ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹುಜನ ಸಮಾಜ ಪಕ್ಷ ನಾಶ ಮಾಡಲು ಹುನ್ನಾರ: ಹ.ರಾ.ಮಹೇಶ್‌ ಕಳವಳ

ಐಕ್ಯತಾ ಸಮಾವೇಶ, ನೂತನ ಪದಾಧಿಕಾರಿಗಳಿಗೆ ಅಭಿನಂದನೆ
Last Updated 22 ಸೆಪ್ಟೆಂಬರ್ 2019, 13:40 IST
ಅಕ್ಷರ ಗಾತ್ರ

ಮಂಡ್ಯ: ‘ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಬಹುಜನ ಸಮಾಜ ಪಕ್ಷದ ನಾಶಕ್ಕೆ ಕೆಲವರು ಹುನ್ನಾರ ನಡೆಸುತ್ತಿದ್ದಾರೆ’ ಎಂದು ವಿಚಾರವಾದಿ ಹ.ರಾ.ಮಹೇಶ್‌ ಕಳವಳ ವ್ಯಕ್ತಪಡಿಸಿದರು.

ಬಹುಜನ ಸಮಾಜ ಪಕ್ಷದ ವತಿಯಿಂದ ನಗರದ ಅಂಬೇಡ್ಕರ್‌ ಭವನದಲ್ಲಿ ಭಾನುವಾರ ನಡೆದ ಬಹುಜನರ ಐಕ್ಯತಾ ಸಮಾವೇಶ ಮತ್ತು ರಾಜ್ಯ ಘಟಕದ ನೂತನ ಅಧ್ಯಕ್ಷ ಎಂ.ಕೃಷ್ಣಮೂರ್ತಿ ಹಾಗೂ ರಾಜ್ಯ ಸಮಿತಿ ಸದಸ್ಯರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

‘ಶೇ 85ರಷ್ಟಿರುವ ಬಹುಜನರನ್ನು ಶೇ 15ರಷ್ಟು ಇರುವವರು ಶೋಷಣೆ ಮಾಡುತ್ತಿದ್ದರು. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಬಿಎಸ್ಪಿ ಅಸ್ತಿತ್ವಕ್ಕೆ ಬಂದಿದೆ. ಬಹುಜನ ಸಮಾಜ ಪಕ್ಷ ಬೆಳೆಯದಂತೆ ಇಲ್ಲಸಲ್ಲದ ಸುಳ್ಳು ಹೇಳಿ, ವೈಮನಸ್ಸು ಮೂಡಿಸಿ ಅದನ್ನು ನಾಶ ಪಡಿಸಲು ಮನುವಾದಿಗಳು ಶ್ರಮಿಸುತ್ತಿದ್ದಾರೆ. ಇದನ್ನು ಬಹುಜನರು ಅರ್ಥೈಸಿಕೊಂಡು ಎಚ್ಚೆತ್ತುಕೊಳ್ಳಬೇಕು’ ಎಂದು ಎಚ್ಚರಿಕೆ ನೀಡಿದರು.

‘ಬಹುಜನರು ಎಂದರೆ ಎಸ್‌ಸಿ, ಎಸ್‌ಟಿ, ಒಬಿಸಿ, ಮತೀಯ ಅಲ್ಪಸಂಖ್ಯಾತರು. ಇವರನ್ನು ಪ್ರತಿನಿಧಿಸುವ ಪಕ್ಷವಾಗಿ ಬಿಎಸ್‌ಪಿ ಇದೆ. ಆದರೆ ಇದನ್ನು ಕೇವಲ ಎಸ್‌ಸಿ ಪಕ್ಷ ಎಂಬಂತೆ ಬಿಂಬಿಸಿ ಬಹುಜನರ ಮಧ್ಯೆ ಬಿರುಕು ಉಂಟು ಮಾಡುತ್ತಿದ್ದಾರೆ. ಮೊದಲು ಇದನ್ನು ತೊಡೆದು ಹಾಕುವತ್ತ ಕಾರ್ಯಕರ್ತರು ಸಂಘಟನೆಯಾಗಬೇಕು. ದಲಿತರ ಅಣ್ಣ–ತಮ್ಮ ಸಮುದಾಯಗಳ ನಡುವೆ ಭ್ರಾತೃತ್ವವನ್ನು ತುರ್ತಾಗಿ ಮೂಡಿಸುವ ಕೆಲಸವಾಗಬೇಕು’ ಎಂದು ಹೇಳಿದರು.

‘ಬಹುಜನರು ಮೊದಲು ಅಂಬೇಡ್ಕರ್‌ ಅವರನ್ನು ಅರ್ಥ ಮಾಡಿಕೊಳ್ಳಬೇಕು. ನ್ಯಾಯ ನೀಡುವ ಜಾಗದಲ್ಲಿ ಶೋಷಣೆ ಮಾಡುವವರೇ ಕುಳಿತಿದ್ದಾರೆ. ಹಾಗಾಗಿ ಬಹುಜನರು ಆಳುವ ವರ್ಗಗಳಾಗಿ ರೂಪುಗೊಳ್ಳಬೇಕು. ಅಂಬೇಡ್ಕರ್‌ ಅವರ ಆಸೆ ಈಡೇರಿಸುವ ಬದ್ಧತೆ ಬೆಳೆಸಿಕೊಳ್ಳಬೇಕು’ ಎಂದರು.

‘ಎಂ.ಕೃಷ್ಣಮೂರ್ತಿ ಅವರು ಅಧಿಕಾರ ಹಿಡಿಯುವ ಸಲುವಾಗಿ ಪಕ್ಷಕ್ಕೆ ಬಂದವರಲ್ಲ. ಉತ್ತಮ ಸಂಬಳ ಬರುವ ಸರ್ಕಾರಿ ಕೆಲಸ ಬಿಟ್ಟು ಚಳವಳಿ ಕಟ್ಟುವ ಸಲುವಾಗಿ ಬಂದಿದ್ದು, ಈಗಲೂ ಪಕ್ಷ ಕಟ್ಟುತ್ತಲೇ ಇದ್ದಾರೆ. ಈ ಹಿಂದೆಲ್ಲಾ ಬಸ್‌, ಬೈಕ್‌ನಲ್ಲಿ ತೆರಳಿ ಪಕ್ಷ ಸಂಘಟನೆ ಮಾಡುತ್ತಿದ್ದರು. ದುಡ್ಡಿಗಾಗಿ ಪಕ್ಷಕ್ಕೆ ಬಂದರೆ ಬೂಟ್‌ನಲ್ಲಿ ಹೊಡೆಯುತ್ತೇನೆ ಎಂದು ನೇರವಾಗಿಯೇ ಹೇಳಿದ್ದಾರೆ. ಅವರ ಮಾತು ಒರಟು, ಆದರೆ ಮನಸ್ಸು ಮೃದು. ಅವರ ಬಗ್ಗೆ ಏನೇ ಅನುಮಾನಗಳಿದ್ದರೂ ಅವರನ್ನೇ ಕೇಳಿ ಪರಿಹರಿಸಿಕೊಳ್ಳಿ. ಕೃಷ್ಣ ಮೂರ್ತಿಯಾಗಲಿ ಬೇರೆ ಯಾರೇನ ಆಗಲಿ ಮುಖಂಡರನ್ನು ಆರಾಧಿಸಬೇಡಿ. ಕಾರ್ಯಕರ್ತರು ಪಕ್ಷಕ್ಕೆ ನಿಷ್ಠರಾಗಬೇಕು, ವ್ಯಕ್ತಿಗಲ್ಲ’ ಎಂದು ಹೇಳಿದರು.

ಸಮಾರಂಭ ಉದ್ಘಾಟಿಸಿದ ಬಿಎಸ್‌ಪಿ ರಾಜ್ಯ ಉಸ್ತುವಾರಿ ಎಂ.ಎಲ್‌.ತೋಮರ್‌ ಮಾತನಾಡಿ ‘ಗುಲಾಮರಲ್ಲಿ ಗುಲಾಮರಾಗಿದ್ದವರ ವಿಮೋಚನೆಗಾಗಿ ಅಂಬೇಡ್ಕರ್‌ ಅವರು ಶ್ರಮಿಸಿದ್ದರು. ಬಡವರು, ಶೋಷಿತರು, ರೈತರಿಗೆ ಅವರ ಮತದ ಮಹತ್ವ ತಿಳಿಸಿ ಬಿಎಸ್‌ಪಿಗೆ ಬೆಂಬಲ ನೀಡುವಂತೆ ಮಾಡಬೇಕು. ಆ ಮೂಲಕ ಆಳುವ ವರ್ಗಗಳಾಗಬೇಕು’ ಎಂದು ಹೇಳಿದರು.

ರಾಜ್ಯ ಘಟಕದ ಅಧ್ಯಕ್ಷ ಎಂ.ಕೃಷ್ಣ ಮೂರ್ತಿ ಸೇರಿ ನೂತನ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ಇದಕ್ಕು ಮುನ್ನ ಸಿಲ್ವರ್‌ ಜ್ಯುಬಿಲಿ ಪಾರ್ಕ್‌ನಿಂದ ಅಂಬೇಡ್ಕರ್‌ ಭವನದ ವರೆಗೆ ಮೆರವಣಿಗೆ ನಡೆಯಿತು.

ಬಿಎಸ್‌ಪಿ ಕರ್ನಾಟಕ ಉಸ್ತುವಾರಿ ಮಾರಸಂದ್ರ ಮುನಿಯಪ್ಪ, ಉಪಾಧ್ಯಕ್ಷ ಕೆ.ಬಿ.ವಾಸು, ಪ್ರಧಾನ ಕಾರ್ಯದರ್ಶಿಗಳಾದ ಎಚ್‌.ಡಿ.ಬಸವರಾಜು, ಡಿ.ನಾರಾಯಣಸ್ವಾಮಿ, ಅರಕಲವಾಡಿ ನಾಗೇಂದ್ರ, ಸೂರ್ಯಕಾಂತ್‌ ನಿಂಬಾಳ್ಕರ್‌, ಮೈಸೂರು ವಲಯ ಉಸ್ತುವಾರಿಗಳಾದ ಜಾಕೀರ್‌ ಹುಸೇನ್‌, ಪಂಚಾಕ್ಷರಿ, ವಿಭಾಗೀಯ ಉಸ್ತುವಾರಿ ಶಿವಮಾದು, ಮಂಡ್ಯ ವಿಭಾಗೀಯ ಉಸ್ತುವಾರಿಗಳಾದ ಎಂ.ಎಸ್‌.ವೆಂಕಟೇಶ್‌, ವೆಂಕಟಗಿರಿಯಯ್ಯ, ನಿವೃತ್ತ ಎಂಜಿನಿಯರ್‌ ಎಸ್‌.ಸಿ.ಜಯಚಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT