ಮಂಡ್ಯ: ಕೋವಿಡ್ ಲಸಿಕೆ ಪಡೆಯದ ಮೂವರು ಕೊರೊನಾ ಸೋಂಕಿತರ ಸಾವು

ಮಂಡ್ಯ: ಪ್ರತಿಯೊಬ್ಬರಿಗೂ ಕೋವಿಡ್ ಲಸಿಕೆ ಹಾಕಲು ಸರ್ಕಾರ ವಿವಿಧ ರೀತಿಯ ಆಂದೋಲನ ಹಮ್ಮಿಕೊಳ್ಳುತ್ತಿದೆ. ಆದರೂ ಜಿಲ್ಲೆಯ ವಿವಿಧೆಡೆ ಜನರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿರುವುದು ಪತ್ತೆಯಾಗಿದೆ. ಕಳೆದ 15 ದಿನದಲ್ಲಿ ಒಂದೂ ಡೋಸ್ ಲಸಿಕೆ ಪಡೆಯದ ಮೂವರು ಮೃತಪಟ್ಟಿರುವುದು ಆತಂಕಕಾರಿಯಾಗಿದೆ.
ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಎರಡೂ ಡೋಸ್ ಲಸಿಕೆ ಪಡೆದವರಲ್ಲಿ ಕೊರೊನಾ ಸೋಂಕು ಪತ್ತೆಯಾಗುವುದು ತಗ್ಗಿದೆ. ಸೋಂಕು ಬಂದರೂ ಮನೆಯಲ್ಲೇ ಚಿಕಿತ್ಸೆ ಪಡೆಯುವ ಮೂಲಕ ಗುಣವಾಗುತ್ತಿದ್ದಾರೆ. ಆಸ್ಪತ್ರೆಯ ಆರೈಕೆ ಇಲ್ಲದೆಯೇ ಕೇವಲ ಮಾತ್ರೆ ಸೇವನೆಯಿಂದ ಸೋಂಕು ಮುಕ್ತರಾಗುತ್ತಿದ್ದಾರೆ. ಲಸಿಕೆ ಪಡೆದವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಳವಾಗಿರುವುದು ಸಂಶೋಧನೆಗಳಿಂದ ದೃಢಪಟ್ಟಿದೆ.
ಕೋವಿಡ್ ಲಸಿಕೆ ಹಾಕಲು ಸರ್ಕಾರದ ಸರ್ವ ಇಲಾಖೆಗಳು ಪ್ರಯತ್ನಿಸುತ್ತಿದ್ದರೂ ಜಿಲ್ಲೆಯ ವಿವಿಧೆಡೆ ಒಂದೂ ಡೋಸ್ ಪಡೆಯದ ಜನರಿದ್ದಾರೆ. ಅಂಗನವಾಡಿ, ಗ್ರಾಮ ಪಂಚಾಯಿತಿ ಸಿಬ್ಬಂದಿ ಅವರ ಮನವೊಲಿಸಲು ಸಾಕಷ್ಟು ಪ್ರಯತ್ನ ಮಾಡುತ್ತಿದ್ದರೂ ವಿವಿಧ ಕಾರಣ ನೀಡಿ ಲಸಿಕೆ ಪಡೆಯುವುದನ್ನು ಮುಂದೂಡುತ್ತಿದ್ದಾರೆ. ಜೊತೆಗೆ ಲಸಿಕೆ ಪಡೆಯುವುದಿಲ್ಲ ಎಂದೇ ಹೇಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಕಳೆದ 15 ದಿನದಿಂದ ಒಂದೂ ಡೋಸ್ ಲಸಿಕೆ ಪಡೆಯದ ಮಳವಳ್ಳಿ ತಾಲ್ಲೂಕಿನ ಒಬ್ಬರು, ಮಂಡ್ಯ ತಾಲ್ಲೂಕಿನ ಇಬ್ಬರು ಸಾವಿಗೀಡಾಗಿದ್ದಾರೆ.
ಇವರಿಬ್ಬರೂ 40–50 ವರ್ಷ ವಯಸ್ಸಿನ ಆಸುಪಾಸಿನವರಾಗಿದ್ದು, ಲಸಿಕೆ ಪಡೆಯಲು ನಿರ್ಲಕ್ಷ್ಯ ವಹಿಸಿದ್ದರು. ತೀರಾ ಆರೋಗ್ಯ ಸಮಸ್ಯೆಗಳೇನೂ ಇರಲಿಲ್ಲ, ಆದರೆ ಕೊರೊನಾ ಸೋಂಕು ಪತ್ತೆಯಾದ ನಂತರ ರೋಗ ನಿರೋಧಕ ಶಕ್ತಿ ಕುಸಿದಿತ್ತು. ಇವರು ಒಂದು ಕೋವಿಡ್ ಲಸಿಕೆ ಪಡೆದಿದ್ದರೂ ಬದುಕುಳಿಯುವ ಸಾಧ್ಯತೆ ಇತ್ತು. ಕೈಯಾರೆ ಜೀವ ಕಳೆದುಕೊಂಡಿದ್ದಾರೆ ಎಂದು ಮಿಮ್ಸ್ ಆಸ್ಪತ್ರೆ ವೈದ್ಯರು ತಿಳಿಸಿದರು.
‘ಲಸಿಕೆ ನೀಡಲು ನಾವು ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ಸರ್ಕಾರದ ಎಲ್ಲಾ ಇಲಾಖೆಗಳ ಸಿಬ್ಬಂದಿಯನ್ನು ಕೋವಿಡ್ ಲಸಿಕೆ ನೀಡುವಲ್ಲಿ ಬಳಸಿಕೊಳ್ಳಲಾಗಿದೆ. ಸಾಕಷ್ಟು ಜಾಗೃತಿ ಮೂಡಿಸಲಾಗಿದೆ. ರಾಜ್ಯ ಮಟ್ಟದಲ್ಲಿ ಮಂಡ್ಯ ಜಿಲ್ಲೆ ಲಸಿಕೆ ನೀಡಿಕೆಯಲ್ಲಿ ಮೊದಲ 5 ಸ್ಥಾನಗಳಲ್ಲಿದೆ. ಆದರೂ ಕೆಲವರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿರುವುದು ದರದೃಷ್ಟಕರ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ವಿಷಾದಿಸಿದರು.
2ನೇ ಡೋಸ್ ಪಡೆಯಲೂ ಹಿಂದೇಟು: ಮೊದಲ ಡೋಸ್ ಪಡೆದು 84 ದಿನ ಅವಧಿ ಪೂರ್ಣಗೊಂಡಿದ್ದರೂ ಜನರು 2ನೇ ಡೋಸ್ ಪಡೆಯಲು ಜನರು ಹಿಂದೇಟು ಹಾಕುತ್ತಿರುವುದು ಪತ್ತೆಯಗಿದೆ. ಮೊದಲ ಡೋಸ್ ಪಡೆದ 1 ಲಕ್ಷ ಜನರು 2ನೇ ಡೋಸ್ ಪಡೆಯಬೇಕು, ಅವರಲ್ಲಿ 90 ಸಾವಿರ ಜನರ ಅವಧಿ ಪೂರ್ಣಗೊಂಡಿದೆ.
ಆದಷ್ಟು ಬೇಗ 2ನೇ ಡೋಸ್ ಪಡೆಯುವಂತೆ ಅಂಗನವಾಡಿ ಸಿಬ್ಬಂದಿ ಜನರಿಗೆ ಎಚ್ಚರಿಕೆ ನೀಡುತ್ತಿದ್ದಾರೆ. ಗ್ರಾ.ಪಂ ಮಟ್ಟದಲ್ಲೂ ಜನರಿಗೆ ತಿಳಿವಳಿಕೆ ನೀಡಲಾಗುತ್ತಿದೆ. ಮೊದಲ ಡೋಸ್ ಪಡೆಯುವಾಗ 2ನೇ ಡೋಸ್ ದಿನಾಂಕವನ್ನು ಚೀಟಿಯಲ್ಲಿ ಬರೆದು ಕೊಡಲಾಗುತ್ತಿದೆ. ಮೊಬೈಲ್‌ಗಳಲ್ಲಿ ಸಂದೇಶವೂ ಬರುತ್ತಿದೆ. ಇಷ್ಟಾದರೂ ಜನರು ಲಸಿಕೆ ಪಡೆಯಲು ಮುಂದೆ ಬಾರದಿರುವುದು ಆರೋಗ್ಯ ಇಲಾಖೆ ಸಿಬ್ಬಂದಿಯನ್ನು ಕಂಗೆಡಿಸಿದೆ.
‘ಹೆಚ್ಚು ಜನರಿಗೆ ಲಸಿಕೆ ಹಾಕುವ ಉದ್ದೇಶದಿಂದ ಬುಧವಾರ (ನ.10) ಮಹಾ ಲಸಿಕಾ ಮೇಳ ಆಯೋಜಿಸಲಾಗಿದೆ. ಮೇಳದಲ್ಲಿ 1 ಲಕ್ಷ ಜನರಿಗೆ ಲಸಿಕೆ ಹಾಕುವ ಗುರಿ ಇಟ್ಟುಕೊಳ್ಳಲಾಗಿದೆ’ ಎಂದು ಜಿಲ್ಲಾಧಿಕಾರಿ ಎಸ್.ಅಶ್ವತಿ ತಿಳಿಸಿದರು.
ಕ್ಷುಲ್ಲಕ ಕಾರಣ ಬಿಡಿ...
‘ಸಾರ್ವಜನಿಕರು ಕ್ಷುಲ್ಲಕ ಕಾರಣ ನೀಡುತ್ತಾ ಲಸಿಕೆ ಪಡೆಯುವುದನ್ನು ಮುಂದೂಡುತ್ತಿದ್ದಾರೆ, ಉಡಾಫೆ ಮಾಡುತ್ತಿದ್ದಾರೆ. ದಸರಾ, ಆಯುಧಪೂಜೆ, ದೀಪಾವಳಿ, ಮದುವೆ, ಪೂಜೆ ಇತ್ಯಾದಿ ಕಾರಣಗಳಿಂದಾಗಿ ಲಸಿಕೆ ಪಡೆಯುವುದನ್ನು ಮುಂದೂಡಿದ್ದಾರೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಟಿ.ಎನ್.ಧನಂಜಯ ಹೇಳಿದರು.
‘ಲಸಿಕೆಯ ಪರಿಣಾಮ ಎಷ್ಟಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಈಗ ಶೇ 99ರಷ್ಟು ಕೋವಿಡ್ ಸಾವುಗಳು ಲಸಿಕೆ ಪಡೆಯದಿರುವುದರಿಂದಲೇ ಸಂಭವಿಸುತ್ತಿವೆ. ನಮ್ಮ ಜಿಲ್ಲೆಯಲ್ಲೂ ಇಂತಹ ಸಾವುಗಳಾಗುತ್ತಿವೆ, ಈಗಲಾದರೂ ಜನರು ಎಚ್ಚರಿಕೆ ವಹಿಸಬೇಕು. ಲಸಿಕೆ ಪಡೆಯಲು ಸಣ್ಣ ನಿರ್ಲಕ್ಷ್ಯವೂ ಒಳ್ಳೆಯದಲ್ಲ’ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.