ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಕ್ರೀಡೆಯಾದ ತೆಂಗಿನಮರ ಹತ್ತುವ ಕೌಶಲ!

ಲೋಕಸರ ಗ್ರಾಮದ ಕಲ್ಪವೃಕ್ಷ ಯುವಕರ ಸಂಘಟನೆ ಸದಸ್ಯರ ಸಾಧನೆ, ವಿವಿಧ ಜಿಲ್ಲೆಗಳಲ್ಲಿ ಪ್ರಸಿದ್ಧಿ
Last Updated 1 ಸೆಪ್ಟೆಂಬರ್ 2018, 11:36 IST
ಅಕ್ಷರ ಗಾತ್ರ

ಮಂಡ್ಯ: ಹೊಟ್ಟೆಪಾಡಿಗಾಗಿ ತೆಂಗಿನಮರ ಹತ್ತುವ ಕೌಶಲ ರೂಡಿಸಿಕೊಂಡ ಯುವಕರ ಗುಂಪೊಂದು ಶ್ರಮದಾನ ಹಾಗೂ ಸಾಮಾಜಿಕ ಕೆಲಸಗಳ ಮೂಲಕ ಗಮನ ಸೆಳೆದಿದೆ. ಮರ ಹತ್ತುವ ಸಾಹಸಕ್ಕೆ ಗ್ರಾಮೀಣ ಕ್ರೀಡಾ ರೂಪ ಕೊಟ್ಟಿರುವ ಈ ಯುವಜನರು ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನವನ್ನೂ ಗಳಿಸಿದ್ದಾರೆ.

ತಾಲ್ಲೂಕಿನ ಲೋಕಸರ ಗ್ರಾಮದ ‘ಕಲ್ಪ‍ವೃಕ್ಷ ಯುವಕರ ಸಂಘ’ದ 20 ಯುವಜನರು ತೆಂಗಿನಮರ ಹತ್ತಿ ಕಾಯಿ, ಎಳನೀರು ಕೀಳುವುದರಲ್ಲಿ ಮಂಡ್ಯ, ಮೈಸೂರು, ಚಾಮರಾಜನಗರ, ರಾಮನಗರ ಜಿಲ್ಲೆಗಳಲ್ಲಿ ಅಪಾರ ಪ್ರಸಿದ್ಧಿ ಪಡೆದಿದ್ದಾರೆ. ವಿಶೇಷ ಉಪಕರಣದ ಸಹಾಯದಿಂದ ಮರ ಹತ್ತುವ ಇವರು ಗಂಟೆಗೆ 50ಕ್ಕೂ ಹೆಚ್ಚು ಮರ ಹತ್ತಿ ಕಾಯಿ ಕೀಳುತ್ತಾರೆ. ತೆಂಗು ಬೆಳೆಯುವ ಜಿಲ್ಲೆಗಳಲ್ಲಿ ಇವರಿಗೆ ಅಪಾರ ಬೇಡಿಕೆ ಇದ್ದು ತಿಂಗಳ ಬಹುತೇಕ ಎಲ್ಲಾ ದಿನ ಕೆಲಸದಲ್ಲಿ ತೊಡಗಿರುತ್ತಾರೆ.

ಸಂಘದ ಯುವಕರು ತೆಂಗಿನಮರ ಹತ್ತುವ ಕೆಲಸಕ್ಕೆ ಕ್ರೀಡಾ ರೂಪ ಕೊಟ್ಟಿದ್ದಾರೆ. ಕೇರಳದಲ್ಲಿ ನಡೆದ ರಾಜ್ಯಮಟ್ಟದ ತೆಂಗಿನಮರ ಹತ್ತುವ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಗಳಿಸಿ ಗಮನ ಸೆಳೆದಿದ್ದಾರೆ. ವೈಯಕ್ತಿಕ ವಿಭಾಗದಲ್ಲಿ ಸದಸ್ಯ ಸುರೇಶ್‌ ಪ್ರಥಮ ಬಹುಮಾನ ಗಳಿಸಿದ್ದಾರೆ. ಇಷ್ಟೇ ಅಲ್ಲದೆ ಈ ತಂಡದಲ್ಲಿ ತಮಟೆ ನುಡಿಸುವ, ಪೂಜಾ ಕುಣಿತ, ಕೋಲಾಟದ ಕಲಾವಿದರಿದ್ದಾರೆ. ರುಚಿಕರ ಅಡುಗೆ ತಯಾರಿಸುವ ಬಾಣಸಿಗರಿದ್ದಾರೆ. ಹೈನುಗಾರಿಕೆ, ಆಡು–ಕುರಿ ಸಾಕಣೆ ಮಾಡುವವರಿದ್ದಾರೆ. ಗ್ರಾಮದಲ್ಲಿ ನಡೆಯುವ ಹಬ್ಬ ಹರಿದಿನಗಳು, ಶುಭ–ಅಶುಭ ಕಾರ್ಯಕ್ರಮಗಳಲ್ಲಿ ಮುಂದೆ ನಿಂತು ಕೆಲಸ ಮಾಡುವ ಈ ಯುವಕರು ಗ್ರಾಮದಲ್ಲಿ ಸಂಘಟನಾ ಮನೋಭಾವ ಸೃಷ್ಟಿಸಿದ್ದಾರೆ.

ಕಾಂತರಾಜು ಕೋಚ್‌: ಕಲ್ಪವೃಕ್ಷ ಯುವಕರ ಸಂಘದ ಗೌರವಾಧ್ಯಕ್ಷರಾಗಿರುವ ಜಿ.ಕಾಂತರಾಜು ಮರಹತ್ತುವ ಯುವಕರ ಕೋಚ್‌. 2001ರಲ್ಲಿ ತೆಂಗು ಅಭಿವೃದ್ಧಿ ಮಂಡಳಿಯಿಂದ ಮರಹತ್ತುವ ತರಬೇತಿ ಪಡೆದ ಕಾಂತರಾಜ್‌, ನಂತರ ತಮ್ಮದೇ ತಂಡ ಕಟ್ಟಿದರು. ತಂಡದ ಸದಸ್ಯರಿಗೆ ತಾವೇ ತರಬೇತಿ ನೀಡಿದರು. ಮರ ಹತ್ತುವ ಕಾಯಕ ಪ್ರಸಿದ್ಧಿ ಪಡೆದಂತೆಲ್ಲಾ ಕಲ್ಪವೃಕ್ಷ ಯುವಕರ ಸಂಘ ಸ್ಥಾಪಿಸಿದರು. ಆರಂಭದಲ್ಲಿ ಜೀವನೋಪಾಯವಾಗಿದ್ದ ಕೆಲಸ ನಂತರ ಯುವ ಸಂಘಟನೆ, ಸೇವೆ, ಶ್ರಮದಾನ, ಕ್ರೀಡೆ, ಕಲೆಯ ರೂಪ ಪಡೆಯಿತು.

ಮಾನ್ಯತೆ ಪಡೆದ ಸಂಸ್ಥೆ ತಯಾರಿಸುವ ಯಂತ್ರದ ಸಹಾಯದಿಂದ ಈ ಯುವಜನರು ತೆಂಗಿನ ಮರ ಹತ್ತುತ್ತಾರೆ. ಖಾಸಗಿಯಾಗಿ ಈ ಯಂತ್ರಗಳ ತಯಾರಿಕೆ– ಮಾರಾಟ ಇಲ್ಲ. ತೋಟಗಾರಿಕೆ ಇಲಾಖೆಯಿಂದ ಈ ಯಂತ್ರ ಖರೀದಿಗೆ ಸಹಾಯಧನ ದೊರೆಯುತ್ತದೆ. ಅಲ್ಲದೆ ಈ ಯಂತ್ರದಿಂದ ಮರ ಹತ್ತುವವರ ಜೀವ ವಿಮೆಗೆ ಒಳಪಟ್ಟಿರುತ್ತದೆ. ಮರ ಹತ್ತುವ ಕಾಯಕವನ್ನೇ ವೃತ್ತಿ ಮಾಡಿಕೊಂಡಿರುವ ಕಲ್ಪವೃಕ್ಷ ಯುವಕ ಸಂಘದ ಸದಸ್ಯರು ಹೊಸ ಬದುಕು ಕಂಡಿದ್ದಾರೆ.

‘ನಮ್ಮ ಸಂಘದ ವತಿಯಿಂದ ಗ್ರಾಮ ಸ್ವಚ್ಛತೆ, ಗಣ್ಯರ ಜಯಂತಿ, ವೈದ್ಯಕೀಯ ತಪಾಸಣೆ ಮುಂತಾದ ಕಾರ್ಯಕ್ರಮ ಆಯೋಜನೆ ಮಾಡುತ್ತೇವೆ. ಹೊಲಿಗೆ ತರಬೇತಿ ಕೊಡಿಸುತ್ತೇವೆ. ಹಣ ಉಳಿತಾಯ ಮಾಡಿಸದಸ್ಯರ ಕಷ್ಟ ಕಾಲದಲ್ಲಿ ಸಹಾಯಾಸ್ತ ಚಾಚುತ್ತೇವೆ. ಮಂಗಲ ಗ್ರಾಮದ ನೆಲದನಿ ಬಳಗ ಜೊತೆ ತೆಂಗಿನಮರ ಹತ್ತುವ ಸ್ಪರ್ಧೆ, ಕೆಸರುಗದ್ದೆ ಓಟ, ಹಗ್ಗ ಜಗ್ಗಾಟ ಸ್ಪರ್ಧೆ ಆಯೋಜನೆ ಮಾಡುತ್ತೇವೆ. ನಮ್ಮ ಸಂಘಕ್ಕೆ ನೆಲದನಿ ಬಳಗದ ಅಧ್ಯಕ್ಷ ಎಂ.ಸಿ.ಲಂಕೇಶ್ ಬೆನ್ನೆಲುಬಾಗಿ ನಿಂತಿದ್ದಾರೆ’ ಎಂದು ಕಲ್ಪವೃಕ್ಷ ಯುವಕರ ಸಂಘದ ಅಧ್ಯಕ್ಷ ಮಹಾದೇವಸ್ವಾಮಿ ಹೇಳಿದರು.

ಸಂಘದ ಹಲವು ಸದಸ್ಯರು ಉದ್ಯೋಗ ಅರಸಿ ಬೆಂಗಳೂರಿಗೆ ತೆರಳಿದ್ದರು. ಆದರೆ ಸಂಘದ ಸದಸ್ಯರ ಸಾಧನೆ ಕಂಡು ಹಲವರು ಪಾಪಸ್‌ ಬಂದಿದ್ದಾರೆ. ‘ನಾನು ಬೆಂಗಳೂರಿನಲ್ಲಿ ಕ್ಯಾಂಟರ್‌ ಚಾಲಕನಾಗಿದ್ದೆ. ಆದರೆ ಸಂಘದ ಸದಸ್ಯರ ಪ್ರೇರಣೆಯಿಂದ ವಾಪಸ್‌ ಬಂದಿದ್ದೇನೆ. ಬೆಂಗಳೂರಿನಲ್ಲಿ ದುಡಿಯುತ್ತಿದ್ದ ಹಣವನ್ನು ಇಲ್ಲೇ ದುಡಿಯುತ್ತಿದ್ದೇನೆ’ ಎಂದು ಸದಸ್ಯ ಎಲ್‌.ಎಸ್‌.ಕುಮಾರ್‌ ಹೇಳಿದರು.

******

ಕಲ್ಪವೃಕ್ಷ ಯುವಕರ ಸಂಘದ ವತಿಯಿಂದ ಲೋಕಸರ ಗ್ರಾಮವನ್ನು ಮದ್ಯಪಾನ ಮುಕ್ತ ಗ್ರಾಮವನ್ನಾಗಿ ಮಾಡಲು ಪಣ ತೊಟ್ಟಿದ್ದೇವೆ. ತೆಂಗಿನಮರ ಹತ್ತುವುದು ಜೀವನೋಪಾಯದ ಜೊತೆಗೆ ಸೇವಾ ಕಾರ್ಯವೂ ಆಗಿದೆ.
–ಜಿ.ಕಾಂತರಾಜು, ಗೌರವಾಧ್ಯಕ್ಷ, ತರಬೇತುದಾರರು

*****

ನಾಳೆವಿಶ್ವ ತೆಂಗು ದಿನಾಚರಣೆ

ಕಲ್ಪವೃಕ್ಷ ಯುವಕರ ಸಂಘದ ವತಿಯಿಂದ ಲೋಕಸರ ಗ್ರಾಮದ ಜೈಭೀಮ್‌ ರಂಗಮಂಟಪದಲ್ಲಿ ಭಾನುವಾರ ಬೆಳಿಗ್ಗೆ 10.30ಕ್ಕೆ ವಿಶ್ವ ತೆಂಗು ದಿನಾಚರಣೆ ನಡೆಯಲಿದೆ.

ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಕಾರ್ಯಕ್ರಮ ಉದ್ಘಾಟಿಸುವರು. ಸಂಘದ ಅಧ್ಯಕ್ಷ ಮಹಾದೇವಸ್ವಾಮಿ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ತೆಂಗು ಅಭಿವೃದ್ಧಿ ಮಂಡಳಿ ಪ್ರಾದೇಶಿಕ ಕಚೇರಿ ನಿರ್ದೇಶಕ ಹೇಮಚಂದ್ರ, ಡಿಎಸ್‌ಪಿ ಫಾರಂ ಸಹಾಯದ ನಿರ್ದೇಶಕ ಚಿನ್ನರಾಜು, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಎಂ.ಸಿ.ಪುಷ್ಪಲತಾ, ಮಂಗಲ ಗ್ರಾ.ಪಂ. ಅಧ್ಯಕ್ಷ ಎಂ.ಜೆ.ಗಿರೀಶ್‌, ನೆಲದನಿ ಬಳಗದ ಅಧ್ಯಕ್ಷ ಎಂ.ಸಿ.ಲಂಕೇಶ್‌ ಭಾಗವಹಿಸುವರು.

‘ತಾಯಿಯ ಎದೆ ಹಾಲಿನ ನಂತರ ಎಳನೀರು ಅತ್ಯಂತ್ರ ಶ್ರೇಷ್ಠವಾದುದು. ಈ ಹಿನ್ನೆಲೆಯಿಂದ ತೆಂಗು ಬೆಳೆ ಅಭಿವೃದ್ಧಿಗಾಗಿ ಏಷಿಯನ್‌–ಪೆಸಿಫಿಕ್‌ ಕಮ್ಯುನಿಟಿ ಸಂಘಟನೆ ವಿಶ್ವ ತೆಂಗು ದಿನ ಆಚರಣೆಯನ್ನು ಆರಂಭಿಸಿತು. ಭಾರತ ಕೂಡ ಈ ಸಂಘಟನೆಯ ಸಂಸ್ಥಾಪಕ ಸದಸ್ಯತ್ವ ಹೊಂದಿದೆ’ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಡಾ.ಪಿ.ರಾಜು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT