ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ, ಆಹಾರ, ಶಿಕ್ಷಣಕ್ಕೆ ಹೆಚ್ಚು ಹಣ

ಜಿಲ್ಲಾ ಪಂಚಾಯಿತಿ ಬಜೆಟ್‌: 900 ಕೋಟಿ ಗಾತ್ರ, ಕಳೆದ ಸಾಲಿಗಿಂತ ₹130 ಕೋಟಿ ಹೆಚ್ಚು
Last Updated 20 ಜೂನ್ 2019, 4:14 IST
ಅಕ್ಷರ ಗಾತ್ರ

ಮಂಡ್ಯ: 2019–20ನೇ ಸಾಲಿನಲ್ಲಿ ಜಿಲ್ಲಾ ಪಂಚಾಯಿತಿ ಯೋಜನೆ ಹಾಗೂ ಯೋಜನೇತರ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಅಧ್ಯಕ್ಷೆ ಎಸ್‌.ನಾಗರತ್ನಾಸ್ವಾಮಿ ಅವರು ಬುಧವಾರ ₹900.08 ಕೋಟಿ ಮೊತ್ತದ ಬಜೆಟ್‌ ಮಂಡಿಸಿದರು.

ಜಿಲ್ಲಾ ಪಂಚಾಯಿತಿ ಕಾವೇರಿ ಸಭಾಂಗಣದಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಬಜೆಟ್‌ ಮಂಡಿಸಿದ ಅವರು, ಕಳೆದ ಸಾಲಿಗಿಂತ ₹130 ಕೋಟಿ ಹಣವನ್ನು ಹೆಚ್ಚುವರಿಯಾಗಿ ಹಂಚಿಕೆ ಮಾಡಿದರು. ಒಟ್ಟು ಬಜೆಟ್‌ ಮೊತ್ತದಲ್ಲಿ ಗ್ರಾಮ ಪಂಚಾಯಿತಿಗೆ ₹1.14 ಕೋಟಿ ( ಶೇ 0.13), ತಾಲ್ಲೂಕು ಪಂಚಾಯಿತಿಗೆ ₹ 613 ಕೋಟಿ (ಶೇ 67.60), ಜಿಲ್ಲಾ ಪಂಚಾಯಿತಿಗೆ ₹293 (ಶೇ 67.60) ಕೋಟಿ ಅನುದಾನ ಹಂಚಿಕೆ ಮಾಡಿದರು.

ಒಟ್ಟು ಅನುದಾನದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸಲು ಅತಿ ಹೆಚ್ಚು ಹಣ ಮೀಸಲಿಟ್ಟಿದ್ದರೆ. ಕಳೆದ ಸಾಲಿನಲ್ಲಿ ಶಿಕ್ಷಣ ಇಲಾಖೆಯ ಕಾರ್ಯಕ್ರಮಗಳಿಗೆ ₹43 ಕೋಟಿ ಹಣ ಮೀಸಲಿಟ್ಟಿದ್ದರು. ಆದರೆ, ಈ ಬಾರಿ ₹ 52.3 ಕೋಟಿ ಅನುದಾನ ಹಂಚಿಕೆ ಮಾಡಿದ್ದಾರೆ. ಈ ಸಾಲಿನಲ್ಲಿ ಜಿಲ್ಲೆಯಲ್ಲಿ 93,443 ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದು, ಅವರ ಕಲ್ಯಾಣಕ್ಕಾಗಿ ಯೋಜನೆ ರೂಪಿಸಲಾಗುವುದು ಎಂದು ಹೇಳಿದರು.

ಆರೋಗ್ಯ ಇಲಾಖೆಗೆ ಅತಿ ಹೆಚ್ಚು ಹಣ ನೀಡಿದ್ದು, ಕೇಂದ್ರ ಪುರಸ್ಕೃತ ಯೋಜನೆಗಳ ಅನುದಾನ ಸೇರಿ ₹66.6 ಕೋಟಿ ನಿಗದಿ ಮಾಡಿದ್ದಾರೆ. ಇದರಲ್ಲಿ ಆರೋಗ್ಯ ಇಲಾಖೆಯ ಕಟ್ಟಡಗಳ ದುರಸ್ತಿಗಾಗಿ ₹52 ಲಕ್ಷ, ಸಲಕರಣೆಗಳ ಖರೀದಿಗೆ ವೆಚ್ಚ ಮಾಡಲಾಗುವುದು. ಜಿಲ್ಲೆಯಲ್ಲಿ 115 ಪ್ರಾಥಮಿಕ ಆರೋಗ್ಯ ಕೇಂದ್ರ, 407 ಉಪಕೇಂದ್ರಗಳು, 10 ಸಮುದಾಯ ಆರೋಗ್ಯ ಕೇಂದ್ರ, 2 ವೈದ್ಯಕೀಯ ಶಿಕ್ಷಣ ಸಂಸ್ಥೆಗಳಿದ್ದು, ಅವುಗಳ ಅಭಿವೃದ್ಧಿಗೆ ಅನುದಾನ ಮಂಜೂರು ಮಾಡಲಾಗುವುದು ಎಂದು ಪ್ರಕಟಿಸಿದರು.

ಸಮಾಜ ಕಲ್ಯಾಣ ಇಲಾಖೆಗೆ ₹37.8 ಕೋಟಿ ಅನುದಾನ ಮೀಸಲಿಟ್ಟಿರುವ ಅವರು ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗಾಗಿ ಇರುವ 46 ಮೆಟ್ರಿಕ್‌ ಪೂರ್ವ ವಿದ್ಯಾರ್ಥಿನಿಲಯ, 21 ಮೆಟ್ರಿಕ್‌ ನಂತರದ ಹಾಸ್ಟೆಲ್‌, 1 ಅನುದಾನಿತ ಹಾಸ್ಟೆಲ್‌ಗಳ ಅಭಿವೃದ್ಧಿಗಾಗಿ ವಿನಿಯೋಗಿಸ ಲಾಗುವುದು. 5,569 ವಿದ್ಯಾರ್ಥಿಗಳಿಗೆ ಗುಣಮಟ್ಟದ ಊಟ, ವಸತಿ ಸೌಲಭ್ಯ ಕಲ್ಪಿಸಲಾಗುವುದು ಎಂದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ₹43 ಕೋಟಿ ಅನುದಾನ ಒದಗಿಸಲಾಗಿದೆ. 63 ಮೆಟ್ರಿಕ್‌ ಪೂರ್ವ, 33 ಮೆಟ್ರಿಕ್‌ ನಂತರದ ಹಾಸ್ಟೆಲ್‌ಗಳನ್ನು ನಿರ್ವಹಿಸಲಾಗುವುದು. ಒಟ್ಟು 3,410 ವಿದ್ಯಾರ್ಥಿಗಳಿಗೆ ಸೌಲಭ್ಯ ಒದಗಿಸ ಲಾಗುವುದು ಎಂದು ಹೇಳಿದರು.

ಮೀನುಗಾರಿಕೆ ಇಲಾಖೆಗೆ ಈ ಬಾರಿ ₹1.78 ಕೋಟಿ ಅನುದಾನ ಮೀಸಲಿಡಲಾಗಿದೆ. ಜಿಲ್ಲೆಯಲ್ಲಿರುವ ಜಲ ಸಂಪನ್ಮೂಲಗಳನ್ನು ಬಳಸಿಕೊಂಡು ಉತ್ತಮ ಪೌಷ್ಟಿಕಾಂಶದ ಮೀನುಗಳ ಉತ್ಪಾದನೆ ಹಾಗೂ ಮೀನುಗಾರರ ಕಲ್ಯಾಣಕ್ಕೆ ಹಣ ವಿನಿಯೋಗ ಮಾಡಲಾಗುವುದು. ಸಾಮಾಜಿಕ ಅರಣ್ಯೀಕರಣಕ್ಕಾಗಿ ₹ 4.60 ಕೋಟಿ ಅನುದಾನ ತೆಗೆದಿರಿಸಲಾಗಿದೆ. ಮದ್ದೂರು ಸಾಮಾಜಿಕ ಅರಣ್ಯ ವಲಯ ಕಚೇರಿ ಸೇರಿ ಉಪ ಅರಣ್ಯ ವಲಯಾಧಿಕಾರಿಗಳ ವಸತಿ ಗೃಹ ನಿರ್ಮಾಣಕ್ಕೆ ವಿನಿಯೋಗ ಮಾಡಲಾಗುವುದು. ಪಂಚಾಯತ್‌ ರಾಜ್‌ ಹಾಗೂ ಎಂಜಿನಿಯರಿಂಗ್‌ ವಿಭಾಗಕ್ಕೆ ಈ ಬಾರಿ ₹ 7.75 ಕೋಟಿ ತೆಗೆದಿಡಲಾಗಿದೆ. ಸಣ್ಣ ನೀರಾವರಿ ಇಲಾಖೆಯಡಿ ಕೆರೆಗಳ ಪುನಶ್ಚೇತನ, ಕೆರೆಗಳ ಸಮೀಕ್ಷಾ ಕಾರ್ಯಕ್ಕೆ ಹಣ ವಿನಿಯೋಗಿಸಲಾಗುವುದು ಎಂದು ತಿಳಿಸಿದರು.

ವಿಶೇಷ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಗಾಯತ್ರಿ ರೇವಣ್ಣ, ಸಿಇಒ ಡಾ.ಕೆ.ಯಾಲಕ್ಕಿಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ಡಿ.ಕೆ.ಶಿವಪ್ರಕಾಶ್‌ ಇದ್ದರು.

ಕುಡಿಯುವ ನೀರು: 25ಕ್ಕೆ ಮತ್ತೆ ಸಭೆ

ಬಜೆಟ್‌ ಸಭೆ ಆರಂಭಿಸುವುದಕ್ಕೂ ಮೊದಲು ಕಾಂಗ್ರೆಸ್‌ ಸದಸ್ಯ ರಾಜೀವ್‌ ಮಾತನಾಡಿ, ‘ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ತಾಲ್ಲೂಕುಗಳಿಗೆ ಅನುದಾನ ಹಂಚಿಕೆಯಲ್ಲಿ ಅನ್ಯಾಯ ಎಸಗಲಾಗಿದೆ.
ಈ ಕುರಿತು ಚರ್ಚಿಸಲು ವಿಶೇಷ ಸಭೆಯನ್ನು ಕರೆಯಬೇಕು’ ಎಂದು ಒತ್ತಾಯಿಸಿದರು.

ಇದಕ್ಕೆ ಧ್ವನಿಗೂಡಿಸಿದ ಸದಸ್ಯರು, ‘ಜಿಲ್ಲಾ ಪಂಚಾಯಿತಿಗೆ ನಿಗದಿಯಾಗಿರುವ ಸಂಪೂರ್ಣ ಹಣವನ್ನು ಜಿಲ್ಲಾ ಪಂಚಾಯಿತಿ ಸದಸ್ಯರಿಗೆ ಮಾತ್ರ ಹಂಚಿಕೆ ಮಾಡಬೇಕು’ ಎಂದು ಪಟ್ಟು ಹಿಡಿದರು.

ಅಧ್ಯಕ್ಷೆ ನಾಗರತ್ನಾ ಸ್ವಾಮಿ ಮಾತನಾಡಿ, ‘ಈ ಕುರಿತು ಚರ್ಚಿಸಲು ಜೂನ್‌ 25ರಂದು ಮತ್ತೆ ವಿಶೇಷ ಸಭೆ ಕರೆಯಲಾಗುವುದು’ ಎಂದರು.

ತೋಟಗಾರಿಕೆ ಕಾರ್ಯಕ್ರಮಕ್ಕೆ ₹ 8.24 ಕೋಟಿ

‌ತೋಟಗಾರಿಕೆ ಇಲಾಖೆ ಕಾರ್ಯಕ್ರಮಗಳಿಗೆ ಈ ಸಾಲಿನಲ್ಲಿ ₹ 8.24 ಕೋಟಿ ಅನುದಾನ ನಿಗದಿ ಮಾಡಲಾಗಿದೆ. ವಿವಿಧ ತೋಟಗಾರಿಕೆ ಬೆಳೆಗಳಿಗೆ ಸಹಾಯ ಧನ ನೀಡಲು ₹18 ಲಕ್ಷ, ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಲು ₹20 ಲಕ್ಷ ವಿನಿಯೋಗಿಸಲಾಗುವುದು. ಕೃಷಿ ಇಲಾಖೆಗೆ ಈ ಸಾಲಿನಲ್ಲಿ ₹8 ಕೋಟಿ ಅನುದಾನ ಒದಗಿಸಲಾಗಿದೆ.

ಬೇಸಾಯ ಸಂಬಂಧಿತ ಚಟುವಟಿಕೆಯಡಿ ರೈತ ಸಂಪರ್ಕ ಕೇಂದ್ರಗಳ ನಿರ್ವಹಣಾ ವೆಚ್ಚ, ತರಬೇತಿಗಾಗಿ ₹28 ಲಕ್ಷ ವೆಚ್ಚ ಮಾಡಲಾಗುವುದು. ಭೂಸಾರ ಮತ್ತು ಜಲ ಸಂರಕ್ಷಣೆಗಾಗಿ ₹ 1.36 ಕೋಟಿ ಹಣ ವಿನಿಯೋಗ ಮಾಡಲಾಗುವುದು. ಪಶುಪಾಲನಾ ಸೇವೆಗಳಿಗಾಗಿ ಬಜೆಟ್‌ನಲ್ಲಿ ವೇತನ, ವೇತನೇತರ ವೆಚ್ಚಕ್ಕಾಗಿ ₹ 31 ಕೋಟಿ ಮೀಸಲಿಡಲಾಗಿದೆ. ಪಶುವೈದ್ಯ ಸಂಸ್ಥೆಗಳ ಮೂಲಕ ಜಾನುವಾರುಗಳ ಗುಣಮಟ್ಟ ಸುಧಾರಿಸಲಾಗುವುದು ಎಂದು ನಾಗರತ್ನಾ ಸ್ವಾಮಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT