ಭಾನುವಾರ, ಮೇ 9, 2021
26 °C
ಮೂರು ದಿನಗಳ ನಾಗತಿಹಳ್ಳಿ ಸಂಸ್ಕೃತಿ ಹಬ್ಬಕ್ಕೆ ಚಾಲನೆ, ಗ್ರಾಮೀಣರಿಗೆ ನೇತ್ರ–ಮಧುಮೇಹ ಚಿಕಿತ್ಸೆ

‘ಹಳ್ಳಿಗಳ ಸಂಸ್ಕೃತಿ ಮತ್ತೆ ವಿಜೃಭಿಸುವಂತಾಗಲಿ,

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಾಗಮಂಗಲ: ‘ರಾಜ್ಯದ ಯಾವುದೇ ಹಳ್ಳಿಗಳಲ್ಲೂ ನಡೆಯದ ಸಂಸ್ಕೃತಿ ಹಬ್ಬ ನಾಗತಿಹಳ್ಳಿಯಲ್ಲಿ ನಡೆಯುತ್ತಿದೆ. ಹಳ್ಳಿಗಳ ನೈಜ ಬದುಕನ್ನು ಅರ್ಥಮಾಡಿಕೊಳ್ಳಲು ಇಂತಹ ಸಂಸ್ಕೃತಿ ಹಬ್ಬಗಳು ಎಲ್ಲೆಡೆ ನಡೆಯಬೇಕು’ ಎಂದು ಅಂಕಣಕಾರ, ರಂಗಕರ್ಮಿ ಬಿ.ಚಂದ್ರೇಗೌಡ ಹೇಳಿದರು.

ತಾಲ್ಲೂಕಿನ ಎ.ನಾಗತಿಗಳ್ಳಿಯಲ್ಲಿ ಸಾಹಿತಿ, ಚಲನಚಿತ್ರ ನಿರ್ದೆಶಕ ನಾಗತಿಹಳ್ಳಿ ಚಂದ್ರಶೇಖರ್ ಸಾರಥ್ಯದಲ್ಲಿ ಭಾನುವಾರ ಆರಂಭಗೊಂಡ ‘ನಾಗತಿಹಳ್ಳಿ ಸಂಸ್ಕೃತಿ ಹಬ್ಬ’ದ 17ನೇ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ಪ್ರತಿ ಗ್ರಾಮದಲ್ಲಿ ನಾಗತಿಹಳ್ಳಿ ಚಂದ್ರಶೇಖರ್‌ ಅವರಂಥವರು ಇದ್ದರೆ ಹಳ್ಳಿಗಳು ಸಾಂಸ್ಕೃತಿಕವಾಗಿ ಮತ್ತೆ ವಿಜೃಂಭಿಸುತ್ತವೆ. ಗ್ರಾಮೀಣ ಯುವಕರು ಹೊಣೆಗೇಡಿಗಳಾಗಿ, ಹಳ್ಳಿಯ ನೈಜತೆಯನ್ನು ಕಳೆದುಕೊಳ್ಳುತ್ತಿರುವ ಇಂದಿನ ದಿನಮಾನದಲ್ಲಿ ನಾಗತಿಹಳ್ಳಿ ಸಂಸ್ಕೃತಿ ಹಬ್ಬ ಯುವಜನರಿಗೆ ಮಾರ್ಗದರ್ಶನವಾಗಬೇಕು. ಈ ನಿಟ್ಟಿನಲ್ಲಿ ಕಳೆದ ವರ್ಷ  ಹೊರತುಪಡಿಸಿ 17 ವರ್ಷಗಳಿಂದ ಇಂತಹ ಹಬ್ಬ ಕಾರ್ಯಸಾಧುವಾಗುತ್ತಿರುವುದು ಶ್ಲಾಘನೀಯ’ ಎಂದರು.

‘ಸಂಸ್ಕೃತಿ ಹಬ್ಬದ ಭಾಗವಾಗಿ ನೇತ್ರ ತಪಾಸಣೆ, ಸಕ್ಕರೆ ಕಾಯಿಲೆ ಚಿಕಿತ್ಸಾ ಶಿಬಿರ ನಡೆಯುತ್ತಿರುವುದು ಉತ್ತಮ ಕಾರ್ಯವಾಗಿದೆ. ಹಳ್ಳಿಗಳನ್ನು ರೋಗಮುಕ್ತಗೊಳಿಸುವ ಪ್ರಯತ್ನದಲ್ಲಿ ಇಂತಹ ಶಿಬಿರಗಳು ನಡೆಯಬೇಕು. ನಮ್ಮ ದೇಶಗಳಲ್ಲಿ ಮಧುಮೇಹದಿಂದ ಬಳಲುವವರ ಸಂಖ್ಯೆ ಅತ್ಯಧಿಕವಾಗಿದೆ. ಮಧುಮೇಹದಿಂದ ಕಣ್ಣಿನ ಸಮಸ್ಯೆಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ. ಒಂದೇ ವೇದಿಕೆಯಲ್ಲಿ ಮಧುಮೇಹ, ನೇತ್ರ ಚಿಕಿತ್ಸಾ ಶಿಬಿರ ನಡೆಯುತ್ತಿರುವುದು ಒಳ್ಳೆಯದು’ ಎಂದರು.

‘ಕ್ಯಾನ್ಸರ್ ಪೀಡಿತ ರೋಗಿಯೊಬ್ಬನಿಗೆ ದೂರದ ಅಮೆರಿಕದಲ್ಲಿ ಚಿಕಿತ್ಸೆ ಕೊಡಿಸುತ್ತಿರುವುದು ನಾಗತಿಹಳ್ಳಿ ಚಂದ್ರಶೇಖರ್‌ ಅವರಿಗೆ ತಮ್ಮ ಹುಟ್ಟೂರಿನ ಬಗ್ಗೆ ಇರುವ ಪ್ರೇಮ ಹಾಗೂ ಕಾಳಜಿಯನ್ನು ತೋರುತ್ತದೆ’ ಎಂದರು.

ಬೆಂಗಳೂರಿನ ಮಿಂಟೋ ಕಣ್ಣಾಸ್ಪತ್ರೆಯ ವೈದ್ಯರ ತಂಡ 150 ಕ್ಕೂ ಹೆಚ್ಚಿನ ಮಂದಿಗೆ ರಕ್ತದೊತ್ತಡ, ಸಕ್ಕರೆ ಖಾಯಿಲೆ, ದೃಷ್ಟಿದೋಷ, ಮಾಲುಗಣ್ಣಿನ ಸಮಸ್ಯೆ ತಪಾಸಣೆ ಮಾಡಿಸಿಕೊಂಡರು. ಹೆಚ್ಚಿನ ಚಿಕಿತ್ಸೆ ಅವಶ್ಯವಿರುವವರನ್ನು ಮಿಂಟೋ ಅಸ್ಪತ್ರೆಗೆ ಕರೆದೊಯ್ದು ಉಚಿತ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲಾಯಿತು.

ಮಿಂಟೋ ಅಸ್ಪತ್ರೆಯ ನಿರ್ದೇಶಕಿ ಡಾ.ಸುಜಾತಾ ರಾಥೋಡ್, ವೈದ್ಯರಾದ ಸವಿತಾ, ಆಧಾರ್, ಅನೀಷಾ, ಶುಭಾಂಗಿನಿ, ರಾಜೇಶ್ವರಿ ಇದ್ದರು. ಇದೇ ವೇಳೆ 18 ಮಂದಿ ನೇತ್ರದಾನ ಮಾಡುವುದಾಗಿ ಪ್ರಮಾಣೀಕರಿಸಿದರು.  ಅವರಿಗೆ ನಾಗತಿಹಳ್ಳಿ ಚಂದ್ರಶೇಖರ್‌ ಪ್ರಮಾಣ ಪತ್ರ ವಿತರಣೆ ಮಾಡಿದರು. ವೈದ್ಯರು ನೇತ್ರದಾನದ ಮಹತ್ವದ ಬಗ್ಗೆ ತಿಳಿಸಿಕೊಟ್ಟರು. ಚಿಣ್ಯ ಮಂಜುನಾಥ್ ಅವರಿಂದ ಭಾವಗೀತೆ– ಜನಪದ ಕಲಿಕಾ ಶಿಬಿರಕ್ಕೆ ಚಾಲನೆ ನೀಡಲಾಯತು ಶಿಬಿರ ನಡೆಸಿಕೊಟ್ಟರು. ಮೈಕ್ರೋ ಲ್ಯಾಬ್ ನ ಶ್ರೀನಿವಾಸ್ ನಾಗತಿಹಳ್ಳಿ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.