ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಣ ವ್ಯವಸ್ಥೆಯೂ, ಚಾಣಾಕ್ಷಮತಿಯೂ

Last Updated 20 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಬಸವಣ್ಣನವರ ನಿಷ್ಠಾವಂತ ಅನುಯಾಯಿಯಾದ ಡಾ. ಬಿ.ಡಿ.ಜತ್ತಿಯವರು ವರ್ಣವ್ಯವಸ್ಥೆಯ ವಿರುದ್ಧ ಬಸವಣ್ಣನವರ ಹೋರಾಟದ ಆದರ್ಶವನ್ನು ಮನಸಾರೆ ಮೆಚ್ಚಿದ್ದರು. ಆದರೆ ಅದನ್ನು ಅನುಷ್ಠಾನಕ್ಕೆ ತರಲು ಕಾಲ ಪಕ್ವವಾಗಿರಲಿಲ್ಲ. ಮಹಾರಾಜರು ಪ್ರಜಾಪ್ರಭುತ್ವ ಪದ್ಧತಿಯನ್ನು ಒಪ್ಪಿ ದಿವಾನರ ಸ್ಥಾನವನ್ನು ರದ್ದು ಮಾಡಿ, ಜತ್ತಿಯವರನ್ನು ಸಂಸ್ಥಾನದ ಮುಖ್ಯಮಂತ್ರಿಯನ್ನಾಗಿ ಮಾಡಲು ನಿರ್ಧರಿಸಿ, ಈರ್ವರು ಮಂತ್ರಿಗಳನ್ನು ತೆಗೆದುಕೊಳ್ಳಬಹುದೆಂದು ಸಲಹೆ ಮಾಡಿದರು.

ವಿಧಾನಸಭೆ ಸದಸ್ಯರ ಸಭೆಯಲ್ಲಿ ಇದು ಚರ್ಚೆಗೆ ಬಂದಿತು. ಜತ್ತಿಯವರನ್ನು ನಾಯಕರೆಂದು ಒಪ್ಪಿ, ಅವರು ಸೂಚಿಸಿದ ಶ್ರೀ ಬಿ.ಬಿ.ಹೊರ್ತಿ ಹಾಗೂ ಶ್ರೀ ಎಂ.ಎಚ್‌.ಕಾಂಬಳೆಯವರ ಹೆಸರಿನಲ್ಲಿ ಮೊದಲನೆಯವರನ್ನು ಸರ್ವಾನುಮತದಿಂದ ಒಪ್ಪಿ, ಎರಡನೆಯವರ ಬದಲಿಗೆ ಶ್ರೀ ನಾನಾ ಸಾಹೇಬ್‌ ಫಡಕೆಯವರ ಹೆಸರನ್ನು ಸಲಹೆ ಮಾಡಲಾಯಿತು.

ಇದು ಚರ್ಚೆಗೆ ಬಂದು ಇತ್ಯರ್ಥವಾಗದೆ ಮತದ ಮೂಲಕ ನಿರ್ಣಯಿಸ ಹೊರಟಾಗ, ಹರಿಜನರಾದ ಶ್ರೀ ಎಂ.ಎಚ್‌.ಕಾಂಬಳೆಯವರು ಆರಿಸಿಬಂದರು. ರಾಜರಿಗೆ ಶ್ರೀ ಎಂ.ಎಚ್‌.ಕಾಂಬಳೆಯವರ ಹೆಸರನ್ನು ಗೆಜೆಟ್‌ನಲ್ಲಿ ಪ್ರಕಟಿಸಲು ಆ ಕಾಲದ ಸಾಮಾಜಿಕ ರೂಢಿಯೊಂದು ಅಡ್ಡಿ ತಂದೊಡ್ಡಿತು.

ಪ್ರತಿವರ್ಷ ನಡೆಸುವ ಗಣಪತಿ ಉತ್ಸವದಲ್ಲಿ ದಿವಾನರು, ಮಂತ್ರಿಗಳೇ ಮೊದಲಾದ ಉಚ್ಚ ಮಟ್ಟದ ಅಧಿಕಾರಿಗಳನ್ನು ಮಹಾರಾಜರು ಊಟಕ್ಕೆ ಆಹ್ವಾನಿಸುವ ಪದ್ಧತಿಯಿದ್ದಿತು. ಹರಿಜನರೊಬ್ಬರು ಸಮಾನ ಪಂಕ್ತಿಯಲ್ಲಿ ಭೋಜನ ಸ್ವೀಕರಿಸುವುದು ಮಹಾರಾಜರಿಗೆ ಅಪ್ರಿಯ ಸಂಗತಿಯಾಗಿದ್ದಿತು. ಜತ್ತಿಯವರು ಚಾಣಾಕ್ಷರು.

ಈ ಸಂದಿಗ್ಧ ಪರಿಸ್ಥಿತಿಯಲ್ಲಿ ‘ಕಾಂಬಳೆಯವರಿಗೆ ಬೇರೊಂದು ಮಹತ್ವದ ಕೆಲಸವಿರುವುದರಿಂದ ಅವರು ಬರಲಾಗುವುದಿಲ್ಲ’ ಎಂದು ಮಹಾರಾಜರಿಗೆ ಜತ್ತಿಯವರು ಹೇಳಿಕಳುಹಿಸಿದರು. ಬೆಟ್ಟದಂತೆ ಕವಿದ ಸಮಸ್ಯೆ ಮಂಜಿನಂತೆ ಕರಗಿಹೋಯಿತು. ಶ್ರೀ ಕಾಂಬಳೆಯವರ ಹೆಸರನ್ನು ಗೆಜೆಟ್‌ನಲ್ಲಿ ಪ್ರಕಟಿಸಲಾಯಿತು.

ಸಂಸ್ಥಾನದ ಮುಖ್ಯಮಂತ್ರಿಗಳಾಗಿದ್ದಾಗ ಜತ್ತಿಯವರು ಜನೋಪಯೋಗಿ ಕೆಲಸಗಳಿಗೆ ಆದ್ಯತೆ ನೀಡಿದರು; ಸಮಯೋಚಿತವಾಗಿ ಸಮಸ್ಯೆಗಳಿಗೆ ಪರಿಹಾರ ಕಾಣಿಸಿದರು. ಸಂಸ್ಥಾನದಲ್ಲಿ ಆಹಾರದ ಅಭಾವ ಕಾಣಿಸಿಕೊಂಡಾಗ ಆಹಾರ ಇಲಾಖೆಯೊಂದನ್ನು ಹೊಸದಾಗಿ ಪ್ರಾರಂಭಿಸಿದ ಜತ್ತಿಯವರು, ಹೊರಗಡೆಯಿಂದ ಆಹಾರ ಧಾನ್ಯವನ್ನು ಖರೀದಿಸಿ ಅದನ್ನು ಜನರಿಗೆ ವಿತರಿಸಿದರು. ಅದರಿಂದ ಬಂದ ಲಾಭಾಂಶದ ಹಣ ಸುಮಾರು ಒಂದು ಲಕ್ಷ ನಲವತ್ತು ಸಾವಿರವನ್ನು ಬ್ಯಾಂಕಿನಲ್ಲಿಟ್ಟು ಅದನ್ನು ಕೃಷ್ಣಾ ನದಿಗೆ ಕಟ್ಟುವ ಸೇತುವೆಗೆ ಬಳಸಬೇಕೆಂದು ತೀರ್ಮಾನಿಸಿ ಕಾಯ್ದಿಡಲಾಯಿತು.

ಜತ್ತಿಯವರ ಜಿಗುಟು ಸ್ವಭಾವ ಪರಿಚಯವಾಗುವುದು ಕೊಲ್ಲಾಪುರ ದಲ್ಲಿರುವ ದಕ್ಷಿಣೀ ಸಂಸ್ಥಾನಗಳ ಪೊಲಿಟಿಕಲ್‌ ಏಜೆಂಟರುಗಳು ಜಮಖಂಡಿಗೆ ಬರುವರೆಂಬ ಸುದ್ದಿ ಮಹಾರಾಜರಿಗೆ ತಿಳಿದಾಗ ಅವರು ಜತ್ತಿಯವರನ್ನು ಕರೆಸಿ, ನೀವು ಏಜೆಂಟರನ್ನು ಇದಿರುಗೊಳ್ಳಲು ಸೂಟು ಧರಿಸಬೇಕು ಎಂದು ಹೇಳಿದಾಗ. ಜತ್ತಿಯವರು ಅದು ಸಾಧ್ಯವಿಲ್ಲವೆಂದು ಸ್ಪಷ್ಟವಾಗಿಯೇ ತಿಳಿಸಿದರು.

‘ನೆಹರೂ ಶರ್ಟ್‌, ಪಂಚೆ ಧರಿಸಿರಿ, ಆದರೆ ಗಾಂಧಿ ಟೊಪ್ಪಿಗೆ ಹಾಕಿಕೊಳ್ಳಬಾರದು’ ಎಂದು ಮಹಾರಾಜರು ತಮ್ಮ ಬಿಗಿ ಧೋರಣೆಯಲ್ಲಿ ಸ್ವಲ್ಪ ರಿಯಾಯಿತಿ ತೋರಿಸಿದರು. ‘ಅದೂ ಸಾಧ್ಯವಿಲ್ಲ. ಬೇಕಾದರೆ ಅವರನ್ನು ಬರಮಾಡಿಕೊಳ್ಳಲು ನಾನು ಬರುವುದಿಲ್ಲ’ ಎಂದು ಜತ್ತಿಯವರು ಪಟ್ಟು ಹಿಡಿದರು. ‘ಸಂಸ್ಥಾನದ ಮುಖ್ಯಮಂತ್ರಿಗಳಾಗಿರುವುದರಿಂದ ನೀವು ಇದಿರುಗೊಳ್ಳಬೇಕು. ನಿಮ್ಮ ಉಡುಪಿನಲ್ಲಿಯೇ ಬನ್ನಿರಿ’ ಎಂದು ಮಹಾರಾಜರು ನಿರ್ವಾಹವಿಲ್ಲದೆ ಒಪ್ಪಿದರು.
–ಡಾ. ಎಸ್‌.ವಿದ್ಯಾಶಂಕರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT