ಬುಧವಾರ, ಜನವರಿ 27, 2021
16 °C
ವಿದ್ಯುತ್‌ ಕಂಪನಿಯಿಂದ ಸರ್ಕಾರದ ನಿಯಮ ಉಲ್ಲಂಘನೆ, ಸ್ಥಳೀಯರ ಆಕ್ರೋಶ

ನಡುಗಡ್ಡೆ ನಾಶ, ಪಕ್ಷಿಗಳು ಪಲಾಯನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀರಂಗಪಟ್ಟಣ: ತಾಲ್ಲೂಕಿನ ಮಹದೇವಪುರ ಬಳಿ ಕಾವೇರಿ ನದಿಗೆ ಒಡ್ಡು ನಿರ್ಮಿಸಿ 6 ಮೆಗಾವಾಟ್‌ ವಿದ್ಯುತ್‌ ಉತ್ಪಾದನೆ ಮಾಡುತ್ತಿರುವ ಖಾಸಗಿ ಕಂಪನಿ ಸರ್ಕಾರದ ಷರತ್ತುಗಳನ್ನು ಉಲ್ಲಂಘಿಸಿ ನಡುಗಡ್ಡೆ ಮತ್ತು ಕೃಷಿ ಭೂಮಿಯನ್ನು ನಾಶ ಮಾಡಿದೆ ಎಂದು ಸ್ಥಳೀಯರು ದೂರಿದ್ದಾರೆ.

ಸೋಹಂ ರಿನಿವೆಬಲ್‌ ಎನರ್ಜಿ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಕಂಪೆನಿಗೆ ಕಾಮಗಾರಿ ಅನುಷ್ಠಾನ ಜವಾಬ್ದಾರಿ ನೀಡಲಾಗಿದೆ. ನದಿಯ ಮಧ್ಯೆ ಇದ್ದ ದ್ವೀಪ (ತಿಟ್ಟು)ದ ಸಂರಕ್ಷಣೆ ಮಾಡುವಲ್ಲಿ ಕಂಪನಿ ಸಂಪೂರ್ಣವಾಗಿ ವಿಫಲವಾಗಿದೆ. ನದಿಯ ಎರಡೂ ದಂಡೆಯ ಖಾಸಗಿ ಜಮೀನು ಮುಳುಗಡೆಯಾಗದಂತೆ ತಡೆಗೋಡೆಯನ್ನೂ ನಿರ್ಮಿಸಬೇಕು ಎಂದು ಷರತ್ತು ವಿಧಿಸಲಾಗಿತ್ತು. ಆದರೆ ಷರತ್ತುಗಳನ್ನು ಉಲ್ಲಂಘನೆ ಮಾಡಿರುವ ಕಂಪನಿ ಮೇಲ್ಭಾಗ ಹಾಗೂ ತಳಭಾಗದ ಕೃಷಿ ಜಮೀನುಗಳಿಗೆ ಹಾನಿ ಮಾಡಿದೆ.

ಬೇಸಿಗೆಯಲ್ಲಿ ನೀರು ಹಿಡಿದಿಡದಂತೆ ಸೂಚನೆ ಇದ್ದರೂ ಪಾಲಿಸುತ್ತಿಲ್ಲ. ಸ್ವಯಂ ಚಾಲಿತ ಗೇಟ್‌ಗಳನ್ನು ಅಳವಡಿಸಿಲ್ಲ. ಕಂಪನಿಯ ನಿರ್ಲಕ್ಷ್ಯದಿಂದ 2019ರಲ್ಲಿ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿ ಒಡ್ಡಿನ ಪಕ್ಕದ ಏರಿ ಒಡೆದು ರೈತರು ನಷ್ಟ ಅನುಭವಿಸಿದ್ದಾರೆ. ಹಾಗಾಗಿ ಸಂಬಂಧಿಸಿದ ಕಂಪೆನಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ವಿದ್ಯುತ್‌ ಉತ್ಪಾದನೆಗೆ ನೀಡಿರುವ ಅನುಮತಿಯನ್ನು ರದ್ದುಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಸ್ಥಳೀಯ ರೈತರ ದೂರು ಆಧರಿಸಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಅವರು, ಸ್ಥಳ ಪರಿಶೀಲನೆ ನಡೆಸಿ ವರದಿ ನೀಡುವಂತೆ ಉಪ ವಿಭಾಗಾಧಿಕಾರಿ ಮತ್ತು ತಹಶೀಲ್ದಾರ್‌ಗೆ ಸೂಚನೆ ನೀಡಿದ್ದಾರೆ. ತಹಶೀಲ್ದಾರ್‌ ಎಂ.ವಿ. ರೂಪಾ ಈಚೆಗೆ ಸ್ಥಳ ಪರಿಶೀಲನೆ ನಡೆಸಿದ್ದು, ಸರ್ಕಾರಕ್ಕೆ ವಾಸ್ತವ ವರದಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ಸೋಹಂ ಕಂಪೆನಿಯು 6 ಮೆಗಾವಾಟ್‌ ಜಲ ವಿದ್ಯುತ್‌ ಉತ್ಪಾದನೆ ಮಾಡುತ್ತಿದ್ದು, ಅದಕ್ಕಾಗಿ 24 ಚೆಕ್‌ ಗೇಟ್‌ಗಳ ಒಡ್ಡು ಕಟ್ಟಿದೆ. ಹರಿದು ಹೋಗುವ ನೀರನ್ನು ತಡೆದು ನಿಲ್ಲಿಸಿದೆ. ನದಿಯ ಸಹಜ ಮಟ್ಟದಿಂದ 8ರಿಂದ 10 ಅಡಿ ಎತ್ತರ ನೀರು ಚೆಕ್‌ ಡ್ಯಾಂನ ಹಿಂದೆ ಜಮಾಯಿಸಿದೆ. ನೀರು ಒಡ್ಡಿನ ಹಿಂದಿನ ಜಮೀನಿಗೆ ಹರಿದು ಶೀತ ಹೆಚ್ಚಾಗಿ ವ್ಯವಸಾಯ ಮಾಡಲಾಗುತ್ತಿಲ್ಲ. ಚೆಕ್‌ ಡ್ಯಾಂಗಾಗಿ ನದಿ ಮಧ್ಯೆ ಇದ್ದ ನಡುಗಡ್ಡೆಯನ್ನು ನಾಶ ಮಾಡಿದೆ. ಅಪರೂಪದ ಮತ್ತಿ, ನೇರಳೆ, ಹೊಳೆ ಮತ್ತಿ, ಬಿದಿರು ಮರಗಳನ್ನು ಹನನ ಮಾಡಿದೆ. ಜಲಚರಗಳೂ ನಾಶ ಹೊಂದಿವೆ. ಇಲ್ಲಿ ಸಾಮಾನ್ಯವಾಗಿ ಇರುತ್ತಿದ್ದ ಪಕ್ಷಿಗಳು ಪಲಾಯನ ಮಾಡಿವೆ.

‘ಹತ್ತಾರು ಎಕರೆ ವಿಸ್ತೀರ್ಣದ ದ್ವೀಪದಲ್ಲಿದ್ದ ಮಣ್ಣು, ಕಲ್ಲನ್ನು ಎತ್ತುವಳಿ ಮಾಡಿ ಒಡ್ಡಿಗೆ ಬಳಸಿಕೊಳ್ಳಲಾಗಿದೆ. ದ್ವೀಪದಲ್ಲಿದ್ದ ನವಿಲು ಇತರ ಪಕ್ಷಿಗಳು ಪಲಾಯನ ಮಾಡಿವೆ. ಆಸುಪಾಸಿನ ಗ್ರಾಮಗಳ ದನ ಕರುಗಳಿಗೆ ಮೇವಿನ ಮೂಲವಾಗಿದ್ದ ನೈಸರ್ಗಿಕ ನಡುಗಡ್ಡೆ ಸಂಪೂರ್ಣ ನಾಶವಾಗಿದೆ’ ಎಂದು ರೈತ ಚಲುವೇಗೌಡ ಒತ್ತಾಯಿಸಿದರು.

ಮುಳುಗಡೆ ಜಮೀನಿಗೆ ಮೊದಲೆರಡು ವರ್ಷ ಪರಿಹಾರ ನೀಡಿದ ಕಂಪೆನಿ ಈಗ ಯಾವುದೇ ನೆರವು ನೀಡುತ್ತಿಲ್ಲ. ಪ್ರಶ್ನಿಸಿದರೆ ಪೊಲೀಸರಿಗೆ ದೂರು ನೀಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ದೊಡ್ಡಪಾಳ್ಯ ಗ್ರಾಮದ ರೈತರು ದೂರುತ್ತಾರೆ. ಸ್ಥಳದಲ್ಲಿ ಮೊದಲು ಮೈತ್ರಿ ಎನರ್ಜಿ ಕಂಪನಿ ಹೆಸರಿನಲ್ಲಿ 2 ಮೆಗಾವಾಟ್‌ ವಿದ್ಯುತ್‌ ಉತ್ಪಾದನಾ ಸಾಮರ್ಥ್ಯದ ಘಟಕ ಆರಂಭಿಸಲು ಅನುಮತಿ ಪಡೆದಿತ್ತು. ಈಗ ಕಂಪನಿಯ ಹೆಸರು ಮತ್ತು ಅದರ ಸಾಮರ್ಥ್ಯ ಬದಲಾಗಿದೆ. ಈ ಬಗ್ಗೆಯೂ ತನಿಖೆಯಾಗಬೇಕು ದೊಡ್ಡಪಾಳ್ಯ, ದೊಡ್ಡಿ, ಮಹದೇವಪುರ ಗ್ರಾಮಸ್ಥರು, ಪರಿಸರಪ್ರೇಮಿಗಳು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು