ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಡಿನ ಸಮಗ್ರ ಅಭಿವೃದ್ಧಿಯೇ ನಮ್ಮ ಉದ್ದೇಶ: ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆ

ಸೋಮನಹಳ್ಳಿಯಲ್ಲಿ ನಡೆದ ಕಾರ್ಯಕರ್ತರ ಜೆಡಿಎಸ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ
Last Updated 31 ಜುಲೈ 2022, 16:31 IST
ಅಕ್ಷರ ಗಾತ್ರ

ನಾಗಮಂಗಲ: ‘ನಾನು ಮುಖ್ಯಮಂತ್ರಿಯಾಗುವುದು ನನ್ನ ಮತ್ತು ನಮ್ಮ ಪಕ್ಷದ ಉದ್ದೇಶವಲ್ಲ. ನಾಡಿನ ಜನರ ಸರ್ವತೋಮುಖ ಅಭಿವೃದ್ಧಿ ಮಾಡುವುದೇ ನಮ್ಮ ಆಡಳಿತದ ಉದ್ದೇಶ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರ ಸ್ವಾಮಿ ಹೇಳಿದರು.

ತಾಲ್ಲೂಕಿನ ಹೊಣಕೆರೆ ಹೋಬಳಿಯ ಸೋಮನಹಳ್ಳಿ ದೇವಾಲ ಯದ ಬಳಿ ಭಾನುವಾರ ಹಮ್ಮಿಕೊಂಡಿದ್ದ ವಿವಿಧ ಮುಖಂಡರ ಜೆಡಿಎಸ್ ಪಕ್ಷ ಸೇರ್ಪಡೆ ಮತ್ತು ಜೆಡಿಎಸ್ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

‘ನಾಡಿನ ಲಕ್ಷಾಂತರ ಕುಟುಂಬಗಳ ನೋವು ನನಗೆ ಅರ್ಥವಾಗುತ್ತದೆ. ಮಂಡ್ಯ ಜಿಲ್ಲೆಗೆ ನೀಡಿದ್ದ ಅನುದಾನ ಕಡಿತ ಮಾಡಿದ ಬಿಜೆಪಿಯವರು ಜಿಲ್ಲೆಯಲ್ಲಿ ವಿಜಯ ಪತಾಕೆ ಹಾರಿಸುತ್ತೇವೆ ಎನ್ನುತ್ತಾರೆ. ಯಾವ ರೀತಿ ಪತಾಕೆ ಹಾರಿಸುತ್ತಾರೆ ಎಂಬುದು ಗೊತ್ತಿಲ್ಲ. ದುಡ್ಡು ಹಂಚಿ ವಿಜಯಪತಾಕೆ ಹಾರಿಸಬೇಕು ಅಷ್ಟೇ. ನಮ್ಮ ಪಕ್ಷ ಮಂಡ್ಯ ಜಿಲ್ಲೆಗೆ ಸೀಮಿತವಾಗಿ ಆಡಳಿತ ನಡೆಸದೆ ರಾಜ್ಯದ ಜನತೆಗೆ ಜವಾಬ್ದಾರಿಯುತವಾಗಿ ಆಡಳಿತ ನಡೆಸಿದೆ’ ಎಂದರು.

‘ಪಂಚರತ್ನ ರಥಯಾತ್ರೆಯನ್ನು ನಾಡಿನಾದ್ಯಂತ 120 ದಿನ ಆಯೋಜಿಸಿ ಪಕ್ಷ ಸಂಘಟಿಸುತ್ತೇನೆ. ಮುಂದಿನ ಚುನಾವಣೆಯಲ್ಲಿ 123 ಸ್ಥಾನದ ಗುರಿ ನಿಗದಿ ಮಾಡಿದ್ದು, ಮುಂದಿನ ಬಾರಿ ಸ್ವತಂತ್ರವಾಗಿ ನಮ್ಮ ಪಕ್ಷ ಅಧಿಕಾರ ಹಿಡಿಯಲು ಜನ ಆಶೀರ್ವದಿಸುತ್ತಾರೆ ಎಂಬ ನಂಬಿಕೆಯಿದೆ’ ಎಂದರು.

‘ನಾನು ಮುಖ್ಯಮಂತ್ರಿಯಾಗಿದ್ದಾಗ ಕೋಮು ಗಲಭೆಯಾಗದಂತೆ ನೋಡಿಕೊಂಡಿದ್ದೆವು. ಆದರೆ, ಇಂದು ಸರ್ಕಾರವು ಒಂದು ಸಮುದಾಯವನ್ನು ಕಡೆಗಣಿಸುತ್ತಿದೆ. ನಾಡಿನಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ದ್ವೇಷದ ಭಾವನೆ ಮೂಡಿಸುತ್ತಿವೆ’ ಎಂದು ದೂರಿದರು.

‘ನಮ್ಮ ಪಕ್ಷಕ್ಕೆ ಕೈಕೊಟ್ಟು ಹೋದವರು ಈಗ ಮಂಡ್ಯ ಜಿಲ್ಲೆಯನ್ನು ಉದ್ಧಾರ ಮಾಡುತ್ತಿದ್ದಾರೆ’ ಎಂದು ಸಚಿವ ನಾರಾಯಣಗೌಡ ಅವರನ್ನು ಟೀಕಿಸಿದ ಅವರು, ಸಾಲ ಮನ್ನಾ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ನಮ್ಮ ಸರ್ಕಾರಕ್ಕೆ ಬೆಂಬಲ ನೀಡಲಿಲ್ಲ. ಆದರೆ, ನಾನು ಕೊಟ್ಟ ಮಾತಿನಂತೆ ಸಾಲ ಮನ್ನಾ ಮಾಡಿದ್ದೇನೆ. ಜಿಲ್ಲೆಯ ರೈತರ ₹ 700 ಕೋಟಿ ಸಾಲ ಮನ್ನಾ ಮಾಡಿದ್ದೇನೆ ಎಂಬುದನ್ನು ಜಿಲ್ಲೆಯ ಕಾಂಗ್ರೆಸ್ ನಾಯಕರು ನೆನಪಿಸಿಕೊಳ್ಳಬೇಕು. ಒಂದು ತಿಂಗಳಲ್ಲಿ ನಮ್ಮ ಮುಂದಿನ ಕಾರ್ಯಕ್ರಮ, ಯೋಜನೆಗಳನ್ನು ನಿಮ್ಮ ಮುಂದೆ ಇಡುತ್ತೇನೆ. ಕಾಂಗ್ರೆಸ್ ಪಕ್ಷದ ಕುತಂತ್ರ ಬುದ್ಧಿಯಿಂದ ಕಾಂಗ್ರೆಸ್‌ಗೆ ಇಂಥ ಸ್ಥಿತಿ ಬಂದಿದೆ. ಅವರು 60 ಸ್ಥಾನ ಗೆಲ್ಲುವುದು ಕಷ್ಟ’ ಎಂದರು.

‘ಇಂದು ಗ್ಯಾಸ್ ಕೊಳ್ಳುವ ಪರಿಸ್ಥಿತಿಯಲ್ಲಿ ಜನರಿಲ್ಲ. ಈಗ ಕಟ್ಟಿಗೆಯೂ ಇಲ್ಲ. ದೇವೇಗೌಡರ ಕಾಲದಲ್ಲಿ ನೀಡಲಾಗುತ್ತಿದ್ದ ಸೀಮೆ ಎಣ್ಣೆಯೂ ಇಲ್ಲವಾಗುತ್ತಿದ್ದು, ಬಡವರು ಪರದಾಡುತ್ತಿದ್ದಾರೆ’ ಎಂದರು.

‘ಪ್ರತಿ ಮನೆಗೆ ಉಚಿತ 200 ಯುನಿಟ್ ವಿದ್ಯುತ್ ನೀಡುವ ಕುರಿತು ಚಿಂತಿಸಿದ್ದೇನೆ. ಅಡುಗೆ, ಬೆಳಕಿಗೆ ಉಚಿತ ವಿದ್ಯುತ್ ನೀಡುತ್ತೇವೆ. ಮುಂದಿನ ತಿಂಗಳು ಕಾರ್ಯಕ್ರಮ ಪ್ರಾರಂಭಿ ಸುತ್ತೇನೆ. ಪ್ರತಿದಿನ ಒಂದು ವಿಧಾನಸಭಾ ಕ್ಷೇತ್ರದ ಹಳ್ಳಿಯಲ್ಲಿ ವಾಸ್ತವ್ಯ ಮಾಡು ತ್ತೇನೆ. ನನ್ನ ಜತೆ ಕೈಜೋಡಿಸಿ’ ಎಂದರು.

ಶಾಸಕ ಸುರೇಶ್ ಗೌಡ ಮಾತನಾಡಿ, ನಾವು ವಿರೋಧ ಪಕ್ಷದಲ್ಲಿದ್ದರೂ ತಾಲ್ಲೂಕಿಗಾಗಿ ಅನುದಾನ ತಂದು ಕೆಲಸ ಮಾಡುತ್ತಿದ್ದೇವೆ. ನಂಬಿದ ಜನರಿಗೆ ದ್ರೋಹ‌ ಮಾಡುವ ಕೆಲಸ ಮಾಡುವುದಿಲ್ಲ. ಕೆಲಸ ಮಾಡಿಲ್ಲ ಎಂದರೆ ದೂರುತ್ತಾರೆ, ಕೆಲಸ ಮಾಡಿದರೆ ಕಮಿಷನ್ ಪಡೆಯುತ್ತಾರೆ ಎಂಬ ಆರೋಪ ಮಾಡುತ್ತಾರೆ’ ಎಂದರು.

ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ.ಇಬ್ರಾಹಿಂ‌ ಮಾತನಾಡಿ, ‘ತಾಲ್ಲೂಕಿನ ಮಾಜಿ ಶಾಸಕರ ಧೋರಣೆ ಬಗ್ಗೆ ಟೀಕಿಸಿದರು. ಕಾಂಗ್ರೆಸ್‌ನವರ ಹೊಟ್ಟೆಕಿಚ್ಚಿನ ಫಲವಾಗಿ ನಮ್ಮ ಸರ್ಕಾರ ಪತನವಾಯಿತು ಎಂದರು.

ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮಾತ್ರ ನಾಡಿನ ಬಡವರು, ರೈತರ ಬಗ್ಗೆ ಆಲೋಚನೆ ಮಾಡಲು ಸಾಧ್ಯ. ದೇವೇಗೌಡರ ಹಿಂದುತ್ವವೇ ನಮ್ಮ ಹಿಂದುತ್ವ’ ಎಂದರು.

ಶಾಸಕ ಎಚ್.ಡಿ.ರೇವಣ್ಣ ಮಾತನಾಡಿದರು.

ಜೆಡಿಎಸ್ ಪಕ್ಷ ಮತ್ತು ಶಾಸಕ ಸುರೇಶ್ ಗೌಡ ಅವರ ಅಭಿವೃದ್ಧಿ ಕಾಮಗಾರಿ, ಸಾಧನೆ, ಪಕ್ಷದ ಯೋಜನೆ ಕುರಿತ ವಿಡಿಯೊವನ್ನು ಪ್ರದರ್ಶಿಸಲಾಯಿತು.

ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ತಾಲ್ಲೂಕಿನ ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು. ತಾಲ್ಲೂಕಿನ ಹರದನಹಳ್ಳಿ ಮಾಯಗೋನಹಳ್ಳಿ, ಅಂಚೆಚಿಟ್ಟನಹಳ್ಳಿ, ಚುಂಚನಹಳ್ಳಿ, ಬ್ರಹ್ಮದೇವರಹಳ್ಳಿ, ಪಾಲಾಗ್ರಹಾರ, ತುಪ್ಪದಮಡು, ದೊಡ್ಡಬಾಲ ಗ್ರಾ.ಪಂ ವ್ಯಾಪ್ತಿಯ ಕಾರ್ಯಕರ್ತರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಯಿತು. ಬೆಳ್ಳೂರು‌ ಕ್ರಾಸ್‌ನಿಂದ ಬೈಕ್ ರ‍್ಯಾಲಿ ನಡೆಯಿತು. ಕಾರ್ಯಕರ್ತರಿಗೆ ಬಾಡೂಟದ ವ್ಯವಸ್ಥೆ ಮಾಡಲಾಗಿತ್ತು.

ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ, ಸಕಲೇಶಪುರ ಶಾಸಕ ಎಚ್.ಕೆ‌.ಕುಮಾರ ಸ್ವಾಮಿ, ಮಳವಳ್ಳಿ ಶಾಸಕ ಡಾ.ಕೆ.ಅನ್ನದಾನಿ, ಮಂಡ್ಯ ಶಾಸಕ ಎಂ.ಶ್ರೀನಿವಾಸ್, ಜೆಡಿಎಸ್ ಜಿಲ್ಲಾ ಅಧ್ಯಕ್ಷ ಡಿ.ರಮೇಶ್, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಜಿ‌.ಟಿ.ಶ್ರೀನಿವಾಸ್, ಮಾಜಿ ಸಚಿವ ಬಂಡೆಪ್ಪ ಕಾಂಶೆಂಪುರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT