ಬುಧವಾರ, ಮೇ 12, 2021
18 °C
ತುರ್ತು ಅಗತ್ಯವುಳ್ಳ ರೋಗಿಗಳಿಗೆ ತೊಂದರೆ, ಶಾಸಕರ ಒತ್ತಡದಿಂದ ವೈದ್ಯರಿಗೆ ತಲೆನೋವು

ಮಂಡ್ಯ: ಐಸಿಯು, ವೆಂಟಿಲೇಟರ್‌ನಲ್ಲೇ ಹೆಚ್ಚು ದಿನ ಚಿಕಿತ್ಸೆ

ಎಂ.ಎನ್‌.ಯೋಗೇಶ್‌ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ವೆಂಟಿಲೇಟರ್‌, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು ಶೀಘ್ರ ಬಿಡುಗಡೆಯಾಗದ ಕಾರಣ ಹೊಸದಾಗಿ ಐಸಿಯು ಅವಶ್ಯಕತೆಯುಳ್ಳವರಿಗೆ ತೊಂದರೆಯಾಗಿದೆ. 14 ದಿನ ಮುಗಿದ ನಂತರವೂ ಆಸ್ಪತ್ರೆಯಲ್ಲೇ ಉಳಿಯುತ್ತಿರುವ ಕಾರಣ ಇತರರಿಗೆ ಹಾಸಿಗೆಯ ಕೊರತೆ ಉಂಟಾಗಿದೆ.

ಕೋವಿಡ್‌–19 ದೃಢಪಟ್ಟು, ಉಸಿರಾಟದ ಸಮಸ್ಯೆಯಾಗಿ ಐಸಿಯು ಸೇರಿದವರು 15 ದಿನ ಕಳೆದರೂ ಅಲ್ಲಿಂದ ಬಿಡುಗಡೆಯಾಗುತ್ತಿಲ್ಲ. ಪರಿಸ್ಥಿತಿ ಸುಧಾರಿಸಿ ಸಾಮಾನ್ಯ ವಾರ್ಡ್‌ಗೆ ಸ್ಥಳಾಂತರ ಮಾಡಬೇಕು ಎನ್ನುವಷ್ಟರಲ್ಲಿ ರೋಗಿಯ ಆಮ್ಲಜನಕ ಪ್ರಮಾಣ ಕುಗ್ಗುತ್ತಿದ್ದು ಮತ್ತೆ ಐಸಿಯುಗೆ ದಾಖಲಾಗುತ್ತಿದ್ದಾರೆ. ಒಮ್ಮೆ ದಾಖಲಾದವರಿಗೆ ಹೆಚ್ಚು ದಿನಗಳ ಕಾಲ ಚಿಕಿತ್ಸೆ ಪಡೆಯುತ್ತಿರುವ ಕಾರಣ ಹೊಸದಾಗಿ ಐಸಿಯು ಅವಶ್ಯಕತೆಯುಳ್ಳವರು ಪರದಾಡುತ್ತಿದ್ದಾರೆ.

ಕೋವಿಡ್‌ ತೀವ್ರತೆ ಭಯ ಹುಟ್ಟಿಸಿದ್ದು ರೋಗಿಗಳು ಆತಂಕದಿಂದಲೇ ಐಸಿಯುಗೆ ದಾಖಲಾಗುತ್ತಿದ್ದಾರೆ. ಒಮ್ಮೆ ದಾಖಲಾದವರು ವಾರ ಕಳೆದರೂ ಅಲ್ಲಿಂದ ಹೊರ ಬರುತ್ತಿಲ್ಲ. ಸಾಮಾನ್ಯವಾಗಿ ಕೋವಿಡ್‌ ದೃಢಪಟ್ಟವರು 14 ದಿನಗಳೊಳಗೆ ಗುಣಮುಖರಾಗುತ್ತಾರೆ. ಆದರೆ ಐಸಿಯು ದಾಖಲಾದವರು ತಿಂಗಳವರೆಗೂ ಚಿಕಿತ್ಸೆ ಪಡೆಯುತ್ತಿರುವ ಕಾರಣ ವೈದ್ಯರಿಗೆ ತಲೆನೋವಾಗಿದೆ. ಕೋವಿಡ್‌ನಿಂದ ಗುಣಮುಖರಾದವರೂ ಇತರ ಆರೋಗ್ಯ ಸಮಸ್ಯೆಗಳಿಂದ ಮತ್ತೆ ಆಸ್ಪತ್ರೆ ಸೇರುತ್ತಿರುವುದು ಆತಂಕ ಮೂಡಿಸಿದೆ.

‘ಕೋವಿಡ್‌ನಿಂದ ಗುಣಮುಖರಾಗಿ ಮನೆಗೆ ತೆರಳಿದವರು ಮತ್ತೆ ಆಸ್ಪತ್ರೆಗೆ ಬರುತ್ತಿದ್ದಾರೆ. ಕೋವಿಡ್‌ ಇಲ್ಲದಿದ್ದರೂ ಆಮ್ಲಜನಕದ ಕೊರತೆಯುಂಟಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಐಸಿಯುಗಾಗಿ ಒತ್ತಡ ಹಾಕುತ್ತಿದ್ದಾರೆ. ಪರಿಸ್ಥಿತಿಯನ್ನು ನಿಭಾಯಿಸುವುದು ಹೇಗೆ ಎಂಬ ಪ್ರಶ್ನೆ ಕಾಡುತ್ತಿದೆ’ ಎಂದು ವೈದ್ಯರೊಬ್ಬರು ತಿಳಿಸಿದರು.

ಭಯದಲ್ಲಿರುವ ರೋಗಿಗಳು 14 ದಿನಗಳ ನಂತರವೂ ಮನೆಗೆ ತೆರಳಲು ನಿರಾಕರಿಸುತ್ತಿದ್ದಾರೆ. ಇನ್ನೂ ಒಂದು ವಾರ ಆಸ್ಪತ್ರೆಯಲ್ಲೇ ಉಳಿಯುವುದಾಗಿ ತಿಳಿಸುತ್ತಿರುವ ಕಾರಣ ಬೇರೆ ರೋಗಿಗಳಿಗೆ ಹಾಸಿಗೆ ಸಮಸ್ಯೆ ಉಂಟಾಗಿದೆ. ಮನೆಗೆ ತೆರವಂತೆ ತಿಳಿಸಿದರೆ ಶಾಸಕರು, ಇತರ ಜನಪ್ರತಿನಿಧಿಗಳಿಂದ ವೈದ್ಯರ ಮೇಲೆ ಒತ್ತಡ ಹಾಕಿಸಿ ಆಸ್ಪತ್ರೆಯಲ್ಲೇ ಉಳಿಯುತ್ತಿದ್ದಾರೆ.

ರಾಜಕಾರಣಿಗಳ ಒತ್ತಡ: ಜಿಲ್ಲಾಸ್ಪತ್ರೆ ಹಾಗೂ ಇತರ ತಾಲ್ಲೂಕು ಆಸ್ಪತ್ರೆಗಳ ಐಸಿಯುನಲ್ಲಿ ರೋಗಿಗಳನ್ನು ದಾಖಲು ಮಾಡಲು ಜಿಲ್ಲೆಯ ಶಾಸಕರು ಹಾಗೂ ಇತರ ಜನಪ್ರತಿನಿಧಗಿಳು ಒತ್ತಡ ಹೇರುತ್ತಿದ್ದಾರೆ. ಇದರಿಂದ ತುರ್ತು ವೆಂಟಿಲೇಟರ್‌ ಅವಶ್ಯಕತೆಯುಳ್ಳ ರೋಗಿಗಳು ಚಿಕಿತ್ಸೆಯಿಂದ ವಂಚಿತರಾಗುತ್ತಿದ್ದಾರೆ. ಶಾಸಕರ ಒತ್ತಡಕ್ಕೆ ಮಣಿಯುತ್ತಿರುವ ವೈದ್ಯರು ರೋಗಿಗಳು ಹೆಚ್ಚು ದಿನಗಳ ಕಾಲ ಐಸಿಯುಯಲ್ಲೇ ಉಳಿಯುತ್ತಿದ್ದಾರೆ.

‘ಆಸ್ಪತ್ರೆಯ ವೆಂಟಿಲೇಟರ್‌ ಸಂಖ್ಯೆ ಹೆಚ್ಚಿಸಲು ಶಾಸಕರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ, ಹೆಚ್ಚಿನ ಆಮ್ಲಜನಕ ಪೂರೈಕೆಯ ಬಗ್ಗೆ ಅವರು ತಲೆಕೆಡಿಸಿಕೊಳ್ಳುತ್ತಿಲ್ಲ. ಆದರೆ ತಮ್ಮ ಸಂಬಂಧಿಕರಿಗೆ ಐಸಿಯುನಲ್ಲೇ ಚಿಕಿತ್ಸೆ ನೀಡಬೇಕು ಎಂದು ಒತ್ತಡ ಹಾಕುತ್ತಿದ್ದಾರೆ’ ಎಂದು ವೈದ್ಯರೊಬ್ಬರು ಬೇಸರ ವ್ಯಕ್ತಪಡಿಸಿದರು.

ವೈದ್ಯರ ವಿರುದ್ಧ ಆಕ್ರೋಶ: ಮಿಮ್ಸ್‌ ಆಸ್ಪತ್ರೆಯಲ್ಲಿ ಐಸಿಯು, ವೆಂಟಿಲೇಟರ್‌ಗಾಗಿ ಜನರು ವೈದ್ಯರ ವಿರುದ್ಧ ಆಕ್ರೋಶಗೊಳ್ಳುತ್ತಿದ್ದಾರೆ. ಜನರನ್ನು ನಿಭಾಯಿಸುವುದೇ ವೈದ್ಯರಿಗೆ ದೊಡ್ಡ ಸವಾಲಿನ ಕೆಲಸವಾಗಿದೆ. ಪ್ರತಿದಿನ ವೈದ್ಯರು ಇಂತಹ ಆಕ್ರೋಶ ಎದುರಿಸುತ್ತಿದ್ದಾರೆ.

‘ಜನರು ಭಾವುಕರಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ನಾವು ಬಹಳ ತಾಳ್ಮೆಯಿಂದ ವರ್ತನೆ ಮಾಡುತ್ತಿದ್ದೇವೆ. ಹೊಸದಾಗಿ 150 ಹಾಸಿಗೆಗಳ ವಾರ್ಡ್‌ ಸಿದ್ಧಗೊಂಡರೆ ಒತ್ತಡ ಕಡಿಮೆಯಾಗಲಿದೆ’ ಎಂದು ಮಿಮ್ಸ್‌ ನಿರ್ದೇಶಕ ಡಾ.ಎಂ.ಆರ್‌.ಹರೀಶ್‌ ಹೇಳಿದರು.

ಹೊಸದಾಗಿ ಬಂದ 25 ವೆಂಟಿಲೇಟರ್‌
ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಏ.29ರಂದು ಮುಖ್ಯಮಂತ್ರಿಗಳೊಂದಿಗೆ ವಿಡಿಯೊ ಸಂವಾದದಲ್ಲಿ ಪಾಲ್ಗೊಂಡು ತಕ್ಷಣಕ್ಕೆ 50 ವೆಂಟಿಲೇಟರ್‌ ಬೇಕು ಎಂದು ಮನವಿ ಮಾಡಿದ್ದರು. ಮುಖ್ಯಮಂತ್ರಿಗಳು 50 ವೆಂಟಿಲೇಟರ್‌ ನೀಡಲು ಒಪ್ಪಿದ್ದು ಅಂದೇ ಜಿಲ್ಲೆಗೆ 50 ವೆಂಟಿಲೇಟರ್‌ ಬರಲಿವೆ ಎಂದು ತಿಳಿಸಿದ್ದರು. ಆದರೆ ಈವರೆಗೆ 25 ವೆಂಟಿಲೇಟರ್‌ಗಳಷ್ಟೇ ಬಂದಿವೆ.

‘ಸದ್ಯಕ್ಕೆ 25 ವೆಂಟಿಲೇಟರ್‌ ಬಂದಿದ್ದು ಅಳವಡಿಕೆ ಕಾರ್ಯ ನಡೆಯುತ್ತಿದೆ. ಇನ್ನೂ 25 ವೆಂಟಿಲೇಟರ್‌ಗಾಗಿ ನಿರೀಕ್ಷೆ ಮಾಡುತ್ತಿದ್ದೇವೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್‌.ಪಿ.ಮಂಚೇಗೌಡ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು