ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೇಮಾವತಿಗೆ ಒಂದೇ ದಿನ 6 ಅಡಿ ನೀರು

ಸಕಲೇಶಪುರದ ಸುತ್ತ ಮುಂದುವರೆದ ಮಳೆ; ಜಲಾಶಯಕ್ಕೆ ಒಳಹರಿವು ಏರಿಕೆ
Last Updated 15 ಜೂನ್ 2018, 12:17 IST
ಅಕ್ಷರ ಗಾತ್ರ

ಹಾಸನ: ವಾರದಿಂದ ಜಿಲ್ಲೆಯಲ್ಲಿ ಎಡಬಿಡದೆ ಸುರಿದ ಮಳೆ ಎರಡು ದಿನದಿಂದ ಕಡಿಮೆಯಾಗಿದ್ದರೂ ಸಕಲೇಶಪುರ, ಮೂಡಿಗೆರೆಯಲ್ಲಿ ಮುಂದುವರೆದ ಪರಿಣಾಮ ಹೇಮಾವತಿ ಜಲಾಶಯದ ಒಳಹರಿವಿನ ಪ್ರಮಾಣ ಹೆಚ್ಚುತ್ತಿದೆ.

ಗುರುವಾರ ಜಲಾಶಯದ ಒಳಹರಿವು 37,479 ಕ್ಯುಸೆಕ್‌ ಇತ್ತು. ಜಿಲ್ಲೆಯ ವಿವಿಧೆಡೆ ಬೆಳಗಿನ ಜಾವ ಮಳೆಯಾಗಿ ನಂತರ ಮೋಡ ಕವಿದ ವಾತಾವರಣ ನಿರ್ಮಾಣವಾಯಿತು. ಕೆಲ ದಿನಗಳಿಂದ ಹಗಲಿರುಳು ಸುರಿದ ಮಳೆ ಎರಡು ದಿನಗಳಿಂದ ಬಿಡುವು ನೀಡಿದೆ.

2922 ಅಡಿ ಗರಿಷ್ಠ ಮಟ್ಟ ಹೊಂದಿರುವ ಹೇಮಾವತಿ ಜಲಾಶಯದಲ್ಲಿ ಪ್ರಸ್ತುತ 2894.25 ಅಡಿ ನೀರು ಇದೆ. ಕಳೆದ ವರ್ಷ ಇದೇ ಅವಧಿಗೆ 2854.15 ಅಡಿ ನೀರಿತ್ತು. 37.103 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಅಣೆಕಟ್ಟೆಯಲ್ಲಿ ಸದ್ಯ 16.44 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಕೇವಲ 2.87 ಟಿಎಂಸಿ ನೀರಿತ್ತು. ಬುಧವಾರ ಒಂದೇ ದಿನ ಆರು ಅಡಿ ನೀರು ಬಂದಿದೆ.

ಗುರುವಾರ ಮುಂಜಾನೆಯಿಂದಲೇ ಜೋರಾಗಿ ಆರಂಭವಾದ ಮಳೆ ಮತ್ತೆ ಆತಂಕ ಮೂಡಿಸಿತ್ತು. ದಿನಪೂರ್ತಿ ಜೋರು ಮಳೆ ಸುರಿದಿದ್ದರೆ ಜನಜೀವನ ಅಸ್ತವ್ಯಸ್ತವಾಗುತ್ತಿತ್ತು. ಆದರೆ 9 ಗಂಟೆ ಬಳಿಕ ಮಳೆ ನಿಂತು, ಬಿಸಿಲು ಕಾಣಿಸಿತು. ನಂತರ ಮೋಡ ಕವಿದ ವಾತಾವರಣ ನಿರ್ಮಾಣಗೊಂಡಿತು.

ಆಲೂರು, ಸಕಲೇಶಪುರದಲ್ಲಿ ಮಧ್ಯಾಹ್ನದ ವರೆಗೂ ಉತ್ತಮ ಮಳೆಯಾಗಿದೆ. ಮಧ್ಯಾಹ್ನ ನಂತರ ಬಿಡುವು ನೀಡಿತು. ಬೇಲೂರು, ಆಲೂರು, ಅರಕಲಗೂಡು, ಹೊಳೆನರಸೀಪುರದಲ್ಲಿ ಬೆಳಗ್ಗೆ ಅಲ್ಪ ಮಳೆಯಾಗಿದೆ. ಅರಸೀಕೆರೆ, ಚನ್ನರಾಯಪಟ್ಟಣ ಭಾಗದಲ್ಲಿ ಮಳೆಯಾಗಿಲ್ಲ.

ಜಿಲ್ಲೆಯ ಬಹುತೇಕ ಜಮೀನುಗಳಲ್ಲಿ ಮಳೆ ನೀರು ನಿಂತು ಬೆಳೆ ಹಾನಿಯಾಗಿದೆ. ಆಲೂಗೆಡ್ಡೆ ಭೂಮಿಯಲ್ಲೇ ಕರಗುತ್ತಿದೆ. ಮಳೆ ನಿರಂತರವಾಗಿ ಸುರಿದ ಪರಿಣಾಮ ಜೋಳ, ನೆಲಗಡಲೆ ಸಂಪೂರ್ಣ ಜಲಾವೃತಗೊಂಡಿದೆ.

ಗುರುವಾರ ಬೆಳಿಗ್ಗೆ 9 ಗಂಟೆಗೆ ಕೊನೆಗೊಂಡಂತೆ ಜಿಲ್ಲಾದ್ಯಂತ ಹೋಬಳಿವಾರು ಸುರಿದ ಮಳೆ ವಿವರ ಇಂತಿದೆ.

ಹಿರಿಸಾವೆ:1 ಮಿ.ಮೀ ನುಗ್ಗೆಹಳ್ಳಿ: 2, ಶ್ರವಣಬೆಳಗೊಳ:4, ಹಾಸನ :20, ದುದ್ದ: 7, ಕಟ್ಟಾಯ:10, ಸಾಲಗಾಮೆ: 8, ಶಾಂತಿಗ್ರಾಮ:8, ಹೊಳೆನರಸೀಪುರ:10 , ಹಳೆಕೋಟೆ : 6, ಹಳ್ಳಿ ಮೈಸೂರು: 2 , ಸಕಲೇಶಪುರ: 94, ಬೆಳಗೋಡು: 32 , ಅರೇಹಳ್ಳಿ :40, ಬಿಕ್ಕೋಡು:19, ಹಳೇಬೀಡು:10, ಮಾರನಹಳ್ಳಿ:6, ಚನ್ನರಾಯಪಟ್ಟಣ:1, ಬಾಗೂರು:2, ದಂಡಿಗನಹಳ್ಳಿ:3, ಆಲೂರು:22, ಕೆಂಚಮ್ಮನಹೊಸಕೋಟೆ: 34, ಕುಂದೂರು:10, ಪಾಳ್ಯ:16, ಅರಕಲಗೂಡು:11, ದೊಡ್ಡಮಗ್ಗೆ:6, ಕೊಣನೂರು:13, ಮಲ್ಲಿಪಟ್ಟಣ:12, ರಾಮನಾಥಪುರ:12, ಅರಸೀಕೆರೆ:1, ಬಾಣಾವಾರ:2 , ಗಂಡಸಿ:2, ಜಾವಗಲ್:2, ಬೇಲೂರು:16,   ಹಾನುಬಾಳು:121, ಹೆತ್ತೂರು:134, ಯಸಳೂರು:87 ಮಿ.ಮೀ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT