ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯಕ್ಕೆ ಬೇಕು ಕೃಷಿಯಾಧಾರಿತ ಕೈಗಾರಿಕೆ

ರೈತರ ಮಕ್ಕಳ ಆಸಕ್ತಿಗೆ ಸಿಗದ ಪ್ರೋತ್ಸಾಹ, ಬಜೆಟ್‌ನಲ್ಲಿ ಮುಖ್ಯಮಂತ್ರಿ ಶಕ್ತಿ ತುಂಬುವರೇ?
Last Updated 12 ಫೆಬ್ರುವರಿ 2022, 14:22 IST
ಅಕ್ಷರ ಗಾತ್ರ

ಮಂಡ್ಯ: ಬೇಸಾಯವೇ ಪ್ರಮುಖವಾಗಿರುವ ಮಂಡ್ಯ ಜಿಲ್ಲೆಯಲ್ಲಿ ಕೃಷಿಯಾಧಾರಿತ ಕೈಗಾರಿಕೆ ಸ್ಥಾಪಿಸಬೇಕು ಎಂಬ ಕೂಗು ಮೊದಲಿನಿಂದಲೂ ಇದೆ. ಆದರೆ ಇಲ್ಲಿಯವರೆಗೂ ರೈತರ ಧ್ವನಿಗೆ ಬೆಂಬಲ ಸಿಕ್ಕಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಾದರೂ ತಾವು ಮಂಡಿಸುತ್ತಿರುವ ಬಜೆಟ್‌ನಲ್ಲಿ ಸಕ್ಕರೆ ಜಿಲ್ಲೆಯ ರೈತರ ಬೇಡಿಕೆಗೆ ಸ್ಪಂದಿಸುತ್ತಾರಾ ಎಂಬ ನಿರೀಕ್ಷೆ ಗರಿಗೆದರಿದೆ.

ನಗರದ ಸುತ್ತಲೂ ನೀರಾವರಿ, ಶೀತ ವಾತಾವರಣ ಇರುವ ಕಾರಣ ಬೃಹತ್‌ ಕೈಗಾರಿಕೆಗಳನ್ನು ಸ್ಥಾಪಿಸಲು ಸೂಕ್ತವಾಗಿಲ್ಲ ಎಂಬ ಅಭಿಪ್ರಾಯ ಉದ್ಯಮಿಗಳಲ್ಲಿದೆ. ಆದರೆ ಕೃಷಿ ಸಂಬಂಧಿತ ಸಣ್ಣ, ಪುಟ್ಟ ಕೈಗಾರಿಕೆ ಸ್ಥಾಪಿಸಿ ರೈತರನ್ನು ಆರ್ಥಿಕವಾಗಿ ಬಲಪಡಿಸುವ ಸಾಕಷ್ಟು ಅವಕಾಶಗಳಿವೆ. ಕೃಷಿಯಾಧಾರಿತ ನವ್ಯೋದ್ಯಮಕ್ಕೂ ಜಿಲ್ಲೆ ಸಶಕ್ತವಾಗಿದೆ. ಸಣ್ಣ ಕೈಗಾರಿಕೆಗಳ ಸ್ಥಾಪನೆಯ ಆಸಕ್ತಿ ಹೊಂದಿರುವ ವಿದ್ಯಾವಂತ ಯುವಕರ ಜಿಲ್ಲೆಯಲ್ಲಿ ಸಂಖ್ಯೆ ಹೆಚ್ಚಿನ ಸಂಖ್ಯೆಯಲ್ಲಿದೆ.

ಕೋವಿಡ್‌ ಸಂಕಷ್ಟದಲ್ಲಿ ತವರಿಗೆ ಮರಳಿದ ಯುವಜನರು ಸ್ಥಳೀಯವಾಗಿಯೇ ಆಟೊ ಓಡಿಸುವ, ಕ್ಯಾಂಟೀನ್‌ ನಡೆಸುವ, ಬೇಕರಿ, ಚಿಲ್ಲರೆ ಅಂಗಡಿ ಇಟ್ಟುಕೊಂಡು ಜೀವನ ಕಟ್ಟಿಕೊಂಡಿದ್ದಾರೆ. ಅವರೆಲ್ಲರೂ ರೈತರ ಮಕ್ಕಳೇ ಆಗಿದ್ದು ಸ್ಥಳೀಯವಾಗಿ ದೊರೆಯುವ ಕೃಷಿ ಉತ್ಪನ್ನಗಳನ್ನು ಆಧರಿಸಿ ನವ್ಯೋದ್ಯಮಗಳ ಸ್ಥಾಪನೆಗೆ ಸೌಲಭ್ಯ ಕಲ್ಪಿಸಬಹುದು. ಇದರಿಂದಉದ್ಯಮವೂ ಬೆಳೆಯುತ್ತದೆ, ಉದ್ಯೋಗವೂ ದೊರೆಯುತ್ತದೆ. ನಂತರ ನಗರ ಪ್ರದೇಶಗಳಿಗೆ ವಲಸೆ ಹೋಗುವುದೂ ತಪ್ಪುತ್ತದೆ.

‘ಈಗ ರೈತರ ಮಕ್ಕಳು ವಿದ್ಯಾವಂತರಾಗಿದ್ದಾರೆ. ಸಾಕಷ್ಟು ಸವಾಲುಗಳನ್ನು ಎದುರಿಸಲು ಸಿದ್ಧರಾಗಿದ್ದಾರೆ. ಜಿಲ್ಲೆಯಲ್ಲಿ ಬೆಳೆಯುವ ಬೆಳೆಗಳಿಗೆ ಅನುಗುಣವಾಗಿ ಹೊಸ ಯೋಜನೆಗಳನ್ನು ಘೋಷಣೆ ಮಾಡಿ ಸೌಲಭ್ಯ ಕಲ್ಪಿಸಿದರೆ ಸ್ಥಳೀಯ ಯುವಶಕ್ತಿಯನ್ನು ಸದೃಢಗೊಳಿಸಿದಂತಾಗುತ್ತದೆ’ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ ಮಾಜಿ ಅಧ್ಯಕ್ಷ ಎಂ.ಪಿ.ಮಹೇಂದ್ರಬಾಬು ಹೇಳಿದರು.

ಅವಕಾಶಗಳೇನಿವೆ?: ಜಿಲ್ಲೆಯಲ್ಲಿ ಭತ್ತ, ಕಬ್ಬು, ತೆಂಗು, ತರಕಾರಿ, ರಾಗಿ, ಹೂವು ಹೆಚ್ಚಾಗಿ ಬೆಳೆಯುತ್ತಾರೆ. ಏಷ್ಯಾದಲ್ಲೇ ಅತೀ ದೊಡ್ಡ ಎಳನೀರು ಮಾರುಕಟ್ಟೆ ಮದ್ದೂರಿನಲ್ಲಿದೆ. ಎಳನೀರಿನಿಂದಲೇ ಉಪ ಉತ್ಪನ್ನ ತಯಾರಿಕೆಗೆ ಸಾಕಷ್ಟು ಅವಕಾಶಗಳಿವೆ. ಎಳನೀರು ಬಳಸಿ ತಂಪು ಪಾನೀಯ ತಯಾರಿಸುವ ಘಟಕಗಳನ್ನು ತಯಾರಿಸಬಹುದು. ತೆಂಗಿನಕಾಯಿ ಚಿಪ್ಪಿನ ನಾರಿನಿಂದಲೂ ಹಲವು ಉತ್ಪನ್ನಗಳನ್ನು ತಯಾರಿಸಬಹುದು.

ಹೂವಿನಿಂದ ತಯಾರಿಸುವ ಸುಗಂಧ ದ್ರವ್ಯಗಳನ್ನು ಹೊರದೇಶಗಳಿಗೆ ರಪ್ತು ಮಾಡಬಹುದು. ಮಳೆಯಾಶ್ರಿತ ಪ್ರದೇಶವಾಗಿರುವ ಕೆ.ಆರ್‌.ಪೇಟೆ, ನಾಗಮಂಗಲ ತಾಲ್ಲೂಕುಗಳಲ್ಲಿ ಬೆಳೆಯುವ ರಾಗಿಗೂ ಬೇಡಿಕೆ ಸೃಷ್ಟಿಸಬಹುದು. ರಾಗಿ ಉತ್ಪನ್ನ ತಯಾರಿಸುವ ಘಟಕ ಸ್ಥಾಪನೆಗೆ ಒತ್ತು ನೀಡಬಹುದು. ಎಷ್ಟೆಲ್ಲಾ ಮಾದರಿಗಳು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಮುಂದಿವೆ. ಆದರೆ ಸರ್ಕಾರದ ಪ್ರೋತ್ಸಾಹವಿಲ್ಲದ ಕಾರಣ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

‘ಕೃಷಿ ಉಪಕರಣಗಳ ತಯಾರಿಸುವ ಆಗ್ರೊ ಕಾರ್ಖಾನೆ ಸ್ಥಾಪಿಸಲು ಯತ್ನಿಸಿ ಕೈಸುಟ್ಟುಕೊಂಡಿದ್ದೇನೆ. ಸಾಲ ಸೌಲಭ್ಯ ನೀಡುವಂತೆ ಹಲವು ಬ್ಯಾಂಕ್‌ಗಳಿಗೆ ಅಲೆದಾಡಿದೆ. ಸರ್ಕಾರದ ಕಠಿಣ ನಿಯಮಗಳಿಂದಾಗಿ ಸಾಲದ ಅರ್ಜಿ ತಿರಸ್ಕೃತಗೊಂಡಿತು. ಕೈಗಾರಿಕೆ ಸ್ಥಾಪಿಸಲು ಇರುವ ನಿಯಮಗಳನ್ನು ಸರ್ಕಾರ ಸರಳಗೊಳಿಸಬೇಕು’ ಎಂದು ಯುವ ಉದ್ಯಮಿ ಉಮೇಶ್‌ ಹೇಳಿದರು.

******

ಆತ್ಮನಿರ್ಭರ: ಅರ್ಜಿಗಳು ತಿರಸ್ಕೃತ

ಆತ್ಮನಿರ್ಭರ ಭಾರತ ‘ಒಂದು ಜಿಲ್ಲೆ ಒಂದು ಉತ್ಪನ್ನ’ ಯೋಜನೆಯಡಿ ಮಂಡ್ಯದ ವಿಶೇಷ ಬೆಲ್ಲ ಬೆಲೆ, ಆಲೆಮನೆಗಳಿಗೆ ಪುನಶ್ಚೇತನ ನೀಡುವ ಯೋಜನೆ ಜಾರಿಗೊಳಿಸಲಾಗಿದೆ. ಆದರೆ ಕಾರ್ಯಕ್ರಮ ಜಾರಿಗೊಂಡು ವರ್ಷ ಕಳೆದರೆ ಹೆಚ್ಚಿನ ಸೌಲಭ್ಯ ಪಡೆಯಲು ಸಾಧ್ಯವಾಗಿಲ್ಲ. ನೂರಾರು ಜನರು ಅರ್ಜಿ ಹಿಡಿದು ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಿದ್ದಾರೆ. ಕಠಿಣ ನಿಯಮಗಳಿಂದಾಗಿ ನೂರಾರು ಅರ್ಜಿಗಳು ತಿರಸ್ಕೃತಗೊಂಡಿವೆ.

‘ಎಷ್ಟು ದಾಖಲಾತಿ ಒದಗಿಸಿದರೂ ಅಧಿಕಾರಿಗಳು ಅರ್ಜಿಗಳನ್ನು ತಿರಸ್ಕಾರ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳು ಈ ಬಜೆಟ್‌ನಲ್ಲಿ ಯೋಜನೆಗೆ ಹೆಚ್ಚು ಅನುದಾನ ಘೋಷಿಸಿ ನಿಗದಿತ ಫಲಾನುಭವಿಗಳಿಗೆ ಸೌಲಭ್ಯ ನೀಡುವಂತೆ ಸೂಚಿಸಬೇಕು. ಜೊತೆಗೆ ಆಲೆಮನೆಗಳನ್ನು ಸಣ್ಣ ಕೈಗಾರಿಕೆ ಎಂದು ಘೋಷಿಸಬೇಕು’ ಎಂದು ಆಲೆಮನೆ ಮಾಲೀಕರ ಸಂಘದ ಅಧ್ಯಕ್ಷ ಸೋಮಶಂಕರೇಗೌಡ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT