ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀಡಿ ಕಾರ್ಮಿಕರಿಗೆ ಸೌಲಭ್ಯ ನೀಡಲು ಒತ್ತಾಯ

Last Updated 4 ಜುಲೈ 2018, 13:10 IST
ಅಕ್ಷರ ಗಾತ್ರ

ಮಂಡ್ಯ: ‘ಕಳೆದ ಮೂರು ವರ್ಷಗಳಿಂದ ಬೀಡಿ ಕಾರ್ಮಿಕರಿಗೆ ಡಿ.ಎ ಹಾಗೂ ಕನಿಷ್ಠ ಕೂಲಿ ನೀಡದೆ ವಂಚಿಸಲಾಗಿದೆ. ಮಾಲೀಕರು ಕಾರ್ಮಿಕರಿಗೆ ಮೋಸ ಮಾಡುತ್ತಿದ್ದರೂ ಸರ್ಕಾರಗಳು ಕಣ್ಣು ಮುಚ್ಚಿ ಕುಳಿತಿವೆ’ ಎಂದು ಸಿಐಟಿಯು ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಸೈಯ್ಯದ್‌ ಮಜೀದ್‌ ಆರೋಪಿಸಿದರು.

ಸಾದತ್‌ ನಗರದಲ್ಲಿ ಬೀಡಿ ಕಾರ್ಮಿಕರ ಸಂಘ, ಸಿಐಟಿಯು ವತಿಯಿಂದ ಬುಧವಾರ ನಡೆದ ಬೀಡಿ ಕಾರ್ಮಿಕರ ಸಮಾವೇಶದಲ್ಲಿ ಅವರು ಮಾತನಾಡಿದರು. ‘2015ರಲ್ಲೇ ಡಿ.ಎ ಮೊತ್ತ ಹೆಚ್ಚಳ ಮಾಡಲಾಗಿದೆ. ಬೀಡಿ ಕಟ್ಟಿದ ಕಾರ್ಮಿಕರಿಗೆ ₹ 2 ಲಕ್ಷಕ್ಕೂ ಹಣ ನೀಡಬೇಕು. ಪ್ರತಿ ಕಾರ್ಮಿಕನಿಗೆ ₹ 7,800 ಬರಬೇಕು. ರಾಜ್ಯ ಹೈಕೋರ್ಟ್‌ ಕೂಡ ಕಾರ್ಮಿಕ ಭತ್ಯೆ ನೀಡಲು ಆದೇಶ ನೀಡಿದೆ. ಆದರೆ ಮಾಲೀಕರು ಹಣ ನೀಡದೆ ವಂಚಿಸಿದ್ದಾರೆ. ಕೋರ್ಟ್‌ ಆದೇಶ ಉಲ್ಲಂಘನೆ ಮಾಡಿದರೂ ಮಾಲೀಕರ ವಿರುದ್ಧ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಶೀಘ್ರ ಸರ್ಕಾರ ಕಾರ್ಮಿಕರು ಭತ್ಯೆ ಹಣ ಕೊಡಿಸಬೇಕು’ ಎಂದು ಒತ್ತಾಯಿಸಿದರು.

‘ಬೀಡಿ ಕಾರ್ಮಿಕರಿಗೆ ಪರ್ಯಾಯ ಉದ್ಯೋಗ ನೀಡಬೇಕು. ಬೀಡಿ ಕಾರ್ಮಿಕರು ಬೀದಿಗೆ ಬಂದಿದ್ದು ಅವರಿಗೆ ಆಸರೆ ನೀಡಬೇಕು. ಬೀಡಿ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಬೇಕು. ಶೈಕ್ಷಣಿಕ ಅರ್ಹತೆಗೆ ಅನುಗುಣವಾಗಿ ಕಾಲಕಾಲಕ್ಕೆ ಅದನ್ನು ಹೆಚ್ಚಳ ಮಾಡಬೇಕು. ಕಾರ್ಮಿಕರಿಗೆ ಕನಿಷ್ಠ ₹ 6,500 ಪಿಂಚಣಿ ನೀಡಬೇಕು. ವಸತಿ ರಹಿತ ಬೀಡಿ ಕಾರ್ಮಿಕರನ್ನು ಗುರುತಿಸಿ ಸಾಮೂಹಿಕ ವಸತಿ ಯೋಜನೆ ರೂಪಿಸಬೇಕು. ರಾಜ್ಯ ಸರ್ಕಾರ ಸ್ಥಳೀಯ ಸಂಸ್ಥೆಗಳ ಮೂಲಕ ಬೀಡಿ ಕಾರ್ಮಿಕರಿಗೆ ಗುರುತಿನ ಚೀಟಿ ವಿತರಣೆ ಮಾಡಬೇಕು’ ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಿಐಟಿಯು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಖಜಾಂಚಿ ಸಲ್ಮಾ ಬಾನು, ಸಹ ಕಾರ್ಯದರ್ಶಿ ತಾಹೇರ್‌ ಜಾನ್‌, ತೆಹರಿನ್‌, ಮೊಹಮ್ಮದ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT