ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೇಮಗಿರಿಯಲ್ಲಿ ದನಗಳ ಪರಿಷೆ ಸಂಭ್ರಮ

ಶತಮಾನಗಳ ಐತಿಹ್ಯದ ಜಾನುವಾರು ಜಾತ್ರೆ, 19ರಂದು ಬ್ರಹ್ಮರಥೋತ್ಸವ
Last Updated 12 ಫೆಬ್ರುವರಿ 2021, 1:42 IST
ಅಕ್ಷರ ಗಾತ್ರ

ಕೆ.ಆರ್.ಪೇಟೆ: ತಾಲ್ಲೂಕಿನ ಹೇಮಾವತಿ ನದಿ ದಂಡೆಯಲ್ಲಿರುವ, ಭೃಗು ಮಹರ್ಷಿಗಳ ತಪಸ್ಸಿನ ತಾಣ ಎಂದು ಹೆಸರು ಪಡೆದಿರುವ ಪುರಾಣ ಪ್ರಸಿದ್ಧ ಹೇಮಗಿರಿಯಲ್ಲಿ ದನಗಳ ಜಾತ್ರೆ ಆರಂಭವಾಗಿದೆ.

ಹಳೇ ಮೈಸೂರು ಪ್ರಾಂತ್ಯದಲ್ಲಿ ಶತಮಾನಗಳಿಂದ ನಡೆದುಕೊಂಡಿರುವ ಹೇಮಗಿರಿ ದನಗಳ ಜಾತ್ರೆ ಇದಾಗಿದೆ. ಫೆ.19 ರಂದು ಕ್ಷೇತ್ರದ ಆರಾಧ್ಯ ದೈವ ಕಲ್ಯಾಣ ವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವ ನಡೆಯಲಿದೆ. ಪ್ರತಿವರ್ಷ ರಥಸಪ್ತಮಿಯಂದು ಕಲ್ಯಾಣ ವೆಂಕಟರಮಣಸ್ವಾಮಿಯ ಬ್ರಹ್ಮರಥೋತ್ಸವ ನಡೆದು ತೆಪ್ಪೋತ್ಸವ ನಡೆಯುತ್ತದೆ.

ಭೃಗು ಮಹರ್ಷಿಗಳ ತಪೋಭೂಮಿ ಯಾಗಿರುವ ಹೇಮಗಿರಿಯು ಹೇಮಾವತಿ ನದಿಯಿಂದ ಆವೃತ ವಾಗಿದೆ. ಪಶ್ಚಿಮವಾಹಿನಿಯಾಗಿ ನದಿ ಹರಿಯುವುದು ಇಲ್ಲಿನ ವಿಶೇಷ. ಬೆಟ್ಟದ ತಟದಲ್ಲಿಯೇ ನದಿ ಹರಿಯುವುದರಿಂದ ಬೆಟ್ಟದ ಮೇಲಿನ ರಂಗನಾಥನ ಪಾದವನ್ನು ತೊಳೆಯುತ್ತಿದ್ದಾಳೆಯೇನೋ ಎಂಬಂತೆ ಭಾಸವಾಗುತ್ತದೆ. ವೈಕುಂಠದಿಂದ ಭೂಮಿಗೆ ಬಂದ ನಾರಾಯಣನು ಈ ತಾಣದಲ್ಲಿ ಮಹಾಲಕ್ಷ್ಮೀ ದೇವಿಯನ್ನು ಸಂತೈಸಿ ಪುನರ್ ವಿವಾಹವಾಗಿ ಕಲ್ಯಾಣ ವೆಂಕಟರಮ ಎಂದು ದು ಖ್ಯಾತನಾದ. ಅಲ್ಲದೆ, ಭೃಗು ಮಹರ್ಷಿಗಳ ತಪಸ್ಸಿಗೆ ಮೆಚ್ಚಿ ಅವರ ಕೋರಿಕೆಯಂತೆ ಇಲ್ಲೇ ನೆಲೆಯಾದ ಎಂದು ಪುರಾಣಗಳಲ್ಲಿ ಉಲ್ಲೇಖವಿದೆ.

ಹೇಮಗಿರಿ ಬೆಟ್ಟದ ಕೆಳಗಿನ ವಿಶಾಲ ಭೂಪ್ರದೇಶದಲ್ಲಿ ರಾಸುಗಳ ಸಮೂಹ ಕಂಗೊಳಿಸುತ್ತಿದೆ. ಆವರಣದ ತುಂಬ ರಾಸುಗಳ ಅನಾವರಣವಾಗಿದೆ. ರಾಜ್ಯದ ನಾನಾ ಭಾಗಗಳಿಂದ ರಾಸುಗಳು ಬಂದಿದ್ದು, ₹ 50ಸಾವಿರ ರೂಪಾಯಿಗಳಿಂದ ಆರಂಭವಾಗಿ ₹ 10ಲಕ್ಷ ಮೌಲ್ಯದ ರಾಸುಗಳು ಜಾತ್ರೆಯಲ್ಲಿವೆ.

ಶತಮಾನಗಳ ಹಿಂದೆ ಮೈಸೂರು ಅರಸರ ಪ್ರೋತ್ಸಾಹದಿಂದ ಆರಂಭವಾದ ಜಾತ್ರೆ ಪ್ರತಿ ವರ್ಷವೂ ನಡೆಯುತ್ತಿದ್ದು, ಈಗ ಸರ್ಕಾರವೇ ಜಾತ್ರೆ ನಡೆಸಿಕೊಂಡು ಬಂದಿದೆ. ಹೇಮಗಿರಿಯ ದನಗಳ ಜಾತ್ರೆಗೆ ವಿಶೇಷ ಸ್ಥಾನವಿದ್ದು, ದನ ಖರೀದಿಸಲು ಮತ್ತು ನೋಡಲು ರಾಜ್ಯದ ನಾನಾ ಭಾಗಗಳಿಂದ ಜನ ಬರುತ್ತಾರೆ.

ಹೇಮಗಿರಿ ಜಾತ್ರೆಗೆ ಬಂದಿರುವ ರಾಸುಗಳು ಹಾಗೂ ರೈತರಿಗೆ
ಶುದ್ಧವಾದ ಕುಡಿಯುವ ನೀರು, ಜಾತ್ರಾ ಮಾಳಕ್ಕೆ ಬೆಳಕಿನ ವ್ಯವಸ್ಥೆ, ತಾತ್ಕಾಲಿಕ ಪಶು ಆಸ್ಪತ್ರೆ, ಸೇರಿದಂತೆ ಮೂಲ
ಸೌಲಭ್ಯ ಒದಗಿಸಿಕೊಡಲಾಗಿದೆ. ಹೇಮಗಿರಿ ಬೆಟ್ಟದ ತಪ್ಪಲು ಹಾಗೂ ನದಿನೀರಿನ ಮೆಟ್ಟಿಲುಗಳು ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಲಾಗಿದೆ. ನದಿಯಲ್ಲಿ ಬೆಳೆದಿದ್ದ ಕಳೆ ಸಸ್ಯಗಳನ್ನೂ ತೆಗೆಯಲಾಗಿದೆ. ನದಿಗೆ ಇಳಿಯುವ ಜಾಗದ ಮೆಟ್ಟಿಲಿಗೆ ಬಣ್ಣ ಬಳಿದು ಆಕರ್ಷಕವಾಗಿಸಲಾಗಿದೆ. ಬೋಟಿಂಗ್ ಸೌಲಭ್ಯವನ್ನು ಒದಗಿಸಲು ವ್ಯವಸ್ಥೆ ಮಾಡಲಾಗಿದೆ.

ಜಾತ್ರೆಯಲ್ಲಿ ಗ್ರಾಮೀಣ ಪ್ರದೇಶದ ರೈತರಿಗೆ ಬೇಕಾಗುವ ಒನಕೆ, ರಾಗಿ ಬೀಸುವ ಕಲ್ಲು, ಎತ್ತಿನಗಾಡಿಗಳ ನೊಗ, ವಿವಿಧ ವಸ್ತುಗಳ ಮಾರಾಟ ನಡೆದಿದೆ. ಬೆಂಡು ಬತಾಸು, ಕಡ್ಲೇಪುರಿ, ಮಂಡಕ್ಕಿ ಖಾರಾ, ಖರ್ಜೂರ, ಬಣ್ಣ-ಬಣ್ಣದ ಬೊಂಬೆಗಳು, ಆಲಂಕಾರಿಕ ವಸ್ತುಗಳ ವ್ಯಾಪಾರ ಭರದಿಂದ ಸಾಗಿದೆ. ಹೇಮಗಿರಿಯ ನದಿ ತೀರ ಮತ್ತು ಸ್ನಾನದಘಟ್ಟವನ್ನೂ ತಾಲ್ಲೂಕು ಆಡಳಿತ ಸ್ವಚ್ಛಗೊಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT