ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭತ್ತ ಖರೀದಿ: ನೂರಾರು ಕೋಟಿ ಅವ್ಯವಹಾರ?

‘ರಾಮ–ಕೃಷ್ಣ’ ಲೆಕ್ಕ ತೋರಿಸುತ್ತಿರುವ ಅಕ್ಕಿ ಗಿರಣಿ ಮಾಲೀಕರು, ರೈತರಿಗೆ ಅನ್ಯಾಯ, ತನಿಖೆಗೆ ಒತ್ತಾಯ
Last Updated 24 ಏಪ್ರಿಲ್ 2019, 20:27 IST
ಅಕ್ಷರ ಗಾತ್ರ

ಮಂಡ್ಯ: ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ನಡೆದ ಭತ್ತ ಖರೀದಿ ಪ್ರಕ್ರಿಯೆಯಲ್ಲಿ ಭಾರಿ ಅವ್ಯವಹಾರ ನಡೆದಿರುವ ಶಂಕೆ ವ್ಯಕ್ತವಾಗಿದೆ. ಅಕ್ಕಿ ಗಿರಣಿ ಮಾಲೀಕರು ‘ರಾಮ–ಕೃಷ್ಣ ಲೆಕ್ಕ’ ತೋರಿಸಿದ್ದು, ಸರ್ಕಾರಕ್ಕೆ ನೂರಾರು ಕೋಟಿ ವಂಚನೆ ಮಾಡಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.

ಕೇರಳ ಮಾದರಿಯಲ್ಲಿ ಭತ್ತ ಸಂಗ್ರಹ ಮಾಡುವ ಜವಾಬ್ದಾರಿಯನ್ನು ಸರ್ಕಾರ ಅಕ್ಕಿ ಗಿರಣಿಗಳ ಮಾಲೀಕರಿಗೆ ವಹಿಸಿತ್ತು. ರಾಜ್ಯ ಉಗ್ರಾಣ ನಿಗಮದ ಉಸ್ತುವಾರಿಯಲ್ಲಿ ಭತ್ತ ಖರೀದಿ ಪ್ರಕ್ರಿಯೆ ನಡೆಯಬೇಕು ಎಂದು ಸರ್ಕಾರ ಸೂಚನೆ ನೀಡಿತ್ತು. ಜನವರಿಯಿಂದ ಆರಂಭವಾದ ಖರೀದಿ ಪ್ರಕ್ರಿಯೆಯಲ್ಲಿ ಜಿಲ್ಲೆಯ 64 ಅಕ್ಕಿಗಿರಣಿಗಳ ಮಾಲೀಕರು14,772 ರೈತರಿಂದ 5,18,581 ಕ್ವಿಂಟಲ್‌ ಭತ್ತ ಸಂಗ್ರಹ ಮಾಡಿರುವುದಾಗಿ ಲೆಕ್ಕ ನೀಡಿದ್ದಾರೆ. ಆದರೆ, ಅಕ್ಕಿ ಗಿರಣಿ ಮಾಲೀಕರು ದಲ್ಲಾಳಿಗಳಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ತಪ್ಪು ಲೆಕ್ಕ ತೋರಿಸುತ್ತಿದ್ದಾರೆ. ಮುಕ್ತ ಮಾರುಕಟ್ಟೆ ಬೆಲೆಯಲ್ಲಿ ಭತ್ತ ಖರೀದಿಸಿ ಬೆಂಬಲ ಬೆಲೆ ಯೋಜನೆ ವ್ಯಾಪ್ತಿಗೆ ತಂದು ವಂಚನೆ ಮಾಡಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.

ಸರ್ಕಾರ ಕ್ವಿಂಟಲ್‌ ಭತ್ತಕ್ಕೆ ₹1,750 ನಿಗದಿ ಮಾಡಿತ್ತು. ತಡವಾಗಿ ಖರೀದಿ ಕೇಂದ್ರ ಆರಂಭವಾದ ಕಾರಣ ಶೇ 80ರಷ್ಟು ರೈತರು ಮುಕ್ತ ಮಾರುಕಟ್ಟೆಯಲ್ಲಿ ಭತ್ತ ಮಾರಾಟ ಮಾಡಿಕೊಂಡಿದ್ದರು. ತಮಿಳುನಾಡಿನ ವ್ಯಾಪಾರಿಗಳು ಜಿಲ್ಲೆಗೆ ಬಂದು ಅಪಾರ ಪ್ರಮಾಣದ ಭತ್ತ ಖರೀದಿ ಮಾಡಿದ್ದರು. ಕೇಂದ್ರ ಸ್ಥಾಪನೆ ತಡವಾದ ಕಾರಣ ನೋಂದಣಿ ಮಾಡಿಸಿದ್ದ ರೈತರೂ ದಲ್ಲಾಳಿಗೆ ಭತ್ತ ಮಾರಾಟ ಮಾಡಿದ್ದರು. ಆದರೂ 5 ಲಕ್ಷ ಕ್ವಿಂಟಲ್‌ಗೂ ಹೆಚ್ಚು ಭತ್ತ ಖರೀದಿ ಲೆಕ್ಕ ತೋರಿಸುತ್ತಿರುವುದು ಅನುಮಾನಗಳಿಗೆ ಕಾರಣವಾಗಿದೆ.

ಗ್ರಾಮ ಲೆಕ್ಕಿಗ ಹಾಗೂ ರಾಜಸ್ವ ನಿರೀಕ್ಷಕರ ಬೆಳೆ ದೃಢೀಕರಣ ಪತ್ರ ಹಾಗೂ ಆರ್‌ಟಿಸಿಯೊಂದಿಗೆ ರೈತರು ಭತ್ತ ಖರೀದಿ ಕೇಂದ್ರಗಳಲ್ಲಿ ಹೆಸರು ನೋಂದಣಿ ಮಾಡಿಸಿದ್ದರು. ಪ್ರತಿ ರೈತರಿಂದ 40 ಕ್ವಿಂಟಲ್‌ ಭತ್ತ ಖರೀದಿಸುವ ಮಿತಿ ನಿಗದಿಗೊಳಿಸಲಾಗಿತ್ತು. ಆದರೆ, ಭತ್ತ ಇಲ್ಲದಿದ್ದರೂ ರೈತರಿಂದ ಆರ್‌ಟಿಸಿ ಪಡೆದು ಭತ್ತ ಮಾರಾಟ ಮಾಡಿರುವುದಾಗಿ ಲೆಕ್ಕ ತೋರಿಸಿದ್ದಾರೆ. ಅಕ್ರಮದಲ್ಲಿ ಗ್ರಾಮ ಲೆಕ್ಕಿಗರು ಹಾಗೂ ಆರ್‌ಐಗಳೂ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

‘ಇಡೀ ಅಧಿಕಾರಿ ವರ್ಗ ಅಕ್ರಮ ದಾಖಲಾತಿಗಳನ್ನು ಸೃಷ್ಟಿಸಿ ಭತ್ತ ಖರೀದಿ ಮಾಡಿರುವುದಾಗಿ ತೋರಿಸಿದ್ದಾರೆ. ಆರ್‌ಟಿಸಿ ಕೊಟ್ಟ ರೈತರಿಗೆ ಕಮಿಷನ್‌ ಕೊಟ್ಟು ಕೋಟ್ಯಂತರ ರೂಪಾಯಿ ಹಣ ಲೂಟಿ ಮಾಡಿದ್ದಾರೆ. ಸರ್ಕಾರದ ಯೋಜನೆಯಿಂದ ದಲ್ಲಾಳಿಗಳು ಹಾಗೂ ಅಕ್ಕಿ ಗಿರಣಿ ಮಾಲೀಕರು ಲಾಭ ಮಾಡಿಕೊಂಡಿದ್ದಾರೆ. ಕಷ್ಟಪಟ್ಟು ಭತ್ತ ಬೆಳೆದ ರೈತರು ಕೇವಲ ₹1,200ಕ್ಕೆ ಕ್ವಿಂಟಲ್‌ ಭತ್ತ ಮಾರಾಟ ಮಾಡಿ ನಷ್ಟ ಅನುಭವಿಸಿದ್ದಾರೆ’ ಎಂದು ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಶಂಭೂನಹಳ್ಳಿ ಸುರೇಶ್‌ ಆರೋಪಿಸಿದರು.

ವಿವಿಧೆಡೆ ಕೇಂದ್ರ ತಂಡದ ಪರಿಶೀಲನೆ:ಭತ್ತ ಖರೀದಿ ಕೇಂದ್ರದಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಅಧಿಕಾರಿಗಳ ತಂಡ ಅಕ್ಕಿ ಗಿರಣಿಗಳಿಗೆ ಭೇಟಿ ನೀಡಿ ಭತ್ತದ ಸಂಗ್ರಹ ಪರಿಶೀಲನೆ ನಡೆಸುತ್ತಿದೆ. ಹೆಚ್ಚು ಭತ್ತ ಸಂಗ್ರಹಿಸಿರುವ ಗಿರಣಿಗಳ ಮೇಲೆ ತಂಡ ನಿಗಾ ಇಟ್ಟಿದೆ ಎಂದು ಮೂಲಗಳು ತಿಳಿಸಿವೆ.

‘ಆರ್‌ಟಿಸಿ, ಬೆಳೆ ಅನುಮೋದನೆ ಪರಿಶೀಲಿಸುವಷ್ಟು ನೌಕರರು ಇರಲಿಲ್ಲ. ಗ್ರಾಮ ಲೆಕ್ಕಿಗ, ಆರ್‌ಐಗಳ ಅನುಮೋದನೆ ಮೇರೆಗೆ ಭತ್ತ ಮಾರಾಟಕ್ಕೆ ಅವಕಾಶ ನೀಡಿದ್ದೇವೆ. ಅವ್ಯವಹಾರ ನಡೆದಿರುವ ಬಗ್ಗೆ ಮಾಹಿತಿ ಇಲ್ಲ’ ಎಂದು ರಾಜ್ಯ ಉಗ್ರಾಣ ನಿಗಮದ ಪ್ರಾದೇಶಿಕ ವ್ಯವಸ್ಥಾಪಕ ಭಾಗವತ್‌ ತಿಳಿಸಿದರು.

‘ಭತ್ತ ಖರೀದಿ ವಿಚಾರವಾಗಿ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ. ಅವ್ಯವಹಾರ ನಡೆದಿದ್ದರೆ ತಕ್ಷಣ ಕ್ರಮ ಜರುಗಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಪಿ.ಸಿ.ಜಾಫರ್‌ ತಿಳಿಸಿದರು.

ಕಡಿಮೆ ವಿಸ್ತೀರ್ಣ, ಹೆಚ್ಚು ಭತ್ತ: ಭತ್ತ ಮಾರಾಟಕ್ಕೆ ಹೆಸರು ನೋಂದಣಿ ಮಾಡಿಸಿರುವ ಬಹುತೇಕ ರೈತರ ಜಮೀನಿನ ವಿಸ್ತೀರ್ಣ 10 ಗುಂಟೆಯೊಳಗಿದೆ. ಆದರೆ ಆ ರೈತರು ಕೂಡ ತಲಾ 40 ಕ್ವಿಂಟಲ್‌ ಭತ್ತ ಮಾರಾಟ ಮಾಡಿದ್ದಾರೆ. ಏಳೆಂಟು ಗುಂಟೆ ಜಮೀನಿನಲ್ಲಿ 40 ಕ್ವಿಂಟಲ್‌ ಭತ್ತ ಬೆಳೆಯಲು ಸಾಧ್ಯವೇ? ಗ್ರಾಮ ಲೆಕ್ಕಿಗರು, ರಾಜಸ್ವ ನಿರೀಕ್ಷಕರು ಹೆಚ್ಚು ಭತ್ತ ಮಾರಾಟಕ್ಕೆ ಹೇಗೆ ಅನುಮೋದನೆ ನೀಡಿದರು? ಉಗ್ರಾಣ ನಿಗಮದ ಅಧಿಕಾರಿಗಳು ಇದನ್ನು ಪರಿಶೀಲನೆ ನಡೆಸಲಿಲ್ಲವೇ ಎಂದು ರೈತರು ಪ್ರಶ್ನಿಸುತ್ತಾರೆ. ಅಧಿಕಾರಿಗಳು ತಕ್ಷಣ ಅಕ್ಕಿ ಗಿರಣಿಗಳಿಗೆ ಭೇಟಿ ನೀಡಿ ನಿಜವಾಗಿ ಎಷ್ಟು ಭತ್ತ ಸಂಗ್ರಹ ಮಾಡಿದ್ದಾರೆ ಎಂಬುದನ್ನು ಪತ್ತೆ ಮಾಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

‘ಭತ್ತದ ಗುಣಮಟ್ಟ ಸರಿ ಇಲ್ಲ ಎಂಬ ನೆಪ ಹೇಳಿ ಗಿರಣಿ ಮಾಲೀಕರು ನೂರಾರು ರೈತರ ಭತ್ತ ನಿರಾಕರಿಸಿದ್ದಾರೆ. ಅದೇ ಭತ್ತವನ್ನು ಕಡಿಮೆ ಬೆಲೆಗೆ ಖರೀದಿಸಿ ಬೇರೆ ರೈತರ ಹೆಸರಿನಲ್ಲಿ ಸಂಗ್ರಹ ಮಾಡಿ ಹಣ ಪಡೆದಿದ್ದಾರೆ. ಕೆಲವು ರೈತರು ಜಮೀನಿನಲ್ಲಿ ಕಬ್ಬು ಬೆಳೆದಿದ್ದಾರೆ. ಆದರೆ, ಅಧಿಕಾರಿಗಳು ಭತ್ತ ಬೆಳೆದಿರುವುದಾಗಿ ಪ್ರಮಾಣ ಪತ್ರ ನೀಡಿದ್ದಾರೆ. ಮೊದಲು ಸಕಾಲಕ್ಕೆ ಖರೀದಿ ಕೇಂದ್ರ ಸ್ಥಾಪನೆ ಮಾಡದೆ ರೈತರಿಗೆ ಅನ್ಯಾಯ ಮಾಡಿದರು. ಈಗ ತಪ್ಪು ಲೆಕ್ಕ ತೋರಿಸಿ ನೂರಾರು ಕೋಟಿ ಅವ್ಯವಹಾರ ಮಾಡಿದ್ದಾರೆ. ಕೇಂದ್ರ ಸರ್ಕಾರದ ಹಣವನ್ನು ಲೂಟಿ ಮಾಡಿದ್ದಾರೆ. ಜಿಲ್ಲಾಧಿಕಾರಿ ಕೂಡಲೇ ಉನ್ನತ ಮಟ್ಟದ ತನಿಖೆ ನಡೆಸಬೇಕು’ ಎಂದು ರೈತ ಹೋರಾಟಗಾರ ಕೆ.ಎಸ್‌.ನಂಜುಂಡೇಗೌಡ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT