ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಿಯ ಸಾಹಿತ್ಯ ಪ್ರಚಾರಕ್ಕೆ ಸಹಕಾರ: ಸಚಿವ

ಮೇಲುಕೋಟೆಯಲ್ಲಿ ಪು.ತಿ.ನ 20ನೇ ಸಂಸ್ಮರಣೆ
Last Updated 14 ಅಕ್ಟೋಬರ್ 2018, 20:09 IST
ಅಕ್ಷರ ಗಾತ್ರ

ಮೇಲುಕೋಟೆ: ನವೋದಯ ಸಾಹಿತ್ಯ ಪ್ರಕಾರದ ರತ್ನತ್ರಯರಲ್ಲೊಬ್ಬರಾದ ಕವಿ ಡಾ.ಪು.ತಿ.ನ ಕನ್ನಡ ನಾಡಿನ ಸಾಹಿತ್ಯಕ್ಷೇತ್ರಕ್ಕೆ ಅಚ್ಚಳಿಯ ಕೊಡುಗೆ ನೀಡಿದ್ದು, ಸರ್ಕಾರ ಕವಿಯ ಸಾಹಿತ್ಯ ಪ್ರಚಾರದ ಕಾರ್ಯಕ್ಕೆ ಅಗತ್ಯ ಸಹಕಾರ ನೀಡುತ್ತದೆ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು.

ಅವರು ಮೇಲುಕೋಟೆಯ ಪು.ತಿ.ನ ಕಲಾಮಂದಿರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅವರ 20ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮೇಲುಕೋಟೆಯ ಪ್ರಾಕೃತಿಕ ಪರಿಸರದ ಇಂಚಿಂಚು ಸಹ ಪು.ತಿ.ನ ಕಾವ್ಯಗಳಲ್ಲಿ ಸೇರಿಕೊಂಡಿದೆ. ಕನ್ನಡದ ಎಲ್ಲಾ ಪ್ರಕಾರಗಳಲ್ಲಿ ಸಾಹಿತ್ಯ ರಚಿಸಿದ್ದಾರೆ. ಅವರ ಸಾಹಿತ್ಯ ಪ್ರಕಾರಗಳ ವಿಚಾರಧಾರೆಗಳು ಇಂದಿಗೂ ಪ್ರಸ್ತುತವಾಗಿವೆ. ಮೇಲುಕೋಟೆಯಲ್ಲಿ ಅವರ ನೆನಪಿನ ಎಲ್ಲಾ ಸ್ಥಳಗಳನ್ನು ಸಂರಕ್ಷಣೆ ಮಾಡಿ ಪು.ತಿ.ನ ಕಾವ್ಯ ಮತ್ತು ಸಾಹಿತ್ಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಪ್ರಚಾರಮಾಡಲು ಸರ್ಕಾರದ ವತಿಯಿಂದ ಯೋಜನೆ ರೂಪಿಸಲಾಗುವುದು ಎಂದರು.

ಮಂಡ್ಯ ಲೋಕಸಭಾ ಉಪ ಚುನಾವಣೆಯ ನೀತಿ ಸಂಹಿತೆಯ ಇರುವ ಕಾರಣ ಯೋಜನೆಗಳ ಬಗ್ಗೆ ವಿವರ ನೀಡುವುದಿಲ್ಲ ಎಂದ ಸಚಿವರು, ಮೇಲುಕೋಟೆಯ ಕಲಾಮಂದಿರದಲ್ಲಿ ನಿರಂತರವಾಗಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕನ್ನಡ ಸಂಸ್ಕೃತಿ ಇಲಾಖೆಯ ಮೂಲಕ ನಡೆಸಲು ಶ್ರಮವಹಿಸುತ್ತೇನೆ ಎಂದು ಹೇಳಿದರು.

ಇದೇ ವೇಳೆ ಸಮಾರಂಭದ ನಂತರ ಹಿರಿಯ ವಿದ್ಯಾರ್ಥಿಗಳ ಮನವಿ ಆಲಿಸಿ, ಪು.ತಿ.ನ ವ್ಯಾಸಂಗ ಮಾಡಿದ ಶತಮಾನದ ಹಿನ್ನೆಲೆಯಿರುವ ಮೇಲುಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯ ನವೀಕರಣ ಮಾಡಿ ಸಮಗ್ರವಾಗಿ ಅಭಿವೃದ್ಧಿ ಮಾಡಲು ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಬೆಂಗಳೂರಿನ ಲಯನ್ ದೀಪಾ ಅನುಮತಿ ಪಡೆದುಕೊಂಡಿದ್ದಾರೆ. ನೀತಿ ಸಂಹಿತೆ ಕೊನೆಗೊಂಡ ಮರುದಿನವೇ ಈ ಕಾರ್ಯಕ್ಕೆ ಭೂಮಿಪೂಜೆ ನೆರವೇರಿಸಿ ಪು.ತಿ.ನ ದಹನ ಸ್ಥಳ ಕಾರ್ಯದ ಕಾಯಕಲ್ಪಕ್ಕೂ ಚಾಲನೆ ನೀಡಲಾಗುತ್ತದೆ ಎಂದು ಸಚಿವರು ತಿಳಿಸಿದರು.

ಪು.ತಿ.ನ ಟ್ರಸ್ಟ್ ಸದಸ್ಯ ಡಾ.ರಾಜಾರಾಂ ಮಾತನಾಡಿ ಪು.ತಿ.ನ ಅವರ ಗೀತಕಾವ್ಯ ಗೋಕುಲ ನಿರ್ಗಮನ 200ಕ್ಕೂ ಹೆಚ್ಚು ಪ್ರದರ್ಶನಗೊಂಡಿದೆ ಎಂದರು.

ಇದೇ ವೇಳೆ ರಂಗನಿರ್ದೇಶಕ ಟಿ.ಎಸ್.ನಾಗಾಭರಣ ಅವರನ್ನು ಸಚಿವ ಸಿ.ಎಸ್.ಪುಟ್ಟರಾಜು ಪು.ತಿ.ನ ಟ್ರಸ್ಟ್ ಪರವಾಗಿ ಕವಿಯ ವಿಗ್ರಹವನ್ನು ನೀಡಿ ಸನ್ಮಾನಿಸಿದರು. ಸಮಾರಂಭದಲ್ಲಿ ಟ್ರಸ್ಟ್ ಸದಸ್ಯ ಬಾಲಕೃಷ್ಣ ಕಾರ್ಯದರ್ಶಿ ರವೀಶ್, ವ್ಯವಸ್ಥಾಪಕ ಸಂಜಯ್ ಮೇಲುಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್ ನಾರಾಯಣ ಭಟ್ಟರ್ ಇದ್ದರು.

ಡಾ.ಬಿ.ವಿ ಕಾರಂತ ಸಂಗೀತ ಸಂಯೋಜನೆಯಲ್ಲಿ ಟಿ.ಎಸ್.ನಾಗಾಭರಣ ನಿರ್ದೇಶನದಲ್ಲಿ ಬೆಂಗಳೂರಿನ ಬೆನಕ ತಂಡ ಪು.ತಿ.ನ ರಚಿಸಿದ ಗೋಕುಲ ನಿರ್ಗಮನ ನಾಟಕವನ್ನು ಕನ್ನಡ ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಪ್ರಸ್ತುತಪಡಿಸಿ ಜನಮನ ಸೆಳೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT