ಭಾನುವಾರ, ಅಕ್ಟೋಬರ್ 20, 2019
21 °C
ಮಳೆ ಬಂದಾಗ ಮುಳುಗುತ್ತಿದೆ ಬದುಕು, ದುರ್ವಾಸನೆಯಿಂದ ರೋಗಭೀತಿ, ಗೋಳು ಕೇಳುವವರಿಲ್ಲ

ಬೀಡಿ ಕಾರ್ಮಿಕರ ಕಾಲೊನಿಯಲ್ಲಿದೆ ನರಕ!

Published:
Updated:
Prajavani

ಮಂಡ್ಯ: ಸ್ವಂತ ಸೂರಿನ ಕನಸಿನಿಂದ ಮನೆಕಟ್ಟಿಕೊಂಡ ಬೀಡಿ ಕಾರ್ಮಿಕರ ಕಾಲೊನಿ ನಿವಾಸಿಗಳು ನಿತ್ಯವೂ ನರಕ ಸದೃಶ ಜೀವನ ನಡೆಸುತ್ತಿದ್ದಾರೆ. ಮಳೆ ಬಂದಾಗ ಮನೆಯೊಳಗೆ ಮಂಡಿಯುದ್ದ ನೀರು ತುಂಬಿಕೊಳ್ಳುತ್ತಿದ್ದು, ಜನ ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ.

ಮಂಡ್ಯ ಕೆರೆಯಂಗಳ ಮುಚ್ಚಿದ್ದರ ಪರಿಣಾಮವನ್ನು ಬೀಡಿ ಕಾರ್ಮಿಕರ ಕಾಲೊನಿ ಜನರು ಅನುಭವಿಸುತ್ತಿದ್ದಾರೆ. ಕಳೆದೊಂದು ವಾರದಿಂದ ರಾತ್ರಿಯ ವೇಳೆ ಭಾರಿ ಮಳೆಯಾಗುತ್ತಿದ್ದು, ಜನರು ನಿದ್ದೆ ತ್ಯಜಿಸಿದ್ದಾರೆ. ಮಲಗಿದ ನಂತರ ಮನೆಯೊಳಗೆ ನೀರು ನುಗ್ಗುವ ಭೀತಿ ಅವರನ್ನು ಸದಾ ಕಾಡುತ್ತಿದೆ. ರಾತ್ರಿಯಿಡೀ ಮಳೆ ನೀರನ್ನು ಹೊರ ಹಾಕಿ, ಬೆಳಗಾಗುತ್ತಿದ್ದಂತೆ ನಿದ್ದೆಗೆ ಜಾರುತ್ತಿದ್ದಾರೆ. ಚರಂಡಿಗಳು ಉಕ್ಕಿ ಹರಿದಿದ್ದು, ರಸ್ತೆಯಲ್ಲಿ ತ್ಯಾಜ್ಯ ತುಂಬಿದೆ. ಈ ಕಾಲೊನಿಯು 3ನೇ ವಾರ್ಡ್‌ ವ್ಯಾಪ್ತಿಯಲ್ಲಿ ಬರುತ್ತದೆ.

ಮಣ್ಣಿನ ರಸ್ತೆಗಳು ರಾಡಿಯಾಗಿದ್ದು, ಅಲ್ಲಿ ಸೈಕಲ್‌, ಬೈಕ್‌, ಆಟೊಗಳು ಓಡಾಡಲು ಸಾಧ್ಯವಾಗುತ್ತಿಲ್ಲ. ಆಟೊ ಓಡಿಸಿಕೊಂಡು ಜೀವನ ಸಾಗಿಸುವವರು ಸಾಕಷ್ಟು ಮಂದಿ ಇದ್ದಾರೆ. ಆದರೆ, ರಸ್ತೆಯಲ್ಲಿ ಹೂತು ಹೋಗುತ್ತಿರುವ ಕಾರಣ ವಾಹನ ಹೊರಗೆ ತೆಗೆಯಲು ಸಾಧ್ಯವಾಗುತ್ತಿಲ್ಲ. ಎಲ್ಲೆಲ್ಲೂ ಕೊಳಕು ಬಿದ್ದು ಚೆಲ್ಲಾಡುತ್ತಿದ್ದು, ಇಡೀ ವಾತಾವರಣ ಗಬ್ಬೆದ್ದು ನಾರುತ್ತಿದೆ. ಮನೆಯಲ್ಲಿರುವ ಜನರಿಗೆ ಜ್ವರ, ನೆಗಡಿ, ಕೆಮ್ಮು ಮುಂತಾದ ಕಾಯಿಲೆಗಳೂ ಕಾಣಿಸಿ ಕೊಳ್ಳುತ್ತಿವೆ. ಇಲ್ಲಿಯವರೆಗೂ ಯಾವುದೇ ಅಧಿಕಾರಿ ಭೇಟಿ ನೀಡಿ ಅವರ ಕಷ್ಟ ಕೇಳದೇ ಇರುವುದು ನಿವಾಸಿಗಳನ್ನು ಕಂಗೆಡಿಸಿದೆ.

‘ನರಕ ಬೇರೆಲ್ಲೂ ಇಲ್ಲ, ನಾವು ವಾಸಿಸುತ್ತಿರುವ ಬಡಾವಣೆಯಲ್ಲಿಯೇ ಇದೆ. ಹೊರಗೆ ಕಾಲಿಡಲು ಸಾಧ್ಯವಾಗುತ್ತಿಲ್ಲ. ಒಂದು ವಾರದಿಂದ ಸ್ಮಶಾನ ಮೌನ ಆವರಿಸಿದೆ. ಮನೆಯೊಳಗೆ ನೀರು ನುಗ್ಗಿ ಹಾಸಿಗೆ, ಹೊದಿಕೆ ಎಲ್ಲವೂ ತೊಯ್ದು ಹೋಗಿವೆ. ಮಕ್ಕಳಿಗೆ ಜ್ವರ ಕಾಣಿಸಿಕೊಂಡಿದ್ದು, ಅವರನ್ನು ಕಾಪಾಡುವುದು ಹೇಗೆ ಎಂಬುದೇ ಚಿಂತೆಯಾಗಿದೆ’ ಎಂದು ಕಾಲೊನಿಯ ಹರ್ಷಿಯಾ ಅಂಜುಂ ನೋವು ತೋಡಿಕೊಂಡರು.

2002ರಲ್ಲಿ ಅಭಿವೃದ್ಧಿ: ಕೆರೆಯಂಗಳದ ತಟದಲ್ಲಿ ಬೀಡಿ ಕಾರ್ಮಿಕರು ಶೆಡ್‌ ಹಾಕಿಕೊಂಡು ಜೀವನ ಸಾಗಿಸುತ್ತಿದ್ದರು. ಮಂಡ್ಯ ಕೆರೆಯಂಗಳ ಮುಚ್ಚಿ ಬಡಾವಣೆ ರೂಪ ನೀಡಿದ ಸಂದರ್ಭದಲ್ಲಿ 50 ಎಕರೆ ಜಾಗವನ್ನು ಬೀಡಿ ಕಾರ್ಮಿಕರಿಗೆ ಮೀಸಲಿಡಲಾಗಿತ್ತು. ಎಸ್‌.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ 2002ರಲ್ಲಿ ಈ ಬಡಾವಣೆಯನ್ನು ಅಭಿವೃದ್ಧಿಗೊಳಿಸಲಾಗಿತ್ತು. ಬಡಾವಣೆಯ 23 ಎಕರೆ ಜಾಗದಲ್ಲಿ ನಿವೇಶನ ಅಭಿವೃದ್ಧಿಗೊಳಿಸಲಾಗಿತ್ತು. 27 ಎಕರೆಯನ್ನು ರಸ್ತೆ, ಚರಂಡಿ, ಉದ್ಯಾನಕ್ಕೆ ಮೀಸಲಿಡಲಾಗಿತ್ತು.

ಬಡಾವಣೆ ರೂಪಿಸಿದ್ದಷ್ಟೇ ಆಯಿತು, ಮೂಲ ಸೌಲಭ್ಯ ಒದಗಿಸದ ಕಾರಣ ನಿವಾಸಿಗಳು ನರಕಸದೃಶ ಜೀವನ ಅನುಭವಿಸುವಂತಾಗಿದೆ. ಚರಂಡಿ, ರಸ್ತೆ, ಉದ್ಯಾನ ನಿರ್ಮಿಸಲು ನೂರಾರು ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಲಾಗಿದೆ. ಆದರೆ, ಯಾವ ಕಾಮಗಾರಿಯೂ ಪೂರ್ಣಗೊಳ್ಳದ ಕಾರಣ ಸರ್ಕಾರದ ಹಣ ಪೋಲಾಗಿದೆ. ಈಗಲೂ ₹40 ಕೋಟಿ ಅನುದಾನ ಒಳಚರಂಡಿ ಕಾಮಗಾರಿಗೆ ಬಿಡುಗಡೆಯಾಗಿದೆ. ಆದರೆ, ಕಾಮಗಾರಿ ಎಲ್ಲಿ ನಡೆಯುತ್ತಿದೆ, ಯಾವಾಗ ಕಾಮಗಾರಿ ಪೂರ್ಣಗೊಳ್ಳುತ್ತದೆ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ನಿವಾಸಿಗಳಿಗೂ ಈ ಬಗ್ಗೆ ಗೊತ್ತಿಲ್ಲ.

ಹಾವು, ಹಲ್ಲಿಗಳ ಭಯ: ಬಡಾವಣೆಯಲ್ಲಿ ಉದ್ಯಾನ, ಆಟದ ಮೈದಾನಕ್ಕಾಗಿ ಜಾಗ ಮೀಸಲಿಡಲಾಗಿದೆ. ಆದರೆ, ಅಭಿವೃದ್ಧಿಗೊಳಿಸದ ಕಾರಣ ಆ ಜಾಗದಲ್ಲಿ ಗಿಡಗಂಟಿಗಳು ಬೆಳೆದಿದ್ದು, ಹಾವು, ಕ್ರಿಮಿಕೀಟಗಳ ವಾಸಸ್ಥಳವಾಗಿವೆ. ಜನರು ನಿತ್ಯವೂ ಹಾವುಗಳನ್ನು ನೋಡುತ್ತಿದ್ದು, ಹೊರಕ್ಕೆ ಮಕ್ಕಳನ್ನು ಬಿಡಲು ಭಯ ಪಡುತ್ತಿದ್ದಾರೆ.

ಮೈದಾನದಲ್ಲಿ  ತ್ಯಾಜ್ಯ ಸುರಿದಿರುವ ಕಾರಣ ಎಲ್ಲೆಡೆ ದುರ್ವಾಸನೆ ಆವರಿಸಿದೆ. ಚರಂಡಿ ಸಂಪರ್ಕ ಇಲ್ಲದೆ ಮಳೆ ನೀರು ರಸ್ತೆಯಲ್ಲೇ ಹರಿದಿದೆ. 

‘ರಸ್ತೆ ಮೇಲೆ ಬರಿಗಾಲಿನಲ್ಲಿ ಓಡಾಡಲು ಸಾಧ್ಯವಿಲ್ಲ. ಎಲ್ಲೆಂದರಲ್ಲಿ ಅಪಾಯಕಾರಿ ಮುಳ್ಳುಗಳಿವೆ. ಚಪ್ಪಲಿ ಹಾಕಿದ್ದರೂ ಮುಳ್ಳುಗಳು ಚುಚ್ಚುತ್ತಿವೆ’ ಎಂದು ನಿವಾಸಿ ರಂಗಯ್ಯ ಹೇಳಿದರು.

ಶಾಲಾ ವಾಹನ ಬರುತ್ತಿಲ್ಲ

ರಸ್ತೆಯಲ್ಲಿ ಮಣ್ಣು ತುಂಬಿಕೊಂಡು ವಾಹನಗಳು ಹೂತು ಹೋಗುತ್ತಿವೆ. ಹೀಗಾಗಿ ಬೀಡಿ ಕಾರ್ಮಿಕರ ಕಾಲೊನಿಗೆ ಶಾಲಾ ವಾಹನ, ಆಟೊಗಳು ಬರುತ್ತಿಲ್ಲ. ಹೀಗಾಗಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಅಲ್ಲಿಯ ನಿವಾಸಿಗಳು ಪರದಾಡುತ್ತಿದ್ದಾರೆ.

‘ಬಸ್‌ ಬಾರದ ಕಾರಣ ಕೆಲವು ಮಕ್ಕಳು ಶಾಲೆಗೆ ಹೋಗುವುದನ್ನೇ ನಿಲ್ಲಿಸಿವೆ. ಮಳೆ ನಿಲ್ಲುವವರೆಗೆ, ರಸ್ತೆ ಸುಧಾರಣೆ ಆಗುವವರೆಗೂ ಇದೇ ಪರಿಸ್ಥಿತಿ ಮುಂದುವರಿಯಲಿದೆ’ ಎಂದು ನಿವಾಸಿಗಳು ಹೇಳಿದರು.

ಕಾಲೊನಿಗೆ ಇಬ್ಬರು ಪೌರ ಕಾರ್ಮಿಕರು

50 ಎಕರೆಯಷ್ಟು ವಿಶಾಲವಾಗಿರುವ ಬೀಡಿ ಕಾರ್ಮಿ ಕರ ಕಾಲೊನಿ ಸ್ವಚ್ಛತೆಗೆ ನಗರಸಭೆ ಕೇವಲ ಇಬ್ಬರು ಪೌರ ಕಾರ್ಮಿಕರನ್ನು ನೇಮಕ ಮಾಡಿದೆ. ಇಬ್ಬರಿಂದ ಯಾವ ಕೆಲಸ ವನ್ನೂ ಮಾಡಲು ಸಾಧ್ಯವಾಗುತ್ತಿಲ್ಲ. ಹೆಚ್ಚಿನ ಕಾರ್ಮಿಕರನ್ನು ನೇಮಕ ಮಾಡುವಂತೆ ಹಲವು ಬಾರಿ ನಗರಸಭೆ ಪೌರಾಯುಕ್ತರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಆದರೆ, ಸಿಬ್ಬಂದಿ ಕೊರತೆಯ ನೆಪ ಹೇಳುತ್ತಿದ್ದು, ಅಲ್ಲಿಗೆ ಹೆಚ್ಚಿನ ಕಾರ್ಮಿಕರನ್ನು ನೇಮಕ ಮಾಡಲು ಸಾಧ್ಯವಾಗಿಲ್ಲ.

ಅಪಾಯಕ್ಕೆ ಆಹ್ವಾನಿಸುತ್ತಿದೆ ಟಿಸಿ

ಕಾಲೊನಿಗೆ ವಿದ್ಯುತ್‌ ಒದಗಿಸುವ ಪರಿವರ್ತಕ ನೀರಿನಲ್ಲಿ ಮುಳುಗಿದೆ. ನೆಲ ಹಸಿಯಾಗಿರುವ ಕಾರಣ ಎರಡೂ ಕಂಬಗಳು ಒಂದು ಕಡೆಗೆ ಬಾಗಿವೆ. ಸಲ್ಪ ಅಂತರದಲ್ಲೇ ನೀರು ಪರಿವರ್ತಕವನ್ನು ಸ್ಪರ್ಶಿಸುತ್ತಿದೆ. ಅದನ್ನು ಸರಿಪಡಿಸದಿದ್ದರೆ ಕಂಬ ನೆಲಕ್ಕೆ ಉರುಳಿ ಅಪಾಯ ಸಂಭವಿಸಬಹುದು.

ಅನಾಹುತ ಸಂಭವಿಸುವುದಕ್ಕೂ ಮೊದಲು ಸೆಸ್ಕ್‌, ನಗರಸಭೆ ಅಧಿಕಾರಿಗಳು ಇಲ್ಲಿಗೆ ಭೇಟಿ ನೀಡಿ ನೀರು ತೆರವುಗೊಳಿಸಿ ಕಂಬ ಸರಿಪಡಿಸಬೇಕು ಎಂದು ನಿವಾಸಿಗಳು ಒತ್ತಾಯಿಸಿದರು.

***

ಮೂಗು ಮುಚ್ಚಿಕೊಂಡು ಓಡಾಟ

ಕಾಲೊನಿಯಲ್ಲಿ ಮೂಗು ಮುಚ್ಚಿಕೊಂಡು ಓಡಾಡ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮ ಕಷ್ಟವನ್ನು ಕೇಳಲು ಯಾರೂ ಬರುತ್ತಿಲ್ಲ. ಮಳೆ ಕಂಡರೆ ನಮಗೆ ಭಯವಾಗುತ್ತದೆ. ರಾತ್ರಿಯ ವೇಳೆ ಮಳೆ ಬಂದರಂತೂ ನಡುಗುತ್ತೇವೆ. ಜೀವವನ್ನು ಕೈಯಲ್ಲಿ ಹಿಡಿದು ಬದುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

–ಶಿವಶಂಕರ್‌

ನೀರು ನುಗ್ಗುವುದನ್ನು ತಪ್ಪಿಸಿ

ಮನೆಗಳಿಗೆ ನೀರು ನುಗ್ಗುವುದನ್ನು ನಗರಸಭೆ ಸಿಬ್ಬಂದಿ ತಪ್ಪಿಸಬೇಕು. ಇಳಿಜಾರಿನಲ್ಲಿರುವ ಮನೆಗಳ ಮುಂದೆ ನೀರು ಬಾರದಂತೆ ತಡೆಗೋಡೆಯನ್ನು ನಿರ್ಮಾಣ ಮಾಡಬೇಕು. ಈ ಕುರಿತು ನಗರಸಭೆ ಸದಸ್ಯರಿಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

–ನಯಾಜ್‌

ಕರೆಂಟ್‌ ತೆಗೆಯುತ್ತಾರೆ

ಮಳೆ ಬಂದಾಗ ಕರೆಂಟ್‌ ಹೋಗುತ್ತದೆ. ಕತ್ತಲಲ್ಲಿ ಜೀವನ ಮಾಡಬೇಕಾದ ಪರಿಸ್ಥಿತಿ ಇದೆ. ಮನೆಗೆ ನೀರು ನುಗ್ಗಿದಾಗ ಸೀಮೆಎಣ್ಣೆ ದೀಪ ಇಟ್ಟುಕೊಂಡು ನೀರನ್ನು ಹೊರಗೆ ಚೆಲ್ಲಬೇಕು. ಮಳೆ ಬಂದಾಗ ಮಕ್ಕಳನ್ನು ನಿಭಾಯಿಸುವುದೇ ದೊಡ್ಡ ಸವಾಲು.

–ಅಶ್ವಿನಿ

ಇಲ್ಲಿಗೆ ಬಂದು ಚಿಕಿತ್ಸೆ ಕೊಡಿ

ಎಲ್ಲೆಂದರಲ್ಲಿ ನೀರು ನಿಂತಿರುವ ಕಾರಣ ಸೊಳ್ಳೆಗಳ ಕಾಟ ವಿಪರೀತವಾಗಿದೆ. ಮಕ್ಕಳಿಗೆ ಹಲವು ಕಾಯಿಲೆ ಬಂದಿದ್ದು, ಅವರಿಗೆ ಚಿಕಿತ್ಸೆ ಕೊಡಿಸುವುದು ದುಸ್ತರವಾಗಿದೆ. ವೈದ್ಯರು, ನರ್ಸ್‌ಗಳು ನಮ್ಮ ಬಡಾವಣೆಗೆ ಭೇಟಿ ನೀಡಿ ಚಿಕಿತ್ಸೆ ನೀಡಿದರೆ ಒಳ್ಳೆಯದಾಗುತ್ತದೆ.

–ಫಾತಿಮಾ

ರಸ್ತೆಗೆ ಡಾಂಬರ್‌ ಇಲ್ಲ

ಮುಖ್ಯರಸ್ತೆಗಳಿಗೆ ಡಾಂಬರ್‌ ಹಾಕಿದರೆ ರಸ್ತೆಯಲ್ಲಿ ಕೊಳಚೆ ನೀರು ನಿಲ್ಲುವುದು ತಪ್ಪುತ್ತದೆ. ಇದರಿಂದ ದುರ್ವಾಸನೆಯಿಂದ ಮುಕ್ತಿ ಪಡೆಯಬಹುದು. ಆದರೆ, ರಸ್ತೆಯಲ್ಲಿ ಯಾರೂ ನಡೆದಾಡಲು ಸಾಧ್ಯವಾಗದಂತಹ ಪರಿಸ್ಥಿತಿ ಇದೆ. ಮಕ್ಕಳು, ಮಹಿಳೆಯರು, ವೃದ್ಧರು ನಿತ್ಯವೂ ಬಿದ್ದು ಗಾಯಗೊಳ್ಳುತ್ತಿದ್ದಾರೆ.

–ಸುಮಾ

Post Comments (+)