ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕಷ್ಟದಲ್ಲೂ ಸಿಎಂ ಸಾಧನೆ ಅವಿಸ್ಮರಣೀಯ: ಉಸ್ತುವಾರಿ ಸಚಿವ ನಾರಾಯಣಗೌಡ ಶ್ಲಾಘನೆ

ವಿಡಿಯೊ ಸಂವಾದ, ಕಿರುಹೊತ್ತಿಗೆ ಬಿಡುಗಡೆ
Last Updated 27 ಜುಲೈ 2020, 15:25 IST
ಅಕ್ಷರ ಗಾತ್ರ

ಮಂಡ್ಯ: ‘ಬಿ.ಎಸ್‌.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಉತ್ತರ ಕರ್ನಾಟಕ ಭಾಗದಲ್ಲಿ ನೆರೆಹಾವಳಿ ಉಂಟಾಯಿತು. ಈಗ ಕೊರೊನಾ ಸೋಂಕಿನಿಂದ ರಾಜ್ಯ ಸಂಕಷ್ಟ ಸ್ಥಿತಿಯಲ್ಲಿ ಇದೆ. ಇಂತಹ ಸಂದರ್ಭದಲ್ಲೂ ಮುಖ್ಯಮಂತ್ರಿಗಳು ಕಳೆದೊಂದು ವರ್ಷದಿಂದ ಮಾಡಿರುವ ಸಾಧನೆ ಅವಿಸ್ಮರಣೀಯ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಶ್ಲಾಘಿಸಿದರು.

ರಾಜ್ಯ ಬಿಜೆಪಿ ಸರ್ಕಾರಕ್ಕೆ ವರ್ಷ ತುಂಬಿದ ಅಂಗವಾಗಿ ಮುಖ್ಯಮಂತ್ರಿಯೊಂದಿಗೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ವಿಡಿಯೊ ಸಂವಾದ, ಸಾಧನೆಗಳ ಕಿರುಹೊತ್ತಿಗೆ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಕೋವಿಡ್‌ ನಿಯಂತ್ರಿಸುವಲ್ಲಿ ಜಿಲ್ಲಾಡಳಿತ ಯಶಸ್ವಿಯಾಗಿದೆ. ಜಿಲ್ಲೆಗೆ ಮಹಾರಾಷ್ಟ್ರ, ತಮಿಳುನಾಡು ಸೇರಿ ಇತರ ರಾಜ್ಯಗಳಿಂದ ವಲಸಿಗರು ಬಂದ ಪರಿಣಾಮ ಕೊರೊನಾ ಸೋಂಕು ಭೀತಿ ಹುಟ್ಟಿಸಿತ್ತು. ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಅವರು ರೋಗ ಹರಡದಂತೆ ಎಲ್ಲಾ ರೀತಿಯ ಕ್ರಮ ಕೈಗೊಂಡಿದ್ದರಿಂದ ಸೋಂಕು ಹರಡುವುದು ನಿಯಂತ್ರಣದಲ್ಲಿದೆ. ಮುಂದೆಯೂ ನಾವು ಭಯಪಡುವ ಅಗತ್ಯವಿಲ್ಲ. ಕೊರೊನಾ ಸೋಂಕು ನಾಶವಾಗುವುದಿಲ್ಲ, ಅದರ ಜೊತೆಯೇ ಜೀವನ ನಡೆಸಬೇಕಾದ ಅನಿವಾರ್ಯತೆ ಇದೆ’ ಎಂದರು.

‘ಜಿಲ್ಲೆಯಲ್ಲಿ ಕೆಲವೇ ಮಂದಿ ಈ ರೋಗಕ್ಕೆ ಸಾವನ್ನಪ್ಪಿದ್ದಾರೆ. ಆದರೆ ಅವರು ಕೂಡ ಬೇರೆ ಬೇರೆ ರೋಗಗಳಿಂದಾಗಿ ಮೃತಪಟ್ಟಿದ್ದಾರೆ. ಕೊರೊನಾ ಹೆಚ್ಚು ಹರಡದಂತೆ ಜಿಲ್ಲಾಡಳಿತದ ಜೊತೆ ಎಲ್ಲರೂ ಸಹಕಾರ ನೀಡಬೇಕು. ಮಹಾಮಾರಿ ಕಂಡಾಕ್ಷಣ ಮುಖ್ಯಮಂತ್ರಿಗಳು ಎಲ್ಲ ಸಚಿವರಿಗೂ ಜವಾಬ್ದಾರಿ ನೀಡಿದರು. ಇದರಿಂದಾಗಿ ನಮ್ಮ ರಾಜ್ಯದಲ್ಲಿ ಸೋಂಕು ನಿಯಂತ್ರಣಕ್ಕೆ ಬರುತ್ತಿದೆ. ಇಲ್ಲದಿದ್ದರೆ ಮಹಾರಾಷ್ಟ್ರ ಮತ್ತು ತಮಿಳುನಾಡಿನಂತೆ ಕಷ್ಟ ಅನುಭವಿಸಬೇಕಾಗಿತ್ತು’ ಎಂದರು.

‘ಈ ಬಾರಿ ಮಳೆಯ ಕೊರತೆ ಇಲ್ಲ. ಕುಡಿಯಲು ಮತ್ತು ಬೆಳೆಗಳಿಗೆ ನೀರಿನ ಕೊರತೆಯಾಗುವುದಿಲ್ಲ. ಭರವಸೆಯಂತೆ ತಕ್ಷಣವೇ ನಾಲೆಗಳಿಗೆ ನೀರು ಹರಿಸಲಾಗುವುದು’ ಎಂದರು.

ಫಲಾನುಭವಿಗಳಾದ ನಾಗರಾಜು ಮತ್ತು ನಂಜುಂಡಸ್ವಾಮಿ ಮಾತನಾಡಿ ‘2019 ರಲ್ಲಿ ಪ್ರವಾಹ ಪೀಡಿತರಾಗಿದ್ದ ನಾವು ಮನೆ ಕಳೆದುಕೊಂಡಿದ್ದೆವು. ಜಿಲ್ಲಾಧಿಕಾರಿಗಳು ನಮ್ಮ ಗ್ರಾಮಕ್ಕೆ ಭೇಟಿಕೊಟ್ಟು ಸ್ಥಳ ಪರಿಶೀಲಿಸಿ ಮನೆ ನಿರ್ಮಾಣಮಾಡಲು ₹ 5 ಲಕ್ಷ ಅನುದಾನ ನೀಡಿದರು’ ಎಂದರು.

ಕೋವಿಡ್‌ ಗೆದ್ದು ಬಂದ ಮಳವಳ್ಳಿ ಜಿಲ್ಲಾ ಮಕ್ಕಳ ಸಿಡಿಪಿಒ ಕುಮಾರ್‌, ಕೋವಿಡ್‌ ಆಸ್ಪತ್ರೆಯಲ್ಲಿ ಸಕಲ ಸೌಲಭ್ಯ ಸಿಕ್ಕ ಕಾರಣ ಗುಣಮುಖನಾಗಲು ಸಾಧ್ಯವಾಯಿತು ಎಂದರು.

ಜಿಪಂ ಅಧ್ಯಕ್ಷೆ ನಾಗರತ್ನ ಸ್ವಾಮಿ, ಮುಡಾ ಅಧ್ಯಕ್ಷ ಕೆ.ಶ್ರೀನಿವಾಸ್, ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್, ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಶೈಲಜಾ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಪರಶುರಾಮ, ಜಿಪಂ ಸಿಇಒ ಎಸ್‌.ಎಂ. ಜುಲ್ಫಿಕರ್‌ ಉಲ್ಲಾ ಇದ್ದರು.

*******

ಮೈಷುಗರ್‌: ₹ 50 ಕೋಟಿ ಬಿಡುಗಡೆ ಶೀಘ್ರ

‘ಮೈಷುಗರ್ ಕಾರ್ಖಾನೆಯನ್ನು ಒ ಅಂಡ್ ಎಂ (ನಿರ್ವಹಣೆ ಮತ್ತು ಕಾರ್ಯಾಚರಣೆ) ಮಾದರಿಯಲ್ಲಿ ಪ್ರಸಕ್ತ ಸಾಲಿನಿಂದಲೇ ಆರಂಭಿಸಲಾಗುವುದು. ಅದಕ್ಕಾಗಿ ₹ 50 ಕೋಟಿ ಬಿಡುಗಡೆ ಮಾಡಲು ಮುಖ್ಯಮಂತ್ರಿಗಳು ಒಪ್ಪಿದ್ದಾರೆ’ ಎಂದು ಕೆ.ಸಿ.ನಾರಾಯಣಗೌಡ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಪಿಎಸ್ಎಸ್‌ಕೆ ಶೀಘ್ರದಲ್ಲೇ ಆರಂಭವಾಗಲಿದೆ. ಮಂಡ್ಯದ ರೈತರಿಗೆ ಅನುಕೂಲವಾಗಲು ಶೀಘ್ರ ಕಾರ್ಖಾನೆ ಆರಂಭವಾಗಬೇಕು ಎಂದು ಮುಖ್ಯಮಂತ್ರಿಗಳು ಸೂಚನೆ ನಿಡಿದ್ದಾರೆ’ ಎಂದರು.

‘ಬೇಬಿ ಬೆಟ್ಟದಲ್ಲಿ ಎಲ್ಲ ಗಣಿಗಾರಿಕೆಗೂ ನಿಷೇಧ ಹೇರಿಲ್ಲ. ಅನಧಿಕೃತ ಗಣಿಗಳಿಗೆ ನಿಷೇಧ ಹೇರಿದ್ದು ರಾಜಧನ ಪಾವತಿ ಮಾಡಿರುವ ಗಣಿಗಳಿಗೆ ಅವಕಾಶ ನೀಡಲಾಗಿದೆ. ಕಲ್ಲು ಗಣಿಗಾರಿಕೆಯಿಂದ ಕೆಆರ್‌ಎಸ್‌ ಜಲಾಶಯಕ್ಕೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು. ಜಲಾಶಯಕ್ಕೆ ಉಂಟಾಗುತ್ತಿರುವ ಪರಿಣಾಮದ ಬಗ್ಗೆ ತಜ್ಞರು ಅಧ್ಯಯನ ಕೈಗೊಂಡಿದ್ದು ಶೀಘ್ರ ವರದಿ ಬರಲಿದೆ’ ಎಂದರು.

ಕೆಲವು ಸದಸ್ಯರ ಗೂಂಡಾವರ್ತನೆ

‘ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ ನಡೆಯದಿರಲು ಕೆಲವ ಸದಸ್ಯರ ಗೂಂಡಾವರ್ತನೆಯೇ ಕಾರಣವಾಗಿದೆ. ಅಭಿವೃದ್ಧಿ ವಿಚಾರದಲ್ಲಿ ಸದಸ್ಯರು ಕೈಜೋಡಿಸಬೇಕು, ರಾಜಕಾರಣ ಸಲ್ಲದು’ ಎಂದು ಸಚಿವ ನಾರಾಯಣಗೌಡ ಹೇಳಿದರು.

‘ನಾನು, ಜಿಲ್ಲಾಧಿಕಾರಿ ಹಾಗೂ ನೂತನ ಸಿಇಒ ಮಧ್ಯೆ ಪ್ರವೇಶ ಮಾಡಿ ಸಭೆ ನಡೆಯಲು ಅನುವು ಮಾಡಿಕೊಡಲಾಗುವುದು. ಸರ್ಕಾರದ ಅನುದಾನವಿಲ್ಲದೇ ರಸ್ತೆ ಸೇರಿ ಇತರ ಮೂಲ ಸೌಲಭ್ಯಗಳ ಕಾಮಗಾರಿ ಸ್ಥಗಿತಗೊಂಡಿವೆ. ಮುಂದೆ ಈರೀತಿಯಾಗಲು ಬಿಡುವುದಿಲ್ಲ. ಸ್ಥಾಯಿ ಸಮಿತಿ ರಚನೆ ಸೇರಿದಂತೆ ಬಜೆಟ್ ಮಂಡನಾ ಸಭೆ ನಡೆಯಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT