ಗುರುವಾರ , ಡಿಸೆಂಬರ್ 3, 2020
19 °C
ಕಾವೇರಿ ನೀರಾವರಿ ನಿಗದ ಎಂಜಿನಿಯರ್‌ಗಳ ಅನುಮಾನಾಸ್ಪದ ನಡೆ,

ನೀರು ಬಿಡುವ ಕಾಲದಲ್ಲಿ ನಾಲೆ ದುರಸ್ತಿ ಯಾಕೆ: ರೈತರ ಆಕ್ರೊಶ

ಎಂ.ಎನ್‌.ಯೋಗೇಶ್‌ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಕೆಆರ್‌ಎಸ್‌ ಜಲಾಶಯ ಭರ್ತಿಯತ್ತ ಸಾಗುತ್ತಿದ್ದರೂ ನಾಲೆಯಲ್ಲಿ ನೀರು ಇಲ್ಲವಾಗಿದೆ. ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಕೃಷಿ ಹಂಗಾಮಿನ ಅವಧಿಯಲ್ಲಿ ಅವೈಜ್ಞಾನಿವಾಗಿ ವಿಶ್ವೇಶ್ವರಯ್ಯ ನಾಲೆ (ವಿಸಿ) ದುರಸ್ತಿ ಕಾಮಗಾರಿ ಕೈಗೆತ್ತಿಕೊಂಡಿರುವುದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೇ ಅಂತ್ಯದ ವೇಳೆಗೆ ವಿಶ್ವೇಶ್ವರಯ್ಯ ನಾಲೆಯಲ್ಲಿ ನೀರು ತಪ್ಪಿಸಲಾಯಿತು. ಕೆಆರ್‌ಎಸ್‌ ಜಲಾಶಯದ ನಾರ್ತ್‌ ಬ್ಯಾಂಕ್‌ನಿಂದ ಪಾಂಡವಪುರ ತಾಲ್ಲೂಕು ಚಿಕ್ಕಆಯರಹಳ್ಳಿವರೆಗೆ 2 ಕಿ.ಮೀ ವಿಸಿ ನಾಲಾ ದುರಸ್ತಿ ಕಾಮಗಾರಿ ನಡೆಸುತ್ತಿರುವ ಕಾರಣ ಇಲ್ಲಿಯವರೆಗೂ ಬೆಳೆಗಳಿಗೆ ನೀರು ಹರಿಸಲು ಸಾಧ್ಯವಾಗಿಲ್ಲ. ಆದರೆ ಕಟ್ಟು ಪದ್ಧತಿಯಡಿ ನೀರು ನಿಂತು 25 ದಿನದ ನಂತರ ಮತ್ತೆ ನೀರು ಹರಿಸಬೇಕು. ಆದರೆ ನೀರು ನಿಂತು 2 ತಿಂಗಳಾದರೂ ನೀರು ಹರಿಸಿಲ್ಲ. ಹೀಗಾಗಿ ರೈತರು ಬೆಳೆ ಕಳೆದುಕೊಳ್ಳುವ ಭೀತಿ ಎದುರಿಸುವಂತಾಗಿವೆ.

ನಾಲಾ ವ್ಯಾಪ್ತಿಯ 1.10 ಲಕ್ಷ ಎಕರೆ ಪ್ರದೇಶದಲ್ಲಿ ಕಬ್ಬು, 5 ಲಕ್ಷ ಎಕರೆಯಲ್ಲಿ ಭತ್ತ ಬೆಳೆದು ನಿಂತಿದೆ. ಈಗ ಹೊಸದಾಗಿ 50 ಸಾವಿರ ಎಕರೆಯಲ್ಲಿ ಕಬ್ಬು, ಒಂದೂವರೆ ಲಕ್ಷ ಎಕರೆಯಲ್ಲಿ ಭತ್ತ ನಾಟಿ ಮಾಡಲು ರೈತರು ಸಿದ್ಧತೆ ನಡೆಸುತ್ತಿದ್ದಾರೆ. ಆದರೆ ಮುಂಗಾರು ಹಂಗಾಮಿನ ಪ್ರಮುಖ ಘಟ್ಟದಲ್ಲಿ ನೀರು ಸಿಗದೆ ರೈತರು ಪರಿತಪಿಸುತ್ತಿದ್ದಾರೆ. ವಿವಿಧೆಡೆ ಪ್ರತಿಭಟನೆ ನಡೆಸಿ ಅಸಮಾಧಾನ ಹೊರಹಾಕಿದ್ದಾರೆ.

ಆದರೆ ಅಧಿಕಾರಿಗಳು ಕಾಮಗಾರಿ ನೆಪದಲ್ಲಿ ನೀರು ಹರಿಸುವುದನ್ನು ಮುಂದಕ್ಕೆ ಹಾಕುತ್ತಲೇ ಬರುತ್ತಿದ್ದಾರೆ. ಈಚೆಗೆ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಜುಲೈ ಅಂತಿಮ ವಾರದಲ್ಲಿ ನೀರು ಹರಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಆದರೆ ಎರಡು ಕಿ.ಮೀವರೆಗೆ ನಾಲೆಯನ್ನು ಈಗಾಗಲೇ ಕಿತ್ತು ಹಾಕಿದ್ದು ಕಾಮಗಾರಿ ಮುಗಿಸುವ ಭರದಲ್ಲಿ ಕಳಪೆ ಕೆಲಸ ಮಾಡುವ ಅಪಾಯವಿದೆ, ಕೃಷಿ ಕಾಲದಲ್ಲಿ ಕಾಮಗಾರಿ ನಡೆಸುವ ಅಗತ್ಯವೇನಿತ್ತು ಎಂದು ರೈತರು ಪ್ರಶ್ನಿಸಿದ್ದಾರೆ.

