ಗುರುವಾರ , ಜೂನ್ 30, 2022
21 °C
ಮಕ್ಕಳ ಪ್ರತ್ಯೇಕ ಕೋವಿಡ್‌ ಕೋವಿಡ್‌ ಕೇಂದ್ರವಿಲ್ಲ, ಆಸ್ಪತ್ರೆಗಳಲ್ಲಿ ಮಕ್ಕಳ ಪ್ರತ್ಯೇಕ ವಾರ್ಡ್‌ ರೂಪಿಸಿಲ್ಲ

5,308 ಮಕ್ಕಳಿಗೆ ಸೋಂಕು‌, ರಕ್ಷಣೆಗೆ ಸಿದ್ಧತೆ ಇಲ್ಲ

ಎಂ.ಎನ್‌.ಯೋಗೇಶ್‌ Updated:

ಅಕ್ಷರ ಗಾತ್ರ : | |

ಮಂಡ್ಯ: ಕೋವಿಡ್‌ 2ನೇ ಅಲೆಯಲ್ಲಿ ಜಿಲ್ಲೆಯ 5,308 ಮಕ್ಕಳಿಗೆ ಕೊರೊನಾ ಸೋಂಕು ತಗುಲಿದ್ದು ಮಕ್ಕಳ ರಕ್ಷಣೆಗೆ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಳ್ಳದಿರುವುದು ಪೋಷಕರನ್ನು ಕಂಗೆಡಿಸಿದೆ.

3ನೇ ಅಲೆ ಮಕ್ಕಳಿಗೆ ಅಪಾಯ ಸೃಷ್ಟಿಸಲಿದೆ ಎಂಬ ವರದಿ ಇರುವ ಕಾರಣ ಮಕ್ಕಳ ರಕ್ಷಣಾ ನಿರ್ದೇಶನಾಲಯ ತಿಂಗಳ ಹಿಂದೆಯೇ ಮಾರ್ಗಸೂಚಿ ಪ್ರಕಟಿಸಿದೆ. ಮುಂದೆ ಬರುವ ಸವಾಲನ್ನು ಎದುರಿಸಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲು ಸೂಚನೆ ನೀಡಿದೆ. ಇಷ್ಟಾದರೂ ಜಿಲ್ಲೆಯಲ್ಲಿ ಯಾವುದೇ ಸಿದ್ಧತೆಗಳಾಗಿಲ್ಲ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇಲ್ಲಿಯವರೆಗೂ ಮಕ್ಕಳಿಗೆ ಪ್ರತ್ಯೇಕ ವಾರ್ಡ್‌ ಕೂಡ ರೂಪಿಸಲು ಸಾಧ್ಯವಾಗಿಲ್ಲ.

ಮಕ್ಕಳ ಸುರಕ್ಷತೆಗೆ ಸೂಕ್ತ ಕ್ರಮ ವಹಿಸುವಂತೆ ಈಗಾಗಲೇ ಸುಪ್ರೀಂ ಕೋರ್ಟ್‌ ಕೂಡ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಮಕ್ಕಳ ರಕ್ಷಣಾ ನಿರ್ದೇಶನಾಲಯ ಹಲಸು ಸೂಚನೆ ನೀಡಿದೆ. ಎಲ್ಲಾ ಜಿಲ್ಲೆಗಳಲ್ಲಿ ಮಕ್ಕಳಿಗೆ ಪ್ರತ್ಯೇಕ ಕೋವಿಡ್‌ ಕೇಂದ್ರ ರೂಪಿಸಬೇಕು, ಜಿಲ್ಲಾಸ್ಪತ್ರೆ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ಮಕ್ಕಳ ವಾರ್ಡ್‌ ಮೀಸಲಿಡಬೇಕು ಎಂದು ನಿರ್ದೇಶನ ಮಾಡಿದೆ.

ಆದರೆ ಈವರೆಗೂ ಜಿಲ್ಲೆಯಲ್ಲಿ ಪ್ರತ್ಯೇಕ್‌ ಕೋವಿಡ್‌ ಕೇಂದ್ರವಿಲ್ಲ, ಯಾವುದೇ ಆಸ್ಪತ್ರೆಯಲ್ಲಿ ಮಕ್ಕಳ ಪ್ರತ್ಯೇಕ ವಾರ್ಡ್‌ ಇಲ್ಲ. ಮೈಸೂರು ಸೇರಿದಂತೆ ಹಲವು ಜಿಲ್ಲೆಗಳಲ್ಲೀ ಈ ಪ್ರಯತ್ನ ನಡೆದಿದ್ದರೂ ಮಂಡ್ಯ ಜಿಲ್ಲೆಯ ಅಧಿಕಾರಿ ವರ್ಗ ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ.

ಮಕ್ಕಳಲ್ಲಿ ಅತೀ ಹೆಚ್ಚು ಸೋಂಕು ತಗುಲಿರುವ ಜಿಲ್ಲೆಗಳ ಪೈಕಿ ಮಂಡ್ಯವೂ ಒಂದು. ಮೂರು ವಿಭಾಗದಲ್ಲಿ ಸೋಂಕಿತರನ್ನು ಗುರುತಿಸಲಾಗಿದೆ. ಮೇ 28ರವರೆಗೂ 0–6 ವರ್ಷದೊಳಗಿನ 867 ಮಕ್ಕಳಿಗೆ ಸೋಂಕು ದೃಢಪಟ್ಟಿದೆ. 7–12 ವರ್ಷ ವಯಸ್ಸಿನೊಳಗಿನ 1,503 ಮಕ್ಕಳಿಗೆ ಸೋಂಕು ಕಾಣಿಸಿಕೊಂಡಿದ್ದರೆ, 13–18ರೊಳಗಿನ 2,938 ಮಕ್ಕಳಲ್ಲಿ ಕೋವಿಡ್‌ ಪತ್ತೆಯಾಗಿದೆ.

2ನೇ ಅಲೆಯೊಂದರಲ್ಲೇ ಒಟ್ಟು 5,308 ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿದ್ದರೂ ಮಕ್ಕಳ ರಕ್ಷಣೆಗೆ ಜಿಲ್ಲೆಯ ಅಧಿಕಾರಿಗಳು ಮುಂದಾಗದಿರುವುದು ಪೋಷಕರಲ್ಲಿ ಆತಂಕ ಮೂಡಿಸಿದೆ.

‘ನನ್ನ 14 ವರ್ಷದ ಮಗನಿಗೆ ಸೋಂಕು ಕಾಣಿಸಿಕೊಂಡಿದ್ದ ಕಾರಣ ಮಿಮ್ಸ್‌ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ದೊಡ್ಡವರ ಜೊತೆಯಲ್ಲೇ ಮಕ್ಕಳನ್ನೂ ಇರಿಸಲಾಗಿತ್ತು. ಮಕ್ಕಳಿಗೆ ವಿಶೇಷ ಕಾಳಜಿಯ ಅವಶ್ಯಕತೆ ಇದ್ದು ಪ್ರತ್ಯೇಕ ವಾರ್ಡ್‌ ಅವಶ್ಯಕತೆ ಇದೆ’ ಎಂದು ಗಾಂಧಿನಗರದ ದಂಪತಿ ತಿಳಿಸಿದರು.

ನೋಡೆಲ್‌ ಅಧಿಕಾರಿಗಳ ನೇಮಕ: ಮಕ್ಕಳಲ್ಲೂ ಕೋವಿಡ್‌ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಿರ್ದೇಶನಾಲಯ ‘ಕೋವಿಡ್‌ ವಿಪತ್ತು ನಿರ್ವಹಣಾ ಕೋಶ’ ರಚನೆ ಮಾಡಿದೆ. ಅದರ ಅಡಿ ಪ್ರತಿಯೊಂದು ಜಿಲ್ಲೆಗೂ ಒಬ್ಬೊಬ್ಬರು ನೋಡೆಲ್‌ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ಅವರು ಆರೋಗ್ಯ ಇಲಾಖೆಯೊಂದಿಗೆ ಕೆಲಸ ಮಾಡಿ ಮಕ್ಕಳ ರಕ್ಷಣೆಗೆ ಮುಂದಾಗಬೇಕು. ಮಂಡ್ಯ ಜಿಲ್ಲೆಗೆ ಇಬ್ಬರು ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.

‘ಮಕ್ಕಳ ರಕ್ಷಣೆಗಾಗಿ ಕೋವಿಡ್‌ ಕೇರ್‌ ಕೇಂದ್ರ ತೆರೆಯಲು ಈಗಾಗಲೇ ಆದಿಚುಂಚನಗಿರಿ ಮಠದ ಜೊತೆ ಮಾತನಾಡಲಾಗಿದೆ. ಅವರು ನಡೆಸುವ ಅನಾಥ ಕುಟೀರಗಳನ್ನೇ ಕೋವಿಡ್‌ ಕೇಂದ್ರಗಳನ್ನಾಗಿ ಮಾಡಲು ಚಿಂತಿಸಲಾಗಿದೆ. ಆಸ್ಪತ್ರೆಗಳಲ್ಲಿ ಮಕ್ಕಳ ಪ್ರತ್ಯೇಕ ವಾರ್ಡ್‌ ರೂಪಿಸಲು ಬುಧವಾರ ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುವುದು’ ಎಂದು ಮಹಿಳೆ ಹಾಗೂ ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಎಸ್‌.ರಾಜಮೂರ್ತಿ ತಿಳಿಸಿದರು.

*****

ಬಾಲ್ಯ ವಿವಾಹಕ್ಕೆ ತಡೆ ಇಲ್ಲ

ಕಳೆದೊಂದು ತಿಂಗಳಿಂದ ಜಿಲ್ಲೆಯಲ್ಲಿ ಅತೀ ಹೆಚ್ಚು ಬಾಲ್ಯವಿವಾಹಗಳಾಗಿವೆ. ಕಳೆದ ಅಕ್ಷಯ ತೃತೀಯ ಒಂದು ದಿನದಲ್ಲಿ 10ಕ್ಕೂ ಹೆಚ್ಚು ಮಕ್ಕಳಿಗೆ ಮದುವೆ ಮಾಡಲಾಗಿದೆ ಎಂಬ ಮಾಹಿತಿ ಇದೆ. ಆದರೆ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಾಹಿತಿ ಅನ್ವಯ ಕೇವಲ 3 ಎಫ್‌ಐಆರ್‌ ದಾಖಲಾಗಿದೆ.

‘ಅಧಿಕಾರಿಗಳ ನಡುವೆ ಸಮನ್ವಯತೆ ಇಲ್ಲದ ಕಾರಣ ಬಾಲ್ಯವಿವಾಹ ತಡೆಯಲು ಸಾಧ್ಯವಾಗುತ್ತಿಲ್ಲ. ಸಹಾಯವಾಣಿ ಸಿಬ್ಬಂದಿ ದಾಳಿ ನಡೆಸಲು ವಾಹನ ಸೌಲಭ್ಯವನ್ನೂ ನೀಡುತ್ತಿಲ್ಲ’ ಎಂದು ಸಿಬ್ಬಂದಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು