ಮೈಸೂರು ಸಕ್ಕರೆ ಕಾರ್ಖಾನೆ, ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಗೆ ಹೊಸ ಕಾಯಕಲ್ಪ ನೀಡುವ ಅಗತ್ಯವಿದೆ. ಎರಡೂ ಕಾರ್ಖಾನೆಗಳನ್ನು ಆರಂಭಿಸುವ ವಿಚಾರವಾಗಿ ಈಗಾಗಲೇ ಸಿಎಂ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಲಾಗಿದೆ. ಕಾರ್ಖಾನೆಗಳನ್ನು ಸುಸ್ಥಿತಿಗೆ ತಂದು ಕಬ್ಬು ಅರೆಯಲು ವ್ಯವಸ್ಥೆ ಮಾಡುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಲಾಗುವುದು’ ಎಂದರು.

‘ರೈತರು ಯಾವ ಪಕ್ಷಕ್ಕೂ ಸೇರಿದವರಲ್ಲ. ಆದರೆ, ರಾಜಕೀಯ ಪಕ್ಷಗಳೆಲ್ಲವೂ ರೈತ ಸಮುದಾಯಕ್ಕೆ ಸೇರಿದ್ದು, ಅವರ ಪ್ರಗತಿಯೇ ಆಳುವ ಸರ್ಕಾರಗಳ ಗುರಿಯಾಗಬೇಕು’ ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ವೈ.ಬಿ. ಅಶೋಕ್‍ಗೌಡ ಪಟೇಲ್, ತಾಪಂ ಮಾಜಿ ಅಧ್ಯಕ್ಷರಾದ ಕೆ.ಹೇಮಲತಾ ಬಸವರಾಜು, ಸಿ.ತ್ಯಾಗರಾಜು, ಸಹಕಾರ ಧುರೀಣ ಕೌಡ್ಲೆ ಚನ್ನಪ್ಪ, ಮುಖಂಡರಾದ ವೈ.ಬಿ. ಬಸವರಾಜು, ಶಶಿಧರ್, ಸತೀಶ್, ಕುಮಾರ್, ಪಟೇಲ್ ಶಂಕರ್, ಯೋಗೇಶ್, ಕೆ.ಎಂ.ನಾಗರಾಜು ಇದ್ದರು.

‘ಖಜಾನೆ ಸ್ಥಿತಿ ಉತ್ತಮವಾಗಿದೆ’
‘ರಾಜ್ಯದ ಖಜಾನೆ ಸ್ಥಿತಿ ಉತ್ತಮವಾಗಿದ್ದು, ಈ ಬಗ್ಗೆ ಯಾರೂ ಆತಂಕಪಡುವ ಅಗತ್ಯವಿಲ್ಲ. ಖಜಾನೆ ಸ್ಥಿತಿ ಯಾವಾಗಲೂ ಒಂದೇ ರೀತಿಯಾಗಿರುವುದಿಲ್ಲ. ಹಣ ಬರುತ್ತದೆ. ಖರ್ಚಾಗುತ್ತಿರುತ್ತದೆ. ರಾಜ್ಯದ ಖಜಾನೆ ಪರಿಸ್ಥಿತಿ ಆತಂಕ ಪಡುವ ಸ್ಥಿತಿಯಲ್ಲೇನೂ ಇಲ್ಲ’ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.‌

‘ಕರ್ನಾಟಕದಲ್ಲಿ ಸೃಷ್ಠಿಯಾದ ಪ್ರವಾಹ ದೊಡ್ಡ ಪ್ರಮಾಣದ ಹಾನಿ ಉಂಟುಮಾಡಿದೆ. ಅದರ ಬಗ್ಗೆ ಸರ್ವೆ ನಡೆಸಿ, ರಾಜ್ಯಸರ್ಕಾರ ವರದಿ ಸಲ್ಲಿಸುವುದಕ್ಕೆ ಸಮಯವಾಗಿದೆ. ಎನ್‍ಡಿಆರ್‌ಎಫ್ ನಿಯಮಾನುಸಾರ ಕೇಂದ್ರ ಮಧ್ಯಂತರ ಪರಿಹಾರವಾಗಿ ₹1200 ಕೋಟಿ ನೀಡಿದೆ. ಪೂರ್ಣ ಪರಿಹಾರ ನೀಡುವಾಗ ಹೆಚ್ಚಿನ ಪ್ರಮಾಣದಲ್ಲಿ ಹಣ ದೊರೆಯುವ ನಿರೀಕ್ಷೆ ಇದೆ’ಎಂದರು.

‘ಬಿಹಾರದಲ್ಲಿ ಪ್ರವಾಹ ಸೃಷ್ಠಿಯಾಗಿದ್ದರೂ ಕರ್ನಾಟಕದಷ್ಟು ಹಾನಿಯಾಗಿಲ್ಲ. ಅದಕ್ಕಾಗಿ ಅಲ್ಲಿಗೆ ₹400 ಕೋಟಿ ನೀಡಲಾಗಿದೆ. ಅಲ್ಲಿಗೂ ಇಲ್ಲಿಗೂ ತಾಳೆ ಹಾಕುವುದು ಸರಿಯಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT