ಮಂಗಳವಾರ, ನವೆಂಬರ್ 19, 2019
29 °C
ಗ್ರಾಮದ ಜಯಮ್ಮ ಅವರ ಯಶೋಗಾಥೆ, ದೇಶದ ವಿವಿಧೆಡೆ ಕಾರ್ಯಕ್ರಮ

ಮಂಡ್ಯದ ಕಾಗೆಹಳ್ಳದದೊಡ್ಡಿ| ಕಬ್ಬು ಕಡಿಯುತ್ತಿದ್ದವರು ಸಾಂಸ್ಕೃತಿಕ ರಾಯಭಾರಿಯಾದರು!

Published:
Updated:
Prajavani

ಮಂಡ್ಯ: ಕಬ್ಬು ಕಡಿದು, ಕಂತೆ ಕಟ್ಟಿ, ಲಾರಿಗೆಸೆಯುತ್ತಿದ್ದ ಆ ಮಹಿಳೆ ಇಂದು ಕನ್ನಡ ನಾಡಿನ ಸಾಂಸ್ಕೃತಿಕ ರಾಯಭಾರಿಯಾದ ಯಶೋಗಾಥೆ ಇದು. ಸಾಕ್ಷರ ಆಂದೋಲನದಲ್ಲಿ ಹೆಸರು ಬರೆಯುವುದನ್ನಷ್ಟೇ ಕಲಿತಿದ್ದ ಅವರು ಕಲಾವಿದೆಯಾಗಿ, ಸಂಘಟಕಿಯಾಗಿ ಬೆಳೆದ ಕತೆ ಇದು.

ತಾಲ್ಲೂಕಿನ ಕಾಗೆಹಳ್ಳದದೊಡ್ಡಿಯ ಜಯಮ್ಮ ತಮ್ಮ ಮೊಗದ ಮೇಲೆ ಚೈತನ್ಯದ ಅಲೆಯನ್ನೇ ತುಂಬಿಕೊಂಡಿದ್ದಾರೆ. ಅವರು ವಿವಾಹವಾಗಿ ಬಂದಾಗ ಜೊತೆ ಇದ್ದುದ್ದು ಬಡತನ ಮಾತ್ರ. ಇರುವುದಕ್ಕೆ ಮನೆ ಇಲ್ಲ, ಬೆಳೆದುಕೊಳ್ಳಲು ಹೊಲವಿಲ್ಲ, ಕಬ್ಬು ಕಡಿದರೆ ಹೊಟ್ಟೆಗೆ ಊಟ. ಬೇರೊಬ್ಬರ ಮನೆಯಲ್ಲಿದ್ದ ಅವರು ಬಡತನದಿಂದ ಎಂದೂ ಕುಗ್ಗಿದವರಲ್ಲ.

ಗ್ರಾಮದಲ್ಲಿದ್ದ ಡೊಳ್ಳು ಕಲಾವಿದರ ತಂಡದ ಜೊತೆ ಗುರುತಿಸಿಕೊಂಡ ಅವರು ಲೋಕಶಿಕ್ಷಣದತ್ತ ಆಸಕ್ತಿ ತೋರಿಸಿದರು. ಗ್ರಾಮದಲ್ಲಿ ತಾವೇ ‘ಕಸ್ತೂರ ಬಾ ಮಹಿಳಾ ಸಂಘ’ ಕಟ್ಟಿದರು. ಸೋಬಾನೆ, ಗೀಗೀ ಪದ, ತತ್ವಪದ, ಭಜನೆ ಕಾರ್ಯಕ್ರಮ ನೀಡಿದರು. ಮಂಗಲ ಗ್ರಾಮದ ನೆಲದನಿ ಸಂಘಟನೆಯ ಸಂಪರ್ಕಕ್ಕೆ ಬಂದು ವಿವಿಧ ಚಟುವಟಿಕೆಯಲ್ಲಿ ಭಾಗವಹಿಸಿದರು.

ಕಸ್ತೂರ ಬಾ ಸಂಘಟನೆ ನೆಹರೂ ಯುವಜನ ಕೇಂದ್ರಕ್ಕೆ ನೋಂದಣಿಯಾಯಿತು. ನಂತರ ರಾಜ್ಯ, ಹೊರರಾಜ್ಯಗಳಲ್ಲೂ ಕಾರ್ಯಕ್ರಮ ನೀಡಿದರು. ಕಲಾಪ್ರದರ್ಶನದ ಜೊತೆ ಸಂಘಟಕಿಯಾಗಿಯೂ ಕೆಲಸ ಮಾಡಿದರು. ವಹಿಸಿದ ಕೆಲಸವನ್ನು ಬಹಳ ಶ್ರದ್ಧೆಯಿಂದ ಮಾಡುತ್ತಿದ್ದ ಜಯಮ್ಮ ಎಲ್ಲರ ಮೆಚ್ಚುಗೆ ಗಳಿಸಿದರು. ನಂತರ ರಾಜ್ಯ ಸಾಂಸ್ಕೃತಿಕ ಪರಂಪರೆಯ ರಾಯಭಾರಿಯಾಗಿ ರಾಷ್ಟ್ರಿಯ ಭಾವೈಕ್ಯ ಶಿಬಿರ, ರಾಷ್ಟ್ರಮಟ್ಟದ ಯುವಜನ ಮೇಳಗಳಲ್ಲಿ ಭಾಗವಹಿಸಿದರು. ತಮಿಳುನಾಡು, ಮಹಾರಾಷ್ಟ್ರ, ಕೇರಳ, ರಾಜಸ್ತಾನ, ಬಿಹಾರ, ಹರಿಯಾಣ, ಪಂಜಾಬ್‌, ದೆಹಲಿಗೂ ಹೋಗಿ ಬಂದರು.

ರಂಗ ಕಲಾವಿದೆ: ವಿವಿಧ ರಂಗತಂಡಗಳ ಜೊತೆ ಗುರುತಿಸಿಕೊಂಡ ಅವರು ಶ್ರೀಕೃಷ್ಣ ಸಂಧಾನ, ಸಂಪೂರ್ಣ ರಾಮಾಯಣ, ಕುರುಕ್ಷೇತ್ರ, ಶ್ರೀದೇವಿ ಮಹಾತ್ಮೆ, ಶ್ರೀನಿವಾಸ ಕಲ್ಯಾಣ, ಭಕ್ತ ಕನಕದಾಸ ಮುಂತಾದ ಪೌರಾಣಿಕ ನಾಟಕಗಳಲ್ಲಿ ಪ್ರತಿಭೆ ತೋರಿದ್ದಾರೆ. ಪಾದುಕಾ ಕಿರೀಟಿ, ಸಿರಿಗೆ ಸೆರೆ, ಸೇವಂತಿ ಸೇವಂತಿ, ಟಿಪ್ಪು ಕಂಡ ಕನಸು ಮುಂತಾದ ಸಾಮಾಜಿಕ ನಾಟಕಗಳಿಗೂ ಬಣ್ಣ ಹಚ್ಚಿದ್ದಾರೆ. ಸದಾ ಹೊಸತೊಂದನ್ನು ಕಲಿಯಬೇಕು ಎಂದು ತುಡಿಯುವ ಅವರು ಪ್ಯಾರಾಸೈಲಿಂಗ್‌, ಟ್ರೆಕ್ಕಿಂಗ್‌ ತರಬೇತಿಯನ್ನೂ ಪಡೆದಿದ್ದಾರೆ. ಸ್ಮಶಾನದಲ್ಲಿ ಸಸಿ ನೆಟ್ಟು ಉಳಿಸಿ, ಬೆಳೆಸುತ್ತಿದ್ದಾರೆ.

ಅನಾರೋಗ್ಯಪೀಡಿತ ಪತಿಯನ್ನು ಸಲಹುವ ಜೊತೆಗೆ ತಮ್ಮ ಬದುಕು, ಮಕ್ಕಳ ಬದುಕನ್ನೂ ಕಟ್ಟಿದ ಅವರು ಮಹಿಳೆಯರಿಗೆ ಮಾದರಿಯಾಗಿದ್ದಾರೆ. ನಿವೇಶನ ಸಂಪಾದಿಸಿ ಸೂರನ್ನೂ ಕಟ್ಟಿಕೊಂಡಿದ್ದಾರೆ. ಮೂರು ವರ್ಷಗಳ ಹಿಂದೆ ಪತಿ ತೀರಿಕೊಂಡಿದ್ದು ತಮ್ಮಿಬ್ಬರು ಪುತ್ರರ ಜೊತೆಗಿದ್ದಾರೆ. ಯುವಜನರಿಗೆ, ಮಹಿಳೆಯರಿಗೆ ಉತ್ಸಾಹ ತುಂಬುತ್ತಾ ಮುನ್ನಡೆಯುತ್ತಿದ್ದಾರೆ.

‘ಬಡತನದ ಕಾರಣದಿಂದ ಮಕ್ಕಳಿಗೂ ವಿದ್ಯಾಭ್ಯಾಸ ಕೊಡಿಸಲು ಸಾಧ್ಯವಾಗಲಿಲ್ಲ. ಆದರೆ ಅವರಿಗೆ ಬದುಕಿನ ಪಾಠ ಹೇಳಿಕೊಟ್ಟಿದ್ದೇನೆ’ ಎಂದು ಜಯಮ್ಮ ವಿಶ್ವಾಸದಿಂದ ನುಡಿದರು.

*******

ಮನಹೋಹನ್‌ಸಿಂಗ್‌ಗೆ ರೊಟ್ಟಿ ತಿನ್ನಿಸಿದರು!

ಜಯಮ್ಮ ಅಡುಗೆ ಕಲೆಯಲ್ಲೂ ಗಮನ ಸೆಳೆದಿದ್ದಾರೆ. ಹೊರರಾಜ್ಯಗಳ ಉತ್ಸವಗಳಲ್ಲಿ ಕರ್ನಾಟಕದ ತಿನಿಸುಗಳ ರುಚಿ ತೋರಿಸಿದ್ದಾರೆ. ಮೈಸೂರು ಪಾಕ್‌, ಒಬ್ಬಟ್ಟು, ತಂಬಿಟ್ಟು, ಕಜ್ಜಾಯ, ಚಕ್ಕುಲಿ, ನಿಪ್ಪಿಟ್ಟು, ರಾಗಿ ರೊಟ್ಟಿ, ಅಕ್ಕಿರೊಟ್ಟಿ, ಉಪ್ಸಾರು, ರಾಗಿ ಮುದ್ದೆ ಮುಂತಾದ ತಿನಿಸುಗಳ ಪರಿಚಯ ಮಾಡಿಕೊಟ್ಟಿದ್ದಾರೆ.

ಎಂಟು ವರ್ಷಗಳ ಹಿಂದೆ ಪಂಜಾಬ್‌ನಲ್ಲಿ ನಡೆದ ಭಾವೈಕ್ಯ ಶಿಬಿರದಲ್ಲಿ ವಿಶೇಷ ಘಟನೆಗೆ ಸಾಕ್ಷಿಯಾದರು. ಶಿಬಿರ ಉದ್ಘಾಟಿಸಿದ್ದ ಅಂದಿನ ಪ್ರಧಾನಮಂತ್ರಿ ಡಾ.ಮನಮೋಹನ್‌ ಸಿಂಗ್‌ ಕರ್ನಾಟಕದ ತಿನಿಸುಗಳ ರುಚಿ ನೋಡಿದ್ದರು. ಅಕ್ಕಿ ರೊಟ್ಟಿ ತಿಂದು ಸಂತಸಪಟ್ಟ ಕ್ಷಣವನ್ನು ಜಯಮ್ಮ ಹೆಮ್ಮೆಯಿಂದ ನೆನಪಿಸಿಕೊಳ್ಳುತ್ತಾರೆ. ದಿವಂಗತ ಅಂಬರೀಷ್‌ ಕೂಡ ಜಯಮ್ಮ ರುಚಿಗೆ ಮನ ಸೋತಿದ್ದು ‘ಮೊಟ್ಟೆ ದೋಸೆ ಜಯಮ್ಮ’ ಎಂದೇ ಬಿರುದು ಕೊಟ್ಟಿದ್ದಾರೆ.

ಪ್ರತಿಕ್ರಿಯಿಸಿ (+)