ಶನಿವಾರ, ಏಪ್ರಿಲ್ 1, 2023
23 °C
ರಾಷ್ಟ್ರೀಯ ಹೆದ್ದಾರಿ ಆಧಾರಿತ ಆರ್ಥಿಕ ಚಟುವಟಿಕೆ ಬಂದ್‌, ಸಣ್ಣ ಪುಟ್ಟ ವ್ಯಾಪಾರಿಗಳ ಬದುಕು ಅತಂತ್ರ

ಬೈಪಾಸ್‌ ಸಂಚಾರಕ್ಕೆ ಮುಕ್ತ: ಬಿಕೋ ಎನ್ನುತ್ತಿದೆ ಮಂಡ್ಯ ನಗರ ಹೆದ್ದಾರಿ

ಎಂ.ಎನ್‌.ಯೋಗೇಶ್‌ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಹೊರವಲಯದ ಬೆಂಗಳೂರು–ಮೈಸೂರು ದಶಪಥ ಬೈಪಾಸ್‌ ಸಂಚಾರಕ್ಕೆ ಮುಕ್ತವಾಗಿದ್ದು ನಗರ ವ್ಯಾಪ್ತಿಯ ಹೆದ್ದಾರಿಯಲ್ಲಿ ವಾಹನಗಳ ಓಡಾಟ ತೀವ್ರ ಕುಸಿತ ಕಂಡಿದೆ. ರಸ್ತೆ, ಪ್ರಮುಖ ವೃತ್ತಗಳು ಬಿಕೋ ಎನ್ನುತ್ತಿದ್ದು ಬಂದ್‌ ವಾತಾವರಣ ನಿರ್ಮಾಣವಾಗಿದೆ.

ಇಂಡುವಾಳು ಗ್ರಾಮದಿಂದ ಅಮರಾವತಿ ಹೋಟೆಲ್‌ವರೆಗಿನ ಬೈಪಾಸ್‌ನಲ್ಲಿ ಮೂರು ದಿನಗಳಿಂದ ವಾಹನ ಸಂಚಾರ ಆರಂಭವಾಗಿದೆ. ಶೇ 70ರಷ್ಟು ವಾಹನಗಳು ಬೈಪಾಸ್‌ನಲ್ಲೇ ಓಡಾಡುತ್ತಿದ್ದು ನಗರ ವ್ಯಾಪ್ತಿಯಲ್ಲಿ ಹೆದ್ದಾರಿ ಆಧಾರಿತ ಆರ್ಥಿಕ ಚಟುವಟಿಕೆ ಸಂಪೂರ್ಣವಾಗಿ ನೆಲಕಚ್ಚಿದೆ. ನಗರ ವ್ಯಾಪ್ತಿಯ ಕಲ್ಲಹಳ್ಳಿ ವೃತ್ತ, ಕೋರ್ಟ್‌ ಸರ್ಕಲ್‌, ಸಂಜಯ, ಫ್ಯಾಕ್ಟರಿ ವೃತ್ತಗಳು ಟ್ರಾಫಿಕ್‌ ಮುಕ್ತವಾಗಿದ್ದು ಬಿಕೋ ಎನ್ನುತ್ತಿವೆ.

ಶನಿವಾರ, ಭಾನುವಾರದಂದು ನಗರದಲ್ಲಿ ವ್ಯಾಪ್ತಿಯ ಹೆದ್ದಾರಿಯಲ್ಲಿ ಓಡಾಡುವುದೇ ಕಷ್ಟವಾಗಿತ್ತು. ಸಂಜಯ ವೃತ್ತದಲ್ಲಿ ಟ್ರಾಫಿಕ್‌ ತೆರವಾಗಲು 10–15 ನಿಮಿಷ ಕಾಯಬೇಕಾಗಿತ್ತು. ಆದರೆ ಈಗ ಅಂತಹ ಯಾವುದೇ ಪರಿಸ್ಥಿತಿ ಇಲ್ಲ. ಕೋವಿಡ್‌ ಲಾಕ್‌ಡೌನ್‌ನಂತಹ ಪರಿಸ್ಥಿತಿ ನಿರ್ಮಾಣಗೊಂಡಿದ್ದು ಬೆಂಗಳೂರು– ಮೈಸೂರು ನಡುವೆ ಓಡಾಡುವ ವಾಹನಗಳು ಇತ್ತ ಬಾರದ ಕಾಋಣ ಸ್ಥಳೀಯ ವಾನಗಳು ಮಾತ್ರ ಇಲ್ಲಿ ಓಡಾಡುತ್ತಿವೆ.

ಸಾರಿಗೆ ಸಂಸ್ಥೆಯ ತಡೆರಹಿತ ಬಸ್‌ಗಳು ಕೂಡ ನಗರದತ್ತ ಬಾರದೇ ಬೈಪಾಸ್‌ನಲ್ಲೇ ತೆರಳುತ್ತಿವೆ. ಹಲವು ತಡೆರಹಿತ ಬಸ್‌ಗಳು ಮೊದಲು ಮಂಡ್ಯದಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗುತ್ತಿದ್ದವು, ಆದರೆ ಈಗ ಆ ಬಸ್‌ಗಳು ಬರುತ್ತಿಲ್ಲ. ಮೈಸೂರು– ಬೆಂಗಳೂರು ನಡುವೆ ಓಡಾಡುವವರಿಗೆ ಮೊದಲು 5 ನಿಮಿಷಕ್ಕೊಂದು ಬಸ್‌ ಸಿಗುತ್ತಿತ್ತು. ಈಗ 15 ನಿಮಿಷದವರೆಗೂ ಕಾಯಬೇಕಾದ ಪರಿಸ್ಥಿತಿ ಬಂದಿದೆ. ಜೊತೆಗೆ ಬಸ್ ಕೊರತೆಯಿಂದ ಜನರು ಸೀಟ್‌ ಸಿಗದೇ ನಿಂತೇ ಪ್ರಯಾಣ ಮಾಡುತ್ತಿದ್ದಾರೆ.

ವಿಮಾನ ನಿಲ್ದಾಣದ ಫ್ಲೈಬಸ್‌ ಸೇರಿದಂತೆ ಯಾವುದೇ ವೋಲ್ವೊ ಬಸ್‌ ನಗರಕ್ಕೆ ಬರುತ್ತಿಲ್ಲ. ಚಾಮರಾಜನಗರ, ಮಡಿಕೇರಿ, ಮಂಗಳೂರು ಮಾರ್ಗದಲ್ಲಿ ಓಡಾಡುವ ಬಸ್‌ಗಳು ಮಾತ್ರ ನಗರಕ್ಕೆ ಬಂದು ಹೋಗುತ್ತಿವೆ. ನಗರ ಬಸ್‌ ನಿಲ್ದಾಣದಲ್ಲಿ ಮೊದಲು ಇದ್ದ ಬಸ್‌ಗಳ ದಟ್ಟಣೆ, ಟ್ರಾಫಿಕ್‌ ಜಾಮ್‌ ಮಾಯವಾಗಿದ್ದು ವಾಹನಗಳು ಸಾರಾಗವಾಗಿ ಚಲಿಸುತ್ತಿವೆ.

ಹೋಟೆಲ್‌ ಉದ್ಯಮಕ್ಕೆ ಹೊಡೆತ: ಹೆದ್ದಾರಿಯಲ್ಲಿ ಓಡಾಡುವ ವಾಹನಗಳನ್ನೇ ನಂಬಿ ನಡೆಯುತ್ತಿದ್ದ ಹೋಟೆಲ್‌ಗಳ ವಹಿವಾಟಿಗೆ ಬೈಪಾಸ್‌ ವಾಹನ ಸಂಚಾರದಿಂದ ಹೆಚ್ಚು ಹೊಡೆತ ಬಿದ್ದಿದೆ. ಜ್ಯೋತಿ ಇಂಟರ್‌ನ್ಯಾಷನಲ್‌ ಹೋಟೆಲ್‌, ಸುರಭಿ ಹೋಟೆಲ್‌, ಹರಿಪ್ರಿಯಾ ಹೋಟೆಲ್‌, ಗುರುರಾಜ ಕಾಂಟಿನೆಂಟಲ್‌, ಮಹಾರಾಜ ಹೋಟೆಲ್‌ಗಳಿಗೆ ಪ್ರಮುಖವಾಗಿ ನಷ್ಟವಾಗುತ್ತಿದೆ.

ಮೈಸೂರು– ಬೆಂಗಳೂರು ನಡುವೆ ಓಡಾಡುತ್ತಿದ್ದವರು ಮಂಡ್ಯದಲ್ಲಿ ನಿಂತು ಹೊರಡುವುದು ವಾಡಿಕೆಯಾಗಿತ್ತು. ಬಹುತೇಕ ಪ್ರವಾಸಿಗರು ಇಲ್ಲಿಯ ಹೋಟೆಲ್‌ಗಳಲ್ಲಿ ತಿಂಡಿ ಸವಿದು, ಇಲ್ಲಿಯ ವಿಶೇಷ ಬೆಲ್ಲ, ತಾಜಾ ತರಕಾರಿ, ಬಾಳೆ ಹಣ್ಣು ಖರೀದಿಸಿ ಪ್ರಯಾಣ ಮುಂದುವರಿಸುತ್ತಿದ್ದರು. ಈಗ ಅಂತಹ ವಾಡಿಕೆ ಬಂದ್‌ ಆಗಿದ್ದು ಹೋಟೆಲ್‌ ಮಾಲೀಕರು ಕಂಗಾಲಾಗಿದ್ದಾರೆ.

‘ನಮ್ಮ ಹೋಟೆಲ್‌ ವಹಿವಾಟು ಶೇ 80ರಷ್ಟು ಕುಸಿತವಾಗಿದೆ. ಮುಂದೇನು ಎಂಬ ಪ್ರಶ್ನೆ ಕಾಡುತ್ತಿದ್ದು ತಲೆಬಿಸಿಯಾಗಿದೆ. ಬೈಪಾಸ್‌ನಿಂದಾಗಿ ನಗರ ವ್ಯಾಪ್ತಿಯ ಹೋಟೆಲ್‌ ವಹಿವಾಟು ಸಂಪೂರ್ಣವಾಗಿ ನೆಲಕಚ್ಚಲಿದೆ’ ಎಂದು ಹರಿಪ್ರಿಯ ಹೋಟೆಲ್‌ ಮುಖ್ಯಸ್ಥ ರವಿ ಆಚಾರ್ಯ ತಿಳಿಸಿದರು.

ನಗರ ವ್ಯಾಪ್ತಿಯ ನಾಟಿ ಶೈಲಿ ಮಾಂಸಾಹಾರ ಹೋಟೆಲ್‌ಗಳಿಗೆ ಪ್ರಯಾಣಿಕರು, ಪ್ರವಾಸಿಗರು ಪ್ರಮುಖವಾಗಿ ಭೇಟಿ ನೀಡುತ್ತಿದ್ದರು. ಇಲ್ಲಿಯ ವಿಶೇಷ ತಲೆಮಾಂಸ, ಬೋಟಿ ಗೊಜ್ಜು, ಕಾಲ್‌ ಸೂಪ್‌ ಸವಿಯಲು ಅಪಾರ ಸಂಖ್ಯೆಯ ಜನರು ಬರುತ್ತಿದ್ದರು. ಈಗ ಮಾಂಸಾಹಾರ ಹೋಟೆಲ್‌ಗಳು ಕೂಡ ಬಿಕೋ ಎನ್ನುತ್ತಿದ್ದು ನಷ್ಟಕ್ಕೆ ತುತ್ತಾಗಿವೆ.

‘ಬೈಪಾಸ್‌ ವಾಹನ ಸಂಚಾರಕ್ಕೆ ಮುಕ್ತವಾಗಿ ಕೇವಲ 3 ದಿನವಾಗಿದ್ದು ಈಗಾಗಲೇ ನಷ್ಟ ಉಂಟಾಗಿದೆ. ಮುಂದೇನು ಎಂಬ ಪ್ರಶ್ನೆ ಕಾಡುತ್ತಿದೆ’ ಎಂದು ಹೋಟೆಲ್‌ ಮಾಲೀಕ ಶಂಕರೇಗೌಡ ಹೇಳಿದರು.

****

ಪೆಟ್ರೋಲ್‌ ಬಂದ್‌, ಬಾರ್‌ಗಳಿಗೆ ತೀವ್ರ ನಷ್ಟ

ಬೈಪಾಸ್‌ ಸಂಚಾರದಿಂದಾಗಿ ನಗರ ವ್ಯಾಪ್ತಿಯ ಪೆಟ್ರೋಲ್‌ ಬಂಕ್‌ ಹಾಗೂ ಬಾರ್‌ಗಳಿಗೆ ತೀವ್ರ ನಷ್ಟವಾಗುತ್ತಿದೆ. ಪೆಟ್ರೋಲ್‌ ಬಂಕ್‌ಗಳಿಗೆ ಶೇ 70ರಷ್ಟು ವಹಿವಾಟು ಕುಸಿತ ಉಂಟಾಗಿದೆ. ವಾರಾಂತ್ಯದಲ್ಲಿ ಪೆಟ್ರೋಲ್‌ ಬಂಕ್‌ಗಳಿಗೆ ಭಾರಿ ಬೇಡಿಕೆ ಇರುತ್ತಿತ್ತು, ಸರತಿ ಸಾಲಿನಲ್ಲಿ ನಿಂತು ಇಂಧನ ತುಂಬಿಸಿಕೊಳ್ಳಬೇಕಾಗಿತ್ತು. ಈಗ ಬಂಕ್‌ಗಳು ಕೂಡ ಬಿಕೋ ಎನ್ನುತ್ತಿದ್ದು ಅಲ್ಲಿಯ ಸಿಬ್ಬಂದಿ ವಾಹನ ಬರುವುದನ್ನೇ ಎದುರು ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಮೈಸೂರು– ಬೆಂಗಳೂರು ಮಾರ್ಗ ಮಧ್ಯೆ ಮದ್ಯ ಖರೀದಿ ಮಾಡುವವರ ಸಂಖ್ಯೆಯೂ ಹೆಚ್ಚಾಗಿತ್ತು. ಈಗ ಅದೂ ತಪ್ಪಿದ್ದು ಹೆದ್ದಾರಿ ಬದಿಯ ಬಾರ್‌, ವೈನ್‌ ಶಾಪ್‌ಗಳಿಗೆ ನಷ್ಟ ಕಾಡುತ್ತಿದೆ.

****

10 ಸಾವಿರ ಉದ್ಯೋಗ ನಷ್ಟ

ಮದ್ದೂರು ಹಾಗೂ ಮಂಡ್ಯ ಬೈಪಾಸ್‌ನಿಂದಾಗಿ ಸಣ್ಣ ಪುಟ್ಟ ವ್ಯಾಪಾರಿಗಳು ಅತಂತ್ರರಾಗಿದ್ದಾರೆ. ಸೊಪ್ಪು, ತರಕಾರಿ, ಎಳನೀರು, ಬೆಲ್ಲ ಮುಂತಾದ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ, ಸಣ್ಣ ಪುಟ್ಟ ಕ್ಯಾಂಟೀನ್‌ ನಡೆಸುತ್ತಿದ್ದ ವರ್ತಕರ ವಟಿವಾಟು ಸಂಪೂರ್ಣವಾಗಿ ಸ್ಥಗಿತಗೊಂಡಿದೆ.

‘ಜಿಲ್ಲಾ ವ್ಯಾಪ್ತಿಯೊಂದರಲ್ಲೇ 10 ಸಾವಿರ ಉದ್ಯೋಗ ನಷ್ಟ ಉಂಟಾಗಿದೆ ಎಂದು ಅಂದಾಜು ಮಾಡಲಾಗಿದೆ. ಮಂದೆ ಮಂಡ್ಯ ನಗರವು ಹಳ್ಳಿಯಾಗಿಯೇ ಮುಂದುವರಿಯಲಿದೆ, ರಿಯಲ್‌ ಎಸ್ಟೇಟ್‌, ಬಾಡಿಗೆ ದರಕ್ಕೂ ಹೊಡೆತ ಬೀಳಲಿದೆ’ ಎಂದು ಕರುನಾಡು ಸೇವಕರು ಸಂಘಟನೆಯ ನಾಗಣ್ಣಗೌಡ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು