ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಮಲತಾಗೆ ಕಾಂಗ್ರೆಸ್‌ ಮುಖಂಡರ ಸ್ನೇಹವೇಕೆ? -ಸಿ.ಡಿ.ಗಂಗಾಧರ್‌

Last Updated 4 ಫೆಬ್ರುವರಿ 2023, 12:20 IST
ಅಕ್ಷರ ಗಾತ್ರ

ಮಂಡ್ಯ: ‘ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ತಟಸ್ಥವಾಗಿ ಉಳಿಯುವುದಾಗಿ ಸಂಸದೆ ಸುಮಲತಾ ಪ್ರಕಟಿಸಿದ್ದಾರೆ. ಆದರೆ, ಅವರು ತಮ್ಮ ಬೆಂಬಲಿಗರ ಸಭೆಗೆ ಕಾಂಗ್ರೆಸ್‌ ಮುಖಂಡರನ್ನು ಏಕೆ ಆಹ್ವಾನಿಸಬೇಕು, ಕಾಂಗ್ರೆಸ್‌ ಕಾರ್ಯಕರ್ತರ ಜೊತೆ ಅವರಿಗೆ ಸ್ನೇಹವೇಕೆ’ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಡಿ.ಗಂಗಾಧರ್‌ ಪ್ರಶ್ನಿಸಿದರು.

‘ರಾಜಕೀಯ ಮಾಡುವುದಿದ್ದರೆ ಸಂಸದರು ಯಾವುದಾದರೂ ಪಕ್ಷದಲ್ಲಿ ಗುರುತಿಸಿಕೊಳ್ಳಲಿ. ಕಳೆದ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ಕೆಲವು ಮುಖಂಡರು, ಕಾರ್ಯಕರ್ತರು ಪರೋಕ್ಷವಾಗಿ ಅವರಿಗೆ ಬೆಂಬಲ ನೀಡಿದ್ದರು. ಗೆದ್ದ ನಂತರವೂ ಸಂಸದರು ಹಾಗೂ ಅವರ ಬೆಂಬಲಿಗರು ಸಭೆ, ಸಮಾರಂಭಗಳಿಗೆ ಕಾಂಗ್ರೆಸ್‌ ಕಾರ್ಯಕರ್ತರನ್ನು ಆಹ್ವಾನಿಸುತ್ತಿರುವುದು ಸರಿಯಲ್ಲ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

‘ಈಚೆಗೆ ನಡೆದ ಸುಮಲತಾ ಬೆಂಬಲಿಗರ ಸಭೆಯಲ್ಲಿ ರಾಜಕೀಯ ನಿರ್ಧಾರ ಕೈಗೊಳ್ಳಲಾಗಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸುಮಲತಾ ಸ್ಪರ್ಧಿಸುವಂತೆ ಒತ್ತಾಯಿಸಲಾಗಿದೆ. ರಾಜಕೀಯವಾಗಿ ನಿರ್ಧಾರ ಕೈಗೊಳ್ಳಲು ಸುಮಲತಾ ಸರ್ವ ಸ್ವತಂತ್ರರು, ಆದರೆ ನಮ್ಮ ಕಾರ್ಯಕರ್ತರಲ್ಲಿ ಅವರು ಗೊಂದಲ ಸೃಷ್ಟಿಸಬಾರದು’ ಎಂದು ಒತ್ತಾಯಿಸಿದರು.

‘ಕೃಷಿ ಕಾಯ್ದೆ, ಭೂಸುಧಾರಣಾ ಕಾಯ್ದೆ, ಸಿಎಎ, ಎನ್‌ಆರ್‌ಸಿ ವಿಚಾರದಲ್ಲಿ ಸುಮಲತಾ ಅವರು ಕೇಂದ್ರ ಸರ್ಕಾರಕ್ಕೆ ಬೆಂಬಲ ನೀಡಿದ್ದಾರೆ. ಬಿಜೆಪಿ ಸರ್ಕಾರದ ಪರ ಇರುವ ಅವರು ಸ್ಥಳೀಯವಾಗಿ ಕಾಂಗ್ರೆಸ್‌ ಕಾರ್ಯಕರ್ತರ ನಂಟು ಬಯಸುತ್ತಿರುವುದು ನಮ್ಮ ವರಿಷ್ಠರಿಗೆ ಮುಜುಗರ ಉಂಟಾಗುತ್ತಿದೆ’ ಎಂದರು.

‘ಮುಂದೆ ಸಂಸದರು ಹಾಗೂ ಬೆಂಬಲಿಗರು ನಡೆಸುವ ಯಾವುದೇ ಸಭೆಗಳಲ್ಲಿ ಕಾಂಗ್ರೆಸ್‌ ಸದಸ್ಯರನ್ನು ಆಹ್ವಾನಿಸಬಾರದು. ಸುಮಲತಾ ಬೆಂಬಲಿಗರ ಸಭೆಗಳಿಗೆ ಹೋಗದಂತೆ ನಮ್ಮ ಕಾರ್ಯಕರ್ತರಿಗೂ ಸೂಚನೆ ನೀಡಿದ್ದೇವೆ. ಆದರೂ ಸಭೆಯಲ್ಲಿ ಪಾಲ್ಗೊಂಡರೆ ವರಿಷ್ಠರ ಗಮನಕ್ಕೆ ತರಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT