ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್–19 | ಮಂಡ್ಯದಲ್ಲಿ ಲೆಕ್ಕಕ್ಕೇ ಸಿಗದ ವಲಸಿಗರ ಸಂಖ್ಯೆ

ಚೆಕ್‌ಪೋಸ್ಟ್‌ ದಾಟಿ ಬರಲು ರಾಜಕಾರಣಿಗಳ ಪ್ರಭಾವ ಕಾರಣ: ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸ
Last Updated 2 ಮೇ 2020, 21:22 IST
ಅಕ್ಷರ ಗಾತ್ರ

ಮಂಡ್ಯ: ಲಾಕ್‌ಡೌನ್‌ ಘೋಷಣೆಯಾದ ನಂತರವೂ ಮುಂಬೈನಿಂದ ಸಾವಿರಾರು ವಲಸಿಗರು ಜಿಲ್ಲೆಗೆ ಬಂದಿದ್ದಾರೆ ಎಂಬ ವಿಷಯ ಜಿಲ್ಲೆಯಾದ್ಯಂತ ಚರ್ಚೆಗೆ ಕಾರಣವಾಗಿದೆ.

ಖರ್ಜೂರ ಸಾಗಿಸುವ ವಾಹನದಲ್ಲಿ ಬಂದ ವ್ಯಕ್ತಿ ಹಾಗೂ ಮೃತದೇಹದೊಂದಿಗೆ ಆಂಬುಲೆನ್ಸ್‌ನಲ್ಲಿ ಬಂದ ನಾಲ್ವರಲ್ಲಿ ಕೋವಿಡ್‌– 19 ದೃಢಪಟ್ಟ ನಂತರ, ಮುಂಬೈ ವಲಸಿಗರಿಂದ ಹಳ್ಳಿಗಳಲ್ಲಿ ಸೋಂಕು ಹರಡುವ ಅಪಾಯ ಹೆಚ್ಚಿದೆ.

ಮುಂಬೈನಿಂದ ಎಷ್ಟು ಜನರು ಬಂದಿದ್ದಾರೆ ಎಂಬುದಕ್ಕೆ ಜಿಲ್ಲಾಡಳಿತದ ಬಳಿ ನಿಖರವಾದ ಲೆಕ್ಕವಿಲ್ಲ. 15 ಸಾವಿರ ವಲಸಿಗರು ಬಂದಿದ್ದಾಗಿ ಪಾಂಡವಪುರ ಉಪ ವಿಭಾಗಾಧಿಕಾರಿ ಶೈಲಜಾ ತಿಳಿಸಿದ್ದರೆ, 200 ಮಂದಿ ಮಾತ್ರ ಮುಂಬೈನಿಂದ ಬಂದಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಹೇಳಿದ್ದಾರೆ. ಇದು, ಗೊಂದಲಕ್ಕೆ ಕಾರಣವಾಗಿದೆ.

‘ಸಾವಿರಾರು ಜನರು ಪ್ರತ್ಯೇಕವಾಗಿ ಬಸ್‌ ಮಾಡಿಕೊಂಡು 20ಕ್ಕೂ ಹೆಚ್ಚು ಜಿಲ್ಲೆ, ನೂರಾರು ಚೆಕ್‌ಪೋಸ್ಟ್‌ಗಳನ್ನು ದಾಟಿ
ಬಂದಿದ್ದಾರೆ. ಪ್ರಭಾವಿ ರಾಜಕಾರಣಿಗಳ ಬೆಂಬಲ ಇಲ್ಲದೇ ಇದು ಹೇಗೆ ಸಾಧ್ಯ?’ ಎಂಬ ಶಂಕೆಯೂ ಜನರಿಂದ ವ್ಯಕ್ತವಾಗಿದೆ. ಮುಂಬೈನಲ್ಲಿ ಮೃತಪಟ್ಟ ವ್ಯಕ್ತಿ ಶವ ಸಾಗಿಸಲೂ ರಾಜಕಾರಣಿಗಳ ಪ್ರಭಾವ ಬಳಸಲಾಗಿದೆ ಎನ್ನಲಾಗುತ್ತಿದೆ.

‘ಮುಂಬೈ ವಲಸಿಗರನ್ನು, ಸ್ಥಳೀಯ ರಾಜಕಾರಣಿಗಳು ಮೊದಲಿನಿಂದಲೂ ಓಟ್‌ ಬ್ಯಾಂಕ್‌ ಮಾಡಿಕೊಂಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಕರೆಸುವುದು ಸಾಮಾನ್ಯ. ಆದರೆ ಕೊರೊನಾ ಸೋಂಕಿನ ಸಂದರ್ಭದಲ್ಲಿ ಅಪಾಯವನ್ನೇ ಆಹ್ವಾನಿಸಿದ್ದಾರೆ. ಜಿಲ್ಲಾಡಳಿತ ಕೆಲವರನ್ನು ಗುರುತಿಸಿ ಹೋಂ ಕ್ವಾರಂಟೈನ್‌ ಮಾಡಿದೆ. ಆದರೆ, ಎಲ್ಲರನ್ನೂ ಗುರುತಿಸುವ ಕೆಲಸ ಆಗಿಲ್ಲ’ ಎಂದು ಕೆ.ಆರ್‌.ಪೇಟೆ ತಾಲ್ಲೂಕು ಮುದುಗೆರೆ ಗ್ರಾಮದ ರೈತ ಮುಖಂಡ ಎಂ.ವಿ.ರಾಜೇಗೌಡ ಹೇಳಿದರು.‌

ಮೃತಪಟ್ಟ ವ್ಯಕ್ತಿಗೆ ಕೋವಿಡ್‌ ಇತ್ತು: ಪುಟ್ಟರಾಜು
ಮುಂಬೈನಲ್ಲಿ ಮೃತಪಟ್ಟ ಬಿ.ಕೊಡಗಹಳ್ಳಿ ಗ್ರಾಮದ ವ್ಯಕ್ತಿಗೆ ಕೋವಿಡ್‌–19 ಇತ್ತು ಎಂದು ಅವರ ಸಂಬಂಧಿಕರೇ ನನಗೆ ತಿಳಿಸಿದ್ದಾರೆ. ಸರ್ಕಾರ ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು’ ಎಂದು ಮೇಲುಕೋಟೆ ಕ್ಷೇತ್ರದ ಶಾಸಕ ಸಿ.ಎಸ್‌.ಪುಟ್ಟರಾಜು ಶನಿವಾರ ಇಲ್ಲಿ ಆಗ್ರಹಿಸಿದರು.

‘ಮೃತದೇಹದ ಜೊತೆ ಆಂಬುಲೆನ್ಸ್‌ನಲ್ಲಿ ಬಂದವರ ಪೈಕಿ ಒಬ್ಬರು ಕೆ.ಆರ್‌.ಪೇಟೆ ಪಟ್ಟಣದಲ್ಲಿ ಇಳಿದುಕೊಂಡಿದ್ದಾರೆ. ಆ ವ್ಯಕ್ತಿ ಇನ್ನೂ ಪತ್ತೆಯಾಗಿಲ್ಲ, ಕೂಡಲೇ ಅವರನ್ನು ಪತ್ತೆ ಹಚ್ಚಿ ಪರೀಕ್ಷೆಗೆ ಒಳಪಡಿಸಬೇಕು’ ಎಂದು ಆಗ್ರಹಿಸಿದರು.

‘ಶವದ ಜೊತೆ ಬಂದವರು ಮಾರ್ಗದಲ್ಲಿ ವಿವಿಧೆಡೆ ಊಟ, ತಿಂಡಿ ಮಾಡಿದ್ದಾರೆ. ಹೀಗಾಗಿ, ಸೋಂಕು ಹರಡಿರುವ ಅಪಾಯಗಳಿವೆ. ಸರ್ಕಾರಿ ವಾಹನದಲ್ಲಿ ಶವವನ್ನು ಇನ್ನೊಂದು ರಾಜ್ಯಕ್ಕೆ ಕಳುಹಿಸುವಲ್ಲಿ ಮಹಾರಾಷ್ಟ್ರ ಸರ್ಕಾರವೂ ನಿರ್ಲಕ್ಷ್ಯ ತೋರಿದೆ’ ಎಂದು ಆರೋಪಿಸಿದರು.

‘ಪತ್ತೆ ಕೆಲಸ ಶಿಕ್ಷಕರಿಗೆ’

ಮಂಡ್ಯ ಜಿಲ್ಲೆಗೆ ಮುಂಬೈನಿಂದ ಬಂದಿರುವ ವಲಸಿಗರನ್ನು ಪತ್ತೆ ಹಚ್ಚುವ ಕೆಲಸವನ್ನು, ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಸೂಚನೆ ನೀಡಿದ್ದಾರೆ.

ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಶನಿವಾರ ನಡೆದ ವಿಡಿಯೊ ಕಾನ್ಫರೆನ್ಸ್‌ ವೇಳೆ ಅವರು ಈ ಸೂಚನೆ ನೀಡಿದ್ದಾರೆ. ‘ಶಿಕ್ಷಕರು ಗ್ರಾಮಗಳಲ್ಲಿ ಮನೆ, ಮನೆಗೆ ತೆರಳಿ ಸಮೀಕ್ಷೆ ನಡೆಸಿ ನಿತ್ಯವೂ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು. ನಂತರ ಅವರ ಅರೋಗ್ಯ ತಪಾಸಣೆಗೆ ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳಬೇಕು’ ಎಂದು ತಿಳಿಸಿದ್ದಾರೆ.

**

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವಲಸಿಗರನ್ನು ಗುರುತಿಸಿ, ಎಲ್ಲರಿಗೂ ಕೋವಿಡ್‌ ಪರೀಕ್ಷೆ ನಡೆಸಲು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.
-ಡಾ.ಎಂ.ವಿ.ವೆಂಕಟೇಶ್‌, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT