ಶುಕ್ರವಾರ, ಅಕ್ಟೋಬರ್ 7, 2022
28 °C
ತಾಲ್ಲೂಕಿನ ಇಂಗಲಗುಪ್ಪೆ ಛತ್ರ ಗ್ರಾಮದಲ್ಲಿ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮ

ಸಮಸ್ಯೆ ಅನಾವರಣಗೊಳಿಸಿದ ಗ್ರಾಮಸ್ಥರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪಾಂಡವಪುರ: ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಬಗೆಹರಿಸಬಹುದಾದ ಸಮಸ್ಯೆಗಳನ್ನು ಸ್ಥಳೀಯವಾಗಿ ಬಗೆಹರಿಸಿ ಉಳಿದವುಗಳ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಜಿಲ್ಲಾಧಿಕಾರಿ ಎಸ್.ಅಶ್ವತಿ ಹೇಳಿದರು.

ತಾಲ್ಲೂಕಿನ ಇಂಗಲಗುಪ್ಪೆ ಛತ್ರ ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ‘ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‌ಸರ್ಕಾರದ ವಿವಿಧ ಇಲಾಖೆಗಳ ವಿವಿಧ ಯೋಜನೆಯಡಿ ಅರ್ಹ ಮೂರು ಸಾವಿರ ಫಲಾನುಭವಿಗಳಿಗೆ ಚೆಕ್ ವಿತರಣೆ ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸಲಾಗಿದೆ. ಅಕ್ಟೋಬರ್‌ನಲ್ಲೂ ಪಾಂಡವಪುರ ತಾಲ್ಲೂಕಿನಲ್ಲಿ ಗ್ರಾಮ ವಾಸ್ತವ್ಯ ಮಾಡ‌ಲಾಗುವುದು ಎಂದು ತಿಳಿಸಿದರು.

ಉಪ ವಿಭಾಗಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಮಾತನಾಡಿ, ಸ್ಥಳೀಯ ದೂರುಗಳನ್ನು ಆಲಿಸಿ ನೋಂದಾಯಿಸಿಕೊಳ್ಳಲಾಗಿದೆ. ಟಿ.ಎಸ್.ಛತ್ರ ಗ್ರಾಮದಿಂದ ಕೆರೆತೊಣ್ಣೂರಿಗೆ ಹೋಗುವ ರಸ್ತೆ ಒತ್ತುವರಿ, ಗುಂಡುತೋಪು ಒತ್ತುವರಿ ತೆರವುಗೊಳಿಸಲು ಕ್ರಮವಹಿಸಲಾಗುವುದು. ಗ್ರಾ.ಪಂ.ವ್ಯಾಪ್ತಿಯ ಚಂದ್ರೆ ಗ್ರಾಮದಲ್ಲಿ ಸುಮಾರು 7 ಎಕರೆ ಸರ್ಕಾರಿ ಜಮೀನು ಒತ್ತುವರಿಯಾಗಿತ್ತು. ಇದನ್ನು ತೆರವುಗೊಳಿಸಲಾಗಿದ್ದು, ಈ ಜಾಗದಲ್ಲಿ ಬಡವರಿಗೆ ನಿವೇಶನ ವಿತರಿಸಲು ಜಿಲ್ಲಾಧಿಕಾರಿ ಅನುಮತಿ ನೀಡಿದ್ದಾರೆ. ನಿವೇಶನ ಹಂಚಿಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಗ್ರಾಮದ ಸುಮಾರು 30ಕ್ಕೂ ಹೆಚ್ಚು ಹಳೆಯ ಮನೆಗಳಿಗೆ ಹಕ್ಕು ಪತ್ರ ಇಲ್ಲ ಎಂಬ ದೂರು ಕೇಳಿಬಂದಿದೆ. 30 ವರ್ಷಗಳಿಂದಲೂ ಮನೆಯಲ್ಲಿ ವಾಸವಿದ್ದು, ಕೆಲ ತಾಂತ್ರಿಕ ಕಾರಣಗಳಿಂದ ಹಕ್ಕು ಪತ್ರ ಸಿಗದಿರುವ ಕಾರಣ ಸ್ಥಳೀಯ ಗ್ರಾಮ ಪಂಚಾಯಿತಿ ನಡಾವಳಿ ಮಾಡಿಕೊಟ್ಟರೆ ಹಕ್ಕು ಪತ್ರ ವಿತರಣೆಗೆ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.

ಶಾಸಕ ಸಿ.ಎಸ್.ಪುಟ್ಟರಾಜು ಮಾತನಾಡಿ, ಜನಸಾಮಾನ್ಯರು ತಮ್ಮ ಸಮಸ್ಯೆಯ ಪರಿಹಾರಕ್ಕಾಗಿ ತಾಲ್ಲೂಕು ಕೇಂದ್ರದ ಕಚೇರಿಗಳಿಗೆ ಅಲೆಯಬೇಕಾಗುತ್ತದೆ. ಈಗ ಅಧಿಕಾರಿಗಳೇ ಮನೆ ಬಾಗಿಲಿಗೆ ಬಂದು ಸಾರ್ವಜನಿಕ ಕೆಲಸ ಮಾಡಿಕೊಡುತ್ತಿರುವುದು ಪ್ರಜಾಪ್ರಭುತ್ವಕ್ಕೆ ಸಂದ ಗೌರವವಾಗಿದೆ. ಅಧಿಕಾರಿಗಳು ಎಷ್ಟೇ ಕಾರ್ಯಕ್ರಮ ರೂಪಿಸಿದರೂ ಅದಕ್ಕೆ ಬೇಕಾದ ಅನುದಾನವನ್ನು ಸರ್ಕಾರದಿಂದ ಬಿಡುಗಡೆಗೊಳಿಸುತ್ತೇನೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ ವಿತರಿಸಲಾಯಿತು. ‘ನನ್ನ ಮಗ ಅಂಗವಿಕಲನಿಗೆ ಶಿಕ್ಷಣ ನೀಡಿ ಎಂದು ಆತನ ತಾಯಿ ಅಧಿಕಾರಿಗಳು ಮುಂದೆ ಕಣ್ಣೀರಿಟ್ಟರು. ತಕ್ಷಣ ಸ್ಪಂದಿಸಿದ ಉಪ ವಿಭಾಗಾಧಿಕಾರಿ ಶಿವಾನಂದಮೂರ್ತಿ, ಕೂಡಲೇ ಅಂಗವಿಕಲನನ್ನು ಶಾಲೆಗೆ ದಾಖಲು ಮಾಡಿಕೊಳ್ಳಿ ಎಂದು ಬಿಇಒ ಲೋಕೇಶ್ ಅವರಿಗೆ ಸೂಚಿಸಿದರು.

ಗ್ರಾಮಕ್ಕೆ ಬಂದ ಜಿಲ್ಲಾಧಿಕಾರಿ ಅಶ್ವತಿ ಅವರನ್ನು ಜಾನಪದ ಕಲಾತಂಡದೊಂದಿಗೆ ಎತ್ತಿನಗಾಡಿಯಲ್ಲಿ ಮೆರವಣಿಗೆ ಮಾಡಿ ಗ್ರಾಮಸ್ಥರು ಸ್ವಾಗತಿಸಿದರು. ಜಿಲ್ಲಾಧಿಕಾರಿ ಕೆರೆತೊಣ್ಣೂರು ಗ್ರಾಮಕ್ಕೆ ತೆರಳಿ ಸುಪ್ರೀಂಕೋರ್ಟ್ ನ್ಯಾಯಾಧೀಶ ಇ.ಎಸ್.ವೆಂಕಟರಾಮಯಯ್ಯ ಅವರ ಸಮಾಧಿಗೆ ಗೌರವ ಸಲ್ಲಿಸಿದರು.

ತಹಶೀಲ್ದಾರ್ ಎಸ್.ಎಲ್.ನಯನ, ಡಿಎಚ್ಒ ಡಾ.ಧನಂಜಯ, ಟಿಎಚ್‌ಒ ಡಾ.ಸಿ.ಎ.ಅರವಿಂದ್, ಗ್ರೇಡ್–2 ತಹಶೀಲ್ದಾರ್ ವರುಣ್, ಮೋಹನ್, ಆರ್‌ಆರ್. ಶಿವಪ್ರಕಾಶ್, ಶಂಕರ್ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು