ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲು ಗಣಿಯಲ್ಲಿ ಸಿಡಿಮದ್ದು ಸ್ಫೋಟದಿಂದ ಕಾರ್ಮಿಕ ಸಾವು

ರೈತಸಂಘ ಮತ್ತು ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರ ಆರೋಪ: ಪ್ರತಿಭಟನೆ
Last Updated 21 ಜೂನ್ 2019, 19:53 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ತಾಲ್ಲೂಕಿನ ಚನ್ನನಕೆರೆ ವ್ಯಾಪ್ತಿಯ ಕಲ್ಲು ಗಣಿಯಲ್ಲಿ ಗುರುವಾರ ರಾತ್ರಿ ಕೂಲಿ ಕಾರ್ಮಿಕ, ಹನೂರು ತಾಲ್ಲೂಕಿನ ದೊಮ್ಮನಗಡ್ಡೆ ವಡ್ಡರದೊಡ್ಡಿ ಗ್ರಾಮದ ರಾಜ (45) ಮೃತಪಟ್ಟಿದ್ದು, ಅದೇ ಗ್ರಾಮದ ಮುನಿಯಪ್ಪ (36) ಗಾಯಗೊಂಡಿದ್ದಾರೆ.

ಕಲ್ಲುಬಂಡೆ ಸ್ಫೋಟಿಸುವ ವೇಳೆ ಸಿಡಿಮದ್ದು ಸಿಡಿದು ರಾಜ ಮೃತಪಟ್ಟಿದ್ದಾರೆ ಎಂದು ರೈತಸಂಘ ಮತ್ತು ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಆರೋಪಿಸಿದ್ದಾರೆ.

ಮದ್ಯದ ಅಮಲಿನಲ್ಲಿದ ರಾಜ ಟ್ರಾಕ್ಟರ್ ಚಲಾಯಿಸುತ್ತಿದ್ದರು. ನಿಯಂತ್ರಣ ತಪ್ಪಿ ಟ್ರಾಕ್ಟರ್ ಕೊರಕಲಿಗೆ ಉರುಳಿದೆ. ರಾಜ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ. ಮುನಿಯಪ್ಪ ಅವರ ಎಡಗೈ ಮೂಳೆ ಮುರಿದಿದ್ದು, ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಟ್ರಾಕ್ಟರ್ ಪಲ್ಟಿಯಾಗಿ ರಾಜ ಸತ್ತು ಹೋದ ಎಂದು ಗಾಯಾಳು ಮುನಿಯಪ್ಪ ದೂರು ನೀಡಿದ್ದು, ಅದರಂತೆ ಅಪಘಾತ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಚನ್ನನಕೆರೆ ಗ್ರಾಮದ ಮೀನಾಕ್ಷಿ ಎಂಬುವರಿಗೆ ಸೇರಿದ ಸರ್ವೆ ನಂಬರ್‌ 78ರಲ್ಲಿ ಜಕ್ಕನಹಳ್ಳಿ ಗ್ರಾಮದ ನಂಜೇಗೌಡ ಮತ್ತು ಸಂತೋಷ್ ಎಂಬುವರು ಗಣಿಗಾರಿಕೆ ನಡೆಸುತ್ತಿದ್ದು, ಈ ಗಣಿಯಲ್ಲಿ ರಾಜ ಮತ್ತು ಮುನಿಯಪ್ಪ ಕೆಲಸ ಮಾಡುತ್ತಿದ್ದರು.

ರೈತ ಸಂಘದ ಪ್ರತಿಭಟನೆ: ಕಲ್ಲುಗಣಿ ನಡೆಸುತ್ತಿದ್ದವರು ಮತ್ತು ಗಣಿ ಮಾಲೀಕರನ್ನು ಬಂಧಿಸಬೇಕು ಹಾಗೂ ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ಕೊಡಿಸಬೇಕು ಎಂದು ಆಗ್ರಹಿಸಿ ರೈತಸಂಘ ಮತ್ತು ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ತಾಲ್ಲೂಕು ಕಚೇರಿ ಎದುರು ಧರಣಿ ನಡೆಸಿದರು. ಜಿಲ್ಲಾಡಳಿತ ಅಕ್ರಮ ಕಲ್ಲು ಗಣಿಗಾರಿಕೆ ನಿಲ್ಲಿಸುವ ಭರವಸೆ ನೀಡುವವರೆಗೆ ಧರಣಿ ಮುಂದುವರೆಯಲಿದೆ ಎಂದು ಪ್ರತಿಭಟನಕಾರರು ತಿಳಿಸಿದರು.

ರಾಜ ಅವರ ಶವವನ್ನು ವಡ್ಡರದೊಡ್ಡಿ ಗ್ರಾಮಕ್ಕೆ ಕೊಂಡೊಯ್ದು ಅಂತ್ಯಕ್ರಿಯೆ ನಡೆಸಲು ಕೆಲವರು ಮುಂದಾಗಿದ್ದರು. ಪ್ರಕರಣ ಬೆಳಕಿಗೆ ಬಂದ ಬಳಿಕ ಶವವನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ತರಲಾಗಿದೆ ಎಂದು ಧರಣಿನಿರತರು ಶಂಕೆ ವ್ಯಕ್ತಪಡಿಸಿದ್ದಾರೆ.

ರಾಜಕಾರಣಿಗಳ ಒತ್ತಡಕ್ಕೆ ಮಣಿದು ಪ್ರಕರಣವನ್ನು ಮುಚ್ಚಿ ಹಾಕಲು ಅಧಿಕಾರಿಗಳು ಹುನ್ನಾರ ನಡೆಸುತ್ತಿದ್ದಾರೆ ಎಂದು ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು, ರೈತ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಮಂಜೇಶ್‌ ಗೌಡ ದೂರಿದ್ದಾರೆ.

ಸ್ಥಳಕ್ಕೆ ತಹಶೀಲ್ದಾರ್ ಡಿ.ನಾಗೇಶ್ ಮತ್ತು ಪೊಲೀಸರು ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.

ಕೂಡಲಕುಪ್ಪೆ ನಾಗೇಂದ್ರಸ್ವಾಮಿ, ಗಂಜಾಂ ರವಿಚಂದ್ರ, ಪಾಂಡು, ಕುಬೇರಪ್ಪ, ಡಿ.ಎಸ್. ಚಂದ್ರಶೇಖರ್ ಹಾಗೂ ರಾಮೇಗೌಡ ಪಾಲ್ಗೊಂಡಿದ್ದರು.

ಪರಿಶೀಲನೆ ವೇಳೆಯಲ್ಲೇ ಸ್ಫೋಟ

ಚನ್ನನಕೆರೆ ಬಳಿಯ ಕಲ್ಲುಗಣಿ ಯಲ್ಲಿ ಕೂಲಿ ಕಾರ್ಮಿಕ ಮೃತಪಟ್ಟ ಪ್ರಕರಣ ಕುರಿತು ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸುವ ವೇಳೆಯೇ ಸಮೀಪದ ಶ್ರೀರಾಂಪುರ ಮತ್ತು ಟಿ.ಎಂ. ಹೊಸೂರು ಬಳಿ ದೊಡ್ಡ ಪ್ರಮಾಣದಲ್ಲಿ ಕಲ್ಲುಗಣಿ ಸ್ಫೋಟ ನಡೆದಿದೆ. ದೂಳು ಮತ್ತು ಹೊಗೆ ಆಗಸದೆತ್ತರ ಹರಡಿದೆ. ಸುತ್ತಮುತ್ತಲ ಗ್ರಾಮಗಳಲ್ಲಿ ಭೂಮಿ ನಡುಗಿದ್ದು, ಜನರು ಭಯಭೀತರಾದರು ಎಂದು ಟಿ.ಎಂ. ಹೊಸೂರು ಸಿದ್ದೇಗೌಡ, ಸೋಮಶೇಖರ್, ರವೀಂದ್ರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT