ಮಂಗಳವಾರ, ಸೆಪ್ಟೆಂಬರ್ 17, 2019
21 °C
ಕ್ರೀಡೆ, ಸಾಂಸ್ಕೃತಿಕ ಸಮಾರೋಪ ಸಮಾರಂಭದಲ್ಲಿ ಹಿರಿಯ ಪತ್ರಕರ್ತೆ ಸಿ.ಜಿ.ಮಂಜುಳಾ ಅಭಿಮತ

ಹೊಸ ಸಂಸ್ಕೃತಿಯ ಸಮಾಜ ಉಗಮ ಅಗತ್ಯ

Published:
Updated:
Prajavani

ಕೆರಗೋಡು: ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆಯರು ಉನ್ನತ ಸ್ಥಾನ ಗಳಿಸಲು ಪರದಾಡುತ್ತಿದ್ದಾರೆ. ಹೊಸ ಸಂಸ್ಕೃತಿಯ ಸಮಾಜದ ಉಗಮಕ್ಕೆ ಮಹಿಳೆಯರು ಸಕಾರಾತ್ಮಕ ಧೋರಣೆ ಹೊಂದಬೇಕು ಎಂದು ಹಿರಿಯ ಪತ್ರಕರ್ತೆ ಸಿ.ಜಿ.ಮಂಜುಳಾ ಸಲಹೆ ನೀಡಿದರು.

ಸಮೀಪದ ಬಿ. ಹೊಸೂರು ಕಾಲೊನಿಯಲ್ಲಿರುವ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಹೊರಾವರಣ ಕೇಂದ್ರದಲ್ಲಿ ಗುರುವಾರ ನಡೆದ ಕ್ರೀಡಾ ಮತ್ತು ಸಾಂಸ್ಕೃತಿಕ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಮಾಜದಲ್ಲಿ ಹೆಣ್ಣಿನ ಬಗ್ಗೆ ನಿರ್ಲಕ್ಷ್ಯ ಮನೋಭಾವ ಇದೆ. ಹೆಣ್ಣನ್ನು ಹತ್ತಿಕ್ಕುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ. ಮಂಡ್ಯದಲ್ಲಿ ಈಚೆಗೆ ನಡೆದ ಚುನಾವಣೆಯಲ್ಲಿ ಮಹಿಳಾ ಅಭ್ಯರ್ಥಿ ಸ್ಪರ್ಧೆಗೆ ಸಂಬಂಧಿಸಿದಂತೆ ಚರ್ಚೆಗಳು ನಡೆದಿದ್ದವು ಎಂದರು.

ವಿದ್ಯಾರ್ಥಿನಿಯರು ತಮ್ಮ ಕಾರ್ಯಕ್ಷೇತ್ರದಲ್ಲಿ ಸಾಮಾನ್ಯ ತಿಳಿವಳಿಕೆ ಹೊಂದಬೇಕು. ನಕಾರಾತ್ಮಕ ಧೋರಣೆಯನ್ನು ತೊಡೆದು ಹಾಕಬೇಕು ಎಂದು ಸಲಹೆ ನೀಡಿದರು.

2011ರಲ್ಲಿ ಮಂಡ್ಯ ಜಿಲ್ಲೆಯಲ್ಲಿ ಪ್ರತಿ ಸಾವಿರ ಪುರುಷರಿಗೆ 939 ಮಹಿಳೆಯರಿದ್ದರು. ರಾಜ್ಯದಲ್ಲೇ ನಾಲ್ಕನೇ ಸ್ಥಾನ ಪಡೆದಿತ್ತು. ಗಂಡು ಮಗು ಬೇಕು ಎಂಬ ಪೋಷಕರ ಧೋರಣೆಯೇ ಇದಕ್ಕೆ ಕಾರಣ. ಹೆಣ್ಣು ಮಕ್ಕಳ ಪ್ರಮಾಣ ಕಡಿಮೆಯಾಗಿರುವುದಕ್ಕೆ ಸುಪ್ರೀಂ ಕೋರ್ಟ್‌ ಸಹ ಆತಂಕ ವ್ಯಕ್ತಪಡಿಸಿತ್ತು. ಇದು ಸಮಾಜದಲ್ಲಿ ಸಾಮಾಜಿಕ, ನೈತಿಕ, ಸಾಂಸ್ಕೃತಿಕ ಅಧಃಪತನಕ್ಕೆ ಕಾರಣವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿತ್ತು ಎಂದರು.

ಜ್ಞಾನ ಕಾವೇರಿ ವಾರ್ಷಿಕ ಸಂಚಿಕೆ ಬಿಡುಗಡೆ ಜತೆಗೆ ಕಳೆದ ವರ್ಷದ ಸ್ನಾತಕೋತ್ತರ ವಿಭಾಗದಲ್ಲಿ ಪದಕ ಗಳಿಸಿದ ವಿದ್ಯಾಶ್ರೀ, ಸುನಿಲ್‌, ರಾಧಾ, ನಂದಿನಿ, ರಕ್ಷಿತಾ ಅವರನ್ನು ಸನ್ಮಾನಿಸಲಾಯಿತು. ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ ಮತ್ತು ಫಲಕ ವಿತರಿಸಲಾಯಿತು.

ಕೇಂದ್ರದ ವಿಶೇಷಾಧಿಕಾರಿ ಪ್ರೊ.ಎಚ್. ಎಂ.ಹೇಮಲತಾ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಿಶ್ಚಿತಾ ಇದ್ದರು.

Post Comments (+)