ಬುಧವಾರ, ಫೆಬ್ರವರಿ 19, 2020
24 °C
ಕನ್ನಂಬಾಡಿ ಕಟ್ಟೆಯ ಹಿನ್ನೀರಿನಲ್ಲಿರುವ ಪ್ರತಿಮೆ, ಜೈನ ಸಮಾಜದ ನೂರಾರು ಮಂದಿ ಭಾಗಿ

ಬಸ್ತಿ ಹೊಸಕೋಟೆ: ಗೊಮ್ಮಟನಿಗೆ ಮಸ್ತಕಾಭಿಷೇಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆ.ಆರ್.ಪೇಟೆ: ತಾಲ್ಲೂಕಿನ ಬಸ್ತಿಹೊಸಕೋಟೆ ಗ್ರಾಮದ ಕನ್ನಂಬಾಡಿ ಕಟ್ಟೆಯ ಹಿನ್ನೀರಿನಲ್ಲಿ ಹೊಯ್ಸಳರ ಕಾಲದಲ್ಲಿ ನಿರ್ಮಾಣಗೊಂಡಿರುವ ಗೊಮ್ಮಟೇಶ್ವರ ಮೂರ್ತಿಗೆ ಮಹಾಮಸ್ತಕಾಭಿಷೇಕ ಭಾನುವಾರ ಶ್ರದ್ಧಾ ಮತ್ತು ಭಕ್ತಿಯಿಂದ ನಡೆಯಿತು.

ಮೈಸೂರು, ಮಂಡ್ಯ ಜಿಲ್ಲೆ ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ್ದ ಜೈನ ಸಮುದಾಯದವರು ಸ್ಥಳೀಯ ಗ್ರಾಮಸ್ಥರ ನೆರವಿನೊಂದಿಗೆ 18 ಅಡಿ ಎತ್ತರವಿರುವ ಬಾಹುಬಲಿ ಮೂರ್ತಿಗೆಮಹಾಮಸ್ತಕಾಭಿಷೇಕವನ್ನು ನೆರವೇರಿಸಲಾಯಿತು.

ಕನಕಗಿರಿಯ ದಿಗಂಬರ ಜೈನಮಠದ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ, ಕಂಬದಹಳ್ಳಿಯ ದಿಗಂಬರ ಜೈನಮಠದ ಭಾನುಕೀರ್ತಿ ಭಟ್ಟಾರಕ ಸ್ವಾಮೀಜಿ ಹಾಗೂ ಆರತಿಪುರದ ದಿಗಂಬರ ಜೈನಮಠದ ಸಿದ್ಧಾಂತಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಹಾಲು, ಜೇನು, ಮೊಸರು, ಎಳನೀರು, ಗಂಧ, ಅರಿಸಿನ– ಕುಂಕಮಾದಿ ದ್ರವ್ಯಗಳಿಂದ ಹಾಗೂ ನಾನಾ ಬಗೆಯ ಹೂವುಗಳು, ಪತ್ರೆಗಳಿಂದ ಗೊಮ್ಮಟನಿಗೆ ಅಭಿಷೇಕ ನಡೆಸಲಾಯಿತು. ಮಹಾ ಮಸ್ತಕಾಭಿಷೇಕವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.

ವೇದಿಕೆ ಕಾರ್ಯಕ್ರಮದಲ್ಲಿ ಭಾರತೀಯ ಜೈನ ಮಿಲನ್ ರಾಷ್ಟ್ರೀಯ ಕಾರ್ಯಾಧ್ಯಕ್ಷ ಡಿ.ಸುರೇಂದ್ರಕುಮಾರ್ ಮಾತನಾಡಿ, ‘ಈ ಕ್ಷೇತ್ರವನ್ನು ಧರ್ಮಸ್ಥಳ ಧರ್ಮೋತ್ಥಾನ ಟ್ರಸ್ಟ್ ಆಶ್ರಯದಲ್ಲಿ ಸಮಗ್ರವಾಗಿ ಅಭಿವೃದ್ಧಿ ಪಡಿಸಲು ನಿರ್ಧರಿಸಲಾಗಿದೆ. ವಿಶ್ವಕ್ಕೆ ಶಾಂತಿಯ ಸಂದೇಶವನ್ನು ಸಾರಿದ, ತ್ಯಾಗ ಮತ್ತು ವೈರಾಗ್ಯ ಮೂರ್ತಿಯಾದ ಭಗವಾನ್ ಬಾಹುಬಲಿಯ ತತ್ವ ಸಂದೇಶಗಳು ಹಾಗೂ ಆದರ್ಶವನ್ನು ನಾವೆಲ್ಲರೂ ಪಾಲಿಸುವ ಅಗತ್ಯವಿದೆ’ ಎಂದರು.

ಅನಿತಾ ಸುರೇಂದ್ರಕುಮಾರ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಗಾಯತ್ರಿ, ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಶ್ರೀನಿವಾಸ್, ಮಾಜಿ ಉಪಾಧ್ಯಕ್ಷ ಎಸ್.ಅಂಬರೀಶ್, ಬಲ್ಲೇನಹಳ್ಳಿ ಗ್ರಾ.ಪಂ ಅಧ್ಯಕ್ಷ ಚಂದ್ರಶೇಖರ್, ಗಂಜಿಗೆರೆ ಗ್ರಾಪಂ ಅಧ್ಯಕ್ಷೆ ವೀರಾಜಮ್ಮ, ಮುಖಂಡ ಬಸ್ತಿರಂಗಪ್ಪ, ತಹಶೀಲ್ದಾರ್ ಎಂ.ಶಿವಮೂರ್ತಿ, ಬಸದಿ ಹೊಸಕೋಟೆಯ ಭಗವಾನ್ ಬಾಹುಬಲಿ ದಿಗಂಬರ ಜೈನ ಟ್ರಸ್ಟ್‌ನ ಅಧ್ಯಕ್ಷ ಡಾ.ಲಲಿತಾಂಗಕುಮಾರ್, ಕಾರ್ಯದರ್ಶಿ ಸಿ.ಎಸ್.ನಾಗರಾಜು, ಶಾಂತಿಪ್ರಸಾದ್, ಮೈಸೂರಿನ ನಾ.ಪ್ರಸನ್ನಕುಮಾರ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ವಿಜಯಕುಮಾರ್ ಸುವರ್ಣ, ತಾಲ್ಲೂಕು ಯೋಜನಾಧಿಕಾರಿ ಮಮತಾ ಶೆಟ್ಟಿ ಇದ್ದರು.

‘ಪುಣಿಶಮಯ್ಯ ಕಟ್ಟಿಸಿದ ಗೊಮ್ಮಟ’

12ನೇ ಶತಮಾನದಲ್ಲಿ ಹೊಯ್ಸಳರ ರಾಜ ವಿಷ್ಣುವರ್ಧನನ ದಂಡನಾಯಕನಾಗಿದ್ದ ಪುಣಿಶಮಯ್ಯ ಈ ಗೊಮ್ಮಟವನ್ನು ಇಲ್ಲಿ ಪ್ರತಿಷ್ಠಾಪಿಸಿದ್ದ. ಕಾವೇರಿ ಹಿನ್ನೀರಿನಲ್ಲಿರುವ ಸ್ಥಳವನ್ನು ಮಾಣಿಕ್ಯದೊಡಲು ಎಂದು ಕರೆಯಲಾಗುತ್ತಿತ್ತು. ನೂರಾರು ಸಂಖ್ಯೆಯಲ್ಲಿ ಜೈನರು ವಾಸವಾಗಿದ್ದರು. ಕನ್ನಂಬಾಡಿ ಜಲಾಶಯ ನಿರ್ಮಾಣವಾದ ನಂತರ ಗ್ರಾಮವು ಮುಳುಗಡೆಯಾದ ಹಿನ್ನೆಲೆಯಲ್ಲಿ ಇಲ್ಲಿದ್ದ ಗ್ರಾಮವನ್ನು ಸ್ಥಳಾಂತರಿಸಲಾಗಿತ್ತು. ಅಗ ಇಲ್ಲಿದ್ದ ಜೈನರು ಬೇರೆಡೆ ಹೋದರು. ಆದರೂ ತಮ್ಮೂರಿನ ಗೊಮ್ಮಟನನ್ನು ಮರೆಯದೆ ವರ್ಷಕೊಮ್ಮೆ ಮಹಾಮಸ್ತಕಾಭಿಷೇಕ ನಡೆಸುತ್ತಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು