ಸೋಮವಾರ, ಮಾರ್ಚ್ 1, 2021
30 °C
ರೋಗಮುಕ್ತರಾಗಿ ಬಿಡುಗಡೆಯಾದರು, ಮರುಹುಟ್ಟು ನೀಡಿದ ವೈದ್ಯರಿಗೆ ಧನ್ಯವಾದ ಹೇಳಿದರು

ಮಂಡ್ಯ: ಕೋಟಿ ದೇವರ ಆಶೀರ್ವಾದದಿಂದ ಕೋವಿಡ್‌ ಗೆದ್ದೆವು!

ಎಂ.ಎನ್‌.ಯೋಗೇಶ್‌‌ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಕೋವಿಡ್‌–19ನಿಂದ ಸಂಪೂರ್ಣವಾಗಿ ಗುಣಮುಖರಾಗಿರುವ ಮಳವಳ್ಳಿಯ 6 ನಿವಾಸಿಗಳು ಜಿಲ್ಲಾಸ್ಪತ್ರೆಯಲ್ಲಿ ಸಿಕ್ಕ ಚಿಕಿತ್ಸೆ ಹಾಗೂ ಇತರ ಸೌಲಭ್ಯಗಳ ಬಗ್ಗೆ ಮನಸಾರೆ ಹೊಗಳಿದರು. ವೈದ್ಯರು, ನರ್ಸ್‌ಗಳ ಸೇವೆಯಿಂದ ಮರುಹುಟ್ಟು ಸಿಕ್ಕಿದೆ ಎಂದು ಧನ್ಯತಾ ಭಾವ ವ್ಯಕ್ತಪಡಿಸಿದರು.

179ನೇ ರೋಗಿಯಾಗಿ ಗುರುತಿಸಿಕೊಂಡಿದ್ದ ಇಮ್ರಾನ್‌ ಪಾಷಾ ಆರಂಭದಲ್ಲಿ ಪೊಲೀಸರು ಹಾಗೂ ವೈದ್ಯರಿಗೆ ಅಸಹಕಾರ ತೋರಿದ್ದರು. ಆದರೆ ಕ್ರಮೇಣ ಆಸ್ಪತ್ರೆಯಲ್ಲಿ ಸಿಕ್ಕ ಸೇವೆಯಿಂದ ಅವರ ಸಂತೃಪ್ತರಾಗಿದ್ದಾರೆ. ತಾನು ಆರಂಭದಲ್ಲಿ ಮಾಡಿದ್ದು ತಪ್ಪು ಎಂಬ ಭಾವನೆ ಅವರೊಳಗಿದೆ. ತಮ್ಮ ಆರೋಗ್ಯಕ್ಕಾಗಿ ಸರ್ಕಾರ ವಹಿಸಿರುವ ಕಾಳಜಿಯಿಂದಾಗಿ ಯಾವ ಆರೋಗ್ಯ ಸಮಸ್ಯೆಯೂ ಇಲ್ಲದಂತೆ ಬಂದಿದ್ದೇವೆ ಎಂದು ತಿಳಿಸಿದರು.

‘ನಮ್ಮ ದೇಶದಲ್ಲಿ ಕೋಟಿ ದೇವರಿದ್ದಾರೆ. ಕೋಟಿ ದೇವರ ಆಶೀರ್ವಾದದಿಂದ ನಾವಿಂದು ಕೋವಿಡ್‌ ರೋಗವನ್ನು ಸೋಲಿಸಿದ್ದೇವೆ. ಆರಂಭದಲ್ಲಿ ವೈದ್ಯರು, ಪೊಲೀಸರು ನಮ್ಮ ಪ್ರಶ್ನೆಗಳಿಗೆ ಉತ್ತರ ನೀಡುತ್ತಿರಲಿಲ್ಲ, ಹೀಗಾಗಿ ಬೇಸರವಾಗಿತ್ತು. ನಮ್ಮ ಆರೋಗ್ಯಕ್ಕಾಗಿ ವೈದ್ಯರು ಹಗಲಿರುಳು ಸೇವೆ ಸಲ್ಲಿಸುತ್ತಿರುವುದನ್ನು ಕಂಡು ಬೇಸರ ಮರೆಯಾಯಿತು’ ಎಂದು ಇಮ್ರಾನ್‌ ಪಾಷಾ ಹೇಳಿದರು.

‘ದೆಹಲಿಯಿಂದ ಬಂದಿದ್ದ 10 ಮಂದಿ ಧರ್ಮಗುರುಗಳನ್ನು ನಾನು ಒಮ್ಮೆ ಮಾತ್ರ ಭೇಟಿ ಮಾಡಿದ್ದೆ. ನಮ್ಮ ಊರಿನಲ್ಲಿ ಇತರ 7 ಮಂದಿ ದೆಹಲಿಯ ತಬ್ಲಿಗಿ ಧರ್ಮಸಭೆಗೆ ಹೋಗಿ ಬಂದಿದ್ದರು. ಯಾರಿಂದ ನಮಗೆ ಕೋವಿಡ್‌ 19 ಬಂದು ಎಂಬುದು ಇನ್ನೂ ಗೊತ್ತಾಗಿಲ್ಲ. ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಆದರೆ ಈ ರೋಗಕ್ಕೆ ಯಾರೂ ಹೆದರಬೇಕಾಗಿಲ್ಲ. ನಮ್ಮ ದೇಶದಲ್ಲಿ ಉತ್ತಮ ಚಿಕಿತ್ಸೆ ದೊರೆಯುತ್ತದೆ’ ಎಂದು ಅವರು ಹೇಳಿದರು.

ಗೌರವದಿಂದ ನೋಡಿಕೊಂಡರು: ಇಮ್ರಾನ್‌ ಪಾಷಾ ಅವರ ತಾಯಿ, 60 ವರ್ಷ ವಯಸ್ಸಿನ ಜಮೀರ್‌ ತಾಜ್‌ 237ನೇ ರೋಗಿಯಾಗಿ ಗುರುತಿಸಿಕೊಂಡಿದ್ದರು. ಇವರು ಕೂಡ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.

‘ಆಸ್ಪತ್ರೆಯಲ್ಲಿ ವೈದ್ಯರು, ನರ್ಸ್‌ಗಳು ನಮ್ಮನ್ನು ಬಹಳ ಗೌರದಿಂದ ನಡೆಸಿಕೊಂಡರು. ಗೀಜರ್‌ನಿಂದ ಬಿಸಿನೀರು ಕಾಯಿಸಿಕೊಟ್ಟರು. ಯಾವುದೇ ತೊಂದರೆಯಾಗದಂತೆ ನಮ್ಮನ್ನು ನೋಡಿಕೊಂಡರು. ಆರಂಭದಲ್ಲಿ ನಮಗೆ ಕೋವಿಡ್‌ ಇದೆ ಎಂದು ಗೊತ್ತಾದಾಗ ಅಪಾರ ಭಯವಾಗಿತ್ತು. ಆದರೆ ಆಸ್ಪತ್ರೆಗೆ ತೆರಳಿದ ನಂತರ ಎಲ್ಲಾ ಭಯ ಮಾಯವಾಯಿತು. ಇದು ಆರೋಗ್ಯವಾಗಿ ಬಂದಿರುವುದಕ್ಕೆ ಬಹಳ ಸಂತೋಷವಾಗಿದೆ’ ಎಂದು ಜಮೀರ್‌ ತಾಜ್‌ ಹೇಳಿದರು.

ವೈದ್ಯರ ಶ್ರಮ: ಇಮ್ರಾನ್‌ ಪಾಷಾ ಅವರ ಸಂಪರ್ಕಕ್ಕೆ ಬಂದು ಕೋವಿಡ್‌ ಸೋಂಕು ಹರಡಿದ್ದ ಮಳವಳ್ಳಿಯ ಸಾಹಿಲ್‌ ಕೂಡ ಈಗ ಗುಣಮುಖರಾಗಿದ್ದಾರೆ. ಅವರು ವೈದ್ಯರ ಶ್ರಮದ ಬಗ್ಗೆ ಮಾತನಾಡಿದ್ದಾರೆ. ‘ವೈದ್ಯರು ಪ್ರತಿದಿನ ನಮ್ಮ ಆರೋಗ್ಯದ ಬಗ್ಗೆ ಅಪಾರ ಕಾಳಜಿ ಮಾಡುತ್ತಿದ್ದರು. ಪಿಪಿಇ ಕಿಟ್‌ ಧರಿಸಿ ನಮಗಾಗಿ ಕಷ್ಟಪಡುತ್ತಿದ್ದರು. ಅವರು ನೀಡಿದ ಸೂಚನೆಗಳನ್ನು ನಾವು ತಪ್ಪದೇ ಪಾಲನೆ ಮಾಡಿದೆವು. ನಮಗೆ ರೋಗದ ಯಾವುದೇ ಲಕ್ಷಣಗಳು ಇರಲಿಲ್ಲ. ಆದರೂ ಅವರು ಕೊಟ್ಟ ಸೂಚನೆಗಳನ್ನು ಚಾಚೂ ತಪ್ಪದೇ ಪಾಲನೆ ಮಾಡುತ್ತಿದ್ದೆವು. ಅವರು ಪಟ್ಟ ಶ್ರಮಕ್ಕೆ ಪ್ರತಿಫಲ ಸಿಕ್ಕಿದ್ದು ಬಹಳ ಸಂತಸವಾಗಿದೆ’ ಎಂದು ಸಾಹಿಲ್ಲ ಹೇಳಿದರು.

ಇಮ್ರಾನ್‌ ಪಾಷಾ ಅವರ 65 ವರ್ಷದ ತಂದೆ ಕೋವಿಡ್‌ ಆಸ್ಪತ್ರೆಯಲ್ಲೇ ಇದ್ದಾರೆ. ಅವರ 8 ವರ್ಷದ ಮಗಳು ತಷ್ಮಯಾ ಗುಣಮುಖರಾಗಿದ್ದಾರೆ. ಅವರ ಅಕ್ಕನ ಮಗ ಅಫ್ತಾಬ್‌ ಖಾನ್‌ , ಈದ್ಗಾ ಬಡಾವಣೆಯ ಖಾಲಿದ್‌ ಬಿಡುಗಡೆಯಾಗಿದ್ದಾರೆ. ಆಸ್ಪತ್ರೆಯಿಂದ ಬಿಡುಗಡೆಯಾಗಿರುವ ಆರೂ ಮಂದಿಯನ್ನು ಬಾಚನಹಳ್ಳಿ ಮೊರಾರ್ಜಿ ವಸತಿ ಶಾಲೆಯಲ್ಲಿ ಇರಿಸಲಾಗಿದೆ. 14 ದಿನಗಳ ಅಂತಿಮ ಹಂತದ ಕ್ವಾರಂಟೈನ್‌ ಪೂರ್ಣಗೊಳಿಸಿದ ನಂತರ ಅವರು ತಮ್ಮ ಮನೆಗಳಿಗೆ ಮರಳಲಿದ್ದಾರೆ.

********

ಬಿರಿಯಾನಿ ತಿನ್ನಲು ಬರ್ತೀನೆಂದ ವೈದ್ಯ!

‘ಡಾ.ಹರ್ಷ ಎನ್ನುವ ವೈದ್ಯರೊಬ್ಬರು ನಮ್ಮ ಜೊತೆ ಐದು ದಿನ ಇದ್ದರು. ಸದಾ ನಮ್ಮ ಭುಜ ಮುಟ್ಟಿ ಮಾತನಾಡಿಸುತ್ತಿದ್ದರು. ನಿಮಗೆ ಏನೂ ಆಗಿಲ್ಲ, ಗುಣವಾಗುತ್ತೀರಿ ಎಂದು ಧೈರ್ಯ ತುಂಬುತ್ತಿದ್ದರು. ನಿಮ್ಮ ಮನೆಯಲ್ಲಿ ಬಿರಿಯಾನಿ ತಿನ್ನಲು ಬರುತ್ತೇನೆ ಎಂದು ಹೇಳಿದರು. ಫೋನ್‌ ನಂಬರ್‌ ಕೊಟ್ಟು, ಯಾವಾಗ ಬೇಕಾದರೂ ಕರೆ ಮಾಡಿ ಎಂದು ತಿಳಿಸಿದರು’ ಎಂದು ಇಮ್ರಾನ್‌ ಪಾಷಾ ನೆನಪು ಬಿಚ್ಚಿಟ್ಟರು.

‘ಹರ್ಷ ಅವರಿಗೆ ಪ್ರತಿನಿತ್ಯ ಕರೆ ಮಾಡುತ್ತಿದ್ದೇನೆ. ಅವರ ಬೇಜಾರು ಮಾಡಿಕೊಳ್ಳದೇ ಉತ್ತರ ನೀಡುತ್ತಾರೆ. ಮನೆಯಲ್ಲಿ ಬಿರಿಯಾನಿ ಮಾಡಿಸಿ ಅವರನ್ನು ಆಹ್ವಾನ ಮಾಡುತ್ತೇನೆ’ ಎಂದು ಹೇಳಿದರು.

********

ಮಗುವಿಗೆ ಬಿಸ್ಕತ್‌, ಪೆನ್ಸಿಲ್‌ ಕೊಟ್ಟರು

‘ನನ್ನ ಮೊಮ್ಮಗಳು ನೋಡಲು ಮುದ್ದಾಗಿದ್ದಾಳೆ. ಅವಳನ್ನು ನೋಡಿ ವೈದ್ಯರು, ನರ್ಸ್‌ಗಳು ಮುದ್ದಾಡುತ್ತಿದ್ದರು. ತಮ್ಮ ಮನೆಯಿಂದ ಬಿಸ್ಕತ್‌ ತಂದು ಕೊಡುತ್ತಿದ್ದರು. ಅವಳ ಜೊತೆ ಫೋಟೊ ತೆಗೆದುಕೊಳ್ಳುತ್ತಿದ್ದರು’ ಎಂದು ಅಜ್ಜಿ ಜಮೀರ್‌ ತಾಜ್‌ ಹೇಳಿದರು.

‘ಮಗುವಿಗೆ ಬೇಸರವಾಗಬಾರದು ಎಂಬ ಕಾರಣಕ್ಕೆ ವೈದ್ಯರು ಆಕೆಗೆ ಡ್ರಾಯಿಂಗ್‌ ಶೀಟ್‌, ಬಣ್ಣದ ಪೆನ್ಸಿಲ್‌ ತಂದು ಕೊಡುತ್ತಿದ್ದರು. ಅವರ ಪ್ರೀತಿಯನ್ನು ಮರೆಯಲು ಸಾಧ್ಯವಿಲ್ಲ’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು