ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: 3 ಲಕ್ಷ ದಾಟಿದ ಕೋವಿಡ್‌ ಪರೀಕ್ಷೆ: ತಗ್ಗಿದ ಸೋಂಕು

ಶೇ 2ರಷ್ಟು ಪ್ರಕರಣಗಳು ಸಕ್ರಿಯ, ಅತೀ ಹೆಚ್ಚು ಪರೀಕ್ಷೆ ನಡೆಸಿದ ಜಿಲ್ಲೆಯಲ್ಲಿ ಮಂಡ್ಯಕ್ಕೆ ಸ್ಥಾನ
Last Updated 29 ನವೆಂಬರ್ 2020, 10:45 IST
ಅಕ್ಷರ ಗಾತ್ರ

ಮಂಡ್ಯ: ಜಿಲ್ಲೆಯಲ್ಲಿ ಕೋವಿಡ್‌–19 ಪತ್ತೆಗಾಗಿ ಇಲ್ಲಿಯವರೆಗೆ ಮಾಡಿರುವ ಪರೀಕ್ಷೆಗಳ ಸಂಖ್ಯೆ 3 ಲಕ್ಷ ದಾಟಿದ್ದು ರಾಜ್ಯದಲ್ಲಿ ಅತೀ ಹೆಚ್ಚು ಕೋವಿಡ್‌ ಪರೀಕ್ಷೆ ನಡೆಸಿದ ಜಿಲ್ಲೆಗಳ ಪಟ್ಟಿಯಲ್ಲಿ ಮಂಡ್ಯ ಜಿಲ್ಲೆ ಪ್ರಮುಖ ಸ್ಥಾನ ಪಡೆದಿದೆ.

ಒಟ್ಟು ಪರೀಕ್ಷೆಯಲ್ಲಿ ಕೇವಲ ಶೇ 1 ರಷ್ಟು ಜನರಿಗೆ ಕೋವಿಡ್‌ ದೃಢಪಟ್ಟಿದೆ. ಕೋವಿಡ್‌ ಪರೀಕ್ಷೆಯ ಸಂಖ್ಯೆ 1 ಲಕ್ಷ ದಾಟಿದಾಗ ಪಾಸಿಟಿವ್‌ ಪ್ರಕರಣಗಳ ಸಂಖ್ಯೆ ಶೇ 8.27 ರಷ್ಟಿತ್ತು. 2 ಲಕ್ಷ ಪ್ರಕರಣ ದಾಟಿದಾಗ ಶೇ 7 ರಷ್ಟಿತ್ತು. 3 ಲಕ್ಷ ದಾಟಿದಾಗ ಶೇ 1ಕ್ಕೆ ಇಳಿಕೆಯಾಗಿರುವುದು ವಿಶೇಷವಾಗಿದೆ.

ಜಿಲ್ಲೆಯಲ್ಲಿ ಭಾನುವಾರದವರೆಗೆ 3,03,600 ಕೊರೊನಾ ಪರೀಕ್ಷೆಗಳನ್ನು ಮಾಡಲಾಗಿದ್ದು, ಇದರಲ್ಲಿ 1,91,893 ಆರ್‌ಟಿಪಿಸಿಆರ್‌, 1,11,707 ರ್‍ಯಾಪಿಡ್‌ ಪರೀಕ್ಷೆ ಮಾಡಲಾಗಿದೆ. ಎರಡೂ ಮಾದರಿಯ ಪರೀಕ್ಷೆಗಳಲ್ಲಿ ರ‍್ಯಾಪಿಡ್‌ ಪರೀಕ್ಷೆಯಲ್ಲಿ ಹೆಚ್ಚು ಪ್ರಕರಣ ಪತ್ತೆಯಾಗಿವೆ. ಜಿಲ್ಲೆಯಲ್ಲಿ ಇಲ್ಲಿಯವರೆಗೆ 18,363 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು, ಶೇ 97.61 ರಷ್ಟು ಜನರು ಗುಣಮುಖರಾಗಿದ್ದಾರೆ. ಉಳಿದಂತೆ ಶೇ 2.30 ಪ್ರಕರಣಗಳು ಸಕ್ರಿಯವಾಗಿವೆ.

ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಆರ್‌ಟಿಪಿಸಿಆರ್‌ ಹಾಗೂ ರ‍್ಯಾಪಿಡ್‌ ಪರೀಕ್ಷೆ ಹೆಚ್ಚು ಮಾಡುತ್ತಿದ್ದು, ಇದರಿಂದ ಸೋಂಕಿತರ ಪತ್ತೆ ಕಾರ್ಯ ಶೀಘ್ರವಾಗಿ ನಡೆಯುತ್ತಿದೆ. ಪರೀಕ್ಷೆ ಸಂಖ್ಯೆ ತಿಂಗಳ ಹಿಂದೆ ನಿತ್ಯವೂ 4–5 ಸಾವಿನ ಸಂಖ್ಯೆ ದಾಖಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಶೂನ್ಯ ಸಂಖ್ಯೆ ದಾಖಲಾಗಿದೆ.

ಆರೋಗ್ಯ ಇಲಾಖೆಯ ಕ್ಷಿಪ್ರಗತಿಯ ಕಾರ್ಯಾಚರಣೆ ಸೋಂಕಿತರ ಸಂಖ್ಯೆ ಇಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಯಾರಿಗಾದರೂ ಜ್ವರ ಕಂಡು ಬಂದರೆ ಕಡ್ಡಾಯವಾಗಿ ಕೋವಿಡ್‌ ಪರೀಕ್ಷೆ ಮಾಡಿಸಲಾಗುತ್ತಿದ್ದು, ಪ್ರತಿ ತಾಲ್ಲೂಕಿನಲ್ಲಿ 4 ಸಂಚಾರ ತಂಡಗಳು ಕಾರ್ಯ ನಿರ್ವಹಿಸುತ್ತಿದೆ. ತಿಂಗಳ ಪೂರ್ತಿ ಯಾವ ರೀತಿ ಎಲ್ಲೆಲ್ಲಿ ಕಾರ್ಯ ನಿರ್ವಹಿಸಬೇಕು ಎಂಬುದನ್ನು ಮೊದಲೇ ಯೋಜನೆ ರೂಪಿಸಿ ಕಾರ್ಯಗತಗೊಳಿಸಲಾಗುತ್ತಿದೆ. ಇದರಿಂದ ಪ್ರತಿ ಹಳ್ಳಿಯಲ್ಲೂ ಸೋಂಕಿತರ ಸಂ‌ಖ್ಯೆ ಗಣನೀಯವಾಗಿ ಇಳಿಕೆಯಾಗುತ್ತಿದೆ.

‘ಆರೋಗ್ಯ ಇಲಾಖೆಯ ತಂಡದ ಶ್ರಮದ ಫಲದಿಂದಾಗಿ ಜನರು ಜಾಗೃತರಾಗುತ್ತಿದ್ದು, ಕೊರೊನಾ ತಡೆಗಟ್ಟುವಲ್ಲಿ ಸಹಕರಿಸುತ್ತಿದ್ದಾರೆ. ವಯಸ್ಸಾದವರು ನಿರ್ಲಕ್ಷ್ಯ ವಹಿಸುತ್ತಿದ್ದು, ಅವರ ಮೇಲೆ ತೀವ್ರ ನಿಗಾ ವಹಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತರ ಸಂಖ್ಯೆ ಇಳಿಮುಖವಾಗಿದೆ ಎಂದು ಯಾರೂ ನಿರ್ಲಕ್ಷ್ಯ ಮಾಡಬಾರದು. ಇದು ಚಳಿಗಾಲವಾಗಿದ್ದು ಸೋಂಕು ಹೆಚ್ಚು ಜಾಗೃತವಾಗಿರುತ್ತದೆ. ಹೀಗಾಗಿ ಜನರು ಎಚ್ಚರಿಕೆಯಿಂದ ಇರಬೇಕು’ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಧನಂಜಯ್‌ ತಿಳಿಸಿದರು.

15 ದಿನದಿಂದ ಸಾವು ಶೂನ್ಯ

ಇಲ್ಲಿಯವರೆಗೆ ಜಿಲ್ಲೆಯಲ್ಲಿ ಕೋವಿಡ್‌ನಿಂದಾಗಿ 147 ಮಂದಿ ಮೃತಪಟ್ಟದ್ದಾರೆ. ಕಳೆದ 15 ದಿನಗಳಿಂದ ಒಬ್ಬರೂ ಮೃತಪಟ್ಟಿಲ್ಲ ಎನ್ನುವುದು ವಿಶೇಷವಾಗಿದೆ. ತಿಂಗಳ ಹಿಂದೆ ನಿತ್ಯ ಒಬ್ಬರಲ್ಲಾ ಒಬ್ಬರು ಮೃತಪಡುತ್ತಿದ್ದರು. ಆದರೆ ಈಗ ರೋಗಿಗಳು ಚಿಕಿತ್ಸೆಗೆ ಸಂದನೆ ನೀಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.

ಸಕ್ರಿಯ ಪ್ರಕರಣಗಳ ಸಂಖ್ಯೆ 300ಕ್ಕೆ ಇಳಿದಿದ್ದು ಇನ್ನು 15 ದಿನಗಳಲ್ಲಿ ಇದು ಎರಡು ಅಂಕಿಗೆ ಇಳಿಯಲಿದೆ ಎಂದು ಆರೋಗ್ಯ ಇಲಾಖೆ ನಿರೀಕ್ಷಿಸಿದೆ.

* ಸಮರೋಪಾದಿಯಲ್ಲಿ ಪರೀಕ್ಷೆ ನಡೆಸಿದ ಹಿನ್ನೆಲೆಯಲ್ಲಿ ಸೋಂಕಿತರನ್ನು ಶೀಘ್ರವಾಗಿ ಪತ್ತೆ ಮಾಡಲು ಸಾಧ್ಯವಾಗಿದೆ. ಕೋವಿಡ್‌ ವಿರುದ್ಧದ ಹೋರಾಟ ಮುಂದುವರಿಯಲಿದೆ

–ಡಾ.ಎಂ.ವಿ.ವೆಂಕಟೇಶ್‌, ಜಿಲ್ಲಾಧಿಕಾರಿ

ತಾಲ್ಲೂಕುವಾರು ಪರೀಕ್ಷಾ ವಿವರ
ತಾಲ್ಲೂಕು–ಸಂಖ್ಯೆ
ಮಂಡ್ಯ 79583
ಮದ್ದೂರು 41059
ಮಳವಳ್ಳಿ 39183
ಪಾಂಡವ 30376
ಶ್ರೀರಂಗಪಟ್ಟಣ 29901
ಕೆ.ಆರ್‌.ಪೇಟೆ 39386
ನಾಗಮಂಗಲ 43350
ಇತರೆ ಜಿಲ್ಲೆ 162
ಒಟ್ಟು 3,03,600

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT