ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 20 ಕೋಟಿ ಮೌಲ್ಯದ ಚಿನ್ನ ಸಂಗ್ರಹಿಸಿ ಮೋಸ

ತಿಂಗಳಿಗೆ ಶೇ 40 ಬಡ್ಡಿ ಕೊಡುವುದಾಗಿ ನಂಬಿಸಿದ್ದ; ಮಂಗಳಮುಖಿ ದೂರಿನಿಂದ ಬೆಳೆಕಿಗೆ ಬಂದ ಪ್ರಕರಣ
Last Updated 14 ಅಕ್ಟೋಬರ್ 2020, 21:19 IST
ಅಕ್ಷರ ಗಾತ್ರ

ಮಂಡ್ಯ: ವಾರಕ್ಕೆ ಶೇ 10ರಷ್ಟು (ತಿಂಗಳಿಗೆ ಶೇ 40) ಬಡ್ಡಿ ಕೊಡುವುದಾಗಿ ನಂಬಿಸಿ, ಮಹಿಳೆಯರಿಂದ ₹ 20 ಕೋಟಿಗೂ ಹೆಚ್ಚು ಮೌಲ್ಯದ ಚಿನ್ನ ಸಂಗ್ರಹಿಸಿ ಮೋಸ ಮಾಡಿದ್ದಯುವಕನೊಬ್ಬ ಪೊಲೀಸರ ಅತಿಥಿಯಾಗಿದ್ದಾನೆ.

ಗುತ್ತಲು ಬಡಾವಣೆಯ ಸೋಮಶೇಖರ್‌ ಬಂಧಿತ ಆರೋಪಿ. ನಗರದ ಆರ್‌.ಪಿ ರಸ್ತೆಯಲ್ಲಿರುವ ಫೆಡ್‌ ಬ್ಯಾಂಕ್‌ ಎಕ್ಸಿಕ್ಯುಟಿವ್‌ ಆಗಿ ಕೆಲಸ ಮಾಡುತ್ತಿದ್ದ ಈತ ಮಹಿಳೆಯರನ್ನು ಪರಿಚಯ ಮಾಡಿಕೊಂಡಿದ್ದ. ಚಿನ್ನವನ್ನು ಮನೆಯಲ್ಲಿ ಇಟ್ಟುಕೊಳ್ಳುವ ಬದಲು ತಮ್ಮ ಬ್ಯಾಂಕ್‌ನಲ್ಲಿ ಇಟ್ಟರೆ ತಿಂಗಳಿಗೆ ಶೇ 40ರಷ್ಟು ಬಡ್ಡಿ ಕೊಡುವುದಾಗಿ ನಂಬಿಸಿದ್ದ. ನೂರು ಗ್ರಾಂ ಚಿನ್ನಇಟ್ಟರೆ ತಿಂಗಳಿಗೆ ₹ 2 ಲಕ್ಷ ಕೊಡುವುದಾಗಿ ತಿಳಿಸಿದ್ದ.

ಇದನ್ನು ನಂಬಿದ ಮಹಿಳೆಯರು ಯಾವ ದಾಖಲಾತಿಯನ್ನೂ ಪಡೆಯದೇ ಕೆ.ಜಿ ಗಟ್ಟಲೆ ಚಿನ್ನ ಇಟ್ಟಿದ್ದಾರೆ. ಮಹಿಳೆಯರು, ತಮ್ಮ ನೆಂಟರಿಷ್ಟರು, ಸ್ನೇಹಿತರಿಂದಲೂ ಚಿನ್ನ ಇಡಿಸಿದ್ದಾರೆ. ಕೆಲ ಮಹಿಳೆಯರು ಏಜೆಂಟರ ರೀತಿಯಲ್ಲಿ ಕೆಲಸ ಮಾಡಿದ್ದು, ಅವರಿಗೆ ಕಮೀಷನ್‌ ಕೊಡುತ್ತಿದ್ದ. ಒಂದೆರಡು ತಿಂಗಳು ಆತ ಹೇಳಿದಷ್ಟೇ ಹಣ ಕೊಟ್ಟಿದ್ದ. ಅವನು ಕೆಲಸ ಮಾಡುತ್ತಿದ್ದ ಬ್ಯಾಂಕ್‌ನಲ್ಲಿ ಚಿನ್ನ ಇಟ್ಟಿರುವುದಾಗಿ ತಿಳಿಸಿದ್ದ. ಆದರೆ ದಿನ ಕಳೆದಂತೆ ಆತ ಪರಾರಿಯಾಗಿದ್ದ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಮಂಗಳಮುಖಿ ದೂರು: ಸೋಮಶೇಖರ್‌ ಮೋಸ ಮಾಡಿರುವ ಕುರಿತು ವಾರದ ಹಿಂದೆ ಸೋನಿಯಾ ಎಂಬ ಮಂಗಳಮುಖಿಯೊಬ್ಬರು ಪಶ್ಚಿಮ ಠಾಣೆಗೆ ದೂರು ಸಲ್ಲಿಸಿದ್ದರು. ಮಹಾರಾಷ್ಟ್ರದ ‘ತಮಾಷಾ’ ಎಂಬ ನೃತ್ಯ ಪ್ರದರ್ಶನದಲ್ಲಿ ಪಾಲ್ಗೊಳ್ಳುತ್ತಿದ್ದ ಸಂದರ್ಭದಲ್ಲಿ ಪ್ರೇಕ್ಷಕರು ನರ್ತಕಿಯರ ಮೈಮೇಲೆ ಚಿನ್ನ ಎಸೆಯುತ್ತಿದ್ದರು. ಅದನ್ನೆಲ್ಲಾ ಸಂಗ್ರಹಿಸಿ ₹ 1 ಕೆ.ಜಿಯಷ್ಟು ಚಿನ್ನವನ್ನು ಸೋಮಶೇಖರ್‌ ಬಳಿ ಇಟ್ಟಿರುವುದಾಗಿ ಸೋನಿಯಾ ದೂರಿನಲ್ಲಿ ತಿಳಿಸಿದ್ದಾರೆ. ಇದಾದ ನಂತರ, ಮೋಸ ಹೋದ ಹಲವು ಮಹಿಳೆಯರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯಲ್ಲಿ ದೂರು ಸಲ್ಲಿಸಿದ್ದಾರೆ.

‘ಬ್ಯಾಂಕ್‌ ಹೆಸರು ಹೇಳುತ್ತಿದ್ದ ಕಾರಣ ಅವನನ್ನು ನಂಬಿ ನಾನು ಮೋಸ ಹೋದೆ. ನಾನು 500 ಗ್ರಾಂ ಚಿನ್ನವನ್ನು ಆತನಿಗೆ ಕೊಟ್ಟಿದ್ದೇನೆ. ನನ್ನ ತಂಗಿ 400 ಗ್ರಾಂ ಇಟ್ಟಿದ್ದಾರೆ. ನಮ್ಮ ಸ್ನೇಹಿತರಿಂದಲೂ ಚಿನ್ನ ಪಡೆದು ಆತನ ಬಳಿ ಇಟ್ಟಿದ್ದೆವು. ಮೋಸ ಮಾಡಿರುವ ಬಗ್ಗೆ ಎಸ್‌ಪಿ ಕಚೇರಿಗೆ ದೂರು ನೀಡಿದ್ದೇವೆ’ ಎಂದು ಮೋಸ ಹೋಗಿರುವ ಸುಗುಣಾ ತಿಳಿಸಿದರು. ಆರೋಪಿಯನ್ನು ಕೋರ್ಟ್‌ನಲ್ಲಿ ಹಾಜರುಪಡಿಸಿ ಪೊಲೀಸರು 7 ದಿನಗಳವರೆಗೆ ವಶಕ್ಕೆ ಪಡೆದಿದ್ದಾರೆ.

‘ಮಂಡ್ಯದ ಹಲವು ಖಾಸಗಿ ಹಣಕಾಸು ಸಂಸ್ಥೆಗಳಲ್ಲಿ ಕೆಲಸ ಮಾಡಿರುವ ಆತ, ಮಹಿಳೆಯರನ್ನೇ ಗುರಿಯಾಗಿಸಿಕೊಂಡಿದ್ದ. ಚಿನ್ನ ಮಾತ್ರವಲ್ಲದೇ ಕೋಟ್ಯಂತರ ರೂಪಾಯಿ ಹಣವನ್ನೂ ಪಡೆದು ಮೋಸ ಮಾಡಿದ್ದು, ಮೋಜು–ಮಸ್ತಿಗಾಗಿ ಈ ಕೆಲಸ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಮೋಸ ಹೋದ ಮಹಿಳೆಯರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗುತ್ತಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಪರಶುರಾಮ್‌ ತಿಳಿಸಿದರು.

‘ಸೋಮಶೇಖರ್‌ ಅಕ್ರಮದ ಬಗ್ಗೆ ತಿಳಿದ ನಂತರ ಆತನನ್ನು ಕೆಲಸದಿಂದ ವಜಾ ಮಾಡಲಾಗಿದೆ’ ಎಂದು ಫೆಡ್‌ ಬ್ಯಾಂಕ್‌ ಸಿಬ್ಬಂದಿ ತಿಳಿಸಿದರು.

ಆತ ಕೆಲವು ಅಂಗಡಿಗಳಲ್ಲಿ ಚಿನ್ನವನ್ನು ಗಿರವಿ ಇಟ್ಟಿದ್ದು, ಅವರನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT