ಮಂಗಳವಾರ, ಅಕ್ಟೋಬರ್ 15, 2019
22 °C
ವಾಣಿಜ್ಯ ಚಟುವಟಿಕೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ, ಬಡಾವಣೆ ಅಭಿವೃದ್ಧಿಗೆ ಇದು ಸಕಾಲ

ದಶಪಥ: ‘ದೊಡ್ಡ ಹಳ್ಳಿ’ಯ ಸ್ಥಿತಿ ಬದಲಾಗುತ್ತಾ?

Published:
Updated:
Prajavani

ಮಂಡ್ಯ: ಮೈಸೂರು– ಬೆಂಗಳೂರು ದಶಪಥ ಯೋಜನಾ ಕಾಮಗಾರಿ ನಗರದ ಹೊರವಲಯದಲ್ಲಿ ನಿರ್ಮಾಣ ಗೊಳ್ಳುತ್ತಿದ್ದು, ಇದರಿಂದ ನಗರದೊಳಗೆ ಉಂಟಾಗಬಹುದಾದ ಬದಲಾವಣೆ ಬಗ್ಗೆ ಜನರಲ್ಲಿ ಕುತೂಹಲ ಮೂಡಿದೆ.

ಮೈಸೂರು– ಬೆಂಗಳೂರು ನಗರಗಳ ನಡುವೆ ಮಂಡ್ಯ ‘ದೊಡ್ಡಹಳ್ಳಿ’ ಎಂದೇ ಪ್ರಸಿದ್ಧಿ ಪಡೆದಿದೆ. ಕೇವಲ 3 ಕಿ.ಮೀ ವ್ಯಾಪ್ತಿಯಲ್ಲಿ ‘ನಗರ ಸಂಚಾರ’ ಮುಗಿಯುತ್ತದೆ. ನಗರದ ಬಹುತೇಕ ವಾಣಿಜ್ಯ ಚಟುವಟಿಕೆಗಳು ರಾಷ್ಟ್ರೀಯ ಹೆದ್ದಾರಿಯನ್ನೇ ಅವಲಂಬಿಸಿವೆ. ಆದರೆ, ಈಗ ದಶಪಥ ಬೈಪಾಸ್‌ ನಗರದ ಹೊರವಲಯದಲ್ಲಿ ನಿರ್ಮಾಣ ಗೊಳ್ಳುತ್ತಿರುವುದು ವಾಣಿಜ್ಯ ಚಟುವಟಿಕೆಯ ಮೇಲೆ ಕಾರ್ಮೋಡ ಕವಿದಂತಾಗಿದೆ.

ಉಮ್ಮಡಹಳ್ಳಿ ಗೇಟ್‌ನಿಂದ ಇಂಡುವಾಳುವರೆಗೆ ಬೈಪಾಸ್‌ ಹಾಯ್ದು ಹೋಗುತ್ತದೆ. 9 ಕಿ.ಮೀ ವ್ಯಾಪ್ತಿಯಲ್ಲಿ ಭೂಸ್ವಾಧೀನ ಪ್ರಕ್ರಿಯೆ ಮುಗಿದು ಜಮೀನು ಕಳೆದುಕೊಂಡವರಿಗೆ ಪರಿಹಾರ ವಿತರಣೆ ಮಾಡಿ, ಕಾಮಗಾರಿ ಯನ್ನೂ ಆರಂಭಿಸಲಾಗಿದೆ. ಯೋಜನೆ ಪೂರ್ಣಗೊಂಡರೆ ವಾಹನಗಳು ಮಂಡ್ಯ ನಗರದೊಳಗೆ ಬರುವ ಅವಶ್ಯಕತೆಯೇ ಇರುವುದಿಲ್ಲ. ಹೆದ್ದಾರಿಯನ್ನೇ ನೆಚ್ಚಿ ವಹಿವಾಟು ನಡೆಸುತ್ತಿರುವ ಹೋಟೆಲ್‌, ಅಂಗಡಿ ಮುಂಗಟ್ಟು, ಪೆಟ್ರೋಲ್‌ ಬಂಕ್‌ ಇನ್ನಿತರ ವಾಣಿಜ್ಯ ಚಟುವಟಿಕೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಆತಂಕ ಇದೆ.

ಬೆಂಗಳೂರು– ಮೈಸೂರು ನಡುವೆ ಓಡಾಡುವ ಜನರು ಮಂಡ್ಯದಲ್ಲಿ ವಿಶ್ರಾಂತಿ ಪಡೆಯುವ ಪರಿಪಾಠ ಇದೆ. ಪ್ರವಾಸಿಗರು ಕೂಡ ಇಲ್ಲಿಯ ಹೋಟೆಲ್‌ಗಳಲ್ಲಿ ವಾಸ್ತವ್ಯ ಹೂಡುತ್ತಾರೆ. ವಾರಾಂತ್ಯಗಳಲ್ಲಿ ಇಲ್ಲಿಯ ವಹಿವಾಟು ಭರ್ಜರಿಯಾಗಿ ನಡೆಯುತ್ತದೆ. ಆದರೆ, ಬೈಪಾಸ್‌ ಬಂದರೆ ಜನರು ನಗರಕ್ಕೆ ಬರುತ್ತಾರಾ ಎಂಬ ಪ್ರಶ್ನೆ ಎದುರಾಗಿದೆ.

ಬೈಪಾಸ್‌ ಟೋಲ್‌ ಕಟ್ಟಿರುವ ವಾಹನ ಸವಾರರು ಮಂಡ್ಯಕ್ಕೆ ಬಂದು ಹೋಗಲು ಸಾಧ್ಯವೇ ಇಲ್ಲ. ಹೀಗಾಗಿ ಇಲ್ಲಿಯ ವಾಣಿಜ್ಯ ಚಟುವಟಿಕೆ ಸ್ಥಗಿತಗೊಳ್ಳಲಿದೆ. ದೊಡ್ಡಹಳ್ಳಿ ಎನ್ನುವ ಮಂಡ್ಯ ಹಣೆಪಟ್ಟಿ ಮುಂದುವರಿಯುತ್ತದೆ ಎಂದು ನಗರದ ನಿವಾಸಿ ಎಂ.ಎಸ್‌.ಮಲ್ಲಿಕಾರ್ಜುನ್‌ ಹೇಳಿದರು.

ರಿಯಲ್‌ ಎಸ್ಟೇಟ್‌ ಏಳುತ್ತಾ, ಬೀಳುತ್ತಾ?: ರಾಷ್ಟ್ರೀಯ ಹೆದ್ದಾರಿ ನಗರದಿಂದ ಹೊರಗೆ ಹೋದರೆ ನಗರದ ರಿಯಲ್‌ ಎಸ್ಟೇಟ್‌ ವ್ಯವಹಾರ ಬಿದ್ದು ಹೋಗಲಿದೆಯಾ ಅಥವಾ ಮತ್ತಷ್ಟು ಅಭಿವೃದ್ಧಿ ಹೊಂದಲಿದೆಯಾ ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ. ಮಂಡ್ಯ ದೊಡ್ಡ ಹಳ್ಳಿಯಂತಿದ್ದರೂ ನಿವೇಶನ ಬೆಲೆಯೇನೂ ಕಡಿಮೆ ಇಲ್ಲ. ಬೆಂಗಳೂರು, ಮೈಸೂರಿನಷ್ಟೇ ಇದೆ. ಹೀಗಾಗಿ ಬೈಪಾಸ್‌ನಿಂದ ಉಂಟಾಗುವ ಬದಲಾವಣೆಗಳ ಮೇಲೆ ಜನರಿಗೆ ಕುತೂಹಲ ಉಂಟಾಗಿದೆ.

ನಿವೇಶನಗಳ ಬೆಲೆ ಕುಗ್ಗಲಿದ್ದು, ಮನೆ ಕಟ್ಟಿಕೊಳ್ಳುವವರಿಗೆ ಅನುಕೂಲ ವಾಗಲಿದೆ ಎಂಬ ಅಭಿಪ್ರಾಯ ಕೆಲವರಲ್ಲಿ ಇದೆ. ಆದರೆ, ಬೈಪಾಸ್‌ನಿಂದ ರಿಯಲ್‌ ಎಸ್ಟೇಟ್‌ ಮೇಲೆ ಯಾವುದೇ ಅಡ್ಡ ಪರಿಣಾಮ ಉಂಟಾಗುವುದಿಲ್ಲ ಎಂದು ಹಲವರು ಹೇಳುತ್ತಾರೆ.

‘ನಗರದ ದಕ್ಷಿಣ ಭಾಗ ಬೆಳೆದಷ್ಟು ಉತ್ತರ ಭಾಗ ಬೆಳೆದಿಲ್ಲ. ಕಲ್ಲಹಳ್ಳಿ, ಕ್ಯಾತುಂಗೆರೆ, ಹನಿಯಂಬಾಡಿ ಕಡೆಗೆ ಮಂಡ್ಯ ಬೆಳೆಯುತ್ತಿದೆ. ಆದರೆ, ಚಿಕ್ಕಮಂಡ್ಯ ಭಾಗ ಹಿಂದುಳಿದಿದೆ. ಬೈಪಾಸ್‌ನಿಂದಾಗಿ ಉತ್ತರ ಭಾಗವೂ ಬೆಳೆಯುತ್ತದೆ. ಲೇಔಟ್‌ಗಳು ತಲೆ ಎತ್ತಲಿದ್ದು, ಮಂಡ್ಯ ಮತ್ತಷ್ಟು ಅಭಿವೃದ್ಧಿ ಹೊಂದುತ್ತದೆ. ಬೈಪಾಸ್‌ನಿಂದ ಯಾವುದೇ ಕಾರಣಕ್ಕೂ ನಿವೇಶನಗಳ ಬೆಲೆ ಕುಗ್ಗುವುದಿಲ್ಲ. ಮಂಡ್ಯ ಸಾತನೂರು ವರೆಗೂ ವಿಸ್ತರಣೆ ಯಾಗಲಿದೆ, ನಿವೇಶನಗಳ ಬೆಲೆಯೂ ಹೆಚ್ಚಾಗಲಿದೆ’ ಎಂದು ರಿಯಲ್‌ ಎಸ್ಟೇಟ್‌ ಉದ್ಯಮಿ, ಮಾಜಿ ನಗರಸಭಾ ಸದಸ್ಯ ಎಂ.ಜೆ.ಚಿಕ್ಕಣ್ಣ ಹೇಳಿದರು.

ವರ್ತುಲ ರಸ್ತೆ ಕತೆ ಏನಾಯ್ತು?

ದಶಪಥ ಕಾಮಗಾರಿಗೂ ಮೊದಲು ನಗರ ಅಭಿವೃದ್ಧಿ ಯೋಜನೆಯಡಿ (ಸಿಡಿಪಿ) ವರ್ತುಲ ರಸ್ತೆ ನಿರ್ಮಾಣದ ಯೋಜನೆ ಸಿದ್ಧಗೊಂಡಿತ್ತು. ಅದಕ್ಕೆ ಬೇಕಾಗಿರುವ ಜಾಗದ ಅಳತೆಯಾಗಿ ಕಲ್ಲು ನೆಡಲಾಗಿತ್ತು. ಅದೇ ಜಾಗದಲ್ಲಿ ಬೈಪಾಸ್‌ ನಿರ್ಮಾಣಗೊಳ್ಳಬೇಕು ಎಂಬ ಪ್ರಸ್ತಾಪವೂ ಇತ್ತು.

ಅದರ ಪ್ರಕಾರ ಉಮ್ಮಡಹಳ್ಳಿ ಗೇಟ್‌, ಯತ್ತಗದಹಳ್ಳಿ, ಹನಿಯಂಬಾಡಿ, ಕಿರಗಂದೂರು ಮೂಲಕ ಹೆದ್ದಾರಿ ಸೇರುವ ಯೋಜನೆ ಇದಾಗಿತ್ತು. 13 ಕಿ.ಮೀ ಅಂತರದಲ್ಲಿ ಅತೀ ಹೆಚ್ಚು ಖಾಸಗಿ ಭೂಮಿ ಸ್ವಾಧೀನದ ಅವಶ್ಯಕತೆ ಇತ್ತು. ಆದರೆ, ಈಗ ಕಾಮಗಾರಿ ನಡೆಯುತ್ತಿರುವ ಭಾಗದಲ್ಲಿ ಬಹುತೇಕ ಸರ್ಕಾರಿ ಭೂಮಿ ಇದೆ. ಜೊತೆಗೆ ಕೇವಲ 9 ಕಿ.ಮೀ ಅಂತರವಿದೆ. ಹೀಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಚಿಕ್ಕಮಂಡ್ಯ ಭಾಗವನ್ನೇ ಅಂತಿಮಗೊಳಿಸಿತ್ತು. ವರ್ತುಲ ರಸ್ತೆ ನಿರ್ಮಿಸುವ ಪ್ರಸ್ತಾಪ ಈಗಲೂ ಜೀವಂತವಾಗಿದ್ದು, ಅದಕ್ಕೆ ಅಂತಿಮ ರೂಪ ಸಿಗಬೇಕಾಗಿದೆ.

ಶೇ 40ರಷ್ಟು ವಹಿವಾಟು

ಹೊರವಲಯದಲ್ಲಿ ಬೈಪಾಸ್‌ ನಿರ್ಮಾಣವಾಗುವ ಕಾರಣದಿಂದ ಮಂಡ್ಯಕ್ಕೆ ಭೇಟಿ ಕೊಡುವ ಜನರ ಸಂಖ್ಯೆ ಕನಿಷ್ಠ ಶೇ 40ರಷ್ಟು ಕುಂಠಿತವಾಗಲಿದೆ. ಅಷ್ಟೇ ಪ್ರಮಾಣದಲ್ಲಿ ವಹಿವಾಟು ಕುಸಿಯಲಿದೆ. ನಗರ ವಿಸ್ತಾರವಾಗುತ್ತದೆ. ಆದರೆ, ವಾಣಿಜ್ಯ ಚಟುವಟಿಕೆಗಳು ಉಳಿಯುವುದಿಲ್ಲ. ಮೈಷುಗರ್‌ ಸ್ಥಗಿತಗೊಂಡ ನಂತರ ನಗರದಲ್ಲಿ ವಾಣಿಜ್ಯ ಚಟುವಟಿಕೆ ತಳ ಸೇರಿದೆ. ಈಗ ಮುಂದೇನು ಎಂಬ ಪ್ರಶ್ನೆ ಕಾಡುತ್ತಿದೆ ಎಂದು ಹೋಟೆಲ್‌ ಉದ್ಯಮಿ ರವಿ ಆಚಾರ್ಯ ಆತಂಕ ವ್ಯಕ್ತಪಡಿಸಿದರು.

ಮಂಡ್ಯ ಮಹಾನಗರ ಪಾಲಿಕೆ ಆಗುತ್ತೆ

ಬೈಪಾಸ್‌ನಿಂದ ಮಂಡ್ಯ ನಗರ ಅಭಿವೃದ್ಧಿಗೊಳ್ಳಲಿದೆ. ಹನಕೆರೆ, ತೂಬಿನಕೆರೆ, ಹೊಳಲು, ಕೀಲಾರ, ತಗ್ಗಹಳ್ಳಿ, ಕೊತ್ತತ್ತಿ ಸೇರಿಸಿ ಮಂಡ್ಯ ಮಹಾನಗರ ಪಾಲಿಕೆ ರೂಪಿಸುವಂತೆ ಕೋರಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದೇನೆ. ಈ ಕುರಿತು ಈಗಾಗಲೇ ನಗರಸಭೆಯಲ್ಲಿ ಸಭೆ ನಡೆಸಿ ಅಭಿಪ್ರಾಯ ಸಂಗ್ರಹ ಮಾಡಿದ್ದೇನೆ. ಮಹಾನಗರ ಪಾಲಿಕೆ ರೂಪಿಸುವುದೇ ನನ್ನ ಗುರಿ.

–ಎಂ.ಶ್ರೀನಿವಾಸ್‌, ಶಾಸಕ

ವಾಣಿಜ್ಯ ಚಟುವಟಿಕೆಗೆ ತೊಂದರೆ

ಮಂಡ್ಯ ನಗರದ ಸುತ್ತಲೂ ಅರಣ್ಯ ಇಲಾಖೆಗೆ ಸೇರಿದ ಭೂಮಿ ಇದ್ದು, ಹಸಿರು ಹೊದಿಕೆ ಇದೆ (ಗ್ರೀನ್‌ ಬೆಲ್ಟ್‌). ಹೀಗಾಗಿ ಯಾವುದೇ ಅಭಿವೃದ್ಧಿ ಕಾಮಗಾರಿ ನಡೆಸಲು ಕಷ್ಟವಾಗುತ್ತಿದೆ. ಬೈಪಾಸ್‌ ನಿರ್ಮಾಣದಿಂದ ವಾಣಿಜ್ಯ ಚಟುವಟಿಕೆಗಳಿಗೆ ತೊಂದರೆಯಾಗಬಹುದು. ಆದರೆ, ರಿಯಲ್‌ ಎಸ್ಟೇಟ್‌ ಉದ್ಯಮಕ್ಕೆ ಧಕ್ಕೆ ಆಗದು. ನಿವೇಶನಗಳ ಬೆಲೆ ಬೆಂಗಳೂರು–ಮೈಸೂರು ನಗರಗಳಿಗಿಂತಲೂ ಜಾಸ್ತಿ ಇದೆ. ಇದು ವಿಚಿತ್ರ ಬೆಳವಣಿಗೆ.

–ಪಿ.ಎಂ.ಮಹೇಂದ್ರಬಾಬು, ಕೈಗಾರಿಕಾ ಮತ್ತು ವಾಣಿಜ್ಯ ಮಂಡಳಿ ಅಧ್ಯಕ್ಷ

ಸಮಗ್ರ ನಗರಾಭಿವೃದ್ಧಿ ಅವಶ್ಯ

ಮಂಡ್ಯ ನಗರ ಕೇವಲ ಒಂದು ಕಡೆ ಮಾತ್ರ ಅಭಿವೃದ್ಧಿ ಹೊಂದುತ್ತಿತ್ತು. ಆದರೆ, ಬೈಪಾಸ್‌ ನಿರ್ಮಾಣದಿಂದ ಸಮಗ್ರ ನಗರಾಭಿವೃದ್ಧಿಯ ನಿರೀಕ್ಷೆ ಇದೆ. ಬೈಪಾಸ್‌ ಜೊತೆಗೆ ವರ್ತುಲ ರಸ್ತೆ ಕಾಮಗಾರಿಗೂ ಜೀವ ಸಿಗಬೇಕು. ಮೂರು–ನಾಲ್ಕು ತಿಂಗಳಲ್ಲಿ ಪರಿಷ್ಕೃತ ನಗರಾಭಿವೃದ್ಧಿ ಯೋಜನೆಗೆ (ಸಿಡಿಪಿ) ಜೀವ ಸಿಗುವ ಸಾಧ್ಯತೆ ಇದೆ.

–ಸಿದ್ದರಾಜು, ನಗರಸಭೆ ಮಾಜಿ ಅಧ್ಯಕ್ಷ

Post Comments (+)