‘ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಯಾರ ಹಿತಾಸಕ್ತಿ ಕಾಯಲು ಕಾಮಗಾರಿ ಮಾಡುತ್ತಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ. ಬೆಳೆ ಹಾಳು ಮಾಡಿ ದುರಸ್ತಿ ಕಾಮಗಾರಿ ಮಾಡಬೇಕಾಗಿತ್ತಾ? ಬೇಸಿಗೆಯಲ್ಲಿ  ಸಾಕಷ್ಟು ಅವಧಿ ಇತ್ತು, ಈಗ ನೀರು ಹರಿಸಲು ಕಾಮಗಾರಿ ನೆಪ ಒಡ್ಡುತ್ತಿರುವುದು ಅನುಮಾನಾಸ್ಪದವಾಗಿದೆ’ ರೈತಸಂಘ ಜಿಲ್ಲಾ ಘಟಕದ ಅಧ್ಯಕ್ಷ ಕೆಂಪುಗೌಡ ಹೇಳಿದರು.

ಸೂಚನೆ ನೀಡಿಲ್ಲ: ನಾಲಾ ವ್ಯಾಪ್ತಿಯಲ್ಲಿ ಯಾವುದೇ ಕಾಮಗಾರಿ ನಡೆಸುವುದಕ್ಕೂ ಮೊದಲು ನಿಗಮದ ಅಧಿಕಾರಿಗಳು ರೈತರಿಗೆ ಸೂಚನೆ ನೀಡಬೇಕು. ನೀರು ಹರಿಸುವುದು ತಡವಾದರೂ ಅದಕ್ಕೆ ಸಂಬಂಧಪಟ್ಟ ವಿವರಣೆ ನೀಡಬೇಕು. ಆದರೆ ನಿಗಮ ನಿಯಮ ಉಲ್ಲಂಘಿಸಿ ರೈತರಿಗೆ ಯಾವುದೇ ನೋಟಿಸ್‌ ನೀಡದೇ ಕಾಮಗಾರಿ ನಡಸುತ್ತಿರುವುದಕ್ಕೆ ರೈತರು ಅಸಮಾಧಾನಗೊಂಡಿದ್ದಾರೆ.

‘ರೈತರನ್ನು ಕತ್ತಲೆಯಲ್ಲಿ ಇಟ್ಟು ಗುತ್ತಿಗೆದಾರರ ಹಿತ ಕಾಯುವುದೇ ಅಧಿಕಾರಿಗಳ ಮುಖ್ಯ ಉದ್ದೇಶವಾಗಿದೆ’ಎಂದು ರೈತರ ನಾಗರಾಜ್‌ ಆರೋಪಿಸಿದರು. ಈ ಕುರಿತು ಪ್ರತಿಕ್ರಿಯೆ ಪಡೆಯಲು ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್‌ ಎಂ.ಬಿ.ರಾಜು ಅವರಿಗೆ ಕರೆ ಮಾಡಿದರೂ ಅವರು ಸ್ವೀಕರಿಸಲಿಲ್ಲ.

ನಾಲೆಗೆ ಇಲ್ಲ, ತಮಿಳುನಾಡಿಗೆ ನೀರು

‘ನೀರಾವರಿ ನಿಗಮದ ಅಧಿಕಾರಿಗಳು ಅನ್ನ ಕೊಡುವ ರೈತರಿಗೆ ವಿಷ ಉಣಿಸುವ ಕೆಲಸ ಮಾಡುತ್ತಿದ್ದಾರೆ. ಕಾಮಗಾರಿ ಯಾವಾಗ ಮಾಡಬೇಕು ಎಂಬ ಸಾಮಾನ್ಯ ಜ್ಞಾನ ಅವರಿಗೆ ಇಲ್ಲವಾಗಿದೆ. ಜಲಾಶಯ ತುಂಬುತ್ತಿದ್ದು  ತಮಿಳುನಾಡಿಗೆ ನೀರು ಹರಿದು ಹೋಗುತ್ತಿದೆ. ಆದರೆ ನಮ್ಮ ರೈತರು ನೀರು ಪಡೆಯಲಾಗದ ಸ್ಥಿತಿ ಅನುಭವಿಸುತ್ತಿದ್ದಾರೆ. ಇದಕ್ಕೆಲ್ಲಾ ಎಂಜಿನಿಯರ್‌ಗಳ ಅವಿವೇಕದ ನಿರ್ಧಾರವೇ ಕಾರಣ’ ಎಂದು ರೈತ ಹೋರಾಟಗಾರ ಕೆ.ಎಸ್‌.ನಂಜುಂಡೇಗೌಡ ಆರೋಪಿಸಿದರು.

***

ಆದಷ್ಟು ಬೇಗ ಕಾಮಗಾರಿ ಮುಗಿಸಿ ವಿಶ್ವೇಶ್ವರಯ್ಯ ನಾಲೆಗೆ ನೀರು ಹರಿಸುವಂತೆ ಎಂಜಿನಿಯರ್‌ಗಳಿಗೆ ಸೂಚನೆ ನೀಡಿದ್ದೇನೆ

–ಡಾ.ಎಂ.ವಿ.ವೆಂಕಟೇಶ್‌, ಜಿಲ್ಲಾಧಿಕಾರಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು