ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಂಗಪಟ್ಟಣ | ಕೃಷಿ ಕಾಯಕ ಚುರುಕು: ಭತ್ತದ ನಾಟಿ ಶುರು

ಶ್ರೀರಂಗಪಟ್ಟಣ ತಾಲ್ಲೂಕಿನ ಹಲವು ನಾಲೆಗಳಿಗೆ ಹರಿದು ಬಂದ ಕಾವೇರಿ ನೀರು
Last Updated 30 ಜುಲೈ 2020, 14:22 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ನಾಲೆಗಳಲ್ಲಿ ನೀರು ಹರಿಯುವುದನ್ನೇ ಕಾಯುತ್ತಿದ್ದ ರೈತರು ಕೃಷಿ ಚಟುವಟಿಕೆಗಳನ್ನು ಚುರುಕುಗೊಳಿಸಿದ್ದಾರೆ.

ತಾಲ್ಲೂಕಿನ ವ್ಯಾಪ್ತಿಯಲ್ಲಿ ಹರಿಯುವ ವಿಶ್ವೇಶ್ವರಯ್ಯ, ಚಿಕ್ಕದೇವರಾಯಸಾಗರ (ಸಿಡಿಎಸ್‌), ವಿರಿಜಾ, ಬಂಗಾರ ದೊಡ್ಡಿ, ರಾಜಪರಮೇಶ್ವರಿ ಮತ್ತು ರಾಮಸ್ವಾಮಿ ನಾಲೆಗಳಲ್ಲಿ ಎರಡು ದಿನಗಳಿಂದ ನೀರು ಹರಿಯುತ್ತಿದೆ. ತಮ್ಮ ಗದ್ದೆಗಳಿಗೆ ನೀರುಣಿಸಿ ಭತ್ತದ ನಾಟಿಗೆ ಹದ ಮಾಡುವ ಕಾಯಕದಲ್ಲಿ ರೈತರು ತೊಡಗಿದ್ದಾರೆ. ಬೆಳಗೊಳ ಮತ್ತು ಕೆ.ಶೆಟ್ಟಹಳ್ಳಿ ಹೋಬಳಿ ವ್ಯಾಪ್ತಿಯ ಹಳೇ ಬಯಲುಗಳಲ್ಲಿ, ಈ ಮೊದಲೇ ಪೈರು ಬೆಳೆಸಿಕೊಂಡಿದ್ದ ರೈತರು ಭತ್ತದ ಪೈರು ನಾಟಿ ಕಾರ್ಯವನ್ನು ಆರಂಭಿಸಿದ್ದಾರೆ.

ಕೊರೊನಾ ಆತಂಕವನ್ನು ಬದಿಗಿಟ್ಟು ರೈತರು ತಮ್ಮ ಜಮೀನಿಗೆ ಇಳಿದಿದ್ದಾರೆ. ಒಟ್ಲು ಹಾಕುವುದು, ತೆವರಿ ಕೊಚ್ಚುವುದು, ತವಡೆ ತುಳಿಯುವುದು, ಗೊಬ್ಬರ ಹಾಕುವುದು, ಉಳುಮೆ ಇತರ ಕೆಲಸಗಳು ಎಲ್ಲೆಲ್ಲೂ ಕಾಣಿಸುತ್ತಿವೆ. ಮಹಿಳಾ ಕೃಷಿ ಕಾರ್ಮಿಕರು ಭೂ ತಾಯಿಗೆ ಹಸಿರುಡುಗೆ ಉಡಿಸುವ ಕಾಯಕದಲ್ಲಿ ತೊಡಗಿರುವ ದೃಶ್ಯ ಕಣ್ಣಿಗೆ ಹಬ್ಬ ಉಂಟು ಮಾಡುವಂತಿದೆ.

‘ಮುಂಗಾರು ಹಂಗಾಮಿಗೆ ತಾಲ್ಲೂಕಿನಲ್ಲಿ 7,500 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ. 2000 ಹೆಕ್ಟೇರ್‌ನಲ್ಲಿ ರಾಗಿ ಹಾಗೂ 2000 ಹೆಕ್ಟೇರ್‌ ಪ್ರದೇಶದಲ್ಲಿ ಕಬ್ಬು ಬೆಳೆಯುವ ಗುರಿ ಹೊಂದಲಾಗಿದೆ. ಎಂಟಿಯು–1001, ಜ್ಯೋತಿ, ಐಆರ್‌–64 ಹಾಗೂ ಜೆಜಿಎಲ್‌ ತಳಿಯ ಭತ್ತದ ಬಿತ್ತನೆ ಬೀಜ ಲಭ್ಯ ಇದ್ದು, ಈಗಾಗಲೇ ಶೇ 90ರಷ್ಟು ರೈತರು ಪಡೆದಿದ್ದಾರೆ. ಖುಷ್ಕಿ ಪ್ರದೇಶದ ರೈತರಿಗೆ ಎಂಆರ್‌–6, ಎಂಎನ್–365 ತಳಿ ರಾಗಿ ಬಿತ್ತನೆ ಬೀಜ ವಿತರಿಸಲಾಗಿದೆ’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ನಿಶಾಂತ್‌ ಕೀಲಾರ ತಿಳಿಸಿದ್ದಾರೆ.

‘ರಿಯಾಯಿತಿ ದರದಲ್ಲಿ ಹಸಿರೆಲೆ ಗೊಬ್ಬರ ಚಂಬೆ ಸಿಗುತ್ತಿದೆ. ಜಿಂಕ್‌ ಮತ್ತು ಬೋರಾಕ್ಸ್‌ ಲಘು ಪೋಷಕಾಂಶಗಳು ರಿಯಾಯಿತಿ ದರದಲ್ಲಿ ಸಿಗುತ್ತಿದ್ದು ರೈತರು ಪಡೆದುಕೊಳ್ಳಬೇಕು’ ಎಂದು ಅವರು ತಿಳಿಸಿದ್ದಾರೆ.

‘ತಡವಾಗಿಯಾದರೂ ನಾಲೆಯಲ್ಲಿ ನೀರು ಬಂದಿರುವುದು ಖುಷಿ ತಂದಿದೆ. ಆಗಸ್ಟ್ 15ರ ವೇಳೆಗೆ ಭತ್ತದ ನಾಟಿ ಮಾಡಲು ಸಿದ್ಧತೆ ನಡೆದಿದ್ದು ಜಮೀನು ಹಸನು ಮಾಡಿಕೊಳ್ಳುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇವೆ. ಸರ್ಕಾರ ಕಾಯಂ ನೀರು ಕೊಟ್ಟು ರೈತರು ಬೆಳೆ ಬೆಳೆಯಲು ಸಹಾಯ ಮಾಡಬೇಕು’ ಎಂದು ಚಿಕ್ಕಪಾಳ್ಯ ರೈತ ಪುರುಷೋತ್ತಮ ಅವರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT