ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ.ಆರ್‌ ಪೇಟೆಯಲ್ಲಿ ಮುಖಂಡರನ್ನು ಹಿಡಿದಿಡಲು ಕಾಂಗ್ರೆಸ್‌–ಜೆಡಿಎಸ್‌ ಶತಪ್ರಯತ್ನ!

ಮುಂದುವರಿದ ಪಕ್ಷೇತರ ಪರ್ವ, ಕಾರ್ಯಕರ್ತರ ಮನೆಗೆ ಭೇಟಿ ನೀಡಿ ಮನವೊಲಿಕೆ
Last Updated 1 ಡಿಸೆಂಬರ್ 2019, 13:58 IST
ಅಕ್ಷರ ಗಾತ್ರ

ಮಂಡ್ಯ: ಕೆ.ಆರ್‌.ಪೇಟೆ ಉಪ ಚುನಾವಣೆ ಕಣದಲ್ಲಿ ಪಕ್ಷಾಂತರ ಪರ್ವ ಮುಂದುವರಿದಿದೆ. ಕಾಂಗ್ರೆಸ್‌, ಜೆಡಿಎಸ್‌ನಲ್ಲಿ ಪಕ್ಷ ಬಿಡುವವರ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಿದೆ. ಸ್ಥಳೀಯ ಕಾರ್ಯಕರ್ತರನ್ನು ಪಕ್ಷದಲ್ಲಿ ಉಳಿಸಿಕೊಳ್ಳಲು ಯತ್ನಿಸುತ್ತಿರುವ ರಾಜ್ಯ ಮುಖಂಡರು ಅವರ ಮನೆಗಳಿಗೆ ಭೇಟಿ ನೀಡಿ ಮನವೊಲಿಸುವ ಕೆಲಸ ಮಾಡುತ್ತಿದ್ದಾರೆ.

ಬಿಜೆಪಿ ಉಸ್ತುವಾರಿ ಹೊತ್ತಿರುವ ಸಚಿವ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ್‌ ಹಾಗೂ ಬಿಜೆಪಿ ಯುವ ಮುಖಂಡ, ಮುಖ್ಯಮಂತ್ರಿ ಪುತ್ರ ಬಿ.ವೈ.ವಿಜಯೇಂದ್ರ ಜೋಡಿ ಕ್ಷೇತ್ರದಲ್ಲೇ ಠಿಕಾಣಿ ಹೂಡಿದ್ದು ಅನ್ಯಪಕ್ಷಗಳ ಮಖಂಡರನ್ನು ಆಕರ್ಷಿಸುತ್ತಿದ್ಧಾರೆ. ಇದು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರಿಗೆ ತಲೆನೋವಾಗಿದ್ದು ಕಾರ್ಯಕರ್ತರು ಪಕ್ಷ ತೊರೆಯದಂತೆ ಹಿಡಿದಿಡಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ.

ಶಾಸಕ ಎಚ್‌.ಡಿ.ರೇವಣ್ಣ, ಶ್ರವಣಬೆಳಗೊಳ ಶಾಸಕ ಬಾಲಕೃಷ್ಣ ಅವರು ಕ್ಷೇತ್ರದಲ್ಲೇ ಇದ್ದು ಜೆಡಿಎಸ್‌ ಕಾರ್ಯಕರ್ತರ ಮನೆಗಳಿಗೆ ಭೇಟಿ ನೀಡಿ, ಅವರ ಮನೆಯಲ್ಲಿ ತಿಂಡಿ, ಊಟ ಸೇವಿಸಿ ಪಕ್ಷ ತ್ಯಜಿಸದಂತೆ ಮನವಿ ಮಾಡುತ್ತಿದ್ದಾರೆ. ಕಾಂಗ್ರೆಸ್‌ ಮುಖಂಡರು ಕೂಡ ಸ್ಥಳೀಯ ಕಾರ್ಯಕರ್ತರು ಪಕ್ಷ ಬಿಡದಂತೆ ಮನವೊಲಿಸುತ್ತಿದ್ದಾರೆ. ಜೆಡಿಎಸ್‌ನ ಹೆಚ್ಚು ಮುಖಂಡರು ಈಗಾಗಲೇ ಬಿಜೆಪಿ ಕದ ತಟ್ಟಿದ್ದಾರೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರ ಸಮ್ಮುಖದಲ್ಲೂ ಹಲವು ಜೆಡಿಎಸ್ ಕಾರ್ಯಕರ್ತರು ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಕ್ಷೇತ್ರದಲ್ಲಿ ಇನ್ನೂ ಅಬ್ಬರದ ಪ್ರಚಾರ ಕಾಣಿಸುತ್ತಿಲ್ಲ. ಮೂರೂ ಪಕ್ಷಗಳ ನಾಯಕರು ಹಳ್ಳಿಹಳ್ಳಿ ತಿರುಗಿ ಪ್ರಚಾರ ನಡೆಸುವ ಗೋಜಿಗೆ ಹೋಗಿಲ್ಲ. ಬದಲಾಗಿ ಸ್ಥಳೀಯ ನಾಯಕರ ಮನೆಗಷ್ಟೇ ಭೇಟಿ ನೀಡಿ ಅವರ ಬೆಂಬಲ ಗಟ್ಟಿಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ‘ಬಿಜೆಪಿ ಮುಖಂಡರು ಹಣ ಸೇರಿದಂತೆ ಹಲವು ಆಸೆ, ಆಮಿಷಗಳನ್ನೊಡ್ಡಿ ಕಾರ್ಯಕರ್ತರನ್ನು ಸೆಳೆಯುತ್ತಿದ್ದಾರೆ. ಹೀಗಾಗಿ ನಮ್ಮ ಕಾರ್ಯಕರ್ತರನ್ನು ಉಳಿಸಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ. ಆ ಕೆಲಸ ಮಾಡುತ್ತಿದ್ದೇವೆ’ ಎಂದು ಜೆಡಿಎಸ್‌ ಮುಖಂಡರೊಬ್ಬರು ಹೇಳಿದರು.

ಕಾಂಗ್ರೆಸ್‌ಗೆ ಜಾತಿ ಮತಗಳ ಮೇಲೆ ಕಣ್ಣು: ಜಾತಿ ಮತಗಳ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್‌ ಆಯಾ ಜಾತಿಗೆ ಸೇರಿದ ಮುಖಂಡರನ್ನು ಆಹ್ವಾನಿಸಿ ಅವರ ಸಮಾಜದ ಜನರು ವಾಸಿಸುವ ಹಳ್ಳಿಗಳಲ್ಲೇ ಪ್ರಮುಖವಾಗಿ ಪ್ರಚಾರ ನಡೆಸುತ್ತಿದೆ. ಕ್ಷೇತ್ರದಲ್ಲಿ ಕುರುಬ ಸಮಾಜದ ಮತಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರನ್ನು ಕರೆಸಿ ಕುರುಬರು ಹೆಚ್ಚಾಗಿ ವಾಸಿಸುವ ಗ್ರಾಮಗಳಲ್ಲಿ ಒಂದು ಸುತ್ತಿನ ಪ್ರಚಾರ ಮಾಡಿಸಿದ್ದಾರೆ. ಅನ್ಯ ಜಾತಿ ವಾಸಿಸುವ ಹಳ್ಳಿಗಳಿಗೆ ಅವರು ಕಾಲಿಟ್ಟಿಲ್ಲ.

ಸಿದ್ದರಾಮಯ್ಯ ಕೂಡ ಸ್ಥಳೀಯ ಮುಖಂಡರ ಮನೆ ಭೇಟಿ ನೀಡಿ ಅವರ ಮನೆಗಳಲ್ಲಿ ಊಟ, ತಿಂಡಿ ಮಾಡಿದ್ದಾರೆ. ಆ ಮೂಲಕ ಬೇರೆ ಪಕ್ಷಗಳ ಆಮಿಷಗಳಿಗೆ ಒಳಗಾಗದಂತೆ ಮನವೊಲಿಸಿದ್ದಾರೆ. ಮುಂದಿನ ವಾರ ಅವರು ಮತ್ತೆ ಕ್ಷೇತ್ರಕ್ಕೆ ಬರಲಿದ್ದು ಮತ್ತೊಂದು ಸುತ್ತಿನ ಪ್ರಚಾರ ನಡೆಸಲಿದ್ದಾರೆ.

ಹರೀಶ್‌ಗೆ ಜಿ.ಪಂ ಸ್ಥಾನದ ಭರವಸೆ?: ಕಾಂಗ್ರೆಸ್‌ ಮುಖಂಡ ಎನ್‌.ಚಲುವರಾಯಸ್ವಾಮಿ ಆಪ್ತನಾಗಿದ್ದ ಮನ್‌ಮುಲ್‌ ಮಾಜಿ ಅಧ್ಯಕ್ಷ ಎಂ.ಬಿ.ಹರೀಶ್‌ ಈಗ ಕಾಂಗ್ರೆಸ್‌ ತ್ಯಜಿಸಿ ಜೆಡಿಎಸ್‌ ಸೇರಿದ್ದಾರೆ. ಅಕ್ಕಿಹೆಬ್ಬಾಳು ಜಿಲ್ಲಾ ಪಂಚಾಯಿತಿ ಕ್ಷೇತ್ರದ ಸದಸ್ಯರೂ ಆಗಿರುವ ಜೆಡಿಎಸ್‌ ಅಭ್ಯರ್ಥಿ ಬಿ.ಎಲ್‌.ದೇವರಾಜು ಗೆದ್ದರೆ ಖಾಲಿ ಉಳಿಯುವ ಆ ಸ್ಥಾನವನ್ನು ಹರೀಶ್‌ ಅವರಿಗೆ ಬಿಟ್ಟುಕೊಡುವ ಭರವಸೆಯನ್ನು ಜೆಡಿಎಸ್‌ ಮುಖಂಡರು ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಂಪರ್ಕಕ್ಕೆ ಸಿಗದ ಪುರಸಭಾ ಸದಸ್ಯರು

ಕೆ.ಆರ್‌.ಪೇಟೆ ಪುರಸಭೆಯಲ್ಲಿ ಒಟ್ಟು 24 ಸದಸ್ಯರಿದ್ದಾರೆ. ಬಹುತೇಕ ಪುರಸಭಾ ಸದಸ್ಯರು ಹಣ ಕೊಡುವ ಅಭ್ಯರ್ಥಿಗಳ ಹಿಂದೆ ಬಿದ್ದಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ನೇರವಾಗಿ ಅನ್ಯ ಪಕ್ಷಕ್ಕೆ ಬೆಂಬಲ ನೀಡಿದರೆ ಉಚ್ಛಾಟನೆ ಶಿಕ್ಷೆ ಅನುಭವಿಸಬೇಕಾದೀತು ಎಂಬ ಭಯಕ್ಕೆ ಹಿಂದೆ ನಿಂತು ಕೆಲಸ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘11 ಜೆಡಿಎಸ್‌ ಸದಸ್ಯರಲ್ಲಿ 8 ಮಂದಿ ಪಕ್ಷದ ವರಿಷ್ಠರ ಸಂಪರ್ಕಕ್ಕೆ ಸಿಗುತ್ತಿಲ್ಲ. ಈ ಸುದ್ದಿ ಅರಿತ ಶಾಸಕರಾದ ಎಚ್‌.ಡಿ.ರೇವಣ್ಣ ಹಾಗೂ ಬಾಲಕೃಷ್ಣ ಅವರು ಸದಸ್ಯರ ಮನೆಗೆ ತೆರಳುತ್ತಿದ್ದಾರೆ. ಶುಕ್ರವಾರ ಸದಸ್ಯನೊಬ್ಬ ರೇವಣ್ಣ ಮನೆಗೆ ಬಂದಿದ್ದಾರೆ ಎಂಬ ವಿಷಯ ತಿಳಿದೊಡನೆ ಹಿಂದಿನ ಬಾಗಿಲಿನಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ’ ಎಂದು ಹೆಸರು ಹೇಳಲಿಚ್ಛಿಸದ ಜೆಡಿಎಸ್‌ ಸದಸ್ಯರೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT