ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಲುಕೋಟೆಯ ಸಾಲುಮರಗಳಿಗೆ ಕೊಡಲಿ

ದ್ವಿಪಥ ಕಾಮಗಾರಿ; 80ಕ್ಕೂ ಹೆಚ್ಚು ಮರ ಕಡಿಯಲು ಅರಣ್ಯ ಇಲಾಖೆ ಸಿದ್ಧತೆ
Last Updated 19 ನವೆಂಬರ್ 2019, 20:00 IST
ಅಕ್ಷರ ಗಾತ್ರ

ಮಂಡ್ಯ: ವಿಶ್ವವಿಖ್ಯಾತ ಮೇಲುಕೋಟೆ ಕ್ಷೇತ್ರ ಪ್ರವೇಶಿಸುವ ಮುಖ್ಯರಸ್ತೆಯಲ್ಲಿ ಹಸಿರು ಕೋಟೆಯಂತಿರುವ 80ಕ್ಕೂ ಹೆಚ್ಚು ಸಾಲುಮರ ಕಡಿದು ದ್ವಿಪಥ ನಿರ್ಮಿಸಲು ಮುಂದಾಗಿರುವ ಲೋಕೋಪಯೋಗಿ ಇಲಾಖೆ ಕ್ರಮಕ್ಕೆ ಪರಿಸರ ಪ್ರೇಮಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.

ಚೆಲುವನಾರಾಯಣಸ್ವಾಮಿ ದರ್ಶನಕ್ಕೆ ಬರುವ ಪ್ರತಿಯೊಬ್ಬರೂ ಈ ಸಾಲು ಮರಗಳ ಸೌಂದರ್ಯ ಅನುಭವಿಸುತ್ತಾರೆ. ವಾಹನಗಳು ಕಡಿದಾದ ಕಣಿವೆ ಹತ್ತಿ ಶ್ರೀಕ್ಷೇತ್ರ ಪ್ರವೇಶಿಸುತ್ತಿದ್ದಂತೆ ಮರಗಳು ಪ್ರವಾಸಿಗರಿಗೆ ಸ್ವಾಗತ ಕೋರುತ್ತವೆ. ಸುತ್ತಲೂ ಹಸಿರು ವಾತಾವರಣವಿದ್ದು ಈ ಮರಗಳ ಮೇಲೆ ಲಕ್ಷಾಂತರ ಪಕ್ಷಿಗಳು ವಾಸ ಮಾಡುತ್ತಿವೆ. ರಸ್ತೆ ವಿಸ್ತರಣೆಗಾಗಿ ಮರ ಕಡಿದರೆ ಪಕ್ಷಿಗಳ ಆಶ್ರಯತಾಣ ನಾಶ ಮಾಡಿದಂತಾಗುತ್ತದೆ ಎಂದು ವಿವಿಧ ಸಂಘಟನೆಗಳ ಮುಖಂಡರು ಆರೋಪಿಸಿದ್ದಾರೆ.

ಕ್ಷೇತ್ರದ ಪ್ರವೇಶ ಸ್ಥಳದಿಂದ 1 ಕಿ.ಮೀ ದೂರದವರೆಗೆ ಅರಳಿ, ಆಲ, ಬಸರಿ, ಭಾಗೆ ಮರಗಳಿವೆ. ಕೆಲ ಮರಗಳು ನೂರು ವರ್ಷಕ್ಕೂ ಹಳೆಯದಾಗಿವೆ. ಜಾತ್ರೆ, ಹಬ್ಬ ಹರಿದಿನ, ಉತ್ಸವಗಳಲ್ಲಿ ಭಕ್ತರು ಮರಗಳ ಕೆಳಗೆ ವಿಶ್ರಾಂತಿ ಪಡೆಯುತ್ತಾರೆ. ವೈರಮುಡಿ, ರಾಜಮುಡಿ ಸೇರಿ ಇನ್ನಿತರ ಉತ್ಸವಗಳಲ್ಲಿ ಮರಗಳಿಗೆ ಮಾಡಲಾಗುವ ದೀಪಾಲಂಕಾರ ಮನಸೂರೆಗೊಳ್ಳುತ್ತದೆ. ಇಂತಹ ಮರಗಳು ಇನ್ನಿಲ್ಲವಾದರೆ ಧಾರ್ಮಿಕ ಕ್ಷೇತ್ರದ ಪರಿಸರಕ್ಕೆ ಧಕ್ಕೆಯುಂಟಾಗುತ್ತದೆ ಎಂದು ಪರಿಸರ ಪ್ರೇಮಿಗಳು ಆತಂಕ ವ್ಯಕ್ತಪಡಿಸುತ್ತಾರೆ.

ಇಂದು ಬಹಿರಂಗ ಹರಾಜು: ರಸ್ತೆ ವಿಸ್ತರಣೆಗೆ ಅಡ್ಡಿಯಾಗಿರುವ ಮರಗಳನ್ನು ಕಡಿಯಲು ಲೋಕೋಪಯೋಗಿ ಇಲಾಖೆ ಈಗಾಗಲೇ ಅರಣ್ಯ ಇಲಾಖೆಗೆ ಪ್ರಸ್ತಾವ ಸಲ್ಲಿಸಿದೆ. ಅದರಂತೆ ಅರಣ್ಯ ಇಲಾಖೆ ಅಧಿಕಾರಿಗಳು ಬುಧವಾರ ಮೇಲುಕೋಟೆಯಲ್ಲಿ ಮರಗಳ ಬಹಿರಂಗ ಹರಾಜು ಪ್ರಕ್ರಿಯೆ ನಡೆಸುತ್ತಿದ್ದಾರೆ. ಈ ಪ್ರಕ್ರಿಯೆ ನಡೆಯದಂತೆ ಒತ್ತಾಯಿಸಲು ವಿವಿಧ ಸಂಘಟನೆಗಳ ಸದಸ್ಯರು ಮುಂದಾಗಿದ್ದಾರೆ.

‘ರಾಮಾನುಜಾಚಾರ್ಯರು ಓಡಾಡಿರುವ ನೆಲದಲ್ಲಿ ಮರ ಕಡಿದರೆ ಹಿಂಸೆಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಅಭಿವೃದ್ಧಿಗೆ ನಮ್ಮ ವಿರೋಧ ಇಲ್ಲ, ಮರ ಕಡಿಯದೇ ರಸ್ತೆ ವಿಸ್ತರಣೆ ಮಾಡಲು ಬದಲಿ ಯೋಜನೆ ರೂಪಿಸಬೇಕು. ರಸ್ತೆ ಮಧ್ಯೆ ಕೆಲ ಮಂಟಪ, ಮನೆಗಳಿವೆ, ಅವುಗಳನ್ನು ಮುಟ್ಟುತ್ತಿಲ್ಲ. ಆದರೆ ಮರಗಳನ್ನು ಮಾತ್ರ ಕಡಿಯಲು ನಿರ್ಧರಿಸಲಾಗಿದೆ’ ಎಂದು ಪರಿಸರ ಪ್ರೇಮಿ ಸುಮನಸ್‌ ಕೌಲಗಿ ಹೇಳಿದರು.

ಲೋಕೋಪಯೋಗಿ ಇಲಾಖೆ ಮರ ಕಡಿಯುವ ನಿರ್ಣಯ ಕೈಗೊಂಡ ನಂತರ ಮೇಲುಕೋಟೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಗ್ರಾಮಸ್ಥರು ಹಾಗೂ ಪರಿಸರ ಪ್ರೇಮಿಗಳನ್ನೊಳಗೊಂಡ ಗ್ರಾಮ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಹೆಚ್ಚಿನವರು ಮರ ಕಡಿಯಲು ಅವಕಾಶ ನೀಡಬಾರದು ಎಂದೇ ಒತ್ತಾಯಿಸಿದ್ದಾರೆ. ಈ ಕುರಿತು ಲೋಕೋಪಯೋಗಿ ಅಧಿಕಾರಿಗಳನ್ನು ಮನವೊಲಿಸಲಾಗುವುದು ಎಂದು ಗ್ರಾ.ಪಂ ಅಧ್ಯಕ್ಷರು ಭರವಸೆ ನೀಡಿದ್ದಾರೆ.

‘ಮೇಲುಕೋಟೆ ಕ್ಷೇತ್ರದ ಪ್ರವೇಶ ರಸ್ತೆಯಲ್ಲಿ ಟ್ರಾಫಿಕ್‌ ಕಿರಿಕಿರಿ ಉಂಟಾಗುತ್ತಿದೆ. ಇದನ್ನು ತಪ್ಪಿಸಲು ಅನಿವಾರ್ಯವಾಗಿ ಮರ ಕಡಿಯಬೇಕಾಗಿದೆ. ಅರಣ್ಯ ಇಲಾಖೆ ಮರ ಕಡಿದ ನಂತರ ರಸ್ತೆ ವಿಸ್ತರಣೆ ಕಾಮಗಾರಿ ಆರಂಭಿಸಲಾಗುವುದು. ನಂತರ ಎರಡೂ ಬದಿಯಲ್ಲಿ ಮತ್ತೆ ಸಸಿ ನೆಡಲಾಗುವುದು’ ಎಂದು ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್‌ ಹರ್ಷ ಹೇಳಿದರು.

ಮೇಲುಕೋಟೆಯಲ್ಲಿ ಮರ ಕಡಿದು, ನಂತರ ಸಸಿ ನೆಡಲು ಲೋಕೋಪಯೋಗಿ ಇಲಾಖೆ ಈಗಾಗಲೇ ಅರಣ್ಯ ಇಲಾಖೆಗೆ ₹ 50 ಸಾವಿರ ಹಣ ಸಂದಾಯ ಮಾಡಿದೆ ಎಂದುಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್‌.ಶಿವರಾಜ್‌ ಪ್ರತಿಕ್ರಿಯಿಸಿದರು.

ಮರ ಉಳಿಸಲು ಅಪ್ಪಿಕೋ ಚಳವಳಿ

‘ಮೇಲುಕೋಟೆಯ ಹಸಿರು ಪರಿಸರಕ್ಕೆ ಧಕ್ಕೆಯಾಗದ ರೀತಿಯಲ್ಲಿ ಅಭಿವೃದ್ಧಿ ಮಾಡಲು ನಮ್ಮ ಯಾವುದೇ ವಿರೋಧ ಇಲ್ಲ. ಆದರೆ ಮರ ಕಡಿದು ರಸ್ತೆ ವಿಸ್ತರಣೆ ಮಾಡುತ್ತಿರುವುದು ಸರಿಯಲ್ಲ. ಜನರ ವಿರೋಧದ ನಡುವೆಯೂ ಮರ ಕಡಿಯಲು ಮುಂದಾದರೆ ಅಪ್ಪಿಕೋ ಚಳವಳಿ ಮಾಡಲಾಗುವುದು’ ಎಂದು ಮೇಲುಕೋಟೆ ಪರಿಸರ ಪ್ರೇಮಿಗಳ ಬಳಗದ ರವಿಕುಮಾರ್‌ ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT