ಬುಧವಾರ, ಜುಲೈ 28, 2021
28 °C
ಗಂಭೀರ ಸ್ಥಿತಿಯಲ್ಲಿದ್ದ 84 ವರ್ಷದ ವ್ಯಕ್ತಿ ನಿಧನ, ಸಾವಿನ ಸಂಖ್ಯೆ 2ಕ್ಕೆ ಏರಿಕೆ

ಕೋವಿಡ್‌: ಸ್ವರ್ಣಸಂದ್ರದ ನಿವಾಸಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ನಗರದ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 48 ವರ್ಷ ವಯಸ್ಸಿನ ಕೋವಿಡ್‌– 19 ರೋಗಿಯೊಬ್ಬರು ಗುರುವಾರ ಮೃತಪಟ್ಟಿದ್ಧಾರೆ. ಜಿಲ್ಲೆಯಲ್ಲಿ ಮೃತರ ಸಂಖ್ಯೆ 2ಕ್ಕೆ ಏರಿಕೆಯಾಗಿದೆ.

ಮಧುಮೇಹ, ನ್ಯುಮೋನಿಯಾ, ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದ ಸ್ವರ್ಣಸಂದ್ರದ ವ್ಯಕ್ತಿ ಎರಡು ದಿನದ ಹಿಂದಷ್ಟೇ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಕೋವಿಡ್‌ ಪರೀಕ್ಷೆ ನಡೆಸಿದಾಗ ಪಾಸಿಟಿವ್‌ ವರದಿ ಬಂದಿತ್ತು. ಆರೋಗ್ಯ ಸಮಸ್ಯೆ ತೀವ್ರಗೊಂಡ ಹಿನ್ನೆಲೆಯಲ್ಲಿ ಬುಧವಾರ ಅವರನ್ನು ವೆಂಟಿಲೇಟರ್‌ನಲ್ಲಿ ಇಡಲಾಗಿತ್ತು. ಗುರುವಾರ ಆರೋಗ್ಯ ಸ್ಥಿತಿ ಗಂಭೀರಗೊಂಡು ಮೃತಪಟ್ಟಿದ್ದಾರೆ.

ಚನ್ನಪಟ್ಟಣ ಮೂಲದ ವ್ಯಕ್ತಿಯೊಬ್ಬರು ಜುಲೈ 9ರಂದು ನಿಧನರಾಗಿದ್ದರು. ಮೃತದೇಹದ ಪರೀಕ್ಷೆ ನಡೆಸಿದಾಗ ಕೋವಿಡ್ ಪತ್ತೆಯಾಗಿತ್ತು. ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದ ಕಾರಣ ಅದನ್ನು ಮಂಡ್ಯ ಜಿಲ್ಲೆಯ ಮೊದಲ ಸಾವು ಎಂದು ಪರಿಗಣಿಸಲಾಗಿತ್ತು. ಇಲ್ಲಿಯವರೆಗೂ ನಗರದ ಕೋವಿಡ್‌ ಆಸ್ಪತ್ರೆಯ ರೋಗಿಗಳು ಮೃತಪಟ್ಟಿರಲಿಲ್ಲ. ಎಲ್ಲರೂ ಕೋವಿಡ್‌ ಗೆದ್ದು ಮನೆ ಸೇರಿಕೊಳ್ಳುತ್ತಿದ್ದರು. ಆದರೆ ಇದೇ ಮೊದಲ ಬಾರಿಗೆ ಗುರುವಾರ ಕೋವಿಡ್‌ ಆಸ್ಪತ್ರೆಯಲ್ಲಿ ಸಾವು ಸಂಭವಿಸಿದೆ. ಇದಕ್ಕೂ ಮೊದಲು ಮಂಡ್ಯ ಜಿಲ್ಲೆಯ ಇಬ್ಬರು ವ್ಯಕ್ತಿಗಳು ಮೈಸೂರು ಜಿಲ್ಲಾ ವ್ಯಾಪ್ತಿಯಲ್ಲಿ ಮೃತಪಟ್ಟಿದ್ದರು.

‘ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಸ್ವರ್ಣಸಂದ್ರದ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ಕೋವಿಡ್‌ ಪತ್ತೆಯಾದ ಹಿನ್ನೆಲೆಯಲ್ಲಿ ಪ್ರತ್ಯೇಕ ವಾರ್ಡ್‌ಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಸರ್ಕಾರದ ಕಾರ್ಯಸೂಚಿಯಂತೆ ಮೃತದೇಹವನ್ನು ಅಂತ್ಯಸಂಸ್ಕಾರ ನೆರವೇರಿಸಲಾಯಿತು’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್‌.ಪಿ.ಮಂಚೇಗೌಡ ಹೇಳಿದರು.

ಇಲ್ಲಿಯವರೆಗೂ ಜಿಲ್ಲೆಯಲ್ಲಿ 25,140 ಮಂದಿಯನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗಿದೆ. 22,033 ವ್ಯಕ್ತಿಗಳ ವರದಿ ನೆಗೆಟಿವ್‌ ಬಂದಿದೆ. ಅತ್ಯಂತ ವೇಗವಾಗಿ ಕೋವಿಡ್ ಪರೀಕ್ಷೆ ನಡೆಸಲಾಗತ್ತಿದ್ದು ಇನ್ನೂ 2,315 ಮಂದಿಯ ಪರೀಕ್ಷಾ ವರದಿ ಬರಬೇಕಾಗಿದೆ.

*********

800ರ ಗಡಿ ತಲುಪಿದ ಸೋಂಕಿತರು

ಗುರುವಾರ ಹೊಸದಾಗಿ 11 ಮಂದಿಯಲ್ಲಿ ಕೋವಿಡ್‌–19 ಪತ್ತೆಯಾಗಿದ್ದು ಜಿಲ್ಲೆಯ ಒಟ್ಟು ರೋಗಿಗಳ ಸಂಖ್ಯೆ 798ಕ್ಕೆ ಏರಿಕೆಯಾಗಿದೆ.

ಹೊರ ಜಿಲ್ಲೆಯಿಂದ ಬಂದವರು ಹಾಗೂ ಸೋಂಕಿತರ ಪ್ರಥಮ ಸಂಪರ್ಕಿತರಲ್ಲಿ ರೋಗ ಪತ್ತೆಯಾಗಿದೆ. ಕೋವಿಡ್‌ನಿಂದ ಗುಣಮುಖರಾದ 27 ರೋಗಿಗಳನ್ನು ಜಿಲ್ಲಾಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಇಲ್ಲಿಯವರೆಗೆ 579 ಮಂದಿ ಗುಣಮುಖರಾಗಿದ್ದು 217 ಪ್ರಕರಣಗಳು ಸಕ್ರಿಯವಾಗಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು