ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದಲಿತರ ಮೇಲೆ ನಿಲ್ಲದ ದೌರ್ಜನ್ಯ, ಶೋಷಣೆ’

Last Updated 15 ಸೆಪ್ಟೆಂಬರ್ 2019, 14:40 IST
ಅಕ್ಷರ ಗಾತ್ರ

ಮಂಡ್ಯ: ‘ಅಸ್ಪೃಶ್ಯರ ದೌರ್ಜನ್ಯ ಮಾಡುವವರನ್ನು ದಲಿತರ ಪಟ್ಟಿಗೆ ಸೇರಿಸಿ ಸಂಘರ್ಷ ಸೃಷ್ಟಿಸುವ ಕೆಲಸವನ್ನು ಇತ್ತೀಚಿನ ದಿನಗಳಲ್ಲಿ ರಾಜಕೀಯ ಪಕ್ಷಗಳು ಮಾಡುತ್ತಿವೆ’ಎಂದು ದಲಿತ ಮುಖಂಡ ವೆಂಕಟಗಿರಿಯಯ್ಯ ಬೇಸರವ್ಯಕ್ತಪಡಿಸಿದರು.

ಕರ್ನಾಟಕ ಪ್ರದೇಶ ಮಾದಿಗರ ಸಂಘ, ಕರ್ನಾಟಕ ಪ್ರದೇಶ ಛಲವಾದಿಗಳ ಸಂಘದ ವತಿಯಿಂದ ನಗರದ ಕರ್ನಾಟಕ ಸಂಘದ ಆವರಣದಲ್ಲಿನ ಕೆ.ವಿ.ಶಂಕರಗೌಡ ಸಭಾಂಗಣದಲ್ಲಿ ಭಾನುವಾರ ನಡೆದ ಹೊಲಯ–ಮಾದಿಗ (ಎಡ–ಬಲ) ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ದಲಿತ ಪಟ್ಟಿದೆ ಸೇರಿದ ನಂತರ ಎಲ್ಲಾ ಸೌಲಭ್ಯಗಳನ್ನು ಪಡೆದು ನಮ್ಮ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ. ಶತ ಶತಮಾನಗಳಿಂದ ಶೋಷಣೆಗೆ ಒಳಪಡುವುದಲ್ಲದೆ ಇಷ್ಟೆಲ್ಲಾ ಕಾನೂನುಗಳಿದ್ದರೂ ಇಂದಿಗೂ ಶೋಷಣೆ ಎಂಬುದು ನಿರಂತರವಾಗಿ ನಡೆಯುತ್ತಲೇ ಇದೆ. ತಳ ಸಮುದಾಯಗಳಾದ ಅಸ್ಪೃಶ್ಯ ಜಾತಿಗಳಲ್ಲೇ ಮೇಲು, ಕೀಳು ಎಂಬ ಭಾವನೆ ಮೂಡಿದ್ದು, ಇದು ದಲಿತ ಸಮಾಜವನ್ನು ಇನ್ನು ಸೊರಗುವಂತೆ ಮಾಡುತ್ತಿದೆ’ ಎಂದರು.

‘ಮನುವಾದಿ, ಜಾತಿ ವ್ಯವಸ್ಥೆಯಿಂದ ಶೂದ್ರಾತಿ ಶೂದ್ರರನ್ನು ಜಾತಿ ಹೆಸರಿನಲ್ಲಿ ಛಿದ್ರಗೊಳಿಸಿ ಮನಸ್ಸು, ಮನಸ್ಸುಗಳ ನಡುವೆ ವೈಮನಸ್ಸು ತಂದೊಡ್ಡಿದ್ದಾರೆ. ಒಬ್ಬರನ್ನು ಕಂಡರೆ ಒಬ್ಬರಿಗೆ ಆಗದ ಪರಿಸ್ಥಿತಿಗೆ ತಂದು ನಿಲ್ಲಿಸಿದ್ದಾರೆ. ಇವುಗಳಿಂದ ಮೊದಲು ಹೊರಬಂದು ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ಸದೃಢರಾಗಬೇಕಿದೆ’ ಎಂದು ಹೇಳಿದರು.

ಮೈಸೂರು ಮಹಾನಗರ ಪಾಲಿಕೆ ಸದಸ್ಯೆ ಅಶ್ವಿನಿ ಶರತ್‌ ಮಾತನಾಡಿ ‘ಪರಿಶಿಷ್ಟ ಜನಾಂಗದ ಅಭಿವೃದ್ಧಿಗಾಗಿ ಸರ್ಕಾರ ಸಾಕಷ್ಟು ಸವಲತ್ತುಗಳನ್ನು ನೀಡಿದೆ. ಆದರೆ ಅದನ್ನು ಹಂಚಿಕೆ ಮಾಡುವ ಸಮಿತಿಯಲ್ಲಿ ಬೇರೆ ವರ್ಗದವರು ಇರುವುದರಿಂದ ಬಹಳಷ್ಟು ತಾರತಮ್ಯವಾಗುತ್ತಿದೆ. ಸರಿಯಾಗಿ ಹಂಚಿಕೆ ಮಾಡಿದ್ದರೆ ಇಂದು ಸ್ಲಂಗಳನ್ನು ಕಾಣುತ್ತಲೇ ಇರಲಿಲ್ಲ’ ಎಂದು ಹೇಳಿದರು.

ಮಾಜಿ ಸಚಿವ ಬಿ.ಸೋಮಶೇಖರ್‌ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ನಗರ ಪಾಲಿಕೆ ಸದಸ್ಯೆ ಪಲ್ಲವಿ ಬೇಗಂ, ಜಿಪಂ ಮಾಜಿ ಅಧ್ಯಕ್ಷ ಕಂಠಿ, ಮುಖಂಡರಾದ ಸುಂಡಳ್ಳಿ ನಾಗರಾಜು, ಕೆಂಪಯ್ಯ, ಸಾಹಿತಿ ಮ.ಸಿ.ನಾರಾಯಣ, ನಂಜುಂಡಸ್ವಾಮಿ, ಕಾರ್ಯಪಾಲಕ ಎಂಜಿನಿಯರ್‌ ಚಂದ್ರಹಾಸ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT