ಭಾನುವಾರ, ಏಪ್ರಿಲ್ 2, 2023
33 °C
ದನದ ಕೊಟ್ಟಿಗೆಯಂತಾದ ಅಂಬೇಡ್ಕರ್‌ ಭವನಗಳು: ಅಧಿಕಾರಿ ವರ್ಗ, ಜನಪ್ರತಿನಿಧಿಗಳ ನಿರ್ಲಕ್ಷ್ಯ ಆರೋಪ

ಮಂಡ್ಯ: ನನೆಗುದಿಗೆ ಬಿದ್ದ ಸಮುದಾಯ ಭವನ ಕಾಮಗಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಜಿಲ್ಲೆಯಾದ್ಯಂತ ವಿವಿಧ ಯೋಜನೆಗಳಲ್ಲಿ ಆರಂಭಗೊಂಡಿದ್ದ ಸಮುದಾಯ ಭವನಗಳ ನಿರ್ಮಾಣ ಕಾಮಗಾರಿ ನನೆಗುದಿಗೆ ಬಿದ್ದಿವೆ. ಸರ್ಕಾರ ಸೂಕ್ತ ಸಮಯದಲ್ಲಿ ಹಣ ಬಿಡುಗಡೆ ಮಾಡದ ಪರಿಣಾಮ ಅರ್ಧಕ್ಕೆ ನಿಂತಿರುವ ಕಾಮಗಾರಿಗಳು ದನದ ಕೊಟ್ಟಿಗೆಯಂತೆ ಬಳಕೆಯಾಗುತ್ತಿವೆ.

ದಶಕದ ಹಿಂದೆ ಆರಂಭಗೊಂಡಿದ್ದ ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿಲ್ಲ. ಬಹಳಷ್ಟು ಭವನಗಳು ಅಡಿಪಾಯ ಹಂತದಲ್ಲೇ ನಿಂತಿದ್ದು ಮೇಲೆದ್ದಿಲ್ಲ. ಕೆಲ ಭವನಗಳ ಕಾಮಗಾರಿ ಶೇ 90ರಷ್ಟು ಪೂರ್ಣಗೊಂಡಿದ್ದರೂ ಅಂತಿಮ ಹಂತದ ಕೆಲಸ ಮಾಡಿ ಅವುಗಳನ್ನು ಉದ್ಘಾಟನೆ ಮಾಡಿಲ್ಲ. ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಆರಂಭಗೊಂಡಿದ್ದ ಬಹುತೇಕ ಸಮುದಾಯ ಭವನಗಳ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ನೂರಾರು ಕೋಟಿ ಹಣ ಪೋಲಾಗಿದೆ.

ಬಹುತೇಕ ಸಮುದಾಯ ಭವನಗಳ ಕಾಮಗಾರಿ ಅನುದಾನ ಕೊರತೆಯಿಂದ ಸ್ಥಗಿತಗೊಂಡಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭವನಕ್ಕೆ ಸರ್ಕಾರ ₹ 12 ಲಕ್ಷ ನಿಗದಿ ಮಾಡಿದೆ. ಅದರಲ್ಲಿ ಮೊದಲ ಹಂತದಲ್ಲಿ ₹ 6 ಲಕ್ಷ ಬಿಡುಗಡೆ ಮಾಡುತ್ತದೆ. ಉಳಿದ ₹ 6 ಲಕ್ಷ ಹಣವನ್ನು ಸಕಾಲದಲ್ಲಿ ಬಿಡುಗಡೆ ಮಾಡದ ಕಾರಣ ಕಟ್ಟಡ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ.

ತಾಲ್ಲೂಕು ಮಟ್ಟದ ಅಂಬೇಡ್ಕರ್‌ ಭವನಕ್ಕೆ ಸರ್ಕಾರ ₹ 50 ಲಕ್ಷ ನಿಗದಿ ಮಾಡಿದೆ. ಇಲ್ಲೂ ನಿಗದಿತ ಅವಧಿಯೊಳಗೆ ಹಣ ಬಿಡುಗಡೆಯಾಗಿಲ್ಲ. ಐದಾರು ವರ್ಷಗಳವರೆಗೆ ಕಾಮಗಾರಿ ನಡೆದ ಹಲವು ಉದಾಹರಣೆಗಳಿವೆ. ಜಿಲ್ಲಾ ಕೇಂದ್ರದ ಅಂಬೇಡ್ಕರ್‌ ಭವನ ನಿರ್ಮಾಣಕ್ಕೆ ₹ 15 ಕೋಟಿವರೆಗೂ ಸರ್ಕಾರ ಹಣ ನೀಡುತ್ತದೆ. ಆದರೆ ಸಕಾಲದಲ್ಲಿ ಹಂತಹಂತವಾಗಿ ಹಣ ಬಿಡುಗಡೆ ಮಾಡದಿರುವುದೇ ಕಾಮಗಾರಿ ಸ್ಥಗಿತಗೊಳ್ಳಲು ಕಾರಣವಾಗಿದೆ.

ಮಳವಳ್ಳಿ ತಾಲ್ಲೂಕಿನ ಶೀರಮಹಳ್ಳಿ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿ ಕಳೆದ ಎರಡು ವರ್ಷಗಳಿಂದ ಸ್ಥಗಿತಗೊಂಡಿದೆ. ಸ್ಥಳೀಯ ಶಾಸಕರ ಅನುದಾನದಲ್ಲಿ ₹ 10 ಲಕ್ಷ ವೆಚ್ಚದಲ್ಲಿ ಆರಂಭವಾಗಿದ್ದ ಕಾಮಗಾರಿ ಅನದಾನವಿಲ್ಲದೆ ನಿಂತಿದೆ. ಅಲ್ಲದೇ, ನೆಲಮಾಕನಹಳ್ಳಿ ಹಾಗೂ ತಳಗವಾದಿ ಗ್ರಾಮಗಳಲ್ಲಿ ನಿರ್ಮಾಣವಾಗುತ್ತಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನಗಳು ಕಾಮಗಾರಿ ಮಂದಗತಿಯಲ್ಲಿ ಸಾಗಿದೆ.

ಹಲಗೂರು ಪಟ್ಟಣದ ಚನ್ನಪಟ್ಟಣ ರಸ್ತೆಯ ಸಂತೆ ಮೈದಾನದ ಬಳಿ ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣ ಹಂತದಲ್ಲಿದ್ದು, ಕಳೆದ ಎರಡು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಹಲಗೂರು ಮತ್ತು ಕಸಬಾ ಹೋಬಳಿಯ ಸಾವಿರಾರು ಸಾರ್ವಜನಿಕರ ಹೋರಾಟದ ಪ್ರತಿಫಲವಾಗಿ ಸಮುದಾಯ ಭವನ ನಿರ್ಮಾಣಕ್ಕೆ 6 ಗುಂಟೆ ಜಾಗವನ್ನು ಜಿಲ್ಲಾಡಳಿತ ಮಂಜೂರು ಮಾಡಿದೆ.

ಸ್ಥಳ ನಿಗದಿಯಾದ ನಂತರ ಅಂದಿನ ಶಾಸಕರಾಗಿದ್ದ  ಪಿ.ಎಂ.ನರೇಂದ್ರ ಸ್ವಾಮಿ ಅವರು ₹50 ಲಕ್ಷ ಅನುದಾನದಲ್ಲಿ ಅಂಬೇಡ್ಕರ್ ಸಮುದಾಯ ಭವನ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ್ದರು. ನಂತರ ಕಾಮಗಾರಿ ಮುಂದುವರಿಸದ ಕಾರಣ ಕಾಮಗಾರಿ ಅರ್ಧಕ್ಕೆ ನಿಂತಿದೆ.

ಮದ್ದೂರು ತಾಲ್ಲೂಕು ಕೆ.ಹೊನ್ನಲಗೆರೆಯ ಸಮುದಾಯ ಭವನದ ನಿರ್ಮಾಣಕ್ಕೆ ಆಡಿಗಲ್ಲು ಹಾಕಿ 12 ವರ್ಷಗಳೇ ಕಳೆದಿದ್ದರೂ ಇಂದಿಗೂ ಪೂರ್ಣಗೊಂಡಿಲ್ಲ. ಎನ್.ಚಲುವರಾ ಯಸ್ವಾಮಿ ಅವರು ಸಂಸದರಾಗಿದ್ದ ವೇಳೆ ಸಂಸದರ ಹಾಗೂ ಆಗ ವಿಧಾನ ಪರಿಷತ್ ಸದಸ್ಯರಾಗಿದ್ದ ಬಿ. ರಾಮಕೃಷ್ಣ ಅವರ ಅನುದಾನ ಬಳಸಿ ಸಮುದಾಯ ಭವನಕ್ಕೆ ಶಂಕುಸ್ಥಾಪನೆ ಮಾಡಲಾಗಿತ್ತು.

ನಂತರದ ದಿನಗಳಲ್ಲಿ ಶಾಸಕರ ಅನುದಾನ  ಹಾಕಿ ಹಲವು ಕೆಲಸಗಳು ಸ್ವಲ್ಪ, ಸ್ವಲ್ಪ ನಡೆಯುತ್ತಾ ಬಂದಿತ್ತು. ಆದರೆ ಇಂದಿಗೂ ಅದು ಪೂರ್ಣಗೊಳ್ಳದೆ ಪಾಳು ಕಟ್ಟಡದಂತೆ ಇದ್ದು, ಅಕ್ಕ ಪಕ್ಕದವರು ಎಮ್ಮೆ, ದನಗಳನ್ನು ಕಟ್ಟಲು ಬಳಸಿಕೊಳ್ಳುತ್ತಿದ್ದಾರೆ.

ಪಾಂಡವಪುರ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಸುಮಾರು 18ಕ್ಕೂ ಹೆಚ್ಚು ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿಗೆ 2016-17 ಹಾಗೂ 2017-18ರಲ್ಲಿ ಭೂಮಿ ಪೂಜೆ ನೆರವೇರಿಸಲಾಗಿತ್ತು. ಬಹುತೇಕ ಕಾಮಗಾರಿ ಅಪೂರ್ಣವಾಗಿದ್ದು ನನೆಗು ದಿಗೆ ಬಿದ್ದಿವೆ. 2018ನೇ ಸಾಲಿನಿಂದ ಬಹುತೇಕ ಅಂಬೇಡ್ಕರ್ ಭವನಗಳ ಕಾಮಗಾರಿ ಪೂರ್ಣಗೊಂಡಿಲ್ಲ. ಕನಗನಮರಡಿ ಗ್ರಾಮದ ಅಂಬೇಡ್ಕರ್ ಭವನ ಪಾಳು ಬಿದ್ದಿದ್ದು ದನಕರು, ಮೇಕೆ, ಕುರಿ ಕಟ್ಟಿಕೊಳ್ಳುವ ಕೇಂದ್ರವಾಗಿದೆ.

ಜಿಲ್ಲಾ ಕೇಂದ್ರದಲ್ಲಿ ₹ 14 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಡಾ.ಬಿ.ಆರ್‌.ಅಂಬೇಡ್ಕರ್‌ ಭವನ ಕಾಮಗಾರಿ ಕೂಡ ಅಪೂರ್ಣ ಗೊಂಡಿದ್ದು ಮೂಲ ಸೌಲಭ್ಯಗಳ ಕೊರತೆ ಯಿಂದ ನರಳುತ್ತಿದೆ. ವಿಶಾಲವಾದ ಬಾಲ್ಕನಿ ಇದ್ದರೂ ಅಲ್ಲಿ ಕುರ್ಚಿಗಳನ್ನು ಅಳವಡಿಸಿಲ್ಲ, ಹೀಗಾಗಿ ಹೆಚ್ಚಿನ ಜನರು ಕುಳಿತುಕೊಳ್ಳಲು ಸಾಧ್ಯವಾಗುತ್ತಿಲ್ಲ.

ಅಂಬೇಡ್ಕರ್‌ ಭವನಕ್ಕೆ ಸೌರಶಕ್ತಿ ಅಳಡಿಸಬೇಕು ಎಂದು ಹಲವು ದಿನಗಳಿಂದ ಒತ್ತಾಯ ಮಾಡಲಾ ಗುತ್ತಿದೆ. ಅದು ಇಲ್ಲಿಯವರೆಗೂ ಕಾರ್ಯಗತವಾಗಿಲ್ಲ. ಕಾರ್ಯಕ್ರಮ ನಡೆಸಲು ಬರುವ ಸಂಘಟಕರಿಗೆ ಪ್ರತ್ಯೇಕ ಅಡುಗೆ ಮನೆ ನಿರ್ಮಿಸುವಂತೆಯೂ ಒತ್ತಾಯ ಮಾಡಲಾಗುತ್ತಿದೆ.

ಜೊತೆಗೆ ಭವನದ ಒಳಗೆ ಪ್ರತ್ಯೇಕ ಗ್ಯಾಲರಿಗಳಿದ್ದು, ಅಲ್ಲಿ ಡಾ.ಅಂಬೇಡ್ಕರ್‌ ಕುರಿತಾದ ಮ್ಯೂಸಿಯಂ ಮಾಡಬೇಕು ಎಂಬ ಒತ್ತಾಯವೂ ಇದೆ. ಅವು ಸದ್ಯ ಖಾಲಿ ಇದ್ದು ಅಲ್ಲಿ ಯಾವುದೇ ಛಾಯಾಚಿತ್ರ ಅಳವಡಿಸಿಲ್ಲ. ಅಸಮರ್ಥ ಅಧಿಕಾರಿಗಳು ಸಮಾಜ ಕಲ್ಯಾಣ ಇಲಾಖೆಯಲ್ಲಿದ್ದಾರೆ. ಅವರಿಗೆ ಆಸಕ್ತಿ ಇಲ್ಲದ ಕಾರಣ ಅಂಬೇಡ್ಕರ್‌ ಭವನದಲ್ಲಿ ಗ್ರಂಥಾಲಯ, ಮ್ಯೂಸಿಯಂ ರೂಪಿಸಿಲ್ಲ. ಕೊನೇ ಪಕ್ಷ ಅಂಬೇಡ್ಕರ್‌ ಅವರ ಛಾಯಾಚಿತ್ರಗಳನ್ನೂ ಅಳವಡಿಸಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಾರೆ.

‘ಅಂಬೇಡ್ಕರ್‌ ಭವನದಲ್ಲಿ ಇನ್ನೂ ₹ 5 ಕೋಟಿ ಕಾಮಗಾರಿ ಬಾಕಿ ಇದೆ. ಆ ಹಣವನ್ನು ಕೂಡಲೇ ಬಿಡುಗಡೆ ಮಾಡಿ ಭವನಕ್ಕೆ ಹೊಸ ರೂಪ ನೀಡಬೇಕು’ ಎಂದು ಡಾ.ಬಿ.ಆರ್‌.ಅಂಬೇಡ್ಕರ್‌ ಭವನ ನಿರ್ವಹಣಾ ಸಮಿತಿ ಸದಸ್ಯ ವೆಂಕಟಗಿರಿಯಯ್ಯ ಒತ್ತಾಯಿಸಿದರು.

ಅಸ್ಥಿಪಂಜರವಾದ ಭವನಗಳು

ಶ್ರೀರಂಗಪಟ್ಟಣ ತಾಲ್ಲೂಕಿನ‌ ವಡಿಯಾಂಡಹಳ್ಳಿ ಗ್ರಾಮದಲ್ಲಿ, ಸಂಸದರ ಅನುದಾನದಲ್ಲಿ ನಿರ್ಮಿಸುತ್ತಿರುವ ಕಾಮಗಾರಿ ಅನುದಾನದ‌ ಕೊರತೆಯಿಂದ ನಿಂತು ಹೋಗಿದೆ. ಹತ್ತು ವರ್ಷಗಳಿಂದ ಕಾಮಗಾರಿ ಸ್ಥಗಿತಗೊಂಡಿದ್ದ ಭವನದ ಕಾಮಗಾರಿಯ ಅವಶೇಷಗಳು ಅಸ್ಥಿ ಪಂಜರದಂತೆ ಗೋಚರಿಸುತ್ತಿವೆ. ಒಳಗೆ ಗಿಡ ಗಂಟಿಗಳು ಬೆಳೆದಿವೆ.

ಅಚ್ಚಪ್ಪನಕೊಪ್ಪಲು ಗ್ರಾಮದಲ್ಲಿ, ಸಂಸದರ ಅನುದಾನದಲ್ಲಿ ನಿರ್ಮಿಸಲು ಆರಂಭಿಸಿದ‌ ಕಾಮಗಾರಿ ಏಳೆಂಟು ವರ್ಷಗಳಿಂದ ಸ್ಥಗಿತವಾಗಿದೆ. ಪಿಲ್ಲರ್‌ಗಳು ಮತ್ತು ಅರ್ಧಂಬರ್ಧ ಗೋಡೆಗಳು‌ ಗಿಡ, ಬಳ್ಳಿಗಳಿಂದ ಮುಚ್ಚಿ ಹೋಗಿವೆ. ತಾಲ್ಲೂಕಿನ ಗಣಂಗೂರು ಗ್ರಾಮದ ಬಸವೇಶ್ವರ ಸ್ವಾಮಿ ದೇವಾಲಯದ ಬಳಿ ಸಂಸದರ ಅನುದಾನದಲ್ಲಿ‌ ನಿರ್ಮಿಸಿರುವ ಸಮುದಾಯ ಭವನ ಐದಾರು ವರ್ಷಗಳಿಂದ ಬಾಗಿಲು ಮುಚ್ಚಿದೆ.

ಮರಳಾಗಾಲದ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ, ಸಂಸದರ ಅನುದಾನದಲ್ಲಿ ಆರಂಭವಾದ ಸಮುದಾಯ ಭವನ‌ ನಿರ್ಮಾಣ ಕಾರ್ಯ ಅನುದಾನದ ಕೊರತೆಯಿಂದ ಸ್ಥಗಿತಗೊಂಡಿತ್ತು. ದೇವಾಯದ ಭಕ್ತರು ನೀಡಿದ ದೇಣಿಗೆ ಬಳಸಿಕೊಂಡು ಕಾಮಗಾರಿ ಪೂರ್ಣಗೊಳಿಸಲಾಗಿದೆ.

ಬರೀ ಭೂಮಿಪೂಜೆ, ಕಾಮಗಾರಿ ಇಲ್ಲ

ಕೆ.ಆರ್.ಪೇಟೆ ಪಟ್ಟಣದ ಪ್ರವಾಸಿಮಂದಿರದ ಹಿಂಬಾಗ ಐದಾರು ವರ್ಷಗಳಿಂದ ಅಂಬೇಡ್ಕರ್ ಭವನ ನಿರ್ಮಾಣದ ಕಾಮಗಾರಿ ಕುಂಟುತ್ತಾ ಸಾಗಿದೆ. ಹಿಂದಿನ ಸರ್ಕಾರ ಬಿಡುಗಡೆ ಮಾಡಿದ್ದ ₹ 1.50 ಕೋಟಿ ಪೂರ್ಣವಾಗಿ ಬಳಸಿ ಕಾಮಗಾರಿ ಮುಗಿಸಲು ಸಾಧ್ಯವಾಗಿಲ್ಲ.

ಕ್ಷೇತ್ರದ ಶಾಸಕರೂ ಆದ ಸಚಿವ ನಾರಾಯಣಗೌಡ ಅವರು ಭವನದ ಮೇಲಂತಸ್ತಿಗೆ ಮತ್ತೆ ₹ 1.50 ಕೋಟಿ ಬಿಡುಗಡೆ ಮಾಡಿಸುವುದಾಗಿ ತಿಳಿಸಿ ಭೂಮಿಪೂಜೆಯನ್ನೂ ನೆರವೇರಿಸಿದ್ದರು. ಆದರೆ, ಹಣವೂ ಬಂದಿಲ್ಲ, ಕಾಮಗಾರಿಯೂ ಆರಂಭವಾಗಿಲ್ಲ.

ಇನ್ನು ಸಚಿವರು ಪಟ್ಟಣದಲ್ಲಿ ಕನಕ ಭವನ, ಬಸವಭವನ, ವಾಲ್ಮೀಕಿ ಭವನ, ಒಕ್ಕಲಿಗರ ಭವನಗಳಿಗೆ ಚಾಲನೆ ನೀಡಿದ್ದರು. ಆದರೆ ಇಲ್ಲಿಯವರೆಗೂ ಕಾಮಗಾರಿ ಆರಂಭವಾಗಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು