ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರಂಡಿ ಸ್ವಚ್ಛಗೊಳಿಸುತ್ತಿರುವ ನಗರಸಭಾ ಸದಸ್ಯ!

ನಿತ್ಯ ಮಳೆಯಿಂದ ರಸ್ತೆಯಲ್ಲಿ ಹರಿಯುತ್ತಿರುವ ಕೊಳಚೆ ನೀರು, ಸಮಸ್ಯೆಗೆ ಸ್ಪಂದಿಸದ ಸಿಬ್ಬಂದಿ
Last Updated 13 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ಮಂಡ್ಯ: ಸಮಸ್ಯೆಗಳಿಗೆ ಸ್ಪಂದಿಸದ ನಗರಸಭಾ ಸಿಬ್ಬಂದಿ ವಿರುದ್ಧ ಜನಾಕ್ರೋಶ ದಿನೇದಿನೆ ಹೆಚ್ಚಾಗುತ್ತಿದೆ. ಕಚೇರಿ ಮುಂದೆ ಪ್ರತಿಭಟನೆ, ಏಕಾಂಗಿ ಹೋರಾಟ ತೀವ್ರಗೊಳ್ಳುತ್ತಿವೆ. ಇಷ್ಟೇ ಅಲ್ಲದೇ, ನಗರಸಭಾ ಸದಸ್ಯರೊಬ್ಬರು ತಮ್ಮ ವಾರ್ಡ್‌ನಲ್ಲಿ ಚರಂಡಿ ಸ್ವಚ್ಛಗೊಳಿಸುವ ಮೂಲಕ ನಗರಸಭಾ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ನಗರಸಭಾ ಅಧ್ಯಕ್ಷರ ಮೀಸಲಾತಿ ಗೊಂದಲ ಬಗೆಹರಿಯದ ಕಾರಣ ಕಳೆದೆರಡು ವರ್ಷಗಳಿಂದ ಆಡಳಿತ ಮಂಡಳಿ ರಚನೆಯಾಗಿಲ್ಲ. ಇದರಿಂದ ಸದಸ್ಯರಿಗೆ ಅಧಿಕಾರ ಇಲ್ಲವಾಗಿದ್ದು ತಮ್ಮ ವಾರ್ಡ್‌ಗಳ ಮೂಲ ಸಮಸ್ಯೆಗಳಿಗೆ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ. ನಗರಸಭೆಯಲ್ಲಿ ಅಧಿಕಾರಿಗಳ ಕಾರುಬಾರು ಜೋರಾಗಿದ್ದು ಸಮಸ್ಯೆಗಳು ಬಗೆಹರಿಯುತ್ತಿಲ್ಲ. ರಸ್ತೆ, ಚರಂಡಿ ಸ್ವಚ್ಛತೆ, ನೀರು ಸರಬರಾಜು ಮುಂತಾದ ಸಮಸ್ಯೆಗಳು ಬಗೆಹರಿಯುತ್ತಿಲ್ಲ. ಸದಸ್ಯರ ಮಾತುಗಳಿಗೂ ಕಿಮ್ಮತ್ತು ಇಲ್ಲ.

ಇದರಿಂದ ಬೇಸತ್ತ 3ನೇ ವಾರ್ಡ್‌ ಸದಸ್ಯ ಝಾಕೀರ್‌ ಪಾಷಾ ತಮ್ಮ ವಾರ್ಡ್‌ನಲ್ಲಿ ನರಕ ಸದೃಶವಾಗಿರುವ ಚರಂಡಿಯನ್ನು ತಾವೇ ಸ್ವಚ್ಛ ಮಾಡುತ್ತಿದ್ದಾರೆ. ಬೀಡಿ ಕಾರ್ಮಿಕರ ಕಾಲೊನಿಯಲ್ಲಿ ಚರಂಡಿ ಕಟ್ಟಿಕೊಂಡು ದುರ್ವಾಸನೆ, ರೋಗಭೀತಿ ಉಂಟಾಗಿತ್ತು. ನಿತ್ಯವೂ ಸಾರ್ವಜನಿಕರು ಝಾಕೀರ್‌ಗೆ ಹಿಡಿ ಶಾಪ ಹಾಕುತ್ತಿದ್ದರು. ಸಮಸ್ಯೆಯನ್ನು ಅವರು ನಗರಸಭಾ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಜಿಲ್ಲಾಧಿಕಾರಿ, ಶಾಸಕರ ಗಮನಕ್ಕೂ ತಂದಿದ್ದರು.

ಆದರೆ, ನಗರಸಭೆ ಸಿಬ್ಬಂದಿ ಸಮಸ್ಯೆಗೆ ಸ್ಪಂದಿಸದ ಕಾರಣ ಝಾಕೀರ್‌ ತಾವೇ ಗುದ್ದಲಿ ಹಿಡಿದು ಕಳೆದ ಮೂರು ದಿನಗಳಿಂದ ಚರಂಡಿ ಸ್ವಚ್ಛ ಮಾಡುತ್ತಿದ್ದಾರೆ. ಕಳೆದೊಂದು ವಾರದಿಂದ ನಿತ್ಯವೂ ಮಳೆ ಸುರಿಯುತ್ತಿದ್ದು ಕಾಲೊನಿಯ ಚರಂಡಿಗಳು ಕಟ್ಟಿಕೊಂಡು ರಸ್ತೆಯಲ್ಲಿ ಕೊಳಚೆ ನೀರು ಹರಿಯುತ್ತಿದೆ.

‘ನಗರಸಭೆ ಕಚೇರಿಗೆ ಅಲೆದು, ಅಧಿಕಾರಿಗಳನ್ನು ಭೇಟಿ ಮಾಡಿ ಸಾಕಾಯಿತು, ಯಾವುದೇ ಸಮಸ್ಯೆಯನ್ನೂ ಕಿವಿಗೆ ಹಾಕಿಕೊಳ್ಳುವುದಿಲ್ಲ. ರಸ್ತೆಯಲ್ಲಿ ಓಡಾಡುವಾಗ ಜನರು ಬಾಯಿಗೆ ಬಂದಂತೆ ಬಯ್ಯುತ್ತಿದ್ದರು. ಚುನಾವಣೆಯಲ್ಲಿ ಗೆದ್ದ ಮೇಲೆ ಏನು ಮಾಡಿದ್ದೀರಿ ಎಂದು ಕೇಳುತ್ತಿದ್ದರು. ಜನರ ಪ್ರಶ್ನೆಗಳಿಗೆ ಉತ್ತರ ನೀಡಲು ಸಾಧ್ಯವಾಗದೇ ನಾನೇ ಚರಂಡಿ ಸ್ವಚ್ಛಗೊಳಿಸುತ್ತೇನೆ. ನಿತ್ಯ ಎಷ್ಟು ಸಾಧ್ಯವೋ ಅಷ್ಟನ್ನು ಸ್ವಚ್ಛ ಮಾಡುತ್ತೇನೆ’ ಎಂದು ಝಾಕೀರ್‌ ಪಾಷಾ ಹೇಳಿದರು.

3ನೇ ವಾರ್ಡ್‌ನಲ್ಲಿ ಮಾತ್ರವಲ್ಲದೇ ಇಡೀ ನಗರದಲ್ಲಿ ಕೂಡ ಇದೇ ಆರೋಪವಿದೆ. ನಗರಸಭಾ ಸಿಬ್ಬಂದಿ ಜನರ ಸಮಸ್ಯೆಗಳಿಗೆ ಸ್ಪಂದನೆ ನೀಡುತ್ತಿಲ್ಲ. ಸಣ್ಣಪುಟ್ಟ ಚರಂಡಿ, ರಸ್ತೆ ಸ್ವಚ್ಛತೆ ಮಾಡಲು ತಿಂಗಳುಗಟ್ಟಲೆ ಮಾಡುತ್ತಾರೆ. ಬೀದಿನಾಯಿಗಳ ಸಮಸ್ಯೆಗೆ ನಗರಸಭೆ ಅಧಿಕಾರಿಗಳು ಪರಿಹಾರ ಹುಡುಕುವಲ್ಲಿ ವಿಫಲರಾಗಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.

ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಖಂಡಿಸಿ ವಿವಿಧ ಬಡಾವಣೆಗಳ ಜನರು ಈಗಾಗಲೇ ಹಲವು ಬಾರಿ ಪ್ರತಿಭಟನೆ ನಡೆಸಿದ್ದಾರೆ. ಮಾರುತಿನಗರದ ವಿಜಯರ್‌ ಕುಮಾರ್‌ ಎಂಬುವವರು ಈಚೆಗೆ ನಗರಸಭೆ ಕಚೇರಿ ಎದುರಿ ಏಕಾಂಗಿ ಹೋರಾಟ ನಡೆಸಿದ್ದರು.

‘ನಗರಸಭಾ ಸದಸ್ಯರಿಗೆ ಅಧಿಕಾರವಿಲ್ಲದ ಕಾರಣ ಅವರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ಪೌರಾಯುಕ್ತರನ್ನು ಕೇಳಿದರೆ ಜಿಲ್ಲಾಧಿಕಾರಿಗಳ ಕಡೆ ಬೆರಳು ತೋರುತ್ತಾರೆ. ಜಿಲ್ಲಾಧಿಕಾರಿಗಳು ಕೋವಿಡ್‌ ನೆಪ ಹೇಳುತ್ತಾರೆ. ಹೀಗಾಗಿ ಇಡೀ ನಗರ ಕೊಳಚೆ ಪ್ರದೇಶವಾಗುತ್ತಿದೆ’ ಎಂದು ಗುತ್ತಲು ಬಡಾವಣೆ ನಿವಾಸಿ ಎಂ.ಎಸ್‌.ಶಂಕರ್‌ ಆರೋಪಿಸಿದರು.

ಗಮನಕ್ಕೆ ತಂದರೆ ಸ್ವಚ್ಛತೆ

‘3ನೇ ವಾರ್ಡ್‌ ಸದಸ್ಯ ಝಾಕೀರ್‌ ಪಾಷಾ ಅವರು ತಮ್ಮ ಬಡಾವಣೆಗಳ ಸಮಸ್ಯೆಗಳನ್ನು ನನ್ನ ಗಮನಕ್ಕೆ ತಂದಿಲ್ಲ. ಅವರು ತಂದಿದ್ದರೆ ತಕ್ಷಣವೇ ಸಿಬ್ಬಂದಿ ಕಳುಹಿಸಿ ಸ್ವಚ್ಛಗೊಳಿಸುತ್ತಿದ್ದೆ’ ಎಂದು ನಗರಸಭೆ ಪೌರಾಯುತ್ತ ಎಸ್‌.ಲೋಕೇಶ್‌ ಹೇಳಿದರು.

‘ನಗರಸಭಾ ಸದಸ್ಯರು ಮಾತ್ರವಲ್ಲದೇ ಯಾವುದೇ ನಾಗರಿಕರ ಸಮಸ್ಯೆಗಳನ್ನು ಬಗೆಹರಿಸುತ್ತೇವೆ. ಮಳೆಯಿಂದಾಗಿ ಇಳಿಜಾರಿನ ಪ್ರದೇಶಗಳಲ್ಲಿ ನೀರು ಹರಿಯುತ್ತಿರುವ ದೂರುಗಳು ಬಂದಿವೆ. ಅದನ್ನು ಸರಿಪಡಿಸುವಂತೆ ಸಿಬ್ಬಂದಿಗೆ ಸೂಚಿಸಿದ್ದೇನೆ. 3ನೇ ವಾರ್ಡ್‌ ಸಮಸ್ಯೆಯನ್ನು ತಕ್ಷಣವೇ ಬಗೆಹರಿಸಲಾಗುವುದು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT