ಬಿಡಿಎ ನಿವೇಶನ ಕೊಡಿಸುವ ನೆಪದಲ್ಲಿ ₹5 ಲಕ್ಷ ವಂಚನೆ

ಸೋಮವಾರ, ಮಾರ್ಚ್ 25, 2019
26 °C
ಮುಖ್ಯಮಂತ್ರಿ ಉಪಕಾರ್ಯದರ್ಶಿ ನಕಲಿ ಲೆಟರ್‌ಹೆಡ್ ಸೃಷ್ಟಿಸಿ ವಂಚನೆ

ಬಿಡಿಎ ನಿವೇಶನ ಕೊಡಿಸುವ ನೆಪದಲ್ಲಿ ₹5 ಲಕ್ಷ ವಂಚನೆ

Published:
Updated:
Prajavani

ಮದ್ದೂರು: ಮುಖ್ಯಮಂತ್ರಿ ಅವರ ವಿವೇಚನಾ ಕೋಟಾದಡಿ ಕಡಿಮೆ ದರಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ನಿವೇಶನ ಕೊಡಿಸುವುದಾಗಿ ನಂಬಿಸಿದ, ಬೆಂಗಳೂರಿನ ಮಂಜುನಾಥ ನಗರದ ನಿವಾಸಿ ಎಂ.ರಾಮಚಂದ್ರೇಗೌಡ ಎಂಬುವರು ಮಹಿಳೆಯೊಬ್ಬರಿಂದ ₹5 ಲಕ್ಷ ಪಡೆದು ವಂಚಿಸಿದ್ದಾರೆ.

ಕೆಸ್ತೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಗುಮಾಸ್ತ ಟಿ.ಎಲ್.ನಂಜುಂಡಸ್ವಾಮಿ ಅವರ ಪತ್ನಿ ಟಿ.ಎಂ.ಗಿರಿಜಾ ವಂಚನೆಗೊಳಗಾದವರು. ಈ ಸಂಬಂಧ ಕೆಸ್ತೂರು ಠಾಣೆಯಲ್ಲಿ ದೂರು ನೀಡಿದ್ದಾರೆ.

ತಾಲ್ಲೂಕಿನ ಮಲ್ಲನಕುಪ್ಪೆ ಗ್ರಾಮದ ರಾಮಚಂದ್ರೇಗೌಡ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಬೆಳೆಸಾಲ ಪಡೆಯಲು ಕೆಸ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಬಂದಾಗ ಗುಮಾಸ್ತ ನಂಜುಂಡಸ್ವಾಮಿ ಪರಿಚಯವಾಗಿದೆ. ನಂತರ ಆತ್ಮೀಯತೆ ಬೆಳೆಸಿಕೊಂಡ ರಾಮಚಂದ್ರೇಗೌಡ, ‘ನಾನು ಬಿಡಿಎ ಆಯುಕ್ತರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ನಿಮಗೆ ಕಡಿಮೆ ಬೆಲೆಗೆ ನಿವೇಶನ ಕೊಡಿಸುತ್ತೇನೆ. ನನಗೆ ಸಚಿವರು ಹಾಗೂ ಮುಖ್ಯಮಂತ್ರಿ ಅವರ ಉಪ ಕಾರ್ಯದರ್ಶಿ ಪರಿಚಯವಿದ್ದು, ನಿಮ್ಮ ಕೆಲಸ ಸುಲಭವಾಗಲಿದೆ’ ಎಂದು ನಂಬಿಸಿದ್ದಾರೆ.

ರಾಮಚಂದ್ರೇಗೌಡ ಜ.8ರಂದು ನಂಜುಂಡಸ್ವಾಮಿ ದಂಪತಿಯನ್ನು ಭೇಟಿ ಮಾಡಿ, ಟಿ.ಎಂ.ಗಿರಿಜಾ ಹೆಸರಿನಲ್ಲಿ ನಿವೇಶನದ ಅರ್ಜಿ ಬರೆಸಿಕೊಂಡಿದ್ದಾರೆ. ಜ.13ರಂದು 26X40 ಅಡಿ ಅಳತೆಯ ನಿವೇಶನ ಮಂಜೂರಾಗಿದೆ ಎಂದು ಬೆಂಗಳೂರಿಗೆ ಕರೆಸಿಕೊಂಡಿದ್ದಾರೆ. ಬೆಂಗಳೂರಿನ ಉಲ್ಲಾಳ ಉಪನಗರದ ವಿಶ್ವೇಶ್ವರಯ್ಯ ಬಡಾವಣೆಯ ಬಿಡಿಎ ನಿವೇಶನ ಸಂಖ್ಯೆ 140/1 ತೋರಿಸಿದ್ದಾರೆ. ಬಳಿಕ, ಮುಖ್ಯಮಂತ್ರಿ ಅವರ ಉಪ ಕಾರ್ಯದರ್ಶಿ ಲೆಟರ್‌ಹೆಡ್‌ನಲ್ಲಿ ನಿವೇಶನ ಮಂಜೂರಾತಿ ಶಿಫಾರಸ್ಸಿನ ನಕಲಿಪತ್ರ ನೀಡಿದ್ದಾರೆ.

ಜ.16ರಂದು ಕೆಸ್ತೂರಿಗೆ ಬಂದ ರಾಮಚಂದ್ರೇಗೌಡ, ‘ನನ್ನ ಖಾತೆಯಿಂದ ₹4,22,830 ಹಣವನ್ನು ಬಿಡಿಎಗೆ ಪಾವತಿ ಮಾಡಿದ್ದೇನೆ. ನನಗೆ ಹಣ ಕೊಡಿ’ ಎಂದು ಕೇಳಿದ್ದಾರೆ. ಆಗ ನಂಜುಂಡಸ್ವಾಮಿ ₹2 ಲಕ್ಷ ಚೆಕ್ ನೀಡಿದ್ದಾರೆ. ಬಳಿಕ, ಜ.21ರಂದು ₹3 ಲಕ್ಷ ನಗದು ನೀಡಿದ್ದಾರೆ. ಮನೆ ನೋಂದಣಿಯೂ ಮುಗಿದಿದ್ದು, ನೋಂದಣಿ ಶುಲ್ಕವಾಗಿ ₹84,811 ಪಾವತಿಸುವಂತೆ ರಾಮಚಂದ್ರೇಗೌಡ ಒತ್ತಾಯಿಸಿದ್ದಾರೆ.

ಇದರಿಂದ ಅನುಮಾನಗೊಂಡ ದಂಪತಿ, ಬಿಡಿಎ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ಅಧಿಕಾರಿಗಳು, ನೀವು ನೀಡುತ್ತಿರುವ ಎಲ್ಲಾ ದಾಖಲೆಗಳು ನಕಲಿ ಎಂದು ತಿಳಿಸಿದ್ದಾರೆ.

ಕೆಸ್ತೂರು ಠಾಣೆ ಪಿಎಸ್ಐ ಸಂತೋಷ್ ತನಿಖೆ ಕೈಗೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !