ಶನಿವಾರ, ನವೆಂಬರ್ 28, 2020
22 °C
ಮಕ್ಕಳ ದಿನಾಚರಣೆ; ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ವಿಷಾದ

ಮಕ್ಕಳನ್ನು ಭಿಕ್ಷಾಟನೆಗೆ ದೂಡುವ ಪೋಷಕರಿದ್ದಾರೆ: ಎಸ್‌.ರಾಜಮೂರ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ‘ಜಿಲ್ಲೆಯ ಕೆಲವು ಹಳ್ಳಿಗಳಲ್ಲಿ ಪೋಷಕರು ತಮ್ಮ ಮಕ್ಕಳನ್ನು ಪ್ರತಿದಿನ ಭಿಕ್ಷಾಟನೆಗೆ ಕಳುಹಿಸಿ ಸಂಜೆ ಅವರಿಂದ ಹಣ ಸಂಗ್ರಹಿಸುತ್ತಿರುವ ಆಘಾತಕಾರಿ ಬೆಳವಣಿಗೆ ಈಗಲೂ ಜೀವಂತವಾಗಿದೆ’ ಎಂದು ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಎಸ್‌.ರಾಜಮೂರ್ತಿ ವಿಷಾದ ವ್ಯಕ್ತಪಡಿಸಿದರು.

ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ಸಹಾಯವಾಣಿ, ಬರ್ಡ್ಸ್‌ ಸಂಸ್ಥೆ ವತಿಯಿಂದ ತಾಲ್ಲೂಕಿನ ಎಚ್‌.ಮಲ್ಲಿಗೆರೆ ಗ್ರಾಮದಲ್ಲಿ ಶನಿವಾರ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಮಕ್ಕಳನ್ನು ನಗರ, ಪಟ್ಟಣಗಳ ಸರ್ಕಲ್‌ಗಳಲ್ಲಿ, ಟ್ರಾಫಿಕ್‌ ಸಿಗ್ನಲ್‌ಗಳಲ್ಲಿ, ಸಂತೆ, ಮಾರುಕಟ್ಟೆಗಳಲ್ಲಿ ಭಿಕ್ಷೆಗೆ ಕಳುಹಿಸುತ್ತಾರೆ. ಶಾಲೆಗೆ ಹೋಗುವ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಿ ಭಿಕ್ಷಾಟನೆಗೆ ದೂಡುವ ಬೆಳವಣಿಗೆ ನಾಗರಿಕ ಸಮಾಜ ತಲೆತಗ್ಗಿಸುವಂಥದ್ದಾಗಿದೆ. ಹಲವು ಸ್ವಯಂ ಸೇವಾ ಸಂಸ್ಥೆಗಳು ಈ ವಿಚಾರವನ್ನು ಪತ್ತೆ ಮಾಡಿವೆ. ಬೆಳೆಯುವ ಪೈರನ್ನು ಮೊಳಕೆಯಲ್ಲೇ ಚಿವುಟಿ ಹಾಕಿದರೆ ಅದು ಮಕ್ಕಳಿಗೆ ಅನ್ಯಾಯ ಮಾಡಿದಂತಾಗುತ್ತದೆ. ಇದರ ವಿರುದ್ಧ ಎಲ್ಲರೂ ಸಂಘಟಿತರಾಗಿ ಹೋರಾಡಬೇಕು’ ಎಂದು ಹೇಳಿದರು.

‘ಯಾವುದೇ ದೇಶ ಬೆಳವಣಿಗೆ ಸಾಧಿಸಬೇಕಾದರೆ ಆ ದೇಶದ ಮಾನವ ಸಂಪನ್ಮೂಲವನ್ನು ಅಭಿವೃದ್ಧಿಗೊಳಿಸಬೇಕು. ಅಂದರೆ ಮಕ್ಕಳ ಸಂಪತ್ತನ್ನು ಅಭಿವೃದ್ಧಿಗೊಳಿಸಬೇಕು. ಅವರಿಗೆ ಉತ್ತಮ ಶಿಕ್ಷಣ, ಪೌಷ್ಟಿಕ ಆಹಾರ ಒದಗಿಸಬೇಕು. ಮುಂದೆ ಚೆನ್ನಾಗಿ ಬೆಳೆದು ಅವರು ದೇಶದ ಅಭಿವೃದ್ಧಿಗೆ ಕೈಜೋಡಿಸುವಂತಾಗಬೇಕು. ಬಾಲಕಾರ್ಮಿಕ ಪದ್ಧತಿಯಿಂದ ಅವರನ್ನು ರಕ್ಷಣೆ ಮಾಡಲು ಎಲ್ಲರೂ ಕಂಕಣಬದ್ಧರಾಗಿ ಕೆಲಸ ಮಾಡಬೇಕು’ ಎಂದರು.

‘ಯಾವುದೇ ಕಾರ್ಯಕ್ರಮಗಳು ಯಶಸ್ವಿಯಾಗಬೇಕಾದರೆ ಅವು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅನುಷ್ಠಾನಗೊಳ್ಳಬೇಕು. ಯೋಜನೆಗಳ ಬಗ್ಗೆ ಗ್ರಾಪಂ, ತಾಪಂ, ಜಿಪಂ ಸದಸ್ಯರು ಸಮುದಾಯದಲ್ಲಿ ಜಾಗೃತಿ ಮೂಡಿಸಬೇಕು. ಮಕ್ಕಳ ಆರೋಗ್ಯ ಕಾಪಾಡಲು ಪೋಷಕರು ಮೊದಲ ಆದ್ಯತೆ ನೀಡಬೇಕು. ಸ್ಪರ್ಧಾ ಜಗತ್ತಿನಲ್ಲಿ ಎಲ್ಲವನ್ನೂ ಎದುರಿಸಿ ಮುನ್ನಡೆಯುವ ವಿಶ್ವಾಸ, ಮನೋಬಲವನ್ನು ಮಕ್ಕಳಲ್ಲಿ ತುಂಬಬೇಕು’ ಎಂದು ಹೇಳಿದರು.

‘ಮಕ್ಕಳ ಹಕ್ಕುಗಳನ್ನು ಕಾಪಾಡುವುದು ಇಂದಿನ ಅಗತ್ಯವಾಗಿದೆ. ಮಕ್ಕಳನ್ನು ಶಿಕ್ಷಣದಿಂದ ವಂಚಿತಗೊಳಿಸವುದು ಮಕ್ಕಳ ಹಕ್ಕಿನ ಉಲ್ಲಂಘನೆಯಾಗುತ್ತದೆ. ಜೊತೆಗೆ ಚಿಣ್ಣರಿಂದ ದುಡಿಸಿಕೊಂಡರೆ, ಬಾಲ ಕಾರ್ಮಿಕ ಪದ್ಧತಿಗೆ ದೂಡಿದರೆ, ಬಾಲ್ಯ ವಿವಾಹ ಮಾಡಿದರೆ ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗುತ್ತದೆ’ ಎಂದರು.

‘ಮಂಡ್ಯ ಜಿಲ್ಲೆಯಲ್ಲಿ ಬಾಲ್ಯವಿವಾಹ ಪ್ರಕರಣಗಳು ವಿಪರೀತವಾಗುತ್ತಿವೆ. ಸಾಮಾಜಿಕ ಪಿಡುಗುಗಳಿಂದಾಗಿ 14–15 ವರ್ಷಕ್ಕೆಲ್ಲಾ ಹೆಣ್ಣುಮಕ್ಕಳನ್ನು ಮದುವೆ ಮಾಡಿ ಕಳುಹಿಸಲಾಗುತ್ತಿದೆ. ಸಾಯುವುದರೊಳಗೆ ಮಗಳ ಮದುವೆ ನೋಡಬೇಕು, ಹೆಣ್ಣು ಮಕ್ಕಳು ಮನೆಯಲ್ಲಿ ಇದ್ದರೆ ಸೆರಗಿನಲ್ಲಿ ಕೆಂಡ ಕಟ್ಟಿಕೊಂಡಂತೆ ಎಂಬ ಕೆಟ್ಟ ನಂಬಿಕೆಗಳಿಂದ ಬಾಲ್ಯ ವಿವಾಹ ಹೆಚ್ಚುತ್ತಿದೆ. ಪ್ರೀತಿ –ಪ್ರೇಮದ ಹೆಸರಿನಲ್ಲೂ ಬಾಲ್ಯವಿವಾಹಗಳು ನಡೆಯುತ್ತಿವೆ. ಎಲ್ಲೇ ಬಾಲ್ಯ ವಿವಾಹ ನಡೆದರೂ ಸಂಬಂಧಪಟ್ಟವರಿಗೆ ಮಾಹಿತಿ ನೀಡಬೇಕು’ ಎಂದರು.

ಸಮಾರಂಭದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಚೇತನ್‌ಕುಮಾರ್‌, ಮಕ್ಕಳ ಸಹಾಯವಾಣಿ , ಬರ್ಡ್ಸ್‌ ಸಂಸ್ಥೆ ನಿರ್ದೇಶಕ ಮಿಕ್ಕೆರೆ ವೆಂಕಟೇಶ್‌, ವಿಶೇಷ ಮಕ್ಕಳ ಪೊಲೀಸ್‌ ಘಟಕದ ಅಧಿಕಾರಿ ರಮೇಶ್‌, ಬಿಆರ್‌ಸಿ ರಘು, ತಾಲ್ಲೂಕು ಪಂಚಾಯಿತಿ ಸದಸ್ಯ ಸವಿತಾ ಜ್ಞಾನಮೂರ್ತಿ, ಮುಖ್ಯ ಶಿಕ್ಷಕಿ ಮಹದೇವಮ್ಮ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು