ಮಣ್ಣಿನ ಗಣಪತಿಗೆ ಚಿಕ್ಕಮುಲಗೂಡು ಪ್ರಸಿದ್ಧಿ

7
ನೈಸರ್ಗಿಕ ಮೂರುತಿ ತಯಾರಿಸುವ 10 ಕುಟುಂಬಗಳು, ಪಿಒಪಿ, ರಾಸಾಯನಿಕ ಬಣ್ಣ ಬಳಕೆ ಇಲ್ಲ

ಮಣ್ಣಿನ ಗಣಪತಿಗೆ ಚಿಕ್ಕಮುಲಗೂಡು ಪ್ರಸಿದ್ಧಿ

Published:
Updated:
Deccan Herald

ಮಂಡ್ಯ: ವಿಘ್ನವಿನಾಶಕ ಗಣೇಶ, ವರ ಪ್ರದಾಯಿನಿ ಗೌರಿ ಹಬ್ಬ ಸಮೀಪಿಸುತ್ತಿದೆ. ಸೆಪ್ಟೆಂಬರ್‌ 12, 13ಕ್ಕೆ ಮನೆ–ಮನಗಳಲ್ಲಿ ಹಬ್ಬದ ಸಂಭ್ರಮ ಮೂಡಲಿದೆ. ಒಂದೆಡೆ ಯುವಕ ಸಂಘಗಳು ಈಗಾಗಲೇ ಗೌರಿ–ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿವೆ. ಇನ್ನೊಂದೆಡೆ ಮಳವಳ್ಳಿ ತಾಲ್ಲೂಕಿನ ಚಿಕ್ಕಮುಲಗೂಡು ಗ್ರಾಮದ ಕುಶಲಕರ್ಮಿಗಳು ಬಿಡುವಿಲ್ಲದೆ ಗಣೇಶ ಮೂರ್ತಿಗಳಿಗೆ ರೂಪ ಕೊಡುತ್ತಿದ್ದಾರೆ.

ಚಿಕ್ಕಮುಲಗೂಡು ಎಂದರೆ ಸಾಂಪ್ರದಾಯಿಕ, ಪರಿಸರಸ್ನೇಹಿ ಮಣ್ಣಿನ ಗಣಪತಿ ಮೂರ್ತಿ ತಯಾರಿಕೆಗೆ ಬಲು ಪ್ರಸಿದ್ಧಿ ಪಡೆದ ಊರು. 10 ಕುಟುಂಬಗಳ 40ಕ್ಕೂ ಹೆಚ್ಚು ಕಲಾವಿದರು ಹಬ್ಬಕ್ಕೆ ಆರು ತಿಂಗಳ ಮುಂಚಿನಿಂದಲೇ ಮೂರುತಿ ತಯಾರಿಸುವ ಕಾಯಕದಲ್ಲಿ ತೊಡಗಿದ್ದಾರೆ. ರಾಸಾಯನಿಕಗಳ ಸ್ಪರ್ಶವಿಲ್ಲದೆ, ಬಣ್ಣಗಳ ಆರ್ಭಟವಿಲ್ಲದೆ ತಯಾರಾಗುವ ಈ ಗಣಪತಿ ಮೂರ್ತಿಗಳು ರಾಜ್ಯದ ಹಲವು ಭಾಗಗಳಲ್ಲಿ ಪ್ರಸಿದ್ಧಿ ಪಡೆದಿವೆ. ಪದವಿ ಮುಗಿಸಿ ಬೆಂಗಳೂರು, ಮೈಸೂರು ನಗರ ಪ್ರದೇಶಗಳಿಗೆ ವಲಸೆ ಹೋಗಿದ್ದ ಯುವಕರು ಊರಿಗೆ ಹಿಂದಿರುಗಿ ಬಂದಿದ್ದು ಮಣ್ಣಿನ ಜೊತೆ ಕೆಲಸ ಮಾಡುತ್ತಿದ್ದಾರೆ.

ಗ್ರಾಮದಲ್ಲಿ ಗಣೇಶ ಮೂರ್ತಿ ತಾಯಾರಿಕೆ ಎಂಬುದು ಒಂದು ಆಂದೋಲನವಾಗಿದೆ. ಎಲ್ಲೆಡೆ ಪಿಒಪಿ (ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌), ಅಚ್ಚಿನ ಗಣಪತಿಗಳು ಜನರ ಗಮನ ಸೆಳೆಯುತ್ತಿರುವಾಗ ಈ ಯುವಕರು ಸಂಪೂರ್ಣ ಮಣ್ಣಿನಿಂದ ಮೂರ್ತಿ ತಯಾರಿಸುತ್ತಿದ್ದಾರೆ. ಪಿಒಪಿ ಮೂರ್ತಿಗಳು ನಾಚಿಕೆ ಪಟ್ಟುಕೊಳ್ಳುವಷ್ಟು ಅಂದವಾಗಿ ಮೂರುತಿಗಳು ಮೂಡಿ ಬಂದಿವೆ.

ಏಪ್ರಿಲ್‌ ತಿಂಗಳಿಂದ ನಿರಂತರವಾಗಿ ಕುಟುಂಬದ ಎಲ್ಲಾ ಸದಸ್ಯರು ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 8ಗಂಟೆವರೆಗೂ ಮಣ್ಣಿನ ಜೊತೆ ಕೆಲಸ ಮಾಡುತ್ತಿದ್ದಾರೆ. ಪುರುಷರು, ಮಹಿಳೆಯರು, ಮಕ್ಕಳು ಈ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ. ಈಗಾಗಲೇ ವಿವಿಧ ಅಳತೆಯ ಸಾವಿರಕ್ಕೂ ಹೆಚ್ಚು ಮೂರ್ತಿಗಳನ್ನು ತಯಾರಿಸಿ ಇಟ್ಟಿದ್ದಾರೆ.

ಸಂರಕ್ಷಣೆ ದೊಡ್ಡ ಹೊರೆ:
‘ಮಳೆಗಾಲದಲ್ಲಿ ಸ್ವಲ್ಪ ನೀರು ಬಿದ್ದರೂ ಮಣ್ಣಿನ ಮೂರ್ತಿ ಕರಗುವ ಸಾಧ್ಯತೆ ಹೆಚ್ಚು. ಹೀಗಾಗಿ ಬಲು ಉಪಾಯದಿಂದ ಮೂರ್ತಿಗಳನ್ನು ಕಾಪಾಡಿಕೊಳ್ಳಬೇಕಾಗಿದೆ. ಆರು ತಿಂಗಳ ಕಾಲ ಸಂರಕ್ಷಣೆ ಮಾಡುವುದೇ ದೊಡ್ಡ ಹೊರೆ. ನಮ್ಮ ಕುಟುಂಬಕ್ಕೆ ಚಿಕ್ಕ ಮನೆಗಳಿದ್ದು, ಮನೆಯಲ್ಲಿ ಮಲಗಲು ಹಾಗೂ ಅಡುಗೆ ಮಾಡಲು ಸ್ಥಳ ಉಳಿಸಿಕೊಂಡು ಎಲ್ಲಾ ಕಡೆ ಗಣೇಶ ಮೂರ್ತಿ ಇಟ್ಟಿದ್ದೇವೆ. ದಾಸ್ತಾನು ಮಾಡಲು ಮನೆ ಪಕ್ಕದಲ್ಲಿ, ಶೀಟಿನಿಂದ ತಾತ್ಕಾಲಿಕ ಶೆಡ್‌ ನಿರ್ಮಿಸಿಕೊಂಡು ಸಂರಕ್ಷಣೆ ಮಾಡುತ್ತಿದ್ದೇವೆ.ಮೂರ್ತಿಗಳನ್ನು ದಾಸ್ತಾನು ಮಾಡಲು ಮಳಿಗೆಯೊಂದನ್ನು ನಿರ್ಮಿಸಿಕೊಟ್ಟರೆ ಅನುಕೂಲವಾಗುತ್ತದೆ. ಮಣ್ಣಿನ ಮೂರ್ತಿ ಮಾಡುವ ನಮಗೂ ಪ್ರೋತ್ಸಾಹ ಕೊಟ್ಟಂತಾಗುತ್ತದೆ’ ಎಂದು ಮೂರ್ತಿ ತಯಾರಕ ನಾಗೇಶ್‌ ಹೇಳಿದರು.

ಬಗೆಬಗೆಯ ಮೂರುತಿ:
ಅರ್ಧ ಅಡಿಯಿಂದ ಆರೂವರೆ ಅಡಿ ಎತ್ತರದ ಗಣೇಶ ಮೂರ್ತಿಗಳು ಇಲ್ಲಿ ಲಭ್ಯ ಇವೆ. ಆನೆ, ನವಿಲು, ಆಂಜನೇಯ, ಸರ್ಪ, ಸಿಂಹ, ಜಿಂಕೆ, ಬಸವ, ಹಸು, ಉಗ್ರನರಸಿಂಹನ ಮೇಲೆ ಕುಳಿತ ಗಣೇಶ ಮೂರ್ತಿಗಳನ್ನು ತಯಾರಿಸಲಾಗಿದೆ. ವಿಷ್ಣು ಅವತಾರದ ಹಾಗೂ ಸುಖಾನಸದಲ್ಲಿ ಸಿಂಹಾಸನದ ಮೇಲೆ ಕುಳಿತ ಭಂಗಿಯ ಮೂರ್ತಿಗಳು ಸಿದ್ಧಗೊಂಡಿವೆ. ಈಗಾಗಲೇ ಗ್ರಾಹಕರು ಚಿಕ್ಕಮುಲಗೂಡಿಗೆ ಭೇಟಿ ನೀಡುತ್ತಿದ್ದು ತಮಗೆ ಬೇಕಾದ ಭಂಗಿಯ ಗಣಪತಿ ಮೂರ್ತಿ ತಯಾರಿಸಿಕೊಡಲು ಕಾಯ್ದಿರಿಸುತ್ತಿದ್ದಾರೆ. ಹೆಚ್ಚಿನ ಮಾಹಿತಿಗೆ ನಾಗೇಶ್‌ (9945906823, 9901493957) ಅವರನ್ನು ಸಂಪರ್ಕಿಸಬಹುದು.

ತಾತ್ಕಾಲಿಕ ಮಾರಾಟ ಮಳಿಗೆ ಬೇಕು

ಸಂಪೂರ್ಣ ಮಣ್ಣಿನಿಂದ ಗಣೇಶ ಮೂರ್ತಿ ತಯಾರಿಸಲು ಕನಿಷ್ಠ ಹಬ್ಬಕ್ಕೆ ಆರು ತಿಂಗಳ ಮುಂಚೆಯೇ ಮೂರ್ತಿ ತಯಾರಿಕೆ ಆರಂಭಿಸಬೇಕು. ಅಚ್ಚು, ಪಿಒಪಿ ಮೂರ್ತಿ ತಯಾರಿಕೆಗೆ ಅಷ್ಟು ಸಮಯ ಹಿಡಿಯುವುದಿಲ್ಲ. ಮಣ್ಣಿನ ಗಣಪತಿ ಮೂರ್ತಿ ತಯಾರಿಕೆ ಒಂದು ಸವಾಲು. ಚಿಕ್ಕಮುಲಗೂಡು ಗ್ರಾಮದ ಕುಶಲಕರ್ಮಿಗಳು ಈ ಸವಾಲಿನಲ್ಲಿ ಯಶಸ್ವಿಯಾಗಿದ್ದಾರೆ. ಪಿಒಪಿಗೆ ಮಾರು ಹೋಗದೇ ನೈಸರ್ಗಿಕ ಸತ್ವವನ್ನು ಕಾಪಾಡಿಕೊಂಡಿದ್ದಾರೆ. ಮುಂದೆಯೂ ಇದನ್ನು ಮುಂದುವರಿಸಿಕೊಂಡು ಹೋಗುವ ಹುಮ್ಮಸ್ಸಿನಲ್ಲಿದ್ದಾರೆ. ಆದರೆ ಅವರಿಗೆ ಸಹಾಯ ಬೇಕಾಗಿದೆ. ಗುಡಿ ಕೈಗಾರಿಕೆ ಮಾದರಿಯಲ್ಲಿ ಗ್ರಾಮದಲ್ಲಿ ಮಳಿಗೆ ಆರಂಭಿಸಲು ಸಹಾಯದ ನಿರೀಕ್ಷೆಯಲ್ಲಿದ್ದಾರೆ.

‘ಗಣೇಶ ವಿಗ್ರಹಗಳನ್ನು ಮಧ್ಯವರ್ತಿಗಳು ಕಡಿಮೆ ಬೆಲೆಗೆ ಕೊಂಡು ನಗರ, ಪಟ್ಟಣಗಳಲ್ಲಿ ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಾರೆ. ಇದರಿಂದ ಗ್ರಾಹಕರಿಗೆ ಅನ್ಯಾಯವಾಗುತ್ತಿದೆ. ನಗರ, ಪಟ್ಟಣ ಪ್ರದೇಶದಲ್ಲಿ ನಮಗೆ ತಾತ್ಕಾಲಿಕ ಮಾರಾಟ ಮಳಿಗೆ ವ್ಯವಸ್ಥೆ ಮಾಡಿಕೊಟ್ಟರೆ ನಾವೇ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುತ್ತೇವೆ’ ಎಂದು ವೆಂಕಟೇಶ್‌ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !