ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ ನಗರಸಭೆ: ಮಂಜು ಅಧ್ಯಕ್ಷ, ಫಾತಿಮಾ ಉಪಾಧ್ಯಕ್ಷೆ

ಅವಿರೋಧ ಆಯ್ಕೆ, ನಿರೀಕ್ಷೆಯಂತೆ ಅಧಿಕಾರ ಜೆಡಿಎಸ್‌ ಪಾಲು, 2 ವರ್ಷದ ನಂತರ ಆಯ್ಕೆ
Last Updated 2 ನವೆಂಬರ್ 2020, 12:56 IST
ಅಕ್ಷರ ಗಾತ್ರ

ಮಂಡ್ಯ: ನಿರೀಕ್ಷೆಯಂತೆ ನಗರಸಭೆ ಆಡಳಿತ ಜೆಡಿಎಸ್‌ ಪಾಲಾಯಿತು. ನೂತನ ಅಧ್ಯಕ್ಷರಾಗಿ 20ನೇ ವಾರ್ಡ್‌ನ ಜೆಡಿಎಸ್‌ ಸದಸ್ಯ ಎಚ್‌.ಎಸ್‌.ಮಂಜು, ಉಪಾಧ್ಯಕ್ಷರಾಗಿ 13ನೇ ವಾರ್ಡ್‌ನ ಇಸ್ರತ್‌ ಫಾತಿಯಾ ಸೋಮವಾರ ಅವಿರೋಧವಾಗಿ ಆಯ್ಕೆಯಾದರು.

35 ಸದಸ್ಯ ಬಲದ ನಗರಸಭೆಯಲ್ಲಿ ಜೆಡಿಎಸ್‌ 18 ಸ್ಥಾನ ಗಳಿಸಿತ್ತು. ಒಂದು ಶಾಸಕ ಮತವನ್ನೂ ಸೇರಿಸಿದರೆ ಸರಳ ಬಹುಮತದ 19 ಸದಸ್ಯ ಬಲ ಜೆಡಿಎಸ್‌ಗಿತ್ತು. ನಾಲ್ವರು ಪಕ್ಷೇತರ ಸದಸ್ಯರು ಬೆಂಬಲ ಘೋಷಣೆ ಮಾಡಿದ ಕಾರಣ ಜೆಡಿಎಸ್‌ ಬಲ 23 ಸದಸ್ಯ ಸ್ಥಾನಕ್ಕೇರಿತು. ಹೀಗಾಗಿ ಯಾವುದೇ ಗೊಂದಲಗಳಿಲ್ಲದೇ ಜೆಡಿಎಸ್‌ ಸದಸ್ಯರು ಅಧಿಕಾರ ಪಡೆದರು. ಅಧ್ಯಕ್ಷ ಹುದ್ದೆ ಸಾಮಾನ್ಯ, ಉಪಾಧ್ಯಕ್ಷ ಹುದ್ದೆ ಇತರ ಹಿಂದುಳಿದ ವರ್ಗಕ್ಕೆ ಮೀಸಲಾಗಿತ್ತು.

ಜೆಡಿಎಸ್‌ನಲ್ಲಿ ಬಹುಮತವಿದ್ದರೂ ಸದಸ್ಯರೆಲ್ಲರೂ ಚುನಾವಣೆಗೆ ಎರಡು ದಿನ ಉಳಿದಿರುವಾಗ ಚಾಮರಾನಗರ ಜಿಲ್ಲೆ, ಕೊಳ್ಳೆಗಾಲ ಬಳಿಯ ರೆಸಾರ್ಟ್‌ವೊಂದಕ್ಕೆ ತೆರಳಿದ್ದರು. ಸೋಮವಾರ ಬೆಳಿಗ್ಗೆ ನೇರವಾಗಿ ನಗರಸಭೆ ಸಭಾಂಗಣಕ್ಕೆ ಬಂದರು. ಅಧ್ಯಕ್ಷ ಸ್ಥಾನಕ್ಕೆ 10ನೇ ವಾರ್ಡ್‌ನ ಕಾಂಗ್ರೆಸ್‌ ಸದಸ್ಯ ಶಿವಪ್ರಕಾಶ್‌, ಜೆಡಿಎಸ್‌ನ ಎಚ್‌.ಎಸ್‌.ಮಂಜು ಬೆಳಿಗ್ಗೆ ನಾಮಪತ್ರ ಸಲ್ಲಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಇಸ್ರತ್‌ ಫಾತಿಮಾ ಒಬ್ಬರೇ ನಾಮಪತ್ರ ಸಲ್ಲಿಸಿದರು.

ಕಡೇ ಕ್ಷಣದಲ್ಲಿ ಕಾಂಗ್ರೆಸ್‌ ಸದಸ್ಯ ಶಿವಪ್ರಕಾಶ್‌ ನಾಮಪತ್ರ ವಾಪಸ್‌ ಪಡೆದ ಕಾರಣ ಎರಡೂ ಸ್ಥಾನಗಳಿಗೆ ಒಬ್ಬೊಬ್ಬರೇ ಅಭ್ಯರ್ಥಿಗಳು ಕಣದಲ್ಲಿ ಉಳಿದರು. ಹೀಗಾಗಿ ಚುನಾವಣಾಧಿಕಾರಿ ನಿಹಾಲ್‌ ಜೈನ್, ಎಚ್‌.ಎಸ್‌. ಮಂಜು ಅಧ್ಯಕ್ಷರಾಗಿ, ಫಾತಿಮಾ ಉಪಾಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಣೆ ಮಾಡಿದರು.

ಪಕ್ಷೇತರ ಸದಸ್ಯರು ಜೆಡಿಎಸ್‌ ಕಡೆ ವಾಲಿದ ಕಾರಣ ಕಾಂಗ್ರೆಸ್‌ ಮುಖಂಡರು ಯಾವುದೇ ರಾಜಕಾರಣ ಚಟುವಟಿಕೆಗೆ ಕೈ ಹಾಕಲಿಲ್ಲ. ಪಕ್ಷೇತರರ ಬೆಂಬಲದೊಂದಿಗೆ, ಅಧ್ಯಕ್ಷ ಸ್ಥಾನ ವಂಚಿತ ಜೆಡಿಎಸ್‌ ಸದಸ್ಯರ ಸಹಾಯದಿಂದ ಕಾಂಗ್ರೆಸ್‌ ಮುಖಂಡರು ಅಧಿಕಾರ ಪಡೆಯಲು ಯತ್ನಿಸಲಿದ್ದಾರೆ ಎಂದು ಆರಂಭದಲ್ಲಿ ಬಿಂಬಿಸಲಾಗಿತ್ತು. ಆದರೆ ಜೆಡಿಎಸ್‌ ನಾಯಕರು ಇದಕ್ಕೆ ಅವಕಾಶ ನೀಡದೇ ಪಕ್ಷೇತರರನ್ನು ಒಲಿಸಿಕೊಳ್ಳುವವರು ಯಶಸ್ವಿಯಾದರು. ಕಳೆದ ಬಾರಿ ಅಧಿಕಾರ ಅನುಭವಿಸಿದ್ದ ಕಾಂಗ್ರೆಸ್‌ ಈ ಬಾರಿ ಜೆಡಿಎಸ್‌ಗೆ ಅಧಿಕಾರ ಬಿಟ್ಟುಕೊಡಬೇಕಾಯಿತು.

2 ವರ್ಷದ ನಂತರ ಅಧಿಕಾರ: ಅಧ್ಯಕ್ಷ– ಉಪಾಧ್ಯಕ್ಷರ ಗೊಂದಲದಿಂದ ಕಳೆದ 2.2 ವರ್ಷಗಳಿಂದ ಸದಸ್ಯರಿಗೆ ಅಧಿಕಾರ ಸಿಕ್ಕಿರಲಿಲ್ಲ. ನಗರಸಭೆಯಲ್ಲಿ ಅಧಿಕಾರಿಗಳ ಕಾರುಬಾರು ಜೋರಾಗಿದೆ ಎಂದೇ ಹೇಳಲಾಗುತ್ತಿತ್ತು. ಅಧ್ಯಕ್ಷ–ಉಪಾಧ್ಯಕ್ಷರ ಆಯ್ಕೆಯೊಂದಿಗೆ ಸದಸ್ಯರಿಗೆ ಅಧಿಕಾರ ಸಿಕ್ಕಿದಂತಾಯಿತು. ಇದಕ್ಕೆ ಎಲ್ಲಾ ಪಕ್ಷಗಳ ಸದಸ್ಯರು ಸಂತೋಷ ವ್ಯಕ್ತಪಡಿಸಿದರು.

ನೂತನ ಅಧ್ಯಕ್ಷ ಎಚ್‌.ಎಸ್‌.ಮಂಜು ಮಾತನಾಡಿ ‘ನಗರಸಭೆ ಆಡಳಿತವನ್ನು ಸರಿಪಡಿಸಬೇಕಾಗಿದೆ. ಖಾತೆ ಬದಲಾವಣೆ ಮಾಡಿಕೊಡಲು ಆರು ತಿಂಗಳವರೆಗೆ ಜನರನ್ನು ಕಾಯಿಸುತ್ತಿದ್ದಾರೆ. ಶೀಘ್ರ ಸಿಬ್ಬಂದಿಯ ಸಭೆ ಕರೆದು ಎಲ್ಲವನ್ನೂ ಸರಿಪಡಿಸಲಾಗುವುದು. ನನೆಗುದಿಗೆ ಬಿದ್ದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು. ನೀರಾವರಿ ಇಲಾಖೆಯ ಕಾಮಗಾರಿಯಿಂದ ನಗರದ ರಸ್ತೆಗಳು ಗುಂಡಿಬಿದ್ದಿದ್ದು ರಸ್ತೆಗಳ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು’ ಎಂದರು.

‘ನಗರದ ಅಭಿವೃದ್ಧಿಗೆ ಸರ್ಕಾರ ಬಿಡುಗಡೆ ಮಾಡಿರುವ ₹ 50 ಕೋಟಿ ಅನುದಾನ ವಾಪಸ್‌ ಹೋಗದಂತೆ ಕ್ರಮ ಕೈಗೊಳ್ಳಲಾಗುವುದು. ನಗರಸಭೆಯನ್ನು ಮಹಾನಗರಪಾಲಿಕೆಯನ್ನಾಗಿ ರೂಪಿಸಲು ಯತ್ನಿಸಲಾಗುವುದು’ ಎಂದರು.

‘ಅಧ್ಯಕ್ಷ ಹುದ್ದೆಗೆ ಸಂಬಂಧಿಸಿದಂತೆ ಯಾವುದೇ ಅಧಿಕಾರ ಹಂಚಿಕೆಯ ಮಾತುಕತೆಯಾಗಿಲ್ಲ. ಪಕ್ಷದ ಮುಖಂಡರ ಸೂಚನೆಯಂತೆ ಅಧಿಕಾರದಲ್ಲಿ ಮುಂದುವರಿಯುತ್ತೇನೆ. ಮುಂದೆ ಅವರು ಕೈಗೊಳ್ಳುವ ಯಾವುದೇ ನಿರ್ಧಾರಗಳಿಗೆ ಬದ್ಧನಾಗಿರುತ್ತೇನೆ’ ಎಂದರು.

ಆಯ್ಕೆಯ ನಂತರ ಜೆಡಿಎಸ್‌ ಕಾರ್ಯಕರ್ತರು ನಗರಸಭೆ ಕಚೇರಿ ಮುಂದೆ ಪಾಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್‌ ಏರ್ಪಡಿಸಲಾಗಿತ್ತು.

ರೆಸಾರ್ಟ್‌ ರಾಜಕೀಯ ಸಾಮಾನ್ಯ: ಶ್ರೀನಿವಾಸ್‌

‘ಕಳೆದ ಹಲವು ಸಂದರ್ಭದಲ್ಲಿ ಕಹಿ ಘಟನೆಗಳನ್ನು ಅನುಭವಿಸಿದ್ದೇವೆ. ಯಾವುದೇ ಗೊಂದಲ ಉಂಟಾಗಬಾರದು ಎಂಬ ಕಾರಣಕ್ಕೆ ಸದಸ್ಯರೊಂದಿಗೆ ಪ್ರವಾಸಕ್ಕೆ ತೆರಳಲಾಗಿತ್ತು. ಇತ್ತೀಚಿನ ದಿನಗಳಲ್ಲಿ ರೆಸಾ‌ರ್ಟ್‌ ರಾಜಕೀಯ ಸಾಮಾನ್ಯವಾಗಿದೆ’ ಎಂದು ಶಾಸಕ ಎಂ.ಶ್ರೀನಿವಾಸ್‌ ತಮ್ಮ ಪಕ್ಷದ ಸದಸ್ಯರನ್ನು ರೆಸಾರ್ಟ್‌ಗೆ ಕರೆದೊಯ್ದ ಕ್ರಮವನ್ನು ಸಮರ್ಥಿಸಿಕೊಂಡರು.

‘ವಿಧಾನಸಭಾ ಚುನಾವಣೆ ಸಂದರ್ಭದಲ್ಲೂ ಶಾಸಕರು ರೆಸಾರ್ಟ್‌ನಲ್ಲಿ ಉಳಿದುಕೊಳ್ಳುತ್ತಾರೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲೂ ಅದನ್ನೇ ಅನುಸರಿಸಲಾಗುತ್ತಿದೆ. ನಮ್ಮ ಸದಸ್ಯರನ್ನು ಕಾಪಾಡಿಕೊಳ್ಳಲು ಇದು ಅನಿವಾರ್ಯವೂ ಆಗಿತ್ತು’ ಎಂದರು.

‘ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಎಲ್ಲಾ ಪಕ್ಷದ ಸದಸ್ಯರು ಸಹಕಾರ ನೀಡಿದ ಕಾರಣ ಅವಿರೋಧ ಆಯ್ಕೆ ಸಾಧ್ಯವಾಯಿತು. ಎಲ್ಲರಿಗೂ ಅಭಿನಂದನೆ ತಿಳಿಸುತ್ತೇನೆ. ಇನ್ನುಮುಂದೆ ನಗರದ ಅಭಿವೃದ್ಧಿಗಾಗಿ ಶ್ರಮಿಸಲಾಗುವುದು. ಅಧ್ಯಕ್ಷರು ನಗರ ಪ್ರದಕ್ಷಿಣೆ ಮಾಡುವ ಮೂಲಕ ಜನರ ಕುಂದುಕೊರತೆ ಆಲಿಸಲಿದ್ದಾರೆ’ ಎಂದರು.

ಹೊಸಹಳ್ಳಿಯ ಅದೃಷ್ಟ

ಹೊಸಹಳ್ಳಿಯ ವಿವಿಧ ವಾರ್ಡ್‌ಗಳಲ್ಲಿ ಗೆದ್ದವರು ಹಲವು ಬಾರಿ ನಗರಸಭೆ ಅಧ್ಯಕ್ಷರಾಗಿ ಅಧಿಕಾರ ಅನುಭವಿಸಿದ್ದಾರೆ. ಇದನ್ನು ಕೆಲ ಸದಸ್ಯರು ‘ಹೊಸಹಳ್ಳಿಯ ಅದೃಷ್ಟ’ ಎಂದೇ ಬಣ್ಣಿಸಿದ್ದಾರೆ. ಕೆ.ಸಿ.ನಾಗಮ್ಮ, ಎಚ್‌.ಸಿ.ಬೋರೇಗೌಡ ನಗರಸಭೆಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಮೂರನೇ ಬಾರಿಗೆ ಹೊಸಹಳ್ಳಿಯ 20ನೇ ವಾರ್ಡ್‌ನಿಂದ ಗೆದ್ದಿರುವ ಎಚ್‌.ಎಸ್‌.ಮಂಜು ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ಹೊಸಹಳ್ಳಿಯಿಂದ ಗೆದ್ದ ಐದಾರು ಮಂದಿ ಉಪಾಧ್ಯಕ್ಷರಾಗಿಯೂ ಆಯ್ಕೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT