ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವ ದಸರಾದಲ್ಲಿ ಯುವ ಮನಸ್ಸುಗಳ ಕಲರವ

ನವೀನ್‌ ಸಜ್ಜು ಹಾಡಿನ ಮೋಡಿ: ಯಕ್ಷಗಾನ, ಜಾನಪದ ನೃತ್ಯದ ಝಲಕ
Last Updated 30 ಸೆಪ್ಟೆಂಬರ್ 2019, 13:00 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಪಟ್ಟಣದ ಪರಿವರ್ತನಾ ಶಾಲೆಯಲ್ಲಿ ಸೋಮವಾರ ನಡೆದ ಯುವ ದಸರಾದಲ್ಲಿ ಯುವ ಜನರು ಸಂಭ್ರಮಿಸಿದರು.

ಹಿನ್ನೆಲೆ ಗಾಯಕ ನವೀನ್‌ ಸಜ್ಜು ಅವರ ಕಂಠದಿಂದ ಹೊಮ್ಮಿದ ‘ಎದೆಯೊಳಗಿನ ತಮ ತಮ ತಮಟೆ....’, ‘ಎಣ್ಣೆ ನಮ್ದು ಊಟ ನಿಮ್ದು....’, ‘ಒಳಿತು ಮಾಡು ಮನುಸಾ ನೀ ಇರೋದು ಮೂರು ದಿವಸ....’ ಇತರ ಹಾಡುಗಳ ಮೂಲಕ ರಂಜಿಸಿದರು. ಸಜ್ಜು ಅವರ ಹಾಡಿಗೆ ನೆರೆದಿದ್ದವರು ದನಿಗೂಡಿಸಿದರು. ವೇದಿಕೆಯಲ್ಲಿದ್ದ ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್‌, ಎಸ್ಪಿ ಪರಶುರಾಂ, ಎಸಿ ಶೈಲಜಾ, ಡಾ.ಎಂ. ಪುಟ್ಟೇಗೌಡ, ಶಾಲೆಯ ಡೀನ್‌ ಚೇತನ್‌ರಾಂ ಇತರರು ಕೂಡ ನಗೆ ಸೂಸಿದರು.

ಅಂತರರಾಷ್ಟ್ರೀಯ ಪ್ಯಾರಾಲಿಂಪಿಕ್‌ ಕ್ರೀಡಾಪಟು ರಾಘವೇಂದ್ರ ಅಭಿನಂದನೆ ಸ್ವೀಕರಿಸಿ ಮಾತನಾಡಿ, ‘ಸಿನಿಮಾ ನಟರಿಗೆ ಸುಲಭವಾಗಿ ವೇದಿಕೆ ಸಿಗುತ್ತವೆ. ಅದನ್ನು ಹೊರತುಪಡಿಸಿದರೆ ಕ್ರೀಡಾಪಟು ಇಲ್ಲವೆ ಅಧಿಕಾರಿಯಾಗಬೇಕು. ದೊಡ್ಡ ಕನಸು ಕಾಣಬೇಕು. ದೇಶಭಕ್ತಿ ಬೆಳೆಸಿಕೊಳ್ಳಬೇಕು. ಇತರರಿಗಾಗಿ ಬದುಕುವುದನ್ನು ಕಲಿಯಬೇಕು’ ಎಂದು ಕಿವಿಮಾತು ಹೇಳಿದರು.

ಯುವ ದಸರಾ ಉದ್ಘಾಟಿಸಿದ ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್‌, ‘ನಮ್ಮ ಸಂಸ್ಕೃತಿಯನ್ನು ಅನ್ಯ ಸಂಸ್ಕೃತಿ ಆವರಿಸಿಕೊಳ್ಳುತ್ತಿದೆ. ಈ ಸಂಸ್ಕೃತಿ ಮುಂದಿನ ಪೀಳಿಗೆಗೂ ಉಳಿಯಬೇಕು. ಭಾರತೀಯ ಸಂಸ್ಕೃತಿ ಮತ್ತು ಕನ್ನಡ ಸಂಸ್ಕೃತಿಗೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಅದರ ಸವಿಯನ್ನು ಸವಿಯಬೇಕು. 21ನೇ ಶತಮಾನದಲ್ಲಿ ಸಾಮಾಜಿಕ ಜಾಲತಾಣಗಳಿಂದ ಯುವ ಜನರು ಖಿನ್ನತೆಗೆ ಒಳಗಾಗುತ್ತಿದ್ದು, ಆ ಚಟದಿಂದ ಹೊರ ಬರಬೇಕು’ ಎಂದರು.

ಪಟ್ಟಣ ಮಾತ್ರವಲ್ಲದೆ ತಾಲ್ಲೂಕಿನ 12 ಕಾಲೇಜುಗಳ ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಪ್ರದರ್ಶಿಸಿದರು. ನಗವನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಬೀಸು ಕಂಸಾಳೆ, ಸಂಗೊಳ್ಳಿ ರಾಯಣ್ಣನ, ಪರಿವರ್ತನಾ ಸಂಸ್ಥೆಯ ವಿದ್ಯಾರ್ಥಿಗಳ ಡೊಳ್ಳು ಕುಣಿತ, ಜಾನಪದ ಕುಣಿತ, ಕೆಆರ್‌ಎಸ್‌ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಜಾನಪದ ನೃತ್ಯ ಗಮನ ಸೆಳೆದವು. ಎಂಆರ್‌ಐಟಿ ಕಾಲೇಜಿನ ಏಕವ್ಯಕ್ತಿ ನೃತ್ಯದಲ್ಲಿ ಯಕ್ಷಗಾನ ಇತರ ಚಟುವಟಿಕೆಗಳು ಗಮನ ಸೆಳೆದವು.

ಗಮನ ಸೆಳೆದ ವೇದಿಕೆ: ಯುವ ದಸರಾ ವೇದಿಕೆಯನ್ನು ಆಕರ್ಷಕವಾಗಿ ರೂಪಿಸಲಾಗಿತ್ತು. ವೇದಿಕೆ ಬಲ ಬಾಗದಲ್ಲಿ ಅಂಬಾರಿಯ ಪ್ರತಿಕೃತಿ ರೂಪಿಸಲಾಗಿತ್ತು. ವೇದಿಕೆ ಹಿನ್ನೆಲೆಯಲ್ಲಿ ಮೈಸೂರು ಅರಮನೆಯ ಚಿತ್ರಣ, ಮುಂದೆ ಕುದುರೆಗಳ ಸಾಲು ಇದ್ದವು. ಪರಿವರ್ತನ ಶಾಲೆಯ ಅಧ್ಯಕ್ಷ ಡಾ.ಎಂ. ಪುಟ್ಟೇಗೌಡ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪರಶುರಾಂ, ಉಪ ವಿಭಾಗಾಧಿಕಾರಿ ಶೈಲಜಾ, ತಹಶೀಲ್ದಾರ್‌ ಡಿ. ನಾಗೇಶ್‌ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT