ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಡ್‌ಕಾನ್‌ಸ್ಟೆಬಲ್‌ ಸೇರಿ 9 ಮಂದಿಗೆ ಕೋವಿಡ್‌ ದೃಢ

ಮದ್ದೂರು ಸಂಚಾರ ಠಾಣೆ, ಪಟ್ಟಣ ಪೊಲೀಸ್‌ ಠಾಣೆ, ಸಿಪಿಐ ಕಚೇರಿ, ವಸತಿ ಗೃಹ ನಿಷೇಧಿತ ವಲಯ
Last Updated 25 ಜೂನ್ 2020, 15:24 IST
ಅಕ್ಷರ ಗಾತ್ರ

ಮಂಡ್ಯ: ಮದ್ದೂರು ಸಂಚಾರಿ ಪೊಲೀಸ್‌ ಠಾಣೆಯ ಹೆಡ್‌ಕಾನ್‌ಸ್ಟೆಬಲ್‌ ಸೇರಿ 9 ಮಂದಿಯಲ್ಲಿ ಗುರುವಾರ ಹೊಸದಾಗಿ ಕೋವಿಡ್‌–19 ದೃಢಪಟ್ಟಿದೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 382ಕ್ಕೆ ಏರಿಕೆಯಾಗಿದೆ.

ಕೊರೊನಾ ಯೋಧರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಹೆಡ್‌ ಕಾನ್‌ಸ್ಟೆಬಲ್‌ ಅವರಿಗೆ ಈಚೆಗೆ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಅವರಿಗೆ ಗುರುವಾರ ಪಾಸಿಟಿವ್‌ ಬಂದಿದ್ದು ಅವರ ಸಂಪರ್ಕಕ್ಕೆ ಬಂದಿರುವ ಕುಟುಂಬ ಸದಸ್ಯರು ಹಾಗೂ ಪೊಲೀಸ್‌ ಸಿಬ್ಬಂದಿಯನ್ನು ಕ್ವಾರಂಟೈನ್‌ ಮಾಡಲಾಗಿದೆ. ಮುಂಜಾಗೃತಾ ಕ್ರಮವಾಗಿ ಮದ್ದೂರು ಸಂಚಾರ ಠಾಣೆ, ಪಟ್ಟಣ ಪೊಲೀಸ್‌ ಠಾಣೆ, ಸರ್ಕಲ್‌ ಇನ್‌ಸ್ಪೆಕ್ಟರ್‌ ಕಚೇರಿ ಹಾಗೂ ಪೊಲೀಸ್‌ ವಸತಿ ಗೃಹ ಭಾಗವನ್ನು ನಿಷೇಧಿತ ವಲಯ ಎಂದು ಘೋಷಣೆ ಮಾಡಲಾಗಿದೆ.

ಸೋಂಕಿತ ಒಟ್ಟು 9 ಮಂದಿಯಲ್ಲಿ 6 ಮಂದಿ ಮದ್ದೂರು ತಾಲ್ಲೂಕಿಗೆ ಸೇರಿದ್ದಾರೆ. ಎಲ್ಲರೂ ಶೀತಜ್ವರ ಮಾದರಿಯ ಅನಾರೋಗ್ಯ ಸಮಸ್ಯೆಯಿಂದ (ಐಎಲ್‌ಐ) ಬಳಲುತ್ತಿದ್ದವರು. ಅವರು ಬೆಂಗಳೂರು, ಕನಕಪುರಗಳಿಂದ ಮದ್ದೂರಿಗೆ ಬಂದ ಇತಿಹಾಸವಿದೆ. ನೆಗಡಿ, ಕೆಮ್ಮು, ಜ್ವರ ಇದ್ದ ಹಿನ್ನೆಲೆಯಲ್ಲಿ ಇವರು ಮದ್ದೂರು ತಾಲ್ಲೂಕು ಆಸ್ಪತ್ರೆಯ ಫೀವರ್‌ ಕ್ಲಿನಿಕ್‌ಗೆ ಬಂದು ತೋರಿಸಿದ್ದರು.

ರೋಗ ಲಕ್ಷಣ ಕಂಡುಬಂದ ಹಿನ್ನೆಲೆಯಲ್ಲಿ ಕೋವಿಡ್‌ ಪರೀಕ್ಷೆಗೆ ಒಳಗಾಗುವಂತೆ ವೈದ್ಯರು ಸಲಹೆ ನೀಡಿದ್ದರು. ವೈದ್ಯರ ಸಲಹೆಯ ಮೇರೆಗೆ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಅವರಿಗೆ ಪಾಸಿಟಿವ್ ಬಂದಿದೆ. ಎಲ್ಲರನ್ನೂ ಕೋವಿಡ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಉಳಿದ ಮೂವರಲ್ಲಿ ಒಬ್ಬರು ಮಂಡ್ಯ ತಾಲ್ಲೂಕು, ಇನ್ನೊಬ್ಬರು ಪಾಂಡವಪುರ ತಾಲ್ಲೂಕಿಗೆ ಸೇರಿದ್ದಾರೆ. ಇನ್ನೊಂದು ಪ್ರಕರಣ ಬೆಂಗಳೂರು ಜಿಲ್ಲೆಯಿಂದ ಮಂಡ್ಯಕ್ಕೆ ಕಳುಹಿಸಿದ ಪ್ರಕರಣವಾಗಿದೆ.

ಇಲ್ಲಿಯವರೆಗೂ ಜಿಲ್ಲೆಯಾದ್ಯಂತ 14,883 ಮಂದಿಯ ಗಂಟಲು ದ್ರವ ಸಂಗ್ರಹ ಮಾಡಲಾಗಿದೆ. ಅವರಲ್ಲಿ 382 ಮಂದಿಯಲ್ಲಿ ಕೋವಿಡ್‌ ಪತ್ತೆಯಾಗಿದ್ದು 13,943 ಮಂದಿಯಲ್ಲಿ ನೆಗೆಟಿವ್‌ ಬಂದಿದೆ.561 ಮಂದಿಯ ಫಲಿತಾಂಶ ನಿರೀಕ್ಷೆ ಮಾಡಲಾಗುತ್ತಿದೆ. ಇಲ್ಲಿಯವರೆಗೂ 334 ಮಂದಿ ಕೋವಿಡ್‌ನಿಂದ ಗುಣಮುಖರಾಗಿದ್ದಾರೆ. 57 ಮಂದಿ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT