ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ| 35 ವಾರ್ಡ್‌ಗಳಲ್ಲೂ ಕೋವಿಡ್‌ ಕಾರ್ಯಪಡೆ

ನಗರಸಭೆ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ, ಧೈರ್ಯ ಮೂಡಿಸುವ ಕಾರ್ಯಕ್ರಮ ಆಯೋಜನೆ
Last Updated 24 ಜುಲೈ 2020, 19:30 IST
ಅಕ್ಷರ ಗಾತ್ರ

ಮಂಡ್ಯ: ನಗರದಲ್ಲಿ ಕೋವಿಡ್‌ ಪೀಡಿತರ ಸಂಖ್ಯೆ ದಿನೇದಿನೇ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಜನರಿಗೆ ಜಾಗೃತಿ ಮೂಡಿಸಲು ಎಲ್ಲಾ 35 ವಾರ್ಡ್‌ಗಳಲ್ಲಿ ನಗರಸಭಾ ಅಧಿಕಾರಿಗಳು, ಸದಸ್ಯರು ಹಾಗೂ ಸ್ವಯಂ ಸೇವಕರನ್ನು ಒಳಗೊಂಡ ಕೋವಿಡ್‌ ಕಾರ್ಯಪಡೆ ರಚನೆ ಮಾಡಲಾಗಿದೆ.

ನಗರದಾದ್ಯಂತ ಸೀಲ್‌ಡೌನ್‌ ಪ್ರದೇಶಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು ಸೋಂಕು ಇತರರಿಗೆ ಹರಡದಂತೆ ಮುಂಜಾಗೃತಾ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ. ಕೆಲವೆಡೆ ಅಧಿಕಾರಿಗಳು ಹಾಗೂ ಆಶಾಕಾರ್ಯಕರ್ತೆಯರ ಸೂಚನೆ ಮೀರಿ ಜನರು ಹೊರಗೆ ಓಡಾಡುತ್ತಿದ್ದಾರೆ. ಕೋವಿಡ್‌ ನಿರ್ವಹಣೆಗೆ ಸ್ಥಳೀಯರನ್ನೂ ಒಳಗೊಳ್ಳುವ ಉದ್ದೇಶದಿಂದ ನಗರಾಭಿವೃದ್ಧಿ ಇಲಾಖೆ ಸ್ಥಳೀಯ ವಾರ್ಡ್‌ ಮಟ್ಟದಲ್ಲಿ ಕಾರ್ಯಪಡೆ ರಚಿಸುವಂತೆ ಸೂಚಿಸಿತ್ತು. ಅದರಂತೆ ಈಗಾಗಲೇ ನಗರದ ಎಲ್ಲಾ ವಾರ್ಡ್‌ಗಳ್ಲಿ 8 ಸದಸ್ಯರ ಸಮಿತಿ ರಚನೆ ಮಾಡಲಾಗಿದೆ.

ಕಾರ್ಯಪಡೆಯಲ್ಲಿ ನಗರಸಭೆ ಅಧಿಕಾರಿಗಳು ಅಧ್ಯಕ್ಷರಾಗಿರುತ್ತಾರೆ. ವಿವಿಧ ವಾರ್ಡ್‌ಗಳಲ್ಲಿ ನಗರಸಭೆಯ ಲೆಕ್ಕಾಧಿಕಾರಿ, ಪರಿಸರ ಎಂಜಿನಿಯರ್‌, ಜೂನಿಯರ್‌ ಎಂಜಿನಿಯರ್‌ಗಳ ಅಧ್ಯಕ್ಷರಾಗಿದ್ದಾರೆ. ಆಯಾ ವಾರ್ಡ್‌ ಸದಸ್ಯರು, ಪೊಲೀಸ್‌ ಸಿಬ್ಬಂದಿ, ಆರೋಗ್ಯ ಸಹಾಯಕರು, ಸಮಾಜ ಕಲ್ಯಾಣ ಇಲಾಖೆಯಿಂದ ಒಬ್ಬ ಸಿಬ್ಬಂದಿ, ಅಂಗನವಾಡಿ, ಆಶಾ ಕಾರ್ಯಕರ್ತೆ ಹಾಗೂ ಸ್ಥಳೀಯ ಸ್ವಯಂಸೇವಕರು ಸಮಿತಿಯಲ್ಲಿ ಇದ್ದಾರೆ.

ಯಾವುದೇ ವಾರ್ಡ್‌ನಲ್ಲಿ ಕೋವಿಡ್‌ ಪಾಸಿಟಿವ್‌ ಬಂದರೆ ಆ ಬೀದಿಯನ್ನು ಸೀಲ್‌ಡೌನ್‌ ಮಾಡಲಾಗುತ್ತದೆ. ಇಂತಹ ಸಂದರ್ಭದಲ್ಲಿ ಆ ವಾರ್ಡ್‌ನ ಕಾರ್ಯಪಡೆ ಸದಸ್ಯರು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಾರೆ. ಪ್ರಥಮ, ದ್ವಿತೀಯ ಹಂತದ ಸಂಪರ್ಕಿತರ ಪತ್ತೆ, ಜನರು ಮನೆಯಿಂದ ಹೊರಗೆ ಬಾರದಂತೆ ನಿಗಾ, ಅಗತ್ಯ ವಸ್ತು ಪೂರೈಕೆ ಮುಂತಾದ ಕೆಲಸ ಮಾಡುತ್ತಾರೆ. ಸೀಲ್‌ಡೌನ್‌ ನಿಯಮ ಉಲ್ಲಂಘಿಸಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳುವ ಶಿಫಾರಸು ಕೂಡ ಮಾಡುತ್ತಾರೆ.

‘ಪ್ರತಿ ಸೀಲ್‌ಡೌನ್‌ ಬಡಾವಣೆಯಲ್ಲಿ ಸೂಚನೆಗಳ ಒಂದು ಫಲಕ ಹಾಕಲಾಗಿರುತ್ತದೆ. ಆ ಫಲಕದಲ್ಲಿ ಕಾರ್ಯಪಡೆ ಸದಸ್ಯರ ಮೊಬೈಲ್‌ ಸಂಖ್ಯೆ ಹಾಕಲಾಗಿರುತ್ತದೆ. ಆ ಸಂಖ್ಯೆ ಸಂಪರ್ಕಿಸಿ ಮಾಹಿತಿ ನೀಡಿದರೆ ಜನರ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು’ ಎಂದು 11 ವಾರ್ಡ್‌ ಕಾರ್ಯಪಡೆ ಸದಸ್ಯ ಅರುಣ್‌ಕುಮಾರ್‌ ಹೇಳಿದರು.

ಧೈರ್ಯ ಮೂಡಿಸುವ ಕೆಲಸ: ಕೋವಿಡ್‌ ಭೀತಿಯಲ್ಲಿರುವ ಜನರಿಗೆ ಧೈರ್ಯ ಮೂಡಿಸುವ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲು ಅವಕಾಶ ನೀಡಲಾಗಿದೆ. ಆಯಾ ವಾರ್ಡ್‌ನಲ್ಲಿ ಕೋವಿಡ್‌ನಿಂದ ಗುಣಮುಖರಾಗಿ ಬಂದಿರುವ ವ್ಯಕ್ತಿಗಳನ್ನು ಆಹ್ವಾನಿಸಿ ಅವರಿಂದ ಸಾರ್ವಜನಿಕರಿಗೆ ಸುರಕ್ಷತಾ ಮಾಹಿತಿ ಕೊಡಿಸುವ, ರೋಗದ ವಿರುದ್ಧ ಹೋರಾಡಲು ಸ್ಫೂರ್ತಿ ತುಂಬುವ ಕೆಲಸ ಮಾಡಲು ಸಮಿತಿ ಸದಸ್ಯರಿಗೆ ಸೂಚನೆ ನಿಡಲಾಗಿದೆ.

‘ಪ್ರತಿ ವಾರ್ಡ್‌ನಲ್ಲಿ ಉದ್ಯಾನಗಳಿದ್ದು ಅಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಮೂಡಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಕೋವಿಡ್‌ ಬಂದವರನ್ನು ಸನ್ಮಾನಿಸಿ ಅವರಿಂದ ಉಪಯುಕ್ತ ಮಾಹಿತಿ ಪಡೆಯಲಾಗುವುದು’ ಎಂದು ಸದಸ್ಯರೊಬ್ಬರು ತಿಳಿಸಿದರು.

*****

ವಾಟ್ಸ್‌ ಆ್ಯಪ್‌ ತಂಡ ರಚನೆ

ವಾರ್ಡ್‌ವಾರು ಕಾರ್ಯಪಡೆ ಸದಸ್ಯರು ಮೊದಲ ಸುತ್ತಿನ ಸಭೆ ನಡೆಸುತ್ತಿದ್ದು ಜಾಗೃತಿ ಕಾರ್ಯಕ್ರಮಗಳ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. 11ನೇ ವಾರ್ಡ್‌ ಕಾರ್ಯಪಡೆ ಸಮಿತಿ ಸದಸ್ಯರು ವಾಟ್ಸ್‌ ಆ್ಯಪ್‌ ಗ್ರೂಪ್‌ ರಚನೆ ಮಾಡಿಕೊಂಡಿದ್ದು ಮುಂದೆ ಕೈಗೊಳ್ಳಬಹುದಾದ ಕಾರ್ಯಕ್ರಮಗಳ ಬಗ್ಗೆ ಪಟ್ಟಿ ಮಾಡಿದ್ದಾರೆ.

‘ನಮ್ಮ 11ನೇ ವಾರ್ಡ್‌ನಲ್ಲಿ 3 ಮಂದಿ ಕೋವಿಡ್‌ನಿಂದ ಗುಣಮುಖರಾಗಿ ಬಂದಿದ್ದಾರೆ. ಅವರನ್ನು ಕರೆಸಿ ಜನರಿಗೆ ಜಾಗೃತಿ ಮೂಡಿಸಲು ನಿರ್ಧರಿಸಿದ್ದೇವೆ’ ಎಂದು ಸದಸ್ಯರು ತಿಳಿಸಿದರು.

*******

ಸ್ಥಳೀಯರಿಗೂ ಕೋವಿಡ್ ನಿರ್ವಹಣೆಯ ಜವಾಬ್ದಾರಿ ನೀಡುವ ಉದ್ದೇಶದಿಂದ ಕಾರ್ಯಪಡೆ ರಚನೆ ಮಾಡಲಾಗಿದೆ. ಎಲ್ಲಾ ವಾರ್ಡ್‌ ಸದಸ್ಯರು ಇದಕ್ಕೆ ಉತ್ತಮವಾಗಿ ಸ್ಪಂದಿಸಿದ್ದಾರೆ

–ಎಸ್‌.ಲೋಕೇಶ್‌, ನಗರಸಭೆ ಪೌರಾಯುಕ್ತ, ಮಂಡ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